Revised Common Lectionary (Semicontinuous)
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
ಸಮುವೇಲನು ಸೌಲನಿಗೆ ಅವನ ಪಾಪದ ಬಗ್ಗೆ ತಿಳಿಸುವನು
10 ಸಮುವೇಲನಿಗೆ ಯೆಹೋವನ ಸಂದೇಶ ಬಂದಿತು. 11 ಯೆಹೋವನು ಸಮುವೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ಯಜಿಸಿದನು. ನಾನು ಸೌಲನನ್ನು ರಾಜನನ್ನಾಗಿ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ಆಜ್ಞಾಪಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುವೇಲನು ತಳಮಳಗೊಂಡನು. ಅವನು ರಾತ್ರಿಯೆಲ್ಲ ಅಳುತ್ತಾ ಯೆಹೋವನಲ್ಲಿ ಮೊರೆಯಿಟ್ಟನು.
12 ಸಮುವೇಲನು ಮಾರನೆಯ ದಿನ ಬೆಳಿಗ್ಗೆ ಮೇಲೆದ್ದು, ಸೌಲನನ್ನು ಭೇಟಿಮಾಡಲು ಹೋದನು. ಆದರೆ ಜನರೆಲ್ಲ ಸಮುವೇಲನಿಗೆ, “ಸೌಲನು ತನ್ನ ಗೌರವಾರ್ಥವಾಗಿ ಜ್ಞಾಪಕಸ್ತಂಭವನ್ನು ನಿರ್ಮಿಸಲು ಕರ್ಮೆಲ್ ಎಂಬ ಪಟ್ಟಣಕ್ಕೆ ಹೋದನು. ನಂತರ ಸೌಲನು ಕೆಲವು ಪ್ರದೇಶಗಳನ್ನು ಸುತ್ತಿಕೊಂಡು ಗಿಲ್ಗಾಲಿಗೆ ಹೋದನು” ಎಂದು ಹೇಳಿದರು.
ಸಮುವೇಲನು ಸೌಲನಿದ್ದ ಸ್ಥಳಕ್ಕೆ ಹೋದನು. ಸೌಲನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳನ್ನು ಪ್ರಥಮ ಸರ್ವಾಂಗಹೋಮವಾಗಿ ಯೆಹೋವನಿಗೆ ಅರ್ಪಿಸುತ್ತಿದ್ದನು. 13 ಸೌಲನು ಸಮುವೇಲನ ಹತ್ತಿರಕ್ಕೆ ಹೋಗಿ, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಯೆಹೋವನ ಆಜ್ಞೆಗಳನ್ನು ಪಾಲಿಸಿದ್ದೇನೆ” ಎಂದು ಹೇಳಿದನು.
14 ಅದಕ್ಕೆ ಸಮುವೇಲನು, “ಹಾಗಿದ್ದರೆ ನಾನು ಕೇಳುತ್ತಿರುವ ಶಬ್ದವೇನು? ದನಕುರಿಗಳ ಶಬ್ದವು ಕೇಳುತ್ತಿದೆಯಲ್ಲಾ!” ಎಂದನು.
15 ಸೌಲನು, “ಸೈನಿಕರು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳಲ್ಲಿ ಉತ್ತಮವಾದುದ್ದನ್ನು ನಿನ್ನ ದೇವರಾದ ಯೆಹೋವನಿಗೆ ಅರ್ಪಿಸುವುದಕ್ಕಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ನಾವು ಉಳಿದೆಲ್ಲವನ್ನು ನಾಶಪಡಿಸಿದೆವು” ಎಂದು ಉತ್ತರಿಸಿದನು.
16 ಸಮುವೇಲನು ಸೌಲನಿಗೆ, “ಯೆಹೋವನು ಕಳೆದ ರಾತ್ರಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುತ್ತೇನೆ” ಎಂದನು.
ಸೌಲನು. “ಸರಿ, ತಿಳಿಸು” ಎಂದು ಉತ್ತರಿಸಿದನು.
17 ಸಮುವೇಲನು, “ನೀನು ಮೊದಲು ನಿನ್ನನ್ನು ಅಲ್ಪನೆಂದು ತಿಳಿದಿದ್ದೆ. ಯೆಹೋವನು ನಿನ್ನನ್ನು ಇಸ್ರೇಲರಿಗೆ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರೇಲ್ ಕುಲಗಳಿಗೆ ನಾಯಕನಾದೆ. 18 ಆತನು ನಿನಗೆ, ‘ಹೋಗು ದುಷ್ಟರಾದ ಅಮಾಲೇಕ್ಯರ ಮೇಲೆ ಯುದ್ಧ ಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಗೊಳಿಸು’ ಎಂದು ಆಜ್ಞಾಪಿಸಿದರು. 19 ಆದರೆ ನೀನು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ. ನೀನು ಅವುಗಳನ್ನು ನಿನ್ನ ಬಳಿಯಲ್ಲಿಟ್ಟುಕೊಳ್ಳಲು ಬಯಸಿದೆ. ಹೀಗೆ ಯೆಹೋವನು ಕೆಟ್ಟದೆಂದು ಹೇಳಿದ್ದನ್ನೇ ನೀನು ಮಾಡಿದೆ!” ಎಂದು ಹೇಳಿದನು.
20 ಸೌಲನು, “ಆದರೆ ನಾನು ಯೆಹೋವನಿಗೆ ವಿಧೇಯನಾದೆ. ಆತನು ಕಳುಹಿಸಿದಲ್ಲಿಗೆ ನಾನು ಹೋಗಿ ಅಮಾಲೇಕ್ಯರೆಲ್ಲರನ್ನು ನಾಶಗೊಳಿಸಿದೆ. ಆದರೆ ಒಬ್ಬನನ್ನೇ ನಾನು ತಂದೆನು. ಅವನೇ ರಾಜನಾದ ಅಗಾಗ. 21 ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞವನ್ನರ್ಪಿಸುವುದಕ್ಕಾಗಿ ಸೈನಿಕರು ಉತ್ತಮವಾದ ದನಕುರಿಗಳನ್ನು ವಶಪಡಿಸಿಕೊಂಡು ಬಂದರು” ಎಂದು ಉತ್ತರಿಸಿದನು.
25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(A) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.
29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.
Kannada Holy Bible: Easy-to-Read Version. All rights reserved. © 1997 Bible League International