Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 128

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
    ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.

ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
    ನೀನು ಸಂತೋಷದಿಂದಿರುವೆ.
    ನಿನಗೆ ಒಳ್ಳೆಯದಾಗುವುದು.
ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
    ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
    ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.

ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.

ಯೆಶಾಯ 65:17-25

ಹೊಸ ಕಾಲ ಬರುತ್ತದೆ

17 “ನಾನು ಹೊಸ ಭೂಮ್ಯಾಕಾಶಗಳನ್ನು ಸೃಷ್ಟಿಸುವೆನು.
ಜನರು ಗತಿಸಿದ ದಿನಗಳನ್ನು ತಮ್ಮ ನೆನಪಿಗೆ ತರುವದಿಲ್ಲ.
    ಅವರು ಈ ಸಂಗತಿಗಳಲ್ಲಿ ಯಾವುದನ್ನೂ ಜ್ಞಾಪಿಸಿಕೊಳ್ಳುವದಿಲ್ಲ.
18 ನನ್ನ ಜನರು ಸಂತೋಷದಲ್ಲಿರುವರು.
    ಅವರು ನಿತ್ಯಕಾಲಕ್ಕೂ ಹರ್ಷಿಸುವರು.
ನಾನು ಜೆರುಸಲೇಮನ್ನು ಸಂತಸದಿಂದ ತುಂಬಿಸುವೆನು.
    ಅವರನ್ನು ಸಂತೋಷದ ಜನರನ್ನಾಗಿ ಮಾಡುವೆನು.

19 “ಆಗ ನಾನು ಜೆರುಸಲೇಮಿನ ವಿಷಯದಲ್ಲಿ ಸಂತೋಷದಿಂದಿರುವೆನು.
    ನನ್ನ ಜನರ ವಿಷಯದಲ್ಲಿಯೂ ಸಂತೋಷದಿಂದಿರುವೆನು.
ಆ ಪಟ್ಟಣದಲ್ಲಿ ಮತ್ತೆಂದಿಗೂ ರೋಧನವಿರದು, ದುಃಖವಿರದು.
20 ಆ ಪಟ್ಟಣದಲ್ಲಿ ಹುಟ್ಟಿದ ಶಿಶುಗಳೆಲ್ಲಾ ಜೀವಿಸುವವು.
ಯಾವ ಮಗುವೇ ಆಗಲಿ ಹುಟ್ಟಿದ ಕೂಡಲೇ ಸಾಯುವದಿಲ್ಲ.
    ಆ ಪಟ್ಟಣದ ನಿವಾಸಿಗಳಲ್ಲಿ ಯಾರೂ ಕಡಿಮೆ ಆಯುಷ್ಯದಿಂದ ಸಾಯುವದಿಲ್ಲ.
ಪ್ರತಿಯೊಂದು ಮಗುವೂ ದೀರ್ಘಾಯುಷ್ಯವನ್ನು ಹೊಂದುವದು.
    ಪ್ರತಿಯೊಬ್ಬ ಯುವಕನೂ ಬಹಳ ಕಾಲ ಜೀವಿಸುವನು.
ಆಗ ನೂರು ವರ್ಷ ಪ್ರಾಯದವನು ಸಹ ಯೌವನಸ್ಥನೆಂದು ಕರೆಯಲ್ಪಡುವನು.
    ಒಬ್ಬನು ನೂರು ವರ್ಷವಾದರೂ ಬಾಳದಿದ್ದರೆ, ಜನರು ಅವನನ್ನು ಶಾಪ ಹೊಂದಿದವನೆಂದು ಹೇಳುವರು.

21 “ಆ ಪಟ್ಟಣದೊಳಗೆ ಒಬ್ಬನು ಮನೆಯನ್ನು ಕಟ್ಟಿದ್ದರೆ ಅದರಲ್ಲಿ ಅವನು ವಾಸಿಸುವನು.
    ಒಬ್ಬನು ದ್ರಾಕ್ಷಿತೋಟವನ್ನು ನೆಟ್ಟರೆ ಅವನು ಅದರ ಫಲಗಳನ್ನು ತಿನ್ನುವನು.
22 ಇನ್ನು ಮುಂದೆ ಯಾರಾದರೂ ಮನೆಯನ್ನು ಕಟ್ಟಿದರೆ,
    ಬೇರೆಯವರು ಅದನ್ನು ವಶಮಾಡಿಕೊಂಡು ಅದರಲ್ಲಿ ವಾಸಿಸುವದಿಲ್ಲ.
ಇನ್ನು ಮುಂದೆ ಯಾರಾದರೂ ದ್ರಾಕ್ಷಿತೋಟವನ್ನು ಮಾಡಿದರೆ
    ಅದರ ಫಲವನ್ನು ಇತರರು ತಿನ್ನುವದಿಲ್ಲ.
ಮರಗಳು ಎಷ್ಟು ಕಾಲ ಬೆಳೆಯುತ್ತವೋ
    ಅಷ್ಟುಕಾಲ ನನ್ನ ಜನರು ಜೀವಿಸುವರು.
ನಾನು ಆರಿಸಿಕೊಂಡ ಜನರು
    ತಾವು ಮಾಡಿದ ಕಾರ್ಯಗಳಲ್ಲಿ ಆನಂದಿಸುವರು.
23 ಇನ್ನು ಮುಂದೆ ಜನರು ಬಿಟ್ಟೀಕೆಲಸ ಮಾಡುವದಿಲ್ಲ.
    ಇನ್ನು ಮುಂದೆ ಮಕ್ಕಳನ್ನು ಹೆರುವಾಗ ಕೇಡಾಗುತ್ತದೆಯೆಂಬ ಭಯವಿರುವುದಿಲ್ಲ.
ನನ್ನ ಎಲ್ಲಾ ಜನರು ಮತ್ತು ಅವರ ಮಕ್ಕಳು ಯೆಹೋವನಿಂದ ಆಶೀರ್ವದಿಸಲ್ಪಡುವರು.
24 ಅವರು ಕೇಳುವ ಮೊದಲೇ ಅವರಿಗೆ ಏನುಬೇಕು ಎಂಬುದನ್ನು ಅರಿತುಕೊಳ್ಳುವೆನು.
    ಅವರ ಪ್ರಾರ್ಥನೆ ಮುಗಿಯುವ ಮೊದಲೇ ಅವರಿಗೆ ಸಹಾಯ ಮಾಡುವೆನು.
25 ತೋಳಗಳೂ ಕುರಿಮರಿಗಳೂ ಒಟ್ಟಾಗಿ ಮೇಯುವವು.
    ಸಿಂಹಗಳು ದನಕುರಿಗಳಂತೆ ಹುಲ್ಲನ್ನು ಮೇಯುತ್ತವೆ.
    ವಿಷದ ಹಾವುಗಳು ಕೇವಲ ಮಣ್ಣನ್ನೇ ತಿನ್ನುತ್ತವೆ.
ನನ್ನ ಪವಿತ್ರಪರ್ವತದಲ್ಲಿ ಅವು ಯಾರಿಗೂ ಕೇಡುಮಾಡುವುದಿಲ್ಲ; ಯಾರಿಗೂ ಭಯ ಹುಟ್ಟಿಸುವುದಿಲ್ಲ.”
ಇವು ಯೆಹೋವನ ನುಡಿಗಳು.

ರೋಮ್ನಗರದವರಿಗೆ 4:6-13

ದೇವರು ಒಬ್ಬನ ಒಳ್ಳೆಯ ಕಾರ್ಯಗಳನ್ನು ಲಕ್ಷಿಸದೆ ಅವನನ್ನು ನೀತಿವಂತನೆಂದು ಒಪ್ಪಿಕೊಂಡರೆ ಅವನು ನಿಜವಾಗಿಯೂ ಭಾಗ್ಯವಂತನೆಂದು ದಾವೀದನು ಸಹ ಹೇಳಿದ್ದಾನೆ:

“ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ
    ಯಾರ ಅಪರಾಧಗಳು ಮುಚ್ಚಲ್ಪಟ್ಟಿವೆಯೋ
    ಅವರು ನಿಜವಾಗಿಯೂ ಭಾಗ್ಯವಂತರು!
ಪ್ರಭುವು ಯಾವನ ಪಾಪವನ್ನು ಪರಿಗಣಿಸುವುದಿಲ್ಲವೋ
    ಅವನು ನಿಜವಾಗಿಯೂ ಭಾಗ್ಯವಂತನು!”(A)

ಈ ಭಾಗ್ಯವಿರುವುದು ಸುನ್ನತಿ[a] ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಈ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ಆ ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು. 10 ಆದರೆ ಇದು ಯಾವಾಗ ಆಯಿತು? ದೇವರು ಅಬ್ರಹಾಮನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೋ ಅಥವಾ ಸುನ್ನತಿಯಾದಮೇಲೋ? ದೇವರು ಅವನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೇ. 11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು. 12 ಅಲ್ಲದೆ ಸುನ್ನತಿ ಮಾಡಿಸಿಕೊಂಡಿರುವ ಜನರಿಗೂ ಸಹ ಅಬ್ರಹಾಮನು ತಂದೆಯಾಗಿದ್ದಾನೆ. ಆದರೆ ಅವನನ್ನು ಅವರ ತಂದೆಯನ್ನಾಗಿ ಮಾಡುವಂಥದ್ದು ಅವರ ಸುನ್ನತಿಯಲ್ಲ. ನಮ್ಮ ತಂದೆಯಾದ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವ ಮೊದಲು ಹೊಂದಿದ್ದ ನಂಬಿಕೆಗನುಸಾರವಾಗಿ ಅವರು ಜೀವಿಸಿದರೆ ಮಾತ್ರ ಅವನು ಅವರ ತಂದೆಯಾಗಿದ್ದಾನೆ.

ವಾಗ್ದಾನವನ್ನು ಹೊಂದಿಕೊಳ್ಳಲು ನಂಬಿಕೆಯೇ ಮಾರ್ಗ

13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ಆ ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ಆ ವಾಗ್ದಾನವನ್ನು ಹೊಂದಿಕೊಂಡನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International