Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 128

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
    ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.

ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
    ನೀನು ಸಂತೋಷದಿಂದಿರುವೆ.
    ನಿನಗೆ ಒಳ್ಳೆಯದಾಗುವುದು.
ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
    ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
    ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

ಯೆಹೆಜ್ಕೇಲ 36:22-32

22 ಆದ್ದರಿಂದ ಇಸ್ರೇಲರಿಗೆ ಹೀಗೆ ಹೇಳು: ‘ಇಸ್ರೇಲರೇ, ನೀವು ಹೋದ ಕಡೆಗಳಲ್ಲೆಲ್ಲಾ ನನ್ನ ಹೆಸರಿಗೆ ಅವಮಾನ ಮಾಡಿದ್ದೀರಿ. ನಾನು ಇದನ್ನು ನಿಲ್ಲಿಸುವುದಕ್ಕೆ ಎನುಬೇಕಾದರೂ ಮಾಡುತ್ತೇನೆ. ಇಸ್ರೇಲೇ, ನಾನು ಈ ಕಾರ್ಯವನ್ನು ನಿನ್ನ ಹೆಸರಿಗೋಸ್ಕರ ಮಾಡದೆ ನನ್ನ ಪರಿಶುದ್ಧ ಹೆಸರಿನ ನಿಮಿತ್ತ ನಾನು ಮಾಡುತ್ತೇನೆ. 23 ನನ್ನ ಹೆಸರು ಅತ್ಯಂತ ಪವಿತ್ರವಾದದ್ದು ಎಂದು ನಾನು ಅವರಿಗೆ ತೋರಿಸುವೆನು. ನನ್ನ ಪವಿತ್ರ ನಾಮವನ್ನು ಆ ದೇಶಗಳಲ್ಲಿ ಅವಮಾನಪಡಿಸಿದಿರಿ. ಆದರೆ ನಾನು ಪವಿತ್ರನೆಂದು ನಿಮಗೆ ತೋರಿಸುತ್ತೇನೆ. ನನ್ನ ನಾಮವನ್ನು ಗೌರವಿಸಲು ನಾನು ನಿಮಗೆ ಕಲಿಸುವೆನು. ಆಗ ಆ ದೇಶದವರಿಗೆ ನಾನು ಯೆಹೋವನು ಎಂದು ಗೊತ್ತಾಗುವದು.’” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

24 ದೇವರು ಹೇಳಿದ್ದೇನೆಂದರೆ, “ನಾನು ಆ ದೇಶಗಳಿಂದ ನಿಮ್ಮನ್ನು ತೆಗೆದು, ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಸ್ವದೇಶಕ್ಕೆ ತಿರುಗಿ ಬರಮಾಡುವೆನು. 25 ಆಗ ನಾನು ಶುದ್ಧ ನೀರನ್ನು ನಿಮ್ಮ ಮೇಲೆ ಚಿಮುಕಿಸಿ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವೆನು. ಆ ವಿಗ್ರಹಗಳ ಹೊಲಸನ್ನು ನಿಮ್ಮಿಂದ ನಾನು ತೊಳೆದುಹಾಕಿ ನಿಮ್ಮನ್ನು ಶುದ್ಧರನ್ನಾಗಿ ಮಾಡುವೆನು.” 26 ದೇವರು ಹೇಳಿದ್ದೇನೆಂದರೆ, “ನಾನು ನಿಮ್ಮಲ್ಲಿ ಒಂದು ಹೊಸ ಆತ್ಮವನ್ನಿಟ್ಟು ನಿಮ್ಮ ಯೋಚನೆಯ ರೀತಿಯನ್ನು ಬದಲಾಯಿಸುವೆನು. ನಿಮ್ಮ ಕಲ್ಲಿನ ಹೃದಯವನ್ನು ತೆಗೆದುಬಿಟ್ಟು ಮೃದುವಾದ ಮಾನವ ಹೃದಯವನ್ನು ಕೊಡುವೆನು. 27 ನಾನು ನನ್ನ ಆತ್ಮವನ್ನು ನಿಮ್ಮಲ್ಲಿರಿಸುವೆನು. ನೀವು ನನ್ನ ನಿಯಮಗಳಿಗೆ ವಿಧೇಯರಾಗುವಷ್ಟು ನಿಮ್ಮ ಮನಸ್ಸನ್ನು ಬದಲಾಯಿಸುವೆನು. ಆಗ ನೀವು ನನ್ನ ಆಜ್ಞೆಗಳನ್ನು ಜಾಗ್ರತೆಯಿಂದ ಪಾಲಿಸುವಿರಿ. 28 ಆಗ ನಾನು ನಿಮ್ಮ ಪೂರ್ವಿಕರಿಗೆ ಕೊಟ್ಟ ದೇಶದಲ್ಲಿ ನೀವು ಬಾಳುವಿರಿ. ನೀನು ನನ್ನ ಜನರಾಗುವಿರಿ. ನಾನು ನಿಮ್ಮ ದೇವರಾಗಿರುವೆನು.” 29 ದೇವರು ಹೇಳಿದ್ದೇನೆಂದರೆ, “ಅದೇ ಸಮಯದಲ್ಲಿ ನೀನು ಅಶುದ್ಧರಾಗದ ಹಾಗೇ ನಾನು ನೋಡಿಕೊಳ್ಳುವೆನು. ಬೀಜ ಬೆಳೆಯಲು ನಾನು ಆಜ್ಞಾಪಿಸುವೆನು. ನಿಮಗೆ ಹಸಿವೆಯಾಗಲು ಬಿಡುವದಿಲ್ಲ. 30 ನಿಮ್ಮ ಮರಗಳಿಂದ ಯಥೇಚ್ಛವಾಗಿ ಹಣ್ಣು ದೊರಕುವಂತೆ ಮಾಡುವೆನು. ಹೊಲಗಳು ಒಳ್ಳೆಯ ಬೆಳೆಗಳನ್ನು ಕೊಡುವಂತೆ ಮಾಡಿ ನೀವು ಅನ್ಯದೇಶದಲ್ಲಿ ಹಸಿವಿನಿಂದ ನರಳುವ ದಿವಸಗಳು ತಿರುಗಿ ಬಾರದಂತೆ ಮಾಡುವೆನು. 31 ನೀವು ಮಾಡಿದ ದುಷ್ಟತನವನ್ನು ನೀವು ಜ್ಞಾಪಿಸಿಕೊಳ್ಳುವಿರಿ. ಅವುಗಳು ಒಳ್ಳೆಯದಲ್ಲ ಎಂಬುದನ್ನು ಅರಿತುಕೊಳ್ಳುವಿರಿ. ಆಗ ನೀವು ಮಾಡಿದ ಪಾಪಕೃತ್ಯಗಳಿಗಾಗಿ ನಿಮ್ಮನ್ನೆ ನೀವು ಅಸಹ್ಯಪಟ್ಟುಕೊಳ್ಳುವಿರಿ.”

32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀವು ಇದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ನಾನು ಈ ಕಾರ್ಯಗಳನ್ನು ನಿಮಗಾಗಿ ಮಾಡದೆ ನನ್ನ ನಾಮದ ಘನತೆಗಾಗಿ ಮಾಡುತ್ತಿದ್ದೇನೆ. ಇಸ್ರೇಲ್ ಜನರೇ, ನಿಮ್ಮ ಜೀವಿತದ ಕುರಿತಾಗಿ ನೀವು ನಾಚಿಕೆಯಿಂದ ವ್ಯಸನಪಡುವವರಾಗಿರಬೇಕು.”

ಯೋಹಾನ 7:53-8:11

53 ಬಳಿಕ ಅವರೆಲ್ಲರೂ ತಮ್ಮತಮ್ಮ ಮನೆಗಳಿಗೆ ಹೊರಟುಹೋದರು.

ಸಿಕ್ಕಿಕೊಂಡ ವ್ಯಭಿಚಾರಿಣಿ

ಯೇಸು ಆಲಿವ್ ಮರಗಳ ಗುಡ್ಡಕ್ಕೆ ಹೋದನು. ಮರುದಿನ ನಸುಕಿನಲ್ಲೇ ಯೇಸು ದೇವಾಲಯಕ್ಕೆ ಮರಳಿ ಹೋದನು. ಎಲ್ಲಾ ಜನರು ಯೇಸುವಿನ ಬಳಿಗೆ ನೆರೆದುಬಂದರು. ಯೇಸು ಕುಳಿತುಕೊಂಡು ಜನರಿಗೆ ಉಪದೇಶಿಸಿದನು.

ಧರ್ಮೋಪದೇಶಕರು ಮತ್ತು ಫರಿಸಾಯರು ಒಬ್ಬ ಸ್ತ್ರೀಯನ್ನು ಅಲ್ಲಿಗೆ ಕರೆದುಕೊಂಡು ಬಂದರು. ಆ ಸ್ತ್ರೀಯು ವ್ಯಭಿಚಾರ ಮಾಡುವಾಗಲೇ ಸಿಕ್ಕಿಕೊಂಡಿದ್ದಳು. ಅವರು ಆ ಸ್ತ್ರೀಯನ್ನು ಜನರ ಮುಂದೆ ಬಲವಂತವಾಗಿ ನಿಲ್ಲಿಸಿ, ಯೇಸುವಿಗೆ, “ಉಪದೇಶಕನೇ, ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಕೊಂಡಳು. ಇಂಥ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸುತ್ತದೆ. ಈಗ ನಾವೇನು ಮಾಡಬೇಕು? ನೀನೇ ಹೇಳು” ಎಂದರು.

ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿದರೆ ಆತನ ಮೇಲೆ ಅಪವಾದ ಹೊರಿಸಲು ಸಾಧ್ಯವಾಗುತ್ತದೆ ಎಂದು ಈ ಪ್ರಶ್ನೆಯನ್ನು ಕೇಳಿದರು. ಆದರೆ ಯೇಸು ತಲೆ ಬಾಗಿಸಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ, ಮತ್ತೆ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದನು.

ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು. 10 ಯೇಸು ನೆಟ್ಟಗೆ ಕುಳಿತುಕೊಂಡು, “ಅಮ್ಮಾ, ನಿನ್ನ ಮೇಲೆ ತಪ್ಪು ಹೊರಿಸಿದವರು ಎಲ್ಲಿದ್ದಾರೆ? ಅವರಲ್ಲಿ ಒಬ್ಬರಾದರೂ ನಿನಗೆ ಶಿಕ್ಷೆ ವಿಧಿಸಲಿಲ್ಲವೇ?” ಎಂದು ಕೇಳಿದನು.

11 ಆ ಸ್ತ್ರೀಯು, “ಸ್ವಾಮೀ, ಅವರಲ್ಲಿ ಯಾರೂ ನನಗೆ ತೀರ್ಪು ನೀಡಲಿಲ್ಲ” ಎಂದು ಉತ್ತರಕೊಟ್ಟಳು.

ಯೇಸು ಆಕೆಗೆ, “ಆದ್ದರಿಂದ ನಾನು ಸಹ ನಿನಗೆ ತೀರ್ಪು ನೀಡುವುದಿಲ್ಲ. ಈಗ ನೀನು ಹೋಗಬಹುದು, ಆದರೆ ಇನ್ನು ಮುಂದೆ ಪಾಪ ಮಾಡಬೇಡ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International