Revised Common Lectionary (Semicontinuous)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
17 “ಈಗ ನಿನ್ನಲ್ಲಿ ತಾಮ್ರವಿದೆ.
ನಾನು ನಿನಗೆ ಬಂಗಾರವನ್ನು ತರುವೆನು.
ಈಗ ನಿನ್ನಲ್ಲಿ ಕಬ್ಬಿಣವಿದೆ.
ನಾನು ನಿನಗೆ ಬೆಳ್ಳಿಯನ್ನು ತರುವೆನು.
ನಿನ್ನ ಮರವನ್ನು ತಾಮ್ರವನ್ನಾಗಿ ಪರಿವರ್ತಿಸುವೆನು.
ನಿನ್ನ ಕಲ್ಲುಬಂಡೆಗಳನ್ನು ಕಬ್ಬಿಣವನ್ನಾಗಿ ಮಾಡುವೆನು.
ನಿಮ್ಮ ಶಿಕ್ಷೆಯನ್ನು ಸಮಾಧಾನವನ್ನಾಗಿ ಮಾಡುವೆನು.
ಈಗ ನಿನ್ನನ್ನು ಹಿಂಸಿಸುವ ಜನರು
ನಿನಗೆ ಸಹಾಯ ಮಾಡುವರು.
18 ಇನ್ನು ಮುಂದೆ ಮತ್ತೆ ಹಿಂಸಾಚಾರದ ವರ್ತಮಾನವು ನಿನ್ನಲ್ಲಿರುವದಿಲ್ಲ.
ಜನರು ಇನ್ನೆಂದಿಗೂ
ನಿನ್ನ ಮೇಲೆರಗಿ ನಿನ್ನನ್ನು ದೋಚುವದಿಲ್ಲ.
ನಿನ್ನ ಗೋಡೆಗಳಿಗೆ ‘ರಕ್ಷಣೆ’ ಎಂದೂ
ದ್ವಾರಗಳಿಗೆ ‘ಸ್ತೋತ್ರ’ವೆಂದೂ ಹೆಸರಿಡುವಿ.
19 “ಇನ್ನು ಮುಂದೆ ಹಗಲು ಹೊತ್ತಿನಲ್ಲಿ ಸೂರ್ಯನು ನಿನಗೆ ಬೆಳಕಾಗಿರುವದಿಲ್ಲ;
ರಾತ್ರಿಕಾಲದಲ್ಲಿ ಚಂದ್ರನ ಪ್ರಕಾಶವು ನಿನಗೆ ಬೆಳಕಾಗಿರುವದಿಲ್ಲ.
ಯಾಕೆಂದರೆ ಯೆಹೋವನೇ ನಿನ್ನ ನಿತ್ಯಕಾಲದ ಬೆಳಕಾಗಿರುವನು.
ನಿನ್ನ ದೇವರು ನಿನ್ನ ಮಹಿಮೆಯಾಗಿರುವನು.
20 ನಿನ್ನ ಸೂರ್ಯನು ಮತ್ತೆ ಅಸ್ತಮಾನವಾಗುವದಿಲ್ಲ.
ನಿನ್ನ ಚಂದ್ರನು ಮತ್ತೆಂದಿಗೂ ಕಪ್ಪಾಗುವದಿಲ್ಲ.
ಯಾಕೆಂದರೆ ಯೆಹೋವನು ನಿನ್ನ ನಿರಂತರದ ಬೆಳಕಾಗಿರುವನು.
ನಿನ್ನ ದುಃಖದ ಕಾಲವು ಅಂತ್ಯವಾಗುವದು.
21 “ನಿನ್ನ ಜನರೆಲ್ಲಾ ನೀತಿಯಲ್ಲಿ ಜೀವಿಸುವರು.
ಅವರು ಭೂಮಿಗೆ ಶಾಶ್ವತವಾದ ಬಾಧ್ಯಸ್ತರಾಗುವರು.
ಆ ಜನರನ್ನು ನಾನೇ ನಿರ್ಮಿಸಿದೆನು.
ನಾನು ನನ್ನ ಸ್ವಂತ ಕೈಗಳಿಂದ ನಿರ್ಮಿಸಿದ ಆಶ್ಚರ್ಯಕರವಾದ ಸಸಿಗಳಂತೆ ಅವರಿರುವರು.
22 ಅತ್ಯಂತ ಚಿಕ್ಕ ಕುಟುಂಬವು ದೊಡ್ಡ ಕುಲವಾಗುವದು.
ಅತ್ಯಂತ ಎಳೆಯ ಕುಟುಂಬವು ಬಲಾಢ್ಯವಾದ ಜನಾಂಗವಾಗುವದು.
ತಕ್ಕ ಕಾಲದಲ್ಲಿ ಯೆಹೋವನಾದ ನಾನು ಬೇಗನೆ ಬರುವೆನು.
ಇವುಗಳೆಲ್ಲಾ ನೆರವೇರುವಂತೆ ಮಾಡುವೆನು.”
ಅನೇಕರಿಗೆ ಸ್ವಸ್ಥತೆ
27 ಯೇಸು ಅಲ್ಲಿಂದ ಹೊರಡುತ್ತಿರುವಾಗ ಇಬ್ಬರು ಕುರುಡರು ಆತನನ್ನು ಹಿಂಬಾಲಿಸಿದರು. ಅವರು, “ದಾವೀದನ ಕುಮಾರನೇ, ನಮಗೆ ದಯೆ ತೋರು” ಎಂದು ಗಟ್ಟಿಯಾಗಿ ಕೂಗಿದರು.
28 ಯೇಸು ಮನೆಯೊಳಗೆ ಹೋದನು. ಕುರುಡರೂ ಆತನ ಸಂಗಡ ಹೋದರು. ಯೇಸು ಅವರಿಗೆ, “ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ನಂಬುತ್ತೀರೋ?” ಎಂದು ಕೇಳಿದನು. ಕುರುಡರು, “ಹೌದು ಪ್ರಭುವೇ, ನಾವು ನಂಬುತ್ತೇವೆ” ಎಂದು ಉತ್ತರಕೊಟ್ಟರು.
29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ನಂಬಿದಂತೆಯೇ ನಿಮಗೆ ಗುಣವಾಗಲಿ” ಅಂದನು. 30 ಕೂಡಲೇ ಅವರಿಗೆ ದೃಷ್ಟಿ ಬಂದಿತು. “ಈ ವಿಷಯವನ್ನು ಯಾರಿಗೂ ಹೇಳಬಾರದು” ಎಂದು ಯೇಸು ಅವರಿಗೆ ಎಚ್ಚರಿಕೆ ನೀಡಿದನು. 31 ಆದರೆ ಆ ಕುರುಡರು ಅಲ್ಲಿಂದ ಹೊರಟುಹೋಗಿ ಯೇಸುವಿನ ಸುದ್ದಿಯನ್ನು ಆ ಪ್ರದೇಶದ ಸುತ್ತಮುತ್ತಲೆಲ್ಲಾ ಹಬ್ಬಿಸಿದರು.
32 ಅವರಿಬ್ಬರು ಹೋಗುತ್ತಿರುವಾಗ ಕೆಲವರು ಬೇರೊಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಮೂಕನಾಗಿದ್ದನು. 33 ಯೇಸು ಆ ದೆವ್ವಕ್ಕೆ ಅವನನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಿದನು. ಅವನು ಮಾತನಾಡತೊಡಗಿದನು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ, “ಇಸ್ರೇಲಿನಲ್ಲಿ ಇಂಥ ಕಾರ್ಯವನ್ನು ನೋಡಿಯೇ ಇಲ್ಲ” ಅಂದರು.
34 ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದರು.
Kannada Holy Bible: Easy-to-Read Version. All rights reserved. © 1997 Bible League International