Revised Common Lectionary (Semicontinuous)
95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
2 ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
3 ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
4 ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
5 ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
ಭೂಮಿಯೂ ಆತನ ಕೈಕೆಲಸವೇ.
6 ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
7 ನಮ್ಮ ದೇವರು ಆತನೇ, ನಾವು ಆತನವರೇ.
ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.
8 ದೇವರು ಹೀಗೆನ್ನುತ್ತಾನೆ: “ನೀವು ಮೆರೀಬಾದಲ್ಲಿಯೂ
ಮಸ್ಸಾ ಮರುಭೂಮಿಯಲ್ಲಿಯೂ ಮಾಡಿದಂತೆ ಮೊಂಡತನ ಮಾಡಬೇಡಿ.
9 ನಿಮ್ಮ ಪೂರ್ವಿಕರು ನನ್ನನ್ನು ಪರೀಕ್ಷಿಸಿದರು.
ನನ್ನ ಮಹತ್ಕಾರ್ಯಗಳನ್ನು ನೋಡಿದ್ದರೂ ನನ್ನನ್ನು ಪರೀಕ್ಷಿಸಿದರು.
10 ನಲವತ್ತು ವರ್ಷಗಳ ಕಾಲ ನಾನು ಅವರೊಂದಿಗೆ ತಾಳ್ಮೆಯಿಂದಿದ್ದೆನು,
ಅವರು ನಂಬಿಗಸ್ತರಲ್ಲವೆಂದು ನನಗೆ ತಿಳಿದಿತ್ತು.
ಅವರು ನನ್ನ ಉಪದೇಶಗಳನ್ನು ಅನುಸರಿಸಲಿಲ್ಲ.
11 ಆದ್ದರಿಂದ ನಾನು ಕೋಪಗೊಂಡು ನನ್ನ ವಿಶ್ರಾಂತಿಯ ನಾಡನ್ನು
ಅವರು ಪ್ರವೇಶಿಸಕೂಡದೆಂದು ನಾನು ಪ್ರಮಾಣ ಮಾಡಿದೆನು.”
ದೇವರು ಆಹಾರವನ್ನು ಕಳುಹಿಸಿದ್ದು
16 ಬಳಿಕ ಅವರು ಏಲೀಮಿನಿಂದ ಪ್ರಯಾಣಮಾಡಿ ಸಿನ್ ಅರಣ್ಯಕ್ಕೆ ಬಂದರು. ಈ ಸ್ಥಳವು ಏಲೀಮಿನ ಮತ್ತು ಸೀನಾಯ್ ಬೆಟ್ಟದ ನಡುವೆ ಇತ್ತು. ಈಜಿಪ್ಟನ್ನು ಬಿಟ್ಟ ನಂತರ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಅವರು ಈ ಸ್ಥಳಕ್ಕೆ ಬಂದರು. 2 ಆಗ ಇಸ್ರೇಲರು ಮತ್ತೆ ಮರುಭೂಮಿಯಲ್ಲಿ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು. 3 ಅವರು, “ಯೆಹೋವನು ನಮ್ಮನ್ನು ಈಜಿಪ್ಟಿನಲ್ಲಿ ಕೊಂದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ನಮಗೆ ಈಜಿಪ್ಟಿನಲ್ಲಿ ಮಾಂಸವೂ ರೊಟ್ಟಿಯೂ ಇತ್ತು. ನಮಗೆ ಬೇಕಿದ್ದ ಆಹಾರವೆಲ್ಲಾ ನಮ್ಮಲ್ಲಿತ್ತು. ಆದರೆ ಈಗ ನೀವು ನಮ್ಮನ್ನು ಈ ಅರಣ್ಯಕ್ಕೆ ಕರೆದುಕೊಂಡು ಬಂದಿರಿ. ನಾವೆಲ್ಲರೂ ಇಲ್ಲಿ ಹಸಿವೆಯಿಂದ ಸಾಯುವೆವು” ಎಂದು ಹೇಳಿದರು.
4 ಆಗ ಯೆಹೋವನು ಮೋಶೆಗೆ, “ಆಕಾಶದಿಂದ ನಿಮಗೋಸ್ಕರ ರೊಟ್ಟಿ ಸುರಿಯುವಂತೆ ಮಾಡುವೆನು. ಪ್ರತಿದಿನ ಅವರು ಹೊರಗೆ ಹೋಗಿ, ತಮಗೆ ಆ ದಿನದಲ್ಲಿ ತಿನ್ನಲು ಬೇಕಾದ ಆಹಾರವನ್ನು ಕೂಡಿಸಿಕೊಳ್ಳಬೇಕು. ನಾನು ಹೇಳುವುದನ್ನು ಅವರು ಮಾಡುತ್ತಾರೊ ಇಲ್ಲವೊ ಎಂದು ನೋಡಲು ನಾನು ಇದನ್ನು ಮಾಡುವೆನು. 5 ಪ್ರತಿದಿನವು ಅವರು ಒಂದು ದಿನಕ್ಕೆ ಬೇಕಾದಷ್ಟು ಆಹಾರವನ್ನು ಕೂಡಿಸಿಕೊಳ್ಳಬೇಕು. ಆದರೆ ಶುಕ್ರವಾರ ಅವರು ತಮ್ಮ ಆಹಾರವನ್ನು ಸಿದ್ಧಪಡಿಸುವಾಗ ಎರಡು ದಿನಗಳಿಗೆ ಬೇಕಾದಷ್ಟು ಆಹಾರವಿರುವುದನ್ನು ಅವರು ನೋಡುವರು” ಎಂದು ಹೇಳಿದನು.
6 ಆದ್ದರಿಂದ ಮೋಶೆಯು ಮತ್ತು ಆರೋನನು ಇಸ್ರೇಲರಿಗೆ, “ಈ ರಾತ್ರಿ ನೀವು ಯೆಹೋವನ ಶಕ್ತಿಯನ್ನು ನೋಡುವಿರಿ. ನಿಮ್ಮನ್ನು ಈಜಿಪ್ಟಿನಿಂದ ರಕ್ಷಿಸಿದವನು ಆತನೇ ಎಂದು ತಿಳಿದುಕೊಳ್ಳುವಿರಿ. 7 ನಾಳೆ ಬೆಳಿಗ್ಗೆ ನೀವು ಯೆಹೋವನ ಮಹಿಮೆಯನ್ನು ನೋಡುವಿರಿ. ನೀವು ಯೆಹೋವನ ಮೇಲೆ ಗುಣುಗುಟ್ಟಿದ್ದೀರಿ. ಆತನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನೆ; ಆತನೇ ನಿಮಗೆ ಸಹಾಯ ಮಾಡುವನು. ನಮ್ಮ ಮೇಲೆ ನೀವು ಗುಣುಗುಟ್ಟುತ್ತಾ ಬರಲು ನಾವೆಷ್ಟರವರು? ನಿಮ್ಮನ್ನು ಈಜಿಪ್ಟಿನಿಂದ ಕರೆತಂದವನು ಯೆಹೋವನೇ. ಆತನೇ ನಿಮ್ಮ ಅಗತ್ಯತೆಗಳನ್ನು ಪೂರೈಸುವನು” ಎಂದು ಹೇಳಿದರು.
8 ಅಲ್ಲದೆ ಮೋಶೆಯು, “ನೀವು ಗೊಣಗುಟ್ಟುತ್ತಿರುವುದನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ರಾತ್ರಿಯಲ್ಲಿ ಆತನು ನಿಮಗೆ ಮಾಂಸವನ್ನು ಕೊಡುವನು. ಪ್ರತಿ ಮುಂಜಾನೆ ನಿಮಗೆ ಬೇಕಾದಷ್ಟು ರೊಟ್ಟಿಯು ದೊರಕುವುದು. ನೀವು (ಆರೋನನ ಮೇಲೂ ನನ್ನ ಮೇಲೂ) ಗೊಣಗುಟ್ಟುತ್ತಿದ್ದೀರಿ? ಆದರೆ ನಮಗೆ ದೂರು ಹೇಳಲು ನಾವೆಷ್ಟರವರು? ನೀವು ಯೆಹೋವನ ವಿರುದ್ಧವಾಗಿ ದೂರು ಹೇಳುತ್ತಿದ್ದೀರೆಂಬುದು ನಿಮ್ಮ ಜ್ಞಾಪಕದಲ್ಲಿರಲಿ” ಎಂದು ಹೇಳಿದನು.
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ
15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
ಪ್ರತಿಯೊಂದೂ ಆತನಿಂದಲೇ ಬರುತ್ತದೆ.
ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20 ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.
Kannada Holy Bible: Easy-to-Read Version. All rights reserved. © 1997 Bible League International