Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
1 ಸಮುವೇಲನು 16:1-13

ಸಮುವೇಲನು ಬೆತ್ಲೆಹೇಮಿಗೆ ಹೋಗುವನು

16 ಯೆಹೋವನು ಸಮುವೇಲನಿಗೆ, “ನೀನು ಸೌಲನಿಗಾಗಿ ಎಷ್ಟುಕಾಲ ಶೋಕಿಸುವೆ? ನಾನು ಸೌಲನನ್ನು ಇಸ್ರೇಲರ ರಾಜತ್ವದಿಂದ ತಿರಸ್ಕರಿಸಿರುತ್ತೇನೆ. ನೀನು ಕೊಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಬಾ. ನಾನು ನಿನ್ನನ್ನು ಇಷಯನೆಂಬ ಮನುಷ್ಯನ ಬಳಿಗೆ ಕಳುಹಿಸುತ್ತೇನೆ. ಇಷಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದನು. ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಹೊಸ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.

ಅದಕ್ಕೆ ಸಮುವೇಲನು, “ನಾನು ಹೊರಟರೆ ಸೌಲನಿಗೆ ಈ ಸುದ್ದಿಯು ತಿಳಿಯುತ್ತದೆ. ಆಗ ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ” ಎಂದನು.

ಯೆಹೋವನು, “ಬೆತ್ಲೆಹೇಮಿಗೆ ಹೋಗು. ನಿನ್ನೊಡನೆ ಒಂದು ಎಳೆಕರುವನ್ನು ತೆಗೆದುಕೊಂಡು ಹೋಗು. ‘ನಾನು ಯೆಹೋವನಿಗೆ ಯಜ್ಞವನ್ನರ್ಪಿಸಲು ಬಂದಿದ್ದೇನೆ’ ಎಂದು ಹೇಳು. ಯಜ್ಞಕಾರ್ಯಕ್ಕೆ ಇಷಯನನ್ನು ಆಹ್ವಾನಿಸು. ಆ ಮೇಲೆ ನೀನು ಮಾಡಬೇಕಾದದ್ದನ್ನು ನಾನು ತೋರಿಸುತ್ತೇನೆ. ನಾನು ತೋರಿಸಿದ ಮನುಷ್ಯನಿಗೆ ನೀನು ಅಭಿಷೇಕವನ್ನು ಮಾಡಬೇಕು” ಎಂದು ಹೇಳಿದನು.

ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.

ಸಮುವೇಲನು, “ಹೌದು, ಶುಭಕರವಾಗಿದೆ. ನಾನು ಯೆಹೋವನಿಗೆ ಯಜ್ಞವನ್ನು ಅರ್ಪಿಸಲು ಬಂದಿದ್ದೇನೆ. ನೀವೆಲ್ಲ ಸಿದ್ಧರಾಗಿ ಯಜ್ಞಕಾರ್ಯಕ್ಕಾಗಿ ನನ್ನೊಂದಿಗೆ ಬನ್ನಿ” ಎಂದು ಹೇಳಿದನು. ಸಮುವೇಲನು ಇಷಯನನ್ನೂ ಅವನ ಮಕ್ಕಳನ್ನೂ ಸಿದ್ಧಗೊಳಿಸಿದನು. ನಂತರ ಸಮುವೇಲನು ಅವರನ್ನು ಯಜ್ಞದಲ್ಲಿ ಭಾಗಿಗಳಾಗಲು ಆಹ್ವಾನಿಸಿದನು.

ಇಷಯನು ಮತ್ತು ಅವನ ಮಕ್ಕಳು ಬಂದಾಗ, ಸಮುವೇಲನು ಎಲೀಯಾಬನನ್ನು ನೋಡಿದನು. ಸಮುವೇಲನು ತನ್ನಲ್ಲೇ ಯೋಚಿಸುತ್ತಾ, “ಯೆಹೋವನು ಆಯ್ಕೆ ಮಾಡಿರುವವನು ನಿಜವಾಗಿಯೂ ಅವನೇ ಇರಬೇಕು” ಎಂದುಕೊಂಡನು.

ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.

ನಂತರ ಇಷಯನು ಎರಡನೆಯ ಮಗನಾದ ಅಬೀನಾದಾಬನನ್ನು ಕರೆದನು. ಅಬೀನಾದಾಬನು ಸಮುವೇಲನ ಹತ್ತಿರಕ್ಕೆ ಬಂದನು. ಸಮುವೇಲನು, “ಯೆಹೋವನು ಆರಿಸಿಕೊಂಡಿರುವ ವ್ಯಕ್ತಿ ಇವನಲ್ಲ” ಎಂದು ಹೇಳಿದನು.

ಅನಂತರ ಇಷಯನು ಶಮ್ಮನನ್ನು ಸಮುವೇಲನ ಬಳಿಗೆ ಕಳುಹಿಸಿದನು. ಆದರೆ ಸಮುವೇಲನು, “ಯೆಹೋವನು ಇವನನ್ನೂ ಆರಿಸಲಿಲ್ಲ” ಎಂದನು.

10 ಇಷಯನು ತನ್ನ ಏಳು ಜನ ಮಕ್ಕಳನ್ನು ಸಮುವೇಲನಿಗೆ ತೋರಿಸಿದನು. ಆದರೆ ಸಮುವೇಲನು, “ಯೆಹೋವನು ಇವರಲ್ಲಿ ಯಾರೊಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.

11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು.

ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು.

ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.

12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು.

ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.

13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.

ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಎಫೆಸದವರಿಗೆ 5:8-14

ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:

“ನಿದ್ರೆಮಾಡುವವನೇ, ಎಚ್ಚರವಾಗು!
    ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”

ಯೋಹಾನ 9

ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು

ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು. ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.

ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ. ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು. ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.

ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು. ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.

ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.

ಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು.

ಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು.

10 ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.

11 ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.

12 ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು.

ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.

ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ

13 ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ. 14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್‌ದಿನದಲ್ಲಿ. 15 ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.

ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.

16 ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್‌ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು.

ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.

17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು.

ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.

18 ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು. 19 ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.

20 ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು. 21 ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು. 22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು. 23 ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.

24 ಯೆಹೂದ್ಯನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು.

25 ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.

26 ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.

27 ಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು.

28 ಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ. 29 ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು.

30 ಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು. 31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ. 32 ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ. 33 ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು.

34 ಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು.

ಆತ್ಮಿಕ ಅಂಧತೆ

35 ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು.

36 ಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು.

37 ಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು.

38 ಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು.

39 ಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣುವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು.

40 ಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು.

41 ಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ‘ನಮಗೆ ಕಣ್ಣು ಕಾಣುತ್ತದೆ’ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International