Revised Common Lectionary (Semicontinuous)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
ದೇವರು ತಾಳ್ಮೆಯುಳ್ಳವನಾಗಿದ್ದಾನೆ
14 “ನಾನು ಬಹುಕಾಲದಿಂದ ಮೌನವಾಗಿದ್ದೆನು.
ನಾನು ಏನೂ ಹೇಳದ ಹಾಗೆ ನನ್ನನ್ನು ನಿಯಂತ್ರಿಸಿಕೊಂಡಿದ್ದೆನು.
ಈಗ ನಾನು ಹೆರಿಗೆ ಬೇನೆಯನ್ನು ಅನುಭವಿಸುವ ಹೆಂಗಸಿನಂತೆ ಕಿರುಚುವೆನು;
ಗಟ್ಟಿಯಾಗಿ ಏದುಸಿರು ಬಿಡುವೆನು.
15 ಬೆಟ್ಟಗಳನ್ನೂ ಪರ್ವತಗಳನ್ನೂ ನಾಶಪಡಿಸುವೆನು.
ಅಲ್ಲಿ ಬೆಳೆಯುವ ಸಸ್ಯಗಳನ್ನೆಲ್ಲಾ ಒಣಗಿಸಿಬಿಡುವೆನು.
ನದಿಗಳನ್ನು ಒಣ ನೆಲವನ್ನಾಗಿ ಮಾರ್ಪಡಿಸುವೆನು;
ನೀರಿನ ಹಳ್ಳಗಳನ್ನು ಒಣಗಿಸಿಬಿಡುವೆನು.
16 ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು.
ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು.
ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು.
ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು.
ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.
17 ಆದರೆ ಕೆಲವರು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿಬಿಟ್ಟಿದ್ದಾರೆ.
ಅವರ ಬಳಿಯಲ್ಲಿ ಬಂಗಾರದ ತಗಡಿನಿಂದ ಹೊದಿಸಿದ ವಿಗ್ರಹಗಳಿವೆ.
ಅವರು ಆ ವಿಗ್ರಹಗಳಿಗೆ, ‘ನೀನೇ ನಮ್ಮ ದೇವರು’ ಎಂದು ಹೇಳುವರು.
ಸುಳ್ಳುದೇವರುಗಳನ್ನು ಅವರು ಅವಲಂಬಿಸಿರುವದರಿಂದ ನಿರಾಶರಾಗುವರು.
ದೇವರಿಗೆ ವಿಧೇಯರಾಗಲು ಇಸ್ರೇಲರು ನಿರಾಕರಿಸಿದರು
18 “ಕಿವುಡರೇ, ನನ್ನ ಮಾತನ್ನು ಕೇಳಿರಿ.
ಕುರುಡರೇ ನನ್ನ ಕಡೆಗೆ ನೋಡಿರಿ.
19 ಬೇರೆ ಎಲ್ಲರಿಗಿಂತ ನನ್ನ ಸೇವಕನು ಕುರುಡನಾಗಿದ್ದಾನೆ.
ಬೇರೆ ಎಲ್ಲರಿಗಿಂತ ನನ್ನ ದೂತನು ಕಿವುಡನಾಗಿದ್ದಾನೆ.
ನಾನು ಒಡಂಬಡಿಕೆ ಮಾಡಿಕೊಂಡ ನನ್ನ ಸೇವಕನು ಪೂರ್ಣ ಕುರುಡನಾಗಿದ್ದಾನೆ.
20 ತಾನು ಮಾಡತಕ್ಕದ್ದನ್ನು ಕಣ್ಣಾರೆ ಕಂಡರೂ
ಅವನು ನನಗೆ ವಿಧೇಯನಾಗುವುದಿಲ್ಲ.
ಅವನು ಕಿವಿಯಾರೆ ಕೇಳಿದರೂ ನನ್ನ ಮಾತುಗಳಿಗೆ ವಿಧೇಯನಾಗುವದಿಲ್ಲ;
ಅದನ್ನು ಕೇಳಿಸಿಕೊಳ್ಳುವದೂ ಇಲ್ಲ.”
21 ತನ್ನ ಸೇವಕನು ನೀತಿವಂತನಾಗಿರಬೇಕೆಂದೂ
ತನ್ನ ಉತ್ಕೃಷ್ಟವಾದ ಉಪದೇಶವನ್ನು ಗೌರವಿಸಬೇಕೆಂದೂ ಯೆಹೋವನು ಬಯಸುತ್ತಾನೆ.
9 ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ.
ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ 10 ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ 11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.
12 ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು. 13 ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ. 14 ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.
Kannada Holy Bible: Easy-to-Read Version. All rights reserved. © 1997 Bible League International