Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
ನನಗೆ ಸಹಾಯವು ಎಲ್ಲಿಂದ ಬರುವುದು?
2 ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
ನನಗೆ ಸಹಾಯವು ಬರುವುದು.
3 ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
4 ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
ನಿದ್ರಿಸುವುದೂ ಇಲ್ಲ!
5 ನಿನ್ನನ್ನು ಕಾಯುವವನು ಯೆಹೋವನೇ.
ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
6 ಹಗಲಲ್ಲಿ ಸೂರ್ಯನೂ
ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
7 ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
ನಿನ್ನ ಪ್ರಾಣವನ್ನು ಕಾಯುವನು.
8 ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
ಆತನು ನಿನ್ನನ್ನು ಸದಾಕಾಲ ಕಾಪಾಡುವನು.
4 “ನನ್ನ ಜನರೇ, ನನ್ನ ಮಾತನ್ನು ಕೇಳಿರಿ.
ನನ್ನ ಕಟ್ಟಳೆ ಮತ್ತು ನ್ಯಾಯ ಬೆಳಕಿನಂತಿದ್ದು ಹೇಗೆ ಜೀವಿಸಬೇಕೆಂಬುದನ್ನು ಜನರಿಗೆ ತೋರಿಸುತ್ತವೆ.
5 ನಾನು ನ್ಯಾಯವಂತನೆಂದು ನಿಮಗೆ ಬೇಗನೆ ತೋರಿಸುವೆನು. ನಿಮ್ಮನ್ನು ಬೇಗನೆ ರಕ್ಷಿಸುವೆನು.
ನಾನು ನನ್ನ ಸಾಮರ್ಥ್ಯದಿಂದ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವೆನು.
ದೂರದೇಶದವರು ನನಗೋಸ್ಕರ ಕಾಯುತ್ತಿದ್ದಾರೆ.
ಅವರು ತಮ್ಮ ರಕ್ಷಣೆಗಾಗಿ ನನ್ನ ಶಕ್ತಿಯನ್ನು ಎದುರುನೋಡುತ್ತಿದ್ದಾರೆ.
6 ಪರಲೋಕದ ಕಡೆಗೆ ದೃಷ್ಟಿಸಿರಿ.
ನಿಮ್ಮ ಸುತ್ತಲೂ ಇರುವ ಭೂಮಿಯನ್ನು ನೋಡಿರಿ.
ಹೊಗೆಯ ಮೋಡದಂತೆ ಆಕಾಶವು ಇಲ್ಲದೆಹೋಗುವದು.
ಭೂಮಿಯು ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವುದು.
ಭೂಮಿಯ ಮೇಲಿರುವ ಜನರು ಸಾಯುವರು.
ಆದರೆ ನನ್ನ ರಕ್ಷಣೆಯು ನಿರಂತರವಾಗಿರುವದು.
ನನ್ನ ಕರುಣೆಯು ಅಂತ್ಯವಾಗದು.
7 ಒಳ್ಳೆಯತನವನ್ನು ಅರ್ಥಮಾಡಿಕೊಂಡ ನೀವು ನನ್ನ ಮಾತುಗಳನ್ನು ಕೇಳಿರಿ.
ನನ್ನ ಬೋಧನೆಯನ್ನು ಅನುಸರಿಸುವ ನೀವು ನನ್ನ ಮಾತಿಗೆ ಕಿವಿಗೊಡಿರಿ.
ದುಷ್ಟಜನರಿಗೆ ಭಯಪಡಬೇಡಿರಿ.
ಅವರು ನಿಮಗೆ ಹೇಳುವ ಕೆಟ್ಟಮಾತುಗಳಿಗೆ ಭಯಪಡಬೇಡಿ.
8 ಯಾಕೆಂದರೆ ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು. ಅವರು ಉಣ್ಣೆಯಂತಿರುವರು,
ನುಸಿಯು ಅದನ್ನು ತಿಂದುಬಿಡುವುದು.
ಆದರೆ ನನ್ನ ಒಳ್ಳೆಯತನವು ಶಾಶ್ವತವಾದದ್ದು.
ನನ್ನ ರಕ್ಷಣೆಯು ಸದಾಕಾಲವಿರುವುದು.”
ಗುಣಹೊಂದಿದ ಸೇವಕ
(ಮತ್ತಾಯ 8:5-13; ಯೋಹಾನ 4:43-54)
7 ಯೇಸುವು ಜನರಿಗೆ ಈ ಸಂಗತಿಗಳೆಲ್ಲವನ್ನು ಹೇಳಿ ಮುಗಿಸಿದ ನಂತರ ಕಪೆರ್ನೌಮಿಗೆ ಹೋದನು. 2 ಅಲ್ಲಿ ಒಬ್ಬ ಸೇನಾಧಿಪತಿ[a] ಇದ್ದನು. ಅವನ ಪ್ರಿಯ ಸೇವಕನೊಬ್ಬನು ಕಾಯಿಲೆಯಿಂದ ಸಾಯುವ ಸ್ಥಿತಿಯಲ್ಲಿದ್ದನು. 3 ಯೇಸುವಿನ ಸುದ್ದಿಯನ್ನು ಕೇಳಿದಾಗ, ಅವನು ಕೆಲವು ಹಿರಿಯ ಯೆಹೂದ್ಯನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ನ ಸೇವಕನ ಪ್ರಾಣವನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡನು. 4 ಆ ಜನರು ಯೇಸುವಿನ ಬಳಿಗೆ ಬಂದು, “ಈ ಸೇನಾಧಿಪತಿ ನಿನ್ನ ಸಹಾಯ ಹೊಂದುವುದಕ್ಕೆ ಯೋಗ್ಯನಾಗಿದ್ದಾನೆ. 5 ಅವನು ನಮ್ಮ ಜನರನ್ನು ಪ್ರೀತಿಸುತ್ತಾನೆ ಮತ್ತು ನಮಗೋಸ್ಕರ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿದ್ದಾನೆ” ಎಂದು ಹೇಳಿ ಬಹಳವಾಗಿ ಬೇಡಿಕೊಂಡರು.
6 ಆದ್ದರಿಂದ ಯೇಸು ಅವರ ಜೊತೆ ಹೊರಟನು. ಯೇಸು ಮನೆಯ ಹತ್ತಿರ ಬರುತ್ತಿರುವಾಗ, ಆ ಅಧಿಕಾರಿಯು ಸ್ನೇಹಿತರನ್ನು, “ಪ್ರಭುವೇ, ನೀನು ನನ್ನ ಮನೆಗೆ ಬರುವಷ್ಟು ನಾನು ಯೋಗ್ಯನಲ್ಲ. 7 ನಿನ್ನ ಬಳಿಗೆ ಬರುವುದಕ್ಕೂ ನನಗೆ ಯೋಗ್ಯತೆ ಇಲ್ಲ. ನೀನು ಕೇವಲ ಒಂದು ಆಜ್ಞೆ ಕೊಟ್ಟರೆ ಸಾಕು, ನನ್ನ ಆಳು ಗುಣಹೊಂದುವನು. 8 ನಿನ್ನ ಅಧಿಕಾರವನ್ನು ನಾನು ತಿಳಿದುಕೊಂಡಿದ್ದೇನೆ. ನಾನೂ ಮತ್ತೊಬ್ಬರ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ. ನಾನು ಒಬ್ಬ ಸೈನಿಕನಿಗೆ, ‘ಹೋಗು’ ಎಂದು ಹೇಳಿದರೆ, ಅವನು ಹೋಗುತ್ತಾನೆ. ಇನ್ನೊಬ್ಬ ಸೈನಿಕನಿಗೆ, ‘ಬಾ’ ಎಂದು ಹೇಳಿದರೆ, ಅವನು ಬರುತ್ತಾನೆ. ನನ್ನ ಆಳಿಗೆ, ‘ಇದನ್ನು ಮಾಡು’ ಎಂದು ಹೇಳಿದರೆ, ಅವನು ನನಗೆ ವಿಧೇಯನಾಗುತ್ತಾನೆ” ಎಂದು ಯೇಸುವಿಗೆ ಹೇಳಲು ಕಳುಹಿಸಿದನು.
9 ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ನೋಡಿ, “ಇಷ್ಟು ದೊಡ್ಡ ನಂಬಿಕೆಯಿರುವ ವ್ಯಕ್ತಿಯನ್ನು ನಾನು ಇಸ್ರೇಲಿನಲ್ಲಿಯೂ ನೋಡಲಿಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದನು.
10 ಆ ಅಧಿಕಾರಿಯು ಕಳುಹಿಸಿದ್ದ ಜನರು ಯೇಸುವಿನ ಬಳಿಯಿಂದ ಹಿಂತಿರುಗಿ ಹೋದಾಗ, ಆ ಸೇವಕನಿಗೆ ಆಗಲೇ ಗುಣವಾಗಿರುವುದನ್ನು ಕಂಡರು.
Kannada Holy Bible: Easy-to-Read Version. All rights reserved. © 1997 Bible League International