Revised Common Lectionary (Semicontinuous)
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
32 ಸಮುವೇಲನು, “ಅಮಾಲೇಕ್ಯರ ರಾಜನಾದ ಅಗಾಗನನ್ನು ನನ್ನ ಬಳಿಗೆ ಕರೆದುಕೊಂಡು ಬಾ” ಎಂದು ಹೇಳಿದನು.
ಅಗಾಗನು ಸಮುವೇಲನ ಹತ್ತಿರಕ್ಕೆ ಬಂದನು. ಅಗಾಗನನ್ನು ಸರಪಣಿಗಳಿಂದ ಬಂಧಿಸಲಾಗಿತ್ತು. ಅಗಾಗನು, “ಅವನು ನನ್ನನ್ನು ನಿಜವಾಗಿಯೂ ಕೊಲ್ಲುವುದಿಲ್ಲ” ಎಂದು ಆಲೋಚಿಸಿದನು.
33 ಆದರೆ ಸಮುವೇಲನು ಅಗಾಗನಿಗೆ, “ನಿನ್ನ ಕತ್ತಿಯು ಅನೇಕ ತಾಯಂದಿರಿಗೆ ಮಕ್ಕಳಿಲ್ಲದಂತೆ ಮಾಡಿದೆ. ಆದ್ದರಿಂದ ಈಗ ನಿನ್ನ ತಾಯಿಗೆ ಮಕ್ಕಳಿಲ್ಲದಂತಾಯಿತು” ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
34 ನಂತರ ಸಮುವೇಲನು ಅಲ್ಲಿಂದ ಹೊರಟು ರಾಮಕ್ಕೆ ಹೋದನು. ಸೌಲನು ಗಿಬೆಯದ ತನ್ನ ಮನೆಗೆ ಹೋದನು.
ಜಗತ್ತಿಗೆ ಕ್ರಿಸ್ತನ ಆಗಮನ
1 ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ[a] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. 2 ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. 3 ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. 4 ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5 ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.
6 ಯೋಹಾನ[b] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. 7 ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. 8 ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. 9 ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.
Kannada Holy Bible: Easy-to-Read Version. All rights reserved. © 1997 Bible League International