Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 95

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
    ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
    ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
    ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
    ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
    ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”

ವಿಮೋಚನಕಾಂಡ 16:9-21

ಬಳಿಕ ಮೋಶೆ ಆರೋನನಿಗೆ, “ಇಸ್ರೇಲರೊಂದಿಗೆ ಮಾತಾಡು. ಅವರಿಗೆ, ‘ಯೆಹೋವನ ಮುಂದೆ ಒಟ್ಟಾಗಿ ನೆರೆದು ಬನ್ನಿ: ಯಾಕೆಂದರೆ ಆತನು ನಿಮ್ಮ ಗೊಣಗುಟ್ಟುವಿಕೆಯನ್ನು ಕೇಳಿದ್ದಾನೆ’ ಎಂದು ಹೇಳು” ಅಂದನು.

10 ಅರೋನನು ಇಸ್ರೇಲರೆಲ್ಲರೊಂದಿಗೆ ಮಾತಾಡಿದನು. ಅವರೆಲ್ಲರೂ ಒಂದು ಸ್ಥಳದಲ್ಲಿ ಕೂಡಿಬಂದರು. ಆರೋನನು ಅವರೊಂದಿಗೆ ಮಾತಾಡುತ್ತಿದ್ದಾಗ ಅವರೆಲ್ಲರೂ ಅರಣ್ಯದ ಕಡೆಗೆ ತಿರುಗಿನೋಡಿದರು. ಮೇಘದಲ್ಲಿ ಯೆಹೋವನ ಮಹಿಮೆಯು ಪ್ರತ್ಯಕ್ಷವಾದದ್ದನ್ನು ಅವರೆಲ್ಲರೂ ಕಂಡರು.

11 ಯೆಹೋವನು ಮೋಶೆಗೆ, 12 “ನಾನು ಇಸ್ರೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸೂರ್ಯಾಸ್ತಮಕ್ಕಿಂತ ಮೊದಲು ನೀವು ಮಾಂಸವನ್ನು ತಿನ್ನುವಿರಿ; ಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ ಮೊದಲು ನಿಮಗೆ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಆಗ ನಾನೇ ದೇವರಾದ ಯೆಹೋವನೆಂಬುದನ್ನು ನೀವು ತಿಳಿದುಕೊಳ್ಳುವಿರಿ; ನನ್ನಲ್ಲಿ ಭರವಸೆ ಇಡುವಿರಿ’” ಎಂದು ಹೇಳಿದನು.

13 ಸಾಯಂಕಾಲ ಲಾವಕ್ಕಿಗಳು ಪಾಳೆಯದ ಸುತ್ತಲೂ ಬಂದವು. ಜನರು ಮಾಂಸಕ್ಕಾಗಿ ಈ ಪಕ್ಷಿಗಳನ್ನು ಹಿಡಿದರು ಮತ್ತು ಪ್ರತಿ ಮುಂಜಾನೆ ಅವರ ಪಾಳೆಯದ ಸುತ್ತಲೂ ಮಂಜು ನೆಲದ ಮೇಲೆ ಬಿದ್ದಿತ್ತು. 14 ಸೂರ್ಯನು ಮೇಲಕ್ಕೇರಿದ ನಂತರ ಮಂಜು ಕರಗಿ ಇಲ್ಲವಾಯಿತು. ಆದರೆ ಮಂಜು ಕರಗಿ ಹೋದನಂತರ ನೆಲದ ಮೇಲೆ ಮಂಜಿನ ಹನಿಗಳಂತಿದ್ದ ತೆಳುವಾದ ಕಾಳುಗಳು ಬಿದ್ದಿದ್ದವು. 15 ಇಸ್ರೇಲರು ಅದನ್ನು ನೋಡಿ “ಏನದು” ಎಂಬುದಾಗಿ ಒಬ್ಬರನ್ನೊಬ್ಬರು ಕೇಳಿದರು. ಅದು ಏನೆಂದು ಅವರಿಗೆ ಗೊತ್ತಿಲ್ಲದ ಕಾರಣ ಅವರು ಈ ಪ್ರಶ್ನೆಯನ್ನು ಕೇಳಿದರು. ಆದ್ದರಿಂದ ಮೋಶೆ ಅವರಿಗೆ, “ಇದು ಯೆಹೋವನು ನಿಮಗೆ ಕೊಟ್ಟಿರುವ ಆಹಾರ. 16 ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಪ್ರತಿಯೊಬ್ಬನು ತನಗೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬನಿಗೆ ಸುಮಾರು ಮೂರು ಸೇರಿನಷ್ಟು ಕೂಡಿಸಿಕೊಳ್ಳಬೇಕು’” ಎಂದು ಹೇಳಿದನು.

17 ಅಂತೆಯೇ ಇಸ್ರೇಲರು ಮಾಡಿದರು. ಪ್ರತಿಯೊಬ್ಬನೂ ತನ್ನ ಆಹಾರವನ್ನು ಕೂಡಿಸಿಕೊಂಡನು. ಕೆಲವರು ಇತರರಿಗಿಂತ ಹೆಚ್ಚಾಗಿ ಕೂಡಿಸಿಕೊಂಡರು. 18 ಅವರು ತಮ್ಮ ಕುಟುಂಬದಲ್ಲಿದ್ದ ಪ್ರತಿಯೊಬ್ಬರ ಆಹಾರವನ್ನು ಒಟ್ಟಾಗಿ ಸೇರಿಸಿ ಅಳತೆಮಾಡಿದಾಗ ಅಲ್ಲಿ ಯಾವಾಗಲೂ ಪ್ರತಿಯೊಬ್ಬನಿಗೆ ಬೇಕಾದಷ್ಟು ಮಾತ್ರ ಆಹಾರವಿರುತ್ತಿತ್ತು. ಅದು ಹೆಚ್ಚಾಗಿಯೂ ಇರುತ್ತಿರಲಿಲ್ಲ; ಕಡಿಮೆಯಾಗಿಯೂ ಇರುತ್ತಿರಲಿಲ್ಲ. ಹೀಗೆ ಪ್ರತಿಯೊಬ್ಬನು ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಂಡನು.

19 ಮೋಶೆಯು ಅವರಿಗೆ, “ಆಹಾರವನ್ನು ಮರುದಿನಕ್ಕಾಗಿ ಉಳಿಸಿಕೊಳ್ಳಬೇಡಿರಿ” ಎಂದು ಹೇಳಿದನು. 20 ಆದರೆ ಅವರು ಮೋಶೆಯ ಮಾತಿಗೆ ವಿಧೇಯರಾಗಲಿಲ್ಲ. ಕೆಲವು ಜನರು ಮರುದಿನ ತಿನ್ನುವುದಕ್ಕಾಗಿ ಆಹಾರವನ್ನು ಉಳಿಸಿಕೊಂಡರು; ಹೀಗೆ ಉಳಿಸಿಟ್ಟ ಆಹಾರವು ಹುಳಗಳಿಂದ ತುಂಬಿ ಕೊಳೆಯತೊಡಗಿತು. ಮೋಶೆಯು ಹೀಗೆ ಮಾಡಿದ ಜನರ ಮೇಲೆ ಕೋಪಗೊಂಡನು.

21 ಪ್ರತಿ ಮುಂಜಾನೆ ಅವರು ಆಹಾರವನ್ನು ಕೂಡಿಸಿಕೊಂಡರು. ಪ್ರತಿಯೊಬ್ಬನು ತಾನು ಎಷ್ಟು ತಿನ್ನಬಹುದೋ ಅಷ್ಟನ್ನೇ ಕೂಡಿಸಿಕೊಂಡನು. ಆದರೆ ಬಿಸಿಲೇರಿದಾಗ ಆಹಾರವು ಕರಗಿಹೋಯಿತು.

ಎಫೆಸದವರಿಗೆ 2:11-22

ಕ್ರಿಸ್ತನ ಮೂಲಕ ಸಮಾನತ್ವ

11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.

14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.

19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International