Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು
1 1-3 ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು.
8 “ನರಪುತ್ರನೇ, ನಾನು ಹೇಳುವದನ್ನು ನೀನು ಸರಿಯಾಗಿ ಕೇಳಬೇಕು. ದಂಗೆಕೋರರಾದ ಆ ಜನರಂತೆ ನೀನೂ ನನಗೆ ವಿರುದ್ಧವಾಗಿರಬೇಡ. ನಾನು ನಿನಗೆ ಕೊಡಲಿರುವುದನ್ನು ನಿನ್ನ ಬಾಯಿತೆರೆದು ತಿನ್ನು.”
9 ಆಗ ನಾನು ಒಂದು ಕೈ ನನ್ನ ಬಳಿಗೆ ಬರುವದನ್ನು ಕಂಡೆನು. ಆ ಕೈ ಒಂದು ಸುರುಳಿಯನ್ನು ಹಿಡುಕೊಂಡಿತ್ತು. 10 ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಬರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಬರೆಯಲ್ಪಟ್ಟಿದ್ದವು.
3 ದೇವರು ನನಗೆ, “ನರಪುತ್ರನೇ, ನೀನು ನೋಡುತ್ತಿರುವ ಈ ಸುರುಳಿಯನ್ನು ತಿನ್ನು. ಆಮೇಲೆ ಹೋಗಿ ಇಸ್ರೇಲ್ ವಂಶದವರಿಗೆ ಈ ವಿಷಯಗಳ ಬಗ್ಗೆ ಹೇಳು” ಎಂದು ಅಪ್ಪಣೆಕೊಟ್ಟನು.
2 ಆಗ ನಾನು ನನ್ನ ಬಾಯನ್ನು ತೆರೆಯಲು ಆತನು ಆ ಸುರುಳಿಯನ್ನು ನನ್ನ ಬಾಯೊಳಗೆ ಹಾಕಿದನು. 3 ಆಗ ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಈ ಸುರುಳಿಯನ್ನು ನಿನಗೆ ಕೊಡುತ್ತೇನೆ. ಇದನ್ನು ನುಂಗು. ಇದು ನಿನ್ನ ಹೊಟ್ಟೆಯನ್ನು ತುಂಬಲಿ.”
ಆಗ ನಾನು ಆ ಸುರುಳಿಯನ್ನು ತಿಂದೆನು. ಅದು ನನ್ನ ಬಾಯಲ್ಲಿ ಜೇನುತುಪ್ಪದ ಸಿಹಿಯಂತೆ ರುಚಿಯಾಗಿತ್ತು.
ದೇವದೂತನು ಮತ್ತು ಚಿಕ್ಕ ಸುರುಳಿ
10 ನಂತರ ಮತ್ತೊಬ್ಬ ಬಲಿಷ್ಠನಾದ ದೇವದೂತನೊಬ್ಬನು ಪರಲೋಕದಿಂದ ಇಳಿದುಬರುವುದನ್ನು ನಾನು ನೋಡಿದೆನು. ಆ ದೇವದೂತನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಸುತ್ತಲೂ ಕಾಮನಬಿಲ್ಲಿತ್ತು. ಆ ದೇವದೂತನ ಮುಖವು ಸೂರ್ಯನಂತೆಯೂ ಅವನ ಕಾಲುಗಳು ಬೆಂಕಿಯ ಕಂಬಗಳಂತೆಯೂ ಇದ್ದವು. 2 ಆ ದೇವದೂತನು ಒಂದು ಚಿಕ್ಕ ಸುರುಳಿಯನ್ನು ಹಿಡಿದಿದ್ದನು. ಅವನ ಕೈಯಲ್ಲಿದ್ದ ಸುರುಳಿಯು ಬಿಚ್ಚಿತ್ತು. ಅವನು ತನ್ನ ಬಲಪಾದವನ್ನು ಸಮುದ್ರದ ಮೇಲೆಯೂ, ತನ್ನ ಎಡಪಾದವನ್ನು ಭೂಮಿಯ ಮೇಲೆಯೂ ಇಟ್ಟು, 3 ಸಿಂಹ ಗರ್ಜಿಸುವಂತೆ ಗಟ್ಟಿಯಾಗಿ ಆರ್ಭಟಿಸಿದನು. ಆ ಬಳಿಕ ಏಳು ಗುಡುಗುಗಳ ಧ್ವನಿಯು ಮಾತನಾಡಿತು.
4 ಅದನ್ನು ನಾನು ಬರೆಯಬೇಕೆಂದಿದ್ದಾಗ ಪರಲೋಕದಿಂದ ಬಂದ ಒಂದು ಧ್ವನಿಯು ನನಗೆ, “ಏಳು ಗುಡುಗುಗಳು ಹೇಳಿದ್ದನ್ನು ನೀನು ಬರೆಯಬೇಡ. ಅವುಗಳನ್ನು ರಹಸ್ಯವಾಗಿಟ್ಟಿರು” ಎಂದು ಹೇಳಿತು.
5 ಅನಂತರ ಭೂಮಿಯ ಮೇಲೆ ಮತ್ತು ಸಮುದ್ರದ ಮೇಲೆ ನಿಂತಿದ್ದ ಒಬ್ಬ ದೇವದೂತನನ್ನು ಕಂಡೆನು. ಅವನು ತನ್ನ ಬಲಗೈಯನ್ನು ಪರಲೋಕದತ್ತ ಚಾಚಿದನು. 6 ಆ ದೇವದೂತನು ಯುಗ ಯುಗಾಂತರಗಳಲ್ಲಿಯೂ ನೆಲೆಸಿರುವಾತನ ಮತ್ತು ಆಕಾಶವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಭೂಮಿಯನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಸಮುದ್ರವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸ್ಟಿದಾತನ ಶಕ್ತಿಯಿಂದ ಹೀಗೆ ವಾಗ್ದಾನವನ್ನು ಮಾಡಿದನು: “ಇನ್ನು ಕಾಯುವ ಅಗತ್ಯವಿಲ್ಲ; 7 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯು ನೆರವೇರುವುದು. ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ತೆಯೇ ಈ ಯೋಜನೆ.”
8 ಬಳಿಕ ಪರಲೋಕದಿಂದ ಮತ್ತೆ ಅದೇ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು ನನಗೆ, “ಹೋಗು, ದೇವದೂತನ ಕೈಯಲ್ಲಿರುವ ಬಿಚ್ಚಿದ ಸುರುಳಿಯನ್ನು ತೆಗೆದುಕೊ. ಆ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತಿದ್ದಾನೆ” ಎಂದು ಹೇಳಿತು.
9 ಆದ್ದರಿಂದ ನಾನು ಆ ದೇವದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಆ ದೇವದೂತನು ನನಗೆ, “ಸುರುಳಿಯನ್ನು ತೆಗೆದುಕೊಂಡು ಅದನ್ನು ತಿಂದುಬಿಡು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು. 10 ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ನಾನು ತೆಗೆದುಕೊಂಡು ತಿಂದೆನು. ನನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಬಳಿಕ, ಅದು ನನ್ನ ಹೊಟ್ಟೆಯಲ್ಲಿ ಕಹಿಯಾಯಿತು. 11 ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಜೆಗಳ, ಭಾಷೆಗಳ ಮತ್ತು ರಾಜರುಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.
Kannada Holy Bible: Easy-to-Read Version. All rights reserved. © 1997 Bible League International