Revised Common Lectionary (Semicontinuous)
ರಚನೆಗಾರ: ಆಸಾಫ.
81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
2 ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
3 ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
4 ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
5 ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
6 ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
7 ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
8 “ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
9 ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14 ಅವರ ಶತ್ರುಗಳನ್ನು ಸೋಲಿಸುವೆನು;
ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”
ಯಾಕೋಬನು ರಾಹೇಲಳನ್ನು ಭೇಟಿಯಾದದ್ದು
29 ಬಳಿಕ ಯಾಕೋಬನು ತನ್ನ ಪ್ರಯಾಣವನ್ನು ಮುಂದುವರಿಸಿದನು. ಅವನು ಪೂರ್ವ ದಿಕ್ಕಿನಲ್ಲಿದ್ದ ನಾಡಿಗೆ ಹೋದನು. 2 ಯಾಕೋಬನು ದೃಷ್ಟಿಸಿ ನೋಡಿದಾಗ, ಹೊಲದಲ್ಲಿ ಅವನಿಗೆ ಒಂದು ಬಾವಿ ಕಾಣಿಸಿತು. ಬಾವಿಯ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿಕೊಂಡಿದ್ದವು. ಕುರಿಗಳಿಗೆ ಆ ಬಾವಿಯ ನೀರನ್ನೇ ಕುಡಿಸುತ್ತಿದ್ದರು. ಬಾವಿಯ ಮೇಲೆ ಅಗಲವಾದ ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. 3 ಕುರಿಮಂದೆಗಳೆಲ್ಲ ಒಟ್ಟಿಗೆ ಸೇರಿದ ಮೇಲೆ, ಕುರುಬರು ಬಾವಿಯ ಮೇಲಿನ ಕಲ್ಲನ್ನು ಉರುಳಿಸುತ್ತಿದ್ದರು. ಆಮೇಲೆ ಎಲ್ಲಾ ಕುರಿಗಳು ಬಾವಿಯ ನೀರನ್ನು ಕುಡಿಯುತ್ತಿದ್ದವು. ಕುರಿಗಳು ನೀರು ಕುಡಿದಾದ ಮೇಲೆ ಕುರುಬರು ಕಲ್ಲನ್ನು ಮತ್ತೆ ಮುಚ್ಚುತ್ತಿದ್ದರು.
4 ಯಾಕೋಬನು ಅಲ್ಲಿದ್ದ ಕುರುಬರಿಗೆ, “ಸಹೋದರರೇ, ನೀವು ಎಲ್ಲಿಯವರು?” ಎಂದು ಕೇಳಿದನು.
ಅವರು “ನಾವು ಹಾರಾನಿನವರು” ಎಂದು ಉತ್ತರಕೊಟ್ಟರು.
5 ನಂತರ ಯಾಕೋಬನು ಅವರಿಗೆ, “ನಾಹೋರನ ಮೊಮ್ಮಗನಾದ ಲಾಬಾನನು ನಿಮಗೆ ಗೊತ್ತೆ?” ಎಂದು ಕೇಳಿದನು.
ಕುರುಬರು, “ನಮಗೆ ಗೊತ್ತು” ಎಂದು ಉತ್ತರಿಸಿದರು.
6 ಯಾಕೋಬನು, “ಅವನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅವರು, “ಅವನು ಕ್ಷೇಮವಾಗಿದ್ದಾನೆ. ಅಗೋ, ಆ ಕುರಿಗಳೊಂದಿಗೆ ಬರುತ್ತಿರುವವಳೇ ಅವನ ಮಗಳಾದ ರಾಹೇಲಳು” ಎಂದು ಉತ್ತರಿಸಿದರು.
7 ಯಾಕೋಬನು, “ನೋಡಿ, ಇನ್ನೂ ಹೊತ್ತಾಗಿಲ್ಲ; ರಾತ್ರಿಗಾಗಿ ಕುರಿಗಳನ್ನು ಒಟ್ಟಿಗೆ ಸೇರಿಸುವ ಸಮಯವಾಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಿರಿ” ಎಂದನು.
8 ಆ ಕುರುಬರು, “ಕುರಿಮಂದೆಗಳೆಲ್ಲ ಒಟ್ಟಿಗೆ ಸೇರುವವರೆಗೆ ನಾವು ಬಾವಿಯ ಮೇಲಿರುವ ಕಲ್ಲನ್ನು ತೆಗೆದು ಕುರಿಗಳಿಗೆ ನೀರು ಕುಡಿಸುವಂತಿಲ್ಲ; ಅವು ಒಟ್ಟಿಗೆ ಕೂಡಿಬಂದಾಗಲೇ ನೀರು ಕುಡಿಸುತ್ತೇವೆ” ಎಂದು ಹೇಳಿದರು.
9 ಯಾಕೋಬನು ಕುರುಬರೊಡನೆ ಮಾತಾಡುತ್ತಿರುವಾಗ ರಾಹೇಲಳು ತನ್ನ ತಂದೆಯ ಕುರಿಗಳೊಡನೆ ಬಂದಳು. (ಕುರಿಗಳನ್ನು ನೋಡಿಕೊಳ್ಳುವುದು ರಾಹೇಲಳ ಕೆಲಸವಾಗಿತ್ತು.) 10 ರಾಹೇಲಳು ಲಾಬಾನನ ಮಗಳು. ಲಾಬಾನನು ಯಾಕೋಬನ ತಾಯಿಯಾದ ರೆಬೆಕ್ಕಳ ಅಣ್ಣ. ಯಾಕೋಬನು ರಾಹೇಲಳನ್ನು ನೋಡಿದಾಗ ಬಾವಿಯ ಮೇಲಿದ್ದ ಕಲ್ಲನ್ನು ತೆಗೆದುಹಾಕಿ ತನ್ನ ತಾಯಿಯ ಅಣ್ಣನಾದ ಲಾಬಾನನ ಕುರಿಗಳಿಗೆ ನೀರು ಕೊಟ್ಟನು. 11 ಬಳಿಕ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಅತ್ತನು. 12 ಯಾಕೋಬನು ರಾಹೇಲಳಿಗೆ, ತಾನು ಅವಳ ತಂದೆಯ ಕುಟುಂಬದವನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ರಾಹೇಲಳು ಮನೆಗೆ ಓಡಿಹೋಗಿ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದಳು.
13 ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.
14 ನಂತರ ಲಾಬಾನನು, “ಇದು ಆಶ್ಚರ್ಯವಾಗಿದೆ; ನೀನು ನನ್ನ ಸ್ವಂತ ಕುಟುಂಬದವನು” ಎಂದು ಹೇಳಿದನು. ಆದ್ದರಿಂದ ಯಾಕೋಬನು ಲಾಬಾನನೊಡನೆ ಒಂದು ತಿಂಗಳವರೆಗೆ ಇದ್ದನು.
ಯೆಹೂದ್ಯರಂತಿರಬೇಡಿ
10 ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು; 2 ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು; 3 ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು; 4 ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು.
Kannada Holy Bible: Easy-to-Read Version. All rights reserved. © 1997 Bible League International