Revised Common Lectionary (Semicontinuous)
ರಚನೆಗಾರ: ಆಸಾಫ.
81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
2 ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
3 ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
4 ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
5 ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
6 ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
7 ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
8 “ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
9 ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14 ಅವರ ಶತ್ರುಗಳನ್ನು ಸೋಲಿಸುವೆನು;
ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”
4 ಯಾಕೋಬನ ಮನೆತನದವರೇ, ಯೆಹೋವನ ಸಂದೇಶವನ್ನು ಕೇಳಿರಿ.
ಇಸ್ರೇಲಿನ ಎಲ್ಲಾ ಕುಲದವರೇ, ಯೆಹೋವನ ಸಂದೇಶವನ್ನು ಕೇಳಿರಿ.
5 ಯೆಹೋವನು ಹೀಗೆನ್ನುತ್ತಾನೆ:
“ನಾನು ನಿಮ್ಮ ಪೂರ್ವಿಕರಿಗೆ ಅನ್ಯಾಯ ಮಾಡಿದೆನೇ?
ಅದಕ್ಕಾಗಿ ಅವರು ನನ್ನನ್ನು ತಿರಸ್ಕರಿಸಿದರೇ?
ನಿಮ್ಮ ಪೂರ್ವಿಕರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿ
ತಾವು ಸಹ ನಿಷ್ಪ್ರಯೋಜಕರಾದರು.
6 ‘ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
ಮರಳುಗಾಡಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
ನಿರ್ಜನವಾದ ಬೆಟ್ಟಪ್ರದೇಶದಿಂದ ನಮ್ಮನ್ನು ತಂದ ಯೆಹೋವನು ಎಲ್ಲಿದ್ದಾನೆ?
ಎಂದು ನಿಮ್ಮ ಪೂರ್ವಿಕರು ಸ್ಮರಿಸಲಿಲ್ಲ.
ಯೆಹೋವನು ನಮ್ಮನ್ನು ಅಂಧಕಾರಮಯವಾದ
ಮತ್ತು ಅಪಾಯಕಾರಿಯಾದ ಭೂಮಿಯಿಂದ ಕರೆದುತಂದನು.
ಆ ಭೂಮಿಯ ಮಾರ್ಗವಾಗಿ ಯಾರೂ ಪ್ರಯಾಣ ಮಾಡುವುದಿಲ್ಲ.
ಯಾರೂ ಆ ಭೂಮಿಯ ಮೇಲೆ ವಾಸ ಮಾಡುವದಿಲ್ಲ.
ಈಗ ಆ ಯೆಹೋವನು ಎಲ್ಲಿದ್ದಾನೆ?’”
ನಿಮ್ಮ ಪೂರ್ವಿಕರು ಆ ಪ್ರಶ್ನೆಗಳನ್ನು ಕೇಳಲೇ ಇಲ್ಲ.
7 “ನಾನು ನಿಮ್ಮನ್ನು ಅನೇಕ ಅಮೂಲ್ಯವಸ್ತುಗಳಿಂದ ಕೂಡಿದ
ಫಲವತ್ತಾದ ಭೂಮಿಗೆ ಕರೆದುತಂದೆ.
ಅಲ್ಲಿ ಬೆಳೆಯುವ ಫಲಗಳನ್ನು ತಿನ್ನಲಿ ಎಂಬ ಉದ್ದೇಶದಿಂದ ನಾನು ಕರೆದುತಂದೆ.
ಆದರೆ ನೀವು ಬಂದು ನನ್ನ ಭೂಮಿಯನ್ನು ಹೊಲಸು ಮಾಡಿದಿರಿ.
ನಾನು ಆ ಭೂಮಿಯನ್ನು ನಿಮಗೆ ಕೊಟ್ಟೆ,
ಆದರೆ ನೀವು ಅದನ್ನು ಕೆಟ್ಟ ಸ್ಥಳವನ್ನಾಗಿ ಮಾಡಿದಿರಿ.
8 “‘ಯೆಹೋವನು ಎಲ್ಲಿ?’
ಎಂದು ಯಾಜಕರು ಕೇಳಲಿಲ್ಲ.
ಧರ್ಮಶಾಸ್ತ್ರವನ್ನು ಬಲ್ಲವರು ನನ್ನನ್ನು ತಿಳಿಯಬಯಸಲಿಲ್ಲ.
ಇಸ್ರೇಲರ ಜನನಾಯಕರು ನನ್ನ ವಿರೋಧಿಗಳಾದರು.
ಪ್ರವಾದಿಗಳು ಸುಳ್ಳುದೇವರಾದ ಬಾಳನ ಹೆಸರಿನಿಂದ ಭವಿಷ್ಯವಾಣಿಯನ್ನು ನುಡಿದರು.
ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿದರು.”
9 “ಆದ್ದರಿಂದ ನಾನು ನಿಮ್ಮನ್ನು ಮತ್ತೊಮ್ಮೆ ಆಪಾದಿಸುವೆನು.
ನಾನು ನಿಮ್ಮ ಮೊಮ್ಮಕ್ಕಳ ಮೇಲೂ ಆಪಾದಿಸುವೆನು” ಎನ್ನುತ್ತಾನೆ ಯೆಹೋವನು.
10 ಸಮುದ್ರದ ಆಚೆಗಿದ್ದ ಕಿತ್ತೀಮ್ ದಿಬಪಗಳಿಗೆ ಹೋಗಿ ನೋಡಿರಿ.
ಸೂಕ್ಷ್ಮವಾಗಿ ಪರಿಶೀಲಿಸಲು ಯಾರನ್ನಾದರೂ ಕೇದಾರಿಗೆ ಕಳುಹಿಸಿರಿ.
ಯಾರಾದರೂ ಎಂದಾದರೂ
ಇಂಥ ಕೆಲಸ ಮಾಡಿರುವರೇ, ನೋಡಿರಿ.
11 ಯಾವ ಜನಾಂಗವಾದರೂ ಎಂದಾದರೂ
ತಮ್ಮ ಹಳೆಯ ದೇವರುಗಳನ್ನು ಬದಲಾಯಿಸಿ ಹೊಸ ದೇವರುಗಳನ್ನು ಪಡೆಯಿತೇ?
ಇಲ್ಲ. (ಅವರ ದೇವರುಗಳು ನಿಜವಾದ ದೇವರುಗಳೇ ಅಲ್ಲ.)
ಆದರೆ ನನ್ನ ಜನರು ತಮ್ಮ ಮಹಿಮಾಶಾಲಿಯಾದ ದೇವರನ್ನು
ಅಪ್ರಯೋಜಕವಾದ ವಿಗ್ರಹಗಳೊಂದಿಗೆ ಬದಲಾಯಿಸಿಕೊಂಡಿದ್ದಾರೆ.
12 “ಆಕಾಶಮಂಡಲವೇ, ನಡೆದ ಸಂಗತಿಗಳಿಗಾಗಿ ಬೆಚ್ಚಿಬೆರಗಾಗು!
ಭಯದಿಂದ ನಡುಗು!”
ಎಂದು ಯೆಹೋವನು ನುಡಿಯುತ್ತಾನೆ.
13 “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ.
ಅವರು ನನ್ನಿಂದ ಮುಖ ತಿರುವಿದ್ದಾರೆ.
ನಾನು ಜೀವಜಲದ ಬುಗ್ಗೆಯಾಗಿದ್ದೇನೆ.
ಅವರು ತಮ್ಮದೇ ಆದ ನೀರಿನ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ.
ಅವರು ಇತರ ದೇವರುಗಳ ಕಡೆಗೆ ತಿರುಗಿಕೊಂಡಿದ್ದಾರೆ.
ಅವರ ತೊಟ್ಟಿಗಳು ಒಡೆದಿವೆ.
ಅವುಗಳಲ್ಲಿ ನೀರು ತುಂಬಿಡಲು ಸಾಧ್ಯವಿಲ್ಲ.
ಯೆಹೂದ್ಯರ ಹಬ್ಬದಲ್ಲಿ ಯೇಸುವಿನ ಉಪದೇಶ
14 ಹಬ್ಬದಲ್ಲಿ ಸುಮಾರು ಅರ್ಧಭಾಗ ಮುಗಿದುಹೋಗಿತ್ತು. ಆಗ ಯೇಸು ದೇವಾಲಯಕ್ಕೆ ಹೋಗಿ ಉಪದೇಶಿಸಲು ಆರಂಭಿಸಿದನು. 15 ಯೆಹೂದ್ಯರಿಗೆ ಆಶ್ಚರ್ಯವಾಯಿತು. “ಈ ಮನುಷ್ಯನು ಎಂದೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿಲ್ಲ. ಇವನು ಇಷ್ಟೆಲ್ಲವನ್ನೂ ಹೇಗೆ ಕಲಿತನು?” ಎಂದು ವಿಚಾರಿಸತೊಡಗಿದರು.
16 ಯೇಸು, “ನಾನು ಉಪದೇಶಿಸುವ ಸಂಗತಿಗಳು ನನ್ನ ಸ್ವಂತವಾದವುಗಳಲ್ಲ. ನನ್ನ ಉಪದೇಶವು ನನ್ನನ್ನು ಕಳುಹಿಸಿದಾತನಿಂದ (ದೇವರು) ಬರುತ್ತದೆ. 17 ದೇವರು ಅಪೇಕ್ಷಿಸುವುದನ್ನು ಮಾಡಬಯಸುವವನಿಗೆ ನನ್ನ ಉಪದೇಶವು ದೇವರಿಂದ ಬಂದದ್ದೇ ಹೊರತು ನನ್ನ ಸ್ವಂತದ್ದಲ್ಲವೆಂದು ಗೊತ್ತಾಗುವುದು. 18 ತನ್ನ ಸ್ವಂತ ಆಲೋಚನೆಗಳನ್ನು ಉಪದೇಶಿಸುವವನು, ತನಗೇ ಘನತೆಯನ್ನು ಉಂಟುಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನನ್ನು ಕಳುಹಿಸಿದಾತನಿಗೆ ಘನತೆಯನ್ನು ಉಂಟುಮಾಡಲು ಪ್ರಯತ್ನಿಸುವವನು ಸತ್ಯವನ್ನೇ ಹೇಳುತ್ತಾನೆ. ಆತನಲ್ಲಿ ಯಾವ ಸುಳ್ಳೂ ಇಲ್ಲ. 19 ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಹೌದಲ್ಲವೇ? ಆದರೆ ನಿಮ್ಮಲ್ಲಿ ಒಬ್ಬರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ನೀವು ನನ್ನನ್ನು ಕೊಲ್ಲಲು ಏಕೆ ಪ್ರಯತ್ನಿಸುತ್ತಿದ್ದೀರಿ?” ಎಂದು ಉತ್ತರಕೊಟ್ಟನು.
20 ಜನರು, “ದೆವ್ವವು ನಿನ್ನೊಳಗೆ ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ! ನಾವು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ” ಎಂದು ಉತ್ತರಕೊಟ್ಟರು.
21 ಯೇಸು ಅವರಿಗೆ, “ನಾನು ಮಾಡಿದ ಒಂದು ಅದ್ಭುತಕಾರ್ಯವನ್ನು ಕಂಡು ನೀವೆಲ್ಲರೂ ಆಶ್ಚರ್ಯಗೊಂಡಿದ್ದೀರಿ. 22 ಮೋಶೆಯು ನಿಮಗೆ ಸುನ್ನತಿಯ ಬಗ್ಗೆ ಕಟ್ಟಳೆಯನ್ನು ಕೊಟ್ಟನು. (ಆದರೆ ನಿಜವಾಗಿಯೂ ಸುನ್ನತಿ ಎಂಬ ಸಂಸ್ಕಾರವನ್ನು ನಿಮಗೆ ಕೊಟ್ಟವನು ಮೋಶೆಯಲ್ಲ. ಅವನಿಗಿಂತ ಮೊದಲೇ ಜೀವಿಸಿದ್ದ ನಮ್ಮ ಜನರಿಂದ ಈ ಸಂಸ್ಕಾರವು ಬಂದಿದೆ.) ಆದ್ದರಿಂದ ಕೆಲವೊಮ್ಮೆ ನೀವು ಸಬ್ಬತ್‌ದಿನದಲ್ಲಿ ಮಗುವಿಗೆ ಸುನ್ನತಿಮಾಡುತ್ತೀರಿ. 23 ಒಬ್ಬ ವ್ಯಕ್ತಿಯು ಮೋಶೆಯ ಕಟ್ಟಳೆಗೆ ವಿಧೇಯನಾಗುವುದಕ್ಕಾಗಿ ಸಬ್ಬತ್‌ದಿನದಂದು ಸುನ್ನತಿ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಹೀಗಿರುವಲ್ಲಿ, ಸಬ್ಬತ್‌ದಿನದಂದು ಒಬ್ಬನ ಇಡೀ ದೇಹವನ್ನು ಗುಣಪಡಿಸಿದ್ದಕ್ಕೋಸ್ಕರ ನೀವು ಏಕೆ ಕೋಪಗೊಂಡಿದ್ದೀರಿ? 24 ಹೊರತೋರಿಕೆಯ ಆಧಾರದ ಮೇಲೆ ತೀರ್ಪುಮಾಡದೆ ನ್ಯಾಯಾನುಸಾರವಾಗಿ ತೀರ್ಪುಮಾಡಿರಿ” ಎಂದು ಹೇಳಿದನು.
ಯೇಸುವೇ ಕ್ರಿಸ್ತನೋ?
25 ಬಳಿಕ, ಜೆರುಸಲೇಮಿನಲ್ಲಿ ವಾಸವಾಗಿದ್ದ ಕೆಲವರು, “ಅವರು ಕೊಲ್ಲಲು ಪ್ರಯತ್ನಿಸುತ್ತಿರುವುದು ಈ ವ್ಯಕ್ತಿಯನ್ನೇ 26 ಆದರೆ ಇವನು ಪ್ರತಿಯೊಬ್ಬರಿಗೂ ಕಾಣುವ ಮತ್ತು ಕೇಳುವ ಸ್ಥಳದಲ್ಲಿ ಉಪದೇಶಿಸುತ್ತಿದ್ದಾನೆ. ಅಲ್ಲದೆ ಉಪದೇಶ ಮಾಡದಂತೆ ಯಾರೂ ಅವನನ್ನು ತಡೆಯುತ್ತಿಲ್ಲ. ಒಂದುವೇಳೆ ಈತನೇ ಕ್ರಿಸ್ತನು ಎಂಬ ನಿರ್ಧಾರಕ್ಕೆ ನಾಯಕರುಗಳು ಬಂದಿರಬಹುದು. 27 ಆದರೆ ಈ ಮನುಷ್ಯನ ಮನೆಯು ಎಲ್ಲಿದೆ ಎಂಬುದು ನಮಗೆ ಗೊತ್ತಿದೆ. ಅಲ್ಲದೆ, ಕ್ರಿಸ್ತನು ಬಂದಾಗ, ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ” ಎಂದು ಮಾತಾಡಿಕೊಂಡರು.
28 ಯೇಸುವು ದೇವಾಲಯದಲ್ಲಿ ಇನ್ನೂ ಉಪದೇಶಿಸುತ್ತಾ, “ಹೌದು, ನಿಮಗೆ ನನ್ನ ಬಗ್ಗೆ ಗೊತ್ತಿದೆ, ನಾನು ಎಲ್ಲಿಂದ ಬಂದೆನೆಂಬುದೂ ನಿಮಗೆ ತಿಳಿದಿದೆ. ಆದರೆ ನಾನು ಬಂದಿರುವುದು ನನ್ನ ಸ್ವಂತ ಅಧಿಕಾರದಿಂದಲ್ಲ. ಸತ್ಯಸ್ವರೂಪನು ನನ್ನನ್ನು ಕಳುಹಿಸಿದ್ದಾನೆ. ನಿಮಗೆ ಆತನು ಗೊತ್ತಿಲ್ಲ. 29 ಆದರೆ ನಾನು ಆತನನ್ನು ಬಲ್ಲೆನು. ನಾನು ಆತನಿಂದಲೇ ಬಂದೆನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
30 ಇದನ್ನು ಕೇಳಿ ಜನರು ಆತನನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸುವಿನ ಮೇಲೆ ಕೈಹಾಕಲು ಯಾರಿಗೂ ಸಾಧ್ಯವಿರಲಿಲ್ಲ, ಏಕೆಂದರೆ ಯೇಸುವನ್ನು ಕೊಲ್ಲಲು ಇನ್ನೂ ಸರಿಯಾದ ಸಮಯ ಬಂದಿರಲಿಲ್ಲ. 31 ಆದರೆ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅವರು, “ಕ್ರಿಸ್ತನು ಬರುತ್ತಾನೆಂದು ನಾವು ಎದುರು ನೋಡುತ್ತಿದ್ದೇವೆ. ಕ್ರಿಸ್ತನು ಬಂದಾಗ, ಈ ಮನುಷ್ಯನು (ಯೇಸು) ಮಾಡಿರುವುದಕ್ಕಿಂತಲೂ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೇ? ಇಲ್ಲ! ಆದ್ದರಿಂದ ಈತನೇ ಕ್ರಿಸ್ತನಿರಬೇಕು” ಎಂದರು.
ಪವಿತ್ರಾತ್ಮನ ಬಗ್ಗೆ ಉಪದೇಶ
37 ಹಬ್ಬದ ಕೊನೆಯ ದಿನ ಬಂದಿತು. ಅದು ಅತ್ಯಂತ ಮುಖ್ಯವಾದ ದಿನವಾಗಿತ್ತು. ಅಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನಲ್ಲಿ ನಂಬಿಕೆ ಇಡುವವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತವೆ. ಪವಿತ್ರ ಗ್ರಂಥವು ತಿಳಿಸುವುದು ಇದನ್ನೇ” ಎಂದು ಗಟ್ಟಿಯಾಗಿ ಹೇಳಿದನು. 39 ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮನನ್ನು ಕುರಿತು ಹೇಳಿದನು. ಆತನು ಇನ್ನೂ ತನ್ನ ಮಹಿಮೆಯನ್ನು ಹೊಂದಿಲ್ಲದಿದ್ದ ಕಾರಣ ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International