Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
ನನಗೆ ಸಹಾಯವು ಎಲ್ಲಿಂದ ಬರುವುದು?
2 ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
ನನಗೆ ಸಹಾಯವು ಬರುವುದು.
3 ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
4 ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
ನಿದ್ರಿಸುವುದೂ ಇಲ್ಲ!
5 ನಿನ್ನನ್ನು ಕಾಯುವವನು ಯೆಹೋವನೇ.
ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
6 ಹಗಲಲ್ಲಿ ಸೂರ್ಯನೂ
ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
7 ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
ನಿನ್ನ ಪ್ರಾಣವನ್ನು ಕಾಯುವನು.
8 ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
ಆತನು ನಿನ್ನನ್ನು ಸದಾಕಾಲ ಕಾಪಾಡುವನು.
ಯೆಹೋವನಿಗೆ ಸ್ತೋತ್ರ
18 ನಿನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ.
ಪಾಪದಲ್ಲಿ ಬಿದ್ದವರನ್ನು ನೀನು ಕ್ಷಮಿಸುವೆ.
ನಿನ್ನ ಜನಶೇಷವನ್ನು ಮನ್ನಿಸುವೆ.
ನೀನು ನಿತ್ಯಕ್ಕೂ ಕೋಪಿಸುವದಿಲ್ಲ.
ಯಾಕೆಂದರೆ ದಯೆತೋರಿಸುವದರಲ್ಲಿ ನೀನು ಸಂತೋಷಿಸುವೆ.
19 ಯೆಹೋವನೇ, ನಮ್ಮನ್ನು ತಿರುಗಿ ಸಂತೈಸು.
ನಮ್ಮ ಪಾಪಗಳನ್ನು ನಮ್ಮಿಂದ ನಿವಾರಿಸು.
ನಮ್ಮೆಲ್ಲಾ ಪಾಪಗಳನ್ನು ಆಳವಾದ ಸಮುದ್ರದ ತಳದಲ್ಲಿ ಹಾಕು.
20 ನೀನು ಯಾಕೋಬನಿಗೆ ನಂಬಿಗಸ್ತನಾಗುವೆ.
ನೀನು ಅಬ್ರಹಾಮನ ಮೇಲೆ ದಯೆತೋರಿಸಿ ನಂಬಿಗಸ್ತನಾಗುವೆ.
ಇದನ್ನು ನೀನು ಬಹಳ ಕಾಲದ ಹಿಂದೆಯೇ ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿರುವೆ.
ದೇವರು ಜನರನ್ನು ನೀತಿವಂತರನ್ನಾಗಿ ಮಾಡುವ ಬಗೆ
21 ಆದರೆ ಈಗ ದೇವರು ಧರ್ಮಶಾಸ್ತ್ರದ ನೆರವಿಲ್ಲದೆಯೇ ಜನರನ್ನು ನೀತಿವಂತರನ್ನಾಗಿ ಮಾಡುವ ಮಾರ್ಗವನ್ನು ತೋರಿಸಿದ್ದಾನೆ. ಧರ್ಮಶಾಸ್ತ್ರ ಮತ್ತು ಪ್ರವಾದಿಗಳು ಈ ಹೊಸ ಮಾರ್ಗದ ಬಗ್ಗೆ ನಮಗೆ ಹೇಳಿದ್ದಾರೆ. 22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ. 23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ. 24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ. 25 ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು. 26 ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.
27 ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ. 28 ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ. 29 ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ. 30 ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. 31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International