Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

1 ಸಮುವೇಲನು 15:22-31

22 ಆದಕ್ಕೆ ಸಮುವೇಲನು, “ಯೆಹೋವನಿಗೆ ಯಾವುದು ಹೆಚ್ಚು ಮೆಚ್ಚಿಗೆಯಾಗಿದೆ? ಸರ್ವಾಂಗಹೋಮಗಳೇ? ಯಜ್ಞಗಳೇ? ಇಲ್ಲವೆ ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದೇ ಉತ್ತಮ. ಟಗರುಗಳ ಕೊಬ್ಬನ್ನು ಅರ್ಪಿಸುವುದಕ್ಕಿಂತ ಆತನ ಮಾತುಗಳನ್ನು ಆಲಿಸುವುದು ಉತ್ತಮ. 23 ಅವಿಧೇಯತೆಯು ಮಾಟಮಂತ್ರಗಳಷ್ಟೇ ಪಾಪಪೂರಿತವಾದುದು. ಮೊಂಡುತನದಿಂದ ತನ್ನ ಇಷ್ಟದಂತೆ ಮಾಡುವುದು ವಿಗ್ರಹಾರಾಧನೆಯಷ್ಟೇ ಪಾಪಪೂರಿತವಾದುದು. ನೀನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ. ಈ ಕಾರಣದಿಂದ ಈಗ ಯೆಹೋವನು ನಿನ್ನನ್ನು ರಾಜನನ್ನಾಗಿ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಸೌಲನಿಗೆ ಉತ್ತರಿಸಿದನು.

24 ಆಗ ಸೌಲನು ಸಮುವೇಲನಿಗೆ, “ನಾನು ಪಾಪ ಮಾಡಿದ್ದೇನೆ. ನಾನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ; ನೀನು ಹೇಳಿದ್ದನ್ನು ನಾನು ಮಾಡಲಿಲ್ಲ. ನಾನು ಜನರಿಗೆ ಹೆದರಿ ಅವರು ಹೇಳಿದಂತೆ ಮಾಡಿದೆ. 25 ಈಗ ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪಾಪವನ್ನು ಕ್ಷಮಿಸು. ನನ್ನೊಂದಿಗೆ ಹಿಂದಿರುಗಿ ಬಾ, ಆಗ ನಾನು ಯೆಹೋವನನ್ನು ಆರಾಧಿಸಲು ಸಾಧ್ಯವಾಗುವುದು” ಎಂದು ಅವನನ್ನು ಬೇಡಿಕೊಂಡನು.

26 ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.

27 ಸಮುವೇಲನು ಹೋಗಲು ತಿರುಗಿದಾಗ ಸೌಲನು ಸಮುವೇಲನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು. ಮೇಲಂಗಿಯು ಹರಿದುಹೋಯಿತು. 28 ಆಗ ಸಮುವೇಲನು ಸೌಲನಿಗೆ, “ನೀನು ನನ್ನ ಮೇಲಂಗಿಯನ್ನು ಹರಿದುಹಾಕಿದೆ. ಇದೇರೀತಿ ಯೆಹೋವನು ಈ ದಿನ ನಿನ್ನಿಂದ ಇಸ್ರೇಲ್ ರಾಜ್ಯವನ್ನು ಹರಿದುಹಾಕಿದನು. ನಿನ್ನ ಸ್ನೇಹಿತರಲ್ಲಿ ಒಬ್ಬನಿಗೆ ಯೆಹೋವನು ರಾಜ್ಯಾಧಿಕಾರವನ್ನು ಕೊಟ್ಟಿದ್ದಾನೆ. ಅವನು ನಿನಗಿಂತ ಉತ್ತಮ ವ್ಯಕ್ತಿ. 29 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಯೆಹೋವನು ಸರ್ವಕಾಲದಲ್ಲೂ ಇರುವನು. ಯೆಹೋವನು ಸುಳ್ಳಾಡುವುದಿಲ್ಲ; ಆತನು ಮನುಷ್ಯನಂತೆ ಪದೇಪದೇ ಮನಸ್ಸನ್ನು ಬದಲಾಯಿಸುವವನಲ್ಲ” ಎಂದು ಹೇಳಿದನು.

30 ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆಂಬುದು ಸರಿ. ಆದರೆ ದಯವಿಟ್ಟು ನನ್ನ ಜೊತೆಯಲ್ಲಿ ಹಿಂದಿರುಗಿ ಬಾ. ಇಸ್ರೇಲಿನ ಜನರೆದುರು ಮತ್ತು ನಾಯಕರೆದುರು ಸ್ವಲ್ಪ ಗೌರವವನ್ನು ತೋರಿಸು. ನನ್ನ ಜೊತೆಯಲ್ಲಿ ನೀನು ಹಿಂದಿರುಗಿ ಬಂದರೆ, ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸಬಹುದು” ಎಂದು ಬೇಡಿಕೊಂಡನು. 31 ಆಗ ಸಮುವೇಲನು ಸೌಲನ ಜೊತೆಯಲ್ಲಿ ಹೋದನು. ಸೌಲನು ದೇವರನ್ನು ಆರಾಧಿಸಿದನು.

ಎಫೆಸದವರಿಗೆ 5:1-9

ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.

ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ. ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು. ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.

ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International