Revised Common Lectionary (Semicontinuous)
95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
2 ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
3 ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
4 ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
5 ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
ಭೂಮಿಯೂ ಆತನ ಕೈಕೆಲಸವೇ.
6 ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
7 ನಮ್ಮ ದೇವರು ಆತನೇ, ನಾವು ಆತನವರೇ.
ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.
8 ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
9 ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”
27 ಏಳನೆಯ ದಿನದಲ್ಲಿ ಕೆಲವು ಜನರು ಆಹಾರವನ್ನು ಕೂಡಿಸಿಕೊಳ್ಳಲು ಹೊರಗೆ ಹೋದರು. ಆದರೆ ಅವರಿಗೆ ಏನೂ ಸಿಕ್ಕಲಿಲ್ಲ. 28 ಆಗ ಯೆಹೋವನು ಮೋಶೆಗೆ, “ಜನರೇ, ನೀವು ಇನ್ನೆಷ್ಟರವರೆಗೆ ನನ್ನ ಆಜ್ಞೆಗಳಿಗೆ ಮತ್ತು ಬೋಧನೆಗಳಿಗೆ ವಿಧೇಯರಾಗುವುದಿಲ್ಲ? 29 ನೋಡಿರಿ, ಯೆಹೋವನು ಸಬ್ಬತ್ ದಿನವನ್ನು ನಿಮಗೆ ವಿಶ್ರಾಂತಿ ದಿನವನ್ನಾಗಿ ಮಾಡಿದ್ದಾನೆ. ಆದ್ದರಿಂದ ಯೆಹೋವನು ಶುಕ್ರವಾರದಂದು ನಿಮಗೆ ಎರಡು ದಿನಗಳಿಗೆ ಬೇಕಾದಷ್ಟು ಆಹಾರವನ್ನು ಕೊಡುವನು. ಆದ್ದರಿಂದ ಸಬ್ಬತ್ತಿನಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ಕುಳಿತುಕೊಂಡು ವಿಶ್ರಮಿಸಿಕೊಳ್ಳಬೇಕು. ನೀವು ಇರುವಲ್ಲೇ ಇರಿ” ಎಂದು ಹೇಳಿದನು. 30 ಆದ್ದರಿಂದ ಜನರು ಸಬ್ಬತ್ತಿನಲ್ಲಿ ವಿಶ್ರಮಿಸಿಕೊಂಡರು.
31 ಜನರು ಈ ವಿಶೇಷ ಆಹಾರವನ್ನು ಮನ್ನ ಎಂದು ಕರೆಯತೊಡಗಿದರು. ಮನ್ನವು ಚಿಕ್ಕದಾದ ಬಿಳಿ ಕೊತ್ತಂಬರಿ ಬೀಜಗಳಂತಿದ್ದವು ಮತ್ತು ಜೇನುತುಪ್ಪದಿಂದ ಮಾಡಿದ ತೆಳುವಾದ ರೊಟ್ಟಿಯಂತೆ ರುಚಿಯಾಗಿತ್ತು. 32 ಮೋಶೆಯು, “ಯೆಹೋವನು ಆಜ್ಞಾಪಿಸಿದ್ದೇನೆಂದರೆ, ‘ಮೂರು ಸೇರಿನಷ್ಟು ಮನ್ನವನ್ನು ನಿಮ್ಮ ಮುಂದಿನ ಸಂತತಿಯವರಿಗಾಗಿ ಉಳಿಸಿರಿ. ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದಾಗ ಅರಣ್ಯದಲ್ಲಿ ನಾನು ನಿಮಗೆ ಕೊಟ್ಟ ಈ ಆಹಾರವನ್ನು ನೋಡುವರು’” ಎಂದು ಹೇಳಿದನು.
33 ಆದ್ದರಿಂದ ಮೋಶೆಯು ಆರೋನನಿಗೆ, “ಒಂದು ಭರಣಿಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನವನ್ನು ತುಂಬಿಸು. ನಿಮ್ಮ ಮುಂದಿನ ಸಂತತಿಯವರು ನೋಡುವುದಕೋಸ್ಕರ ಇದನ್ನು ಉಳಿಸಿ ಯೆಹೋವನ ಮುಂದೆ ಇಡು” ಎಂದು ಹೇಳಿದನು. 34 (ನಂತರ ಆರೋನನು, ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮಾಡಿದನು. ಆರೋನನು ಮನ್ನದ ಭರಣಿಯನ್ನು ಒಡಂಬಡಿಕೆಯ ಮುಂದುಗಡೆಯಲ್ಲಿ ಇಟ್ಟನು.) 35 ನಲವತ್ತು ವರ್ಷಗಳವರೆಗೆ ಜನರು ಮನ್ನವನ್ನು ತಿಂದರು. ಅವರು ವಿಶ್ರಾಂತಿಯ ದೇಶಕ್ಕೆ ಬರುವ ತನಕ, ಅಂದರೆ ಕಾನಾನಿನ ಗಡಿಗೆ ಬರುವವರೆಗೆ ಮನ್ನವನ್ನು ತಿಂದರು.
ಯೇಸು ಮತ್ತು ಸಮಾರ್ಯ ಸ್ತ್ರೀಯ ಸಂಭಾಷಣೆ
4 ತಾನು ಯೋಹಾನನಿಗಿಂತಲೂ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಿರುವ ಸುದ್ದಿಯು ಫರಿಸಾಯರಿಗೆ ತಿಳಿಯಿತೆಂಬುದು ಯೇಸುವಿಗೆ ಗೊತ್ತಾಯಿತು. 2 (ವಾಸ್ತವವಾಗಿ ಜನರಿಗೆ ದೀಕ್ಷಾಸ್ನಾನ ಕೊಟ್ಟದ್ದು ಯೇಸುವಲ್ಲ. ಆತನ ಶಿಷ್ಯರೇ ಜನರಿಗೆ ದೀಕ್ಷಾಸ್ನಾನ ಮಾಡಿಸಿದರು.) 3 ಆಗ, ಆತನು ಜುದೇಯವನ್ನು ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು. 4 ಸಮಾರ್ಯ ಪ್ರಾಂತ್ಯದ ಮೂಲಕವೇ ಗಲಿಲಾಯಕ್ಕೆ ಹೋಗಬೇಕಿತ್ತು.
5 ಯೇಸು ಸಮಾರ್ಯದ ಪಟ್ಟಣವಾದ ಸಿಖಾರ್ ಎಂಬಲ್ಲಿಗೆ ಬಂದನು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿ ಆ ಊರಿದೆ. 6 ಯಾಕೋಬನ ಬಾವಿಯು ಅಲ್ಲಿತ್ತು. ಯೇಸು ತನ್ನ ದೀರ್ಘ ಪ್ರಯಾಣದಿಂದ ಆಯಾಸಗೊಂಡಿದ್ದನು. ಆದ್ದರಿಂದ ಆತನು ಬಾವಿಯ ಬಳಿ ಕುಳಿತುಕೊಂಡನು. ಆಗ ಸುಮಾರು ಮಧ್ಯಾಹ್ನದ ಸಮಯವಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International