Revised Common Lectionary (Semicontinuous)
ರಚನೆಗಾರ: ಆಸಾಫ.
81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
2 ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
3 ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
4 ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
5 ಆತನು ಯೋಸೇಫನನ್ನು[a] ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
6 ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
7 ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
8 “ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
9 ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14 ಅವರ ಶತ್ರುಗಳನ್ನು ಸೋಲಿಸುವೆನು;
ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”
ಇಸಾಕನಿಗಾಗಿ ಹೆಂಡತಿ
24 ಅಬ್ರಹಾಮನು ಬಹಳ ವೃದ್ಧನಾದನು. ಯೆಹೋವನು ಅಬ್ರಹಾಮನನ್ನೂ ಅವನು ಮಾಡಿದ ಪ್ರತಿಯೊಂದನ್ನೂ ಆಶೀರ್ವದಿಸಿದನು. 2 ಅಬ್ರಹಾಮನ ಆಸ್ತಿಯನ್ನೆಲ್ಲಾ ನೋಡಿಕೊಳ್ಳಲು ಒಬ್ಬ ಸೇವಕನಿದ್ದನು. ಅಬ್ರಹಾಮನು ಆ ಸೇವಕನನ್ನು ಕರೆದು, “ನನ್ನ ತೊಡೆಯ ಕೆಳಗೆ ನಿನ್ನ ಕೈಯಿಟ್ಟು ನನಗೆ ಪ್ರಮಾಣಮಾಡು. 3 ಕಾನಾನ್ ದೇಶದ ಕನ್ನಿಕೆಯನ್ನು ನನ್ನ ಮಗನು ಮದುವೆಯಾಗದಂತೆ ನೀನು ನೋಡಿಕೊಳ್ಳುವುದಾಗಿಯೂ 4 ನನ್ನ ಸ್ವದೇಶದಲ್ಲಿರುವ ನನ್ನ ಸ್ವಜನರ ಬಳಿಗೆ ಹೋಗಿ ನನ್ನ ಮಗನಾದ ಇಸಾಕನಿಗೆ ಕನ್ನಿಕೆಯನ್ನು ಹುಡುಕಿ ಕರೆದುಕೊಂಡು ಬರುವುದಾಗಿಯೂ ಭೂಪರಲೋಕಗಳ ದೇವರಾದ ಯೆಹೋವನ ಮೇಲೆ ಪ್ರಮಾಣಮಾಡು” ಎಂದು ಹೇಳಿದನು.
5 ಸೇವಕನು ಅವನಿಗೆ, “ಆ ಕನ್ಯೆಯು ನನ್ನೊಡನೆ ಈ ದೇಶಕ್ಕೆ ಬರಲು ಒಪ್ಪದಿದ್ದರೆ, ನಾನು ನಿನ್ನ ಮಗನನ್ನು ನಿನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಬೇಕೇ?” ಎಂದು ಕೇಳಿದನು.
6 ಅಬ್ರಹಾಮನು ಅವನಿಗೆ, “ಇಲ್ಲ, ಆ ದೇಶಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗಬೇಡ. 7 ಪರಲೋಕದ ದೇವರಾದ ಯೆಹೋವನು ನನ್ನನ್ನು ಸ್ವದೇಶದಿಂದ ಈ ಸ್ಥಳಕ್ಕೆ ಕರೆದುಕೊಂಡು ಬಂದನು. ಆ ದೇಶ ನನ್ನ ತಂದೆಗೂ ನನ್ನ ಕುಟುಂಬಕ್ಕೂ ಸೇರಿದೆ. ಆದರೆ ಯೆಹೋವನು ಈ ದೇಶವನ್ನು ನನ್ನ ಸಂತತಿಗೆ ಕೊಡುವುದಾಗಿ ವಾಗ್ದಾನ ಮಾಡಿದನು. ನೀನು ನನ್ನ ಮಗನಿಗೆ ಕನ್ಯೆಯನ್ನು ಹುಡುಕಿ ಕರೆದುಕೊಂಡು ಬರಲು ಸಾಧ್ಯವಾಗುವಂತೆ ಯೆಹೋವನು ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸಲಿ. 8 ಆದರೆ ಆ ಕನ್ಯೆಯು ನಿನ್ನೊಡನೆ ಬರಲು ಇಷ್ಟಪಡದಿದ್ದರೆ, ಈ ಪ್ರಮಾಣದಿಂದ ನೀನು ಬಿಡುಗಡೆಯಾಗುವೆ. ಆದರೆ ನೀನು ನನ್ನ ಮಗನನ್ನು ನನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಕೂಡದು” ಎಂದು ಹೇಳಿದನು.
9 ಆಗ ಆ ಸೇವಕನು ತನ್ನ ಒಡೆಯನಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಪ್ರಮಾಣ ಮಾಡಿದನು.
ಕನ್ಯೆಯನ್ನು ಹುಡುಕಲು ಪ್ರಯಾಣ
10 ಆ ಸೇವಕನು ಅಬ್ರಹಾಮನ ಹತ್ತು ಒಂಟೆಗಳನ್ನು ಸಿದ್ಧಮಾಡಿ ಶ್ರೇಷ್ಠವಾದ ಅನೇಕ ಉಡುಗೊರೆಗಳನ್ನು ತೆಗೆದುಕೊಂಡು ಮೆಸೊಪೋಟೊಮಿಯಕ್ಕೆ ಬಂದು ನಾಹೋರನು ವಾಸವಾಗಿದ್ದ ಊರನ್ನು ತಲುಪಿದನು. 11 ಅವನು ಊರ ಹೊರಗಿದ್ದ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು; ಪ್ರತಿಸಾಯಂಕಾಲ ಸ್ತ್ರೀಯರು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬರುತ್ತಿದ್ದರು.
12 ಆ ಸೇವಕನು, “ಯೆಹೋವನೇ, ನೀನು ನನ್ನ ಒಡೆಯನಾದ ಅಬ್ರಹಾಮನ ದೇವರು. ಈ ದಿನ ಅವನ ಮಗನಿಗಾಗಿ ಕನ್ಯೆಯನ್ನು ಕಂಡುಕೊಳ್ಳಲು ಸಹಾಯಮಾಡು. ನನ್ನ ಒಡೆಯನಾದ ಅಬ್ರಹಾಮನಿಗೋಸ್ಕರವಾಗಿಯೇ ಈ ಉಪಕಾರ ಮಾಡು. 13 ನಾನು ಈ ನೀರಿನ ಬಾವಿಯ ಬಳಿಯಲ್ಲಿ ನಿಂತಿರುತ್ತೇನೆ; ಈ ಊರಿನ ಯುವತಿಯರು ನೀರನ್ನು ತೆಗೆದುಕೊಳ್ಳಲು ಇಲ್ಲಿಗೆ ಬರುತ್ತಾರೆ. 14 ಇಸಾಕನಿಗೆ ಯೋಗ್ಯಳಾದ ಕನ್ಯೆಯನ್ನು ಕಂಡುಕೊಳ್ಳಲು ನಾನು ಒಬ್ಬಳಿಗೆ, ‘ದಯವಿಟ್ಟು ನಿನ್ನ ಕೊಡವನ್ನು ಕೆಳಗಿಳಿಸಿ ಕುಡಿಯಲು ನೀರು ಕೊಡು’ ಎನ್ನುವೆ. ಆಕೆ ನನಗೆ, ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ’ ಎಂದರೆ ಆಕೆಯೇ ನಿನ್ನಿಂದ ಆಯ್ಕೆಗೊಂಡ ಯೋಗ್ಯ ಕನ್ಯೆಯೆಂದೂ ನೀನು ನನ್ನ ಒಡೆಯನಿಗೆ ಕರುಣೆ ತೋರಿದೆಯೆಂದೂ ನಾನು ತಿಳಿದುಕೊಳ್ಳುವೆ” ಎಂದು ಪ್ರಾರ್ಥಿಸಿದನು.
ಕನ್ಯೆಯ ಆಯ್ಕೆ
15 ಆ ಸೇವಕನು ಪ್ರಾರ್ಥನೆ ಮಾಡಿ ಮುಗಿಸುವುದಕ್ಕಿಂತ ಮೊದಲೇ ರೆಬೆಕ್ಕ ಎಂಬ ಯುವತಿಯು ಬಾವಿಯ ಬಳಿಗೆ ಬಂದಳು. ರೆಬೆಕ್ಕಳು ಬೆತೂವೇಲನ ಮಗಳು. ಬೆತೂವೇಲನು ಮಿಲ್ಕಳ ಮತ್ತು ನಾಹೋರನ ಮಗನು. ನಾಹೋರನು ಅಬ್ರಹಾಮನ ತಮ್ಮ. ರೆಬೆಕ್ಕಳು ತನ್ನ ಹೆಗಲ ಮೇಲೆ ನೀರಿನ ಕೊಡವನ್ನು ತೆಗೆದುಕೊಂಡು ಬಾವಿಗೆ ಬಂದಳು. 16 ಆಕೆ ಬಹು ಸುಂದರಿಯಾಗಿಯೂ ಕನ್ನಿಕೆಯಾಗಿಯೂ ಇದ್ದಳು. ಆಕೆ ಬಾವಿಯ ಬಳಿಗೆ ಹೋಗಿ ಕೊಡದಲ್ಲಿ ನೀರನ್ನು ತುಂಬಿಸಿಕೊಂಡಳು. 17 ಆಗ ಆ ಸೇವಕನು ಅವಳ ಬಳಿಗೆ ಓಡಿಹೋಗಿ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು.
18 ರೆಬೆಕ್ಕಳು ಕೂಡಲೇ ತನ್ನ ಕೊಡವನ್ನು ಹೆಗಲ ಮೇಲಿಂದ ಕೆಳಗಿಳಿಸಿ ಅವನಿಗೆ ಕುಡಿಯಲು ನೀರನ್ನು ಕೊಟ್ಟು, “ಅಯ್ಯಾ, ನೀರನ್ನು ಕುಡಿ” ಅಂದಳು. 19 ಅವನು ನೀರು ಕುಡಿದಾದ ಮೇಲೆ ಆಕೆ ಅವನಿಗೆ, “ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರನ್ನು ತಂದುಕೊಡುತ್ತೇನೆ” ಎಂದು ಹೇಳಿ, 20 ನೀರನ್ನೆಲ್ಲ ತೊಟ್ಟಿಯಲ್ಲಿ ಸುರಿದು ಮತ್ತೆ ನೀರನ್ನು ತೆಗೆದುಕೊಂಡು ಬರಲು ಬಾವಿಯ ಬಳಿಗೆ ಬೇಗಬೇಗನೆ ಹೋದಳು. ಹೀಗೆ ಅವನ ಒಂಟೆಗಳಿಗೆಲ್ಲಾ ನೀರನ್ನು ಕೊಟ್ಟಳು.
21 ಆ ಸೇವಕನು ಆಕೆಯನ್ನೇ ಗಮನಿಸುತ್ತಾ, ಯೆಹೋವನು ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಕಾದುಕೊಂಡಿದ್ದನು. 22 ಒಂಟೆಗಳು ನೀರನ್ನು ಕುಡಿದಾದ ಮೇಲೆ ಅವನು ರೆಬೆಕ್ಕಳಿಗೆ ಅರ್ಧತೊಲೆಯ ಒಂದು ಚಿನ್ನದ ಉಂಗುರವನ್ನು ಕೊಟ್ಟನು. ಇದಲ್ಲದೆ ಅವನು ಆಕೆಗೆ ಹತ್ತು ತೊಲೆಯ ಎರಡು ಚಿನ್ನದ ಬಳೆಗಳನ್ನು ಕೊಟ್ಟನು. 23 ಆ ಸೇವಕನು, “ನಿನ್ನ ತಂದೆ ಯಾರು? ನನ್ನ ಜನರು ಇಳಿದುಕೊಳ್ಳಲು ನಿನ್ನ ತಂದೆಯ ಮನೆಯಲ್ಲಿ ಸ್ಥಳವಿದೆಯೋ?” ಎಂದು ಕೇಳಿದನು.
24 ರೆಬೆಕ್ಕಳು ಅವನಿಗೆ, “ನನ್ನ ತಂದೆಯ ಹೆಸರು ಬೆತೂವೇಲ. ಅವನು ಮಿಲ್ಕಳ ಮತ್ತು ನಾಹೋರನ ಮಗನು” ಎಂದು ಹೇಳಿದಳು. 25 ಬಳಿಕ, “ಹೌದು, ನಿನ್ನ ಒಂಟೆಗಳಿಗೆ ಹುಲ್ಲೂ ಮೇವೂ ನಮ್ಮಲ್ಲಿವೆ ಮತ್ತು ನೀವು ಇಳಿದುಕೊಳ್ಳಲೂ ಸ್ಥಳವಿದೆ” ಎಂದಳು.
26 ಆಗ ಆ ಸೇವಕನು ತಲೆಬಾಗಿ ಯೆಹೋವನನ್ನು ಆರಾಧಿಸಿದನು. 27 ಬಳಿಕ ಆಕೆಗೆ, “ನನ್ನ ಒಡೆಯನಾದ ಅಬ್ರಹಾಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ಒಡೆಯನಿಗೆ ದಯಾಳುವೂ ನಂಬಿಗಸ್ತನೂ ಆಗಿದ್ದಾನೆ. ನನ್ನ ಒಡೆಯನ ಮಗನಿಗಾಗಿ ಯೆಹೋವನು ನನ್ನನ್ನು ನನ್ನ ಒಡೆಯನ ಕುಟುಂಬಕ್ಕೆ ನಡೆಸಿದ್ದಾನೆ” ಎಂದು ಹೇಳಿದನು.
1 ಸಭಾಹಿರಿಯನು, ದೇವರಿಂದ ಆಯ್ಕೆಯಾದ ಅಮ್ಮನವರಿಗೆ ಮತ್ತು ಆಕೆಯ ಮಕ್ಕಳಿಗೆ ಬರೆಯುವ ಪತ್ರ.
ನಾನು ನಿಮ್ಮೆಲ್ಲರನ್ನು ಸತ್ಯದಲ್ಲಿ ಪ್ರೀತಿಸುತ್ತೇನೆ. ಸತ್ಯವನ್ನು ತಿಳಿದಿರುವ ಜನರೆಲ್ಲರೂ ಸಹ ನಿಮ್ಮನ್ನು ಪ್ರೀತಿಸುತ್ತಾರೆ. 2 ನಮ್ಮಲ್ಲಿ ನೆಲೆಗೊಂಡಿರುವ ಸತ್ಯದ ನಿಮಿತ್ತ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಈ ಸತ್ಯವು ನಮ್ಮಲ್ಲಿ ಸದಾಕಾಲ ಇರುವುದು.
3 ತಂದೆಯಾದ ದೇವರಿಂದಲೂ ಆತನ ಮಗನಾದ ಯೇಸು ಕ್ರಿಸ್ತನಿಂದಲೂ ಕೃಪೆ, ಕರುಣೆ ಮತ್ತು ಶಾಂತಿ ನಮ್ಮೊಂದಿಗಿರುತ್ತವೆ. ನಾವು ಈ ಆಶೀರ್ವಾದಗಳನ್ನು ಸತ್ಯದ ಮತ್ತು ಪ್ರೀತಿಯ ಮೂಲಕ ಪಡೆಯುತ್ತೇವೆ.
4 ನಿಮ್ಮ ಮಕ್ಕಳಲ್ಲಿ ಕೆಲವರ ಬಗ್ಗೆ ನಾನು ಕೇಳಿದಾಗ ತುಂಬಾ ಸಂತೋಷವಾಯಿತು. ತಂದೆಯಾದ ದೇವರು ನಮಗೆ ಆಜ್ಞಾಪಿಸಿದ ಸತ್ಯಮಾರ್ಗವನ್ನು ಅವರು ಅನುಸರಿಸುತ್ತಿರುವುದರಿಂದ ನನಗೆ ಸಂತೋಷವಾಯಿತು. 5 ಪ್ರಿಯ ಅಮ್ಮನವರೇ, ಈಗ ನಾನು ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಹೊಸ ಆಜ್ಞೆಯಾಗಿರದೆ ಮೊದಲಿನಿಂದಲೂ ಇದ್ದ ಆಜ್ಞೆಯಾಗಿದೆ. 6 ಆತನು ಆಜ್ಞಾಪಿಸಿದ ಮಾರ್ಗದಲ್ಲಿ ಜೀವಿಸುವುದೇ ಪ್ರೀತಿ. ನೀವು ಪ್ರೀತಿಯಿಂದ ಬಾಳಬೇಕೆಂಬುದೇ ದೇವರ ಆಜ್ಞೆ. ನೀವು ಆರಂಭದಿಂದಲೂ ಈ ಆಜ್ಞೆಯನ್ನು ಕೇಳಿರುವಿರಿ.
7 ಈಗ ಲೋಕದಲ್ಲಿ ಅನೇಕ ಸುಳ್ಳುಬೋಧಕರಿದ್ದಾರೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಮನುಷ್ಯನಾಗಿ ಬಂದನೆಂಬುದನ್ನು ಈ ಸುಳ್ಳುಬೋಧಕರು ಒಪ್ಪಿಕೊಳ್ಳುವುದಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದವನು ಸುಳ್ಳುಬೋಧಕನಾಗಿದ್ದಾನೆ ಮತ್ತು ಯೇಸು ಕ್ರಿಸ್ತನ ವೈರಿಯಾಗಿದ್ದಾನೆ. 8 ನೀವು ಎಚ್ಚರವಾಗಿರಿ! ನೀವು ದುಡಿದು ಸಂಪಾದಿಸಿದ್ದನ್ನು ಕಳೆದುಕೊಳ್ಳಬೇಡಿ. ನೀವು ಎಚ್ಚರಿಕೆಯಿಂದ ಇರುವುದಾದರೆ, ನಿಮಗೆ ಬರಬೇಕಾದ ಪೂರ್ಣಫಲವನ್ನು ಹೊಂದಿಕೊಳ್ಳುವಿರಿ.
9 ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಅತಿಕ್ರಮಿಸಿ ಮುಂದಕ್ಕೆ ಹೋಗುವವನು ದೇವರನ್ನು ಹೊಂದಿಲ್ಲ. ಆದರೆ ಆ ಉಪದೇಶದಲ್ಲಿ ನೆಲೆಗೊಂಡಿರುವವನು ತಂದೆಯನ್ನೂ ಮಗನನ್ನೂ ಹೊಂದಿದ್ದಾನೆ. 10 ನಿಮ್ಮ ಬಳಿಗೆ ಬರುವವನು ಈ ಉಪದೇಶವನ್ನು ಹೊಂದಿಲ್ಲದಿದ್ದರೆ ಅವನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಅವನನ್ನು ಸ್ವಾಗತಿಸಬೇಡಿ. 11 ನೀವು ಅವನನ್ನು ಸ್ವಾಗತಿಸಿದರೆ ಅವನ ಕೆಟ್ಟಕಾರ್ಯಕ್ಕೆ ನೀವೂ ಸಹಾಯ ಮಾಡಿದಂತಾಗುವುದು.
12 ನಾನು ನಿಮಗೆ ಹೇಳಬೇಕಾದುದು ಬಹಳಷ್ಟಿದೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲಿಚ್ಛಿಸುವುದಿಲ್ಲ. ಅದರ ಬದಲು, ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೇನೆ. ಆಗ ನಾವು ಒಟ್ಟಾಗಿ ಮಾತನಾಡಬಹುದು. ಇದು ನಮಗೆ ಬಹಳ ಸಂತಸವನ್ನು ಉಂಟುಮಾಡುತ್ತದೆ. 13 ದೇವರಿಂದ ಆಯ್ಕೆಗೊಂಡವಳಾದ ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ತಿಳಿಸಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International