Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 32

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
    ಮಾರ್ಗದರ್ಶನ ನೀಡುವೆನು;
    ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
    ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”

10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
    ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
    ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.

ಆದಿಕಾಂಡ 4:1-16

ಮೊದಲನೆಯ ಕುಟುಂಬ

ಆದಾಮ ಮತ್ತು ಹವ್ವಳು ಕೂಡಿದರು. ಆದ್ದರಿಂದ ಹವ್ವಳಿಗೆ ಒಂದು ಮಗು ಜನಿಸಿತು. ಹವ್ವಳು, “ಯೆಹೋವನ ಸಹಾಯದಿಂದ ಗಂಡುಮಗುವನ್ನು ಪಡೆದಿದ್ದೇನೆ” ಎಂದು ಹೇಳಿ ಆ ಮಗುವಿಗೆ ಕಾಯಿನ ಎಂದು ಹೆಸರಿಟ್ಟಳು.

ಆಮೇಲೆ, ಹವ್ವಳಿಗೆ ಮತ್ತೊಂದು ಮಗು ಜನಿಸಿತು. ಈ ಮಗುವೇ ಕಾಯಿನನ ತಮ್ಮನಾದ ಹೇಬೆಲ. ಹೇಬೆಲನು ಕುರುಬನಾದನು ಕಾಯಿನನು ರೈತನಾದನು.

ಮೊದಲನೆಯ ಕೊಲೆ

ಸ್ವಲ್ಪ ಕಾಲದ ನಂತರ ಕಾಯಿನನು ದೇವರಿಗೆ ಕೃತಜ್ಞತಾ ಕಾಣಿಕೆಯನ್ನು ತಂದನು. ಕಾಯಿನನು ತಾನು ಹೊಲದಲ್ಲಿ ಬೆಳೆದ ಕೆಲವು ಆಹಾರಪದಾರ್ಥಗಳನ್ನು ತಂದನು. ಹೇಬೆಲನು ತನ್ನ ಕುರಿಮಂದೆಯಿಂದ ಒಳ್ಳೆಯ ಚೊಚ್ಚಲ ಕುರಿಗಳನ್ನು ಮತ್ತು ಅವುಗಳ ಒಳ್ಳೆಯ ಕೊಬ್ಬಿದ ಭಾಗಗಳನ್ನು ತಂದನು.

ಯೆಹೋವನು ಹೇಬೆಲನ ಕಾಣಿಕೆಯನ್ನು ಸ್ವೀಕರಿಸಿದನು; ಆದರೆ ಕಾಯಿನನ ಕಾಣಿಕೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಕಾಯಿನನು ದುಃಖಿತನಾದನು ಮತ್ತು ಬಹಳ ಕೋಪಗೊಂಡನು. ಯೆಹೋವನು ಕಾಯಿನನಿಗೆ, “ಏಕೆ ಕೋಪಗೊಂಡಿರುವೆ? ನಿನ್ನ ಮುಖ ವ್ಯಸನದಿಂದಿರುವುದೇಕೆ? ನೀನು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ನಾನು ನಿನ್ನನ್ನು ಸ್ವೀಕರಿಸಿಕೊಳ್ಳುವೆನು. ಆದರೆ ನೀನು ಕೆಟ್ಟಕಾರ್ಯಗಳನ್ನು ಮಾಡಿದರೆ, ಆ ಪಾಪವು ನಿನ್ನೊಂದಿಗಿರುತ್ತದೆ. ನಿನ್ನ ಪಾಪವು ನಿನ್ನನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಇಷ್ಟಪಡುತ್ತದೆ. ಆದರೆ ನೀನು ಆ ಪಾಪವನ್ನು ನಿನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು”[a] ಎಂದು ಹೇಳಿದನು.

ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ, “ನಾವು ಹೊಲಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಕಾಯಿನನು ಮತ್ತು ಹೇಬೆಲನು ಹೊಲಕ್ಕೆ ಹೋದರು. ಅಲ್ಲಿ ಕಾಯಿನನು ತನ್ನ ತಮ್ಮನ ಮೇಲೆರಗಿ ಅವನನ್ನು ಕೊಂದುಹಾಕಿದನು.

ತರುವಾಯ ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನೆಲ್ಲಿ?” ಎಂದು ಕೇಳಿದನು.

ಅದಕ್ಕೆ ಕಾಯಿನನು, “ನನಗೆ ಗೊತ್ತಿಲ್ಲ. ನನ್ನ ತಮ್ಮನನ್ನು ಕಾಯುವುದಾಗಲಿ ನೋಡಿಕೊಳ್ಳುವುದಾಗಲಿ ನನ್ನ ಕೆಲಸವೇ?” ಎಂದು ಉತ್ತರಕೊಟ್ಟನು.

10 ಅದಕ್ಕೆ ಯೆಹೋವನು, “ನೀನು ಮಾಡಿದ್ದೇನು? ನೀನು ನಿನ್ನ ತಮ್ಮನನ್ನೇ ಕೊಲೆಮಾಡಿದೆ! ಅವನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತಿದೆ. 11 ನೀನು ನಿನ್ನ ತಮ್ಮನನ್ನು ಕೊಂದುಹಾಕಿದೆ. ನಿನ್ನ ಕೈಗಳಿಂದ ಸುರಿಸಿದ ಅವನ ರಕ್ತವನ್ನು ಕುಡಿಯಲು ಭೂಮಿಯು ಬಾಯಿ ತೆರೆಯಿತು. ಆದ್ದರಿಂದ ಈಗ ಅದು ಶಾಪಗ್ರಸ್ತವಾಗಿದೆ. 12 ಕಳೆದ ದಿನಗಳಲ್ಲಿ ನೀನು ಸಸಿಗಳನ್ನು ನೆಟ್ಟಾಗ ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಈಗ ನೀನು ಸಸಿ ನೆಟ್ಟರೂ ಭೂಮಿ ಫಲಿಸುವುದಿಲ್ಲ. ನಿನಗೆ ಭೂಮಿಯ ಮೇಲೆ ಮನೆ ಇರುವುದಿಲ್ಲ. ನೀನು ಸ್ಥಳದಿಂದ ಸ್ಥಳಕ್ಕೆ ಅಲೆದಾಡುವೆ” ಎಂದು ಹೇಳಿದನು.

13 ಅದಕ್ಕೆ ಕಾಯಿನನು ಯೆಹೋವನಿಗೆ, “ಈ ಶಿಕ್ಷೆಯನ್ನು ನಾನು ಸಹಿಸಲಾರೆ! 14 ನೀನು ನನ್ನನ್ನು ನನ್ನ ದೇಶದಿಂದ ಬಲವಂತವಾಗಿ ಹೊರಡಿಸುತ್ತಿರುವೆ. ನಿನ್ನನ್ನು ನೋಡುವುದಕ್ಕಾಗಲಿ ನಿನ್ನ ಸಮೀಪದಲ್ಲಿ ಇರುವುದಕ್ಕಾಗಲಿ ನನಗೆ ಸಾಧ್ಯವಿರುವುದಿಲ್ಲ! ನನಗೆ ಮನೆಯೂ ಇಲ್ಲ! ನಾನು ಭೂಮಿಯ ಮೇಲೆ ಸ್ಥಳದಿಂದ ಸ್ಥಳಕ್ಕೆ ಬಲವಂತವಾಗಿ ಅಲೆದಾಡಬೇಕಾಗುವುದು. ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.

15 ಅದಕ್ಕೆ ಯೆಹೋವನು ಕಾಯಿನನಿಗೆ, “ಆ ರೀತಿ ಆಗದಂತೆ ನಾನು ನೋಡಿಕೊಳ್ಳುವೆ! ಕಾಯಿನನೇ, ನಿನ್ನನ್ನು ಯಾವನಾದರೂ ಕೊಂದರೆ, ನಾನು ಅವನನ್ನು ಏಳರಷ್ಟು ಶಿಕ್ಷಿಸುವೆನು” ಎಂದು ಹೇಳಿದನು. ಆಮೇಲೆ ಯೆಹೋವನು ಕಾಯಿನನ ಮೇಲೆ ಒಂದು ಗುರುತಿಟ್ಟನು. ಅವನನ್ನು ಯಾರೂ ಕೊಲ್ಲಕೂಡದೆಂದು ಆ ಗುರುತು ಸೂಚಿಸುತ್ತಿತ್ತು.

ಕಾಯಿನನ ಕುಟುಂಬ

16 ಕಾಯಿನನು ಯೆಹೋವನ ಪ್ರಸನ್ನತೆಯಿಂದ ದೂರ ಹೊರಟುಹೋದನು. ಕಾಯಿನನು ನೋದು ಎಂಬ ನಾಡಿನಲ್ಲಿ ವಾಸಿಸಿದನು. ಅದು ಏದೆನ್ ತೋಟಕ್ಕೆ ಪೂರ್ವದಲ್ಲಿರುವುದು.

ಇಬ್ರಿಯರಿಗೆ 4:14-5:10

ದೇವರ ಸನ್ನಿಧಿಗೆ ಬರಲು ಯೇಸುವಿನ ಸಹಾಯ

14 ಪರಲೋಕಕ್ಕೆ ಏರಿಹೋದ ಪ್ರಧಾನ ಯಾಜಕನೊಬ್ಬನು ನಮಗಿದ್ದಾನೆ. ಆತನೇ ದೇವರ ಮಗನಾದ ಯೇಸು. ಆದ್ದರಿಂದ ನಮಗಿರುವ ನಂಬಿಕೆಯಲ್ಲೇ ದೃಢವಾಗಿ ಸಾಗೋಣ. 15 ನಮ್ಮ ಪ್ರಧಾನ ಯಾಜಕನಾಗಿರುವ ಯೇಸು ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳಲು ಸಮರ್ಥನಾಗಿದ್ದಾನೆ. ಆತನು ಈ ಲೋಕದಲ್ಲಿ ಜೀವಿಸಿದ್ದಾಗ, ಸರ್ವವಿಷಯಗಳಲ್ಲಿ ನಮ್ಮಂತೆಯೇ ಶೋಧನೆಗೆ ಗುರಿಯಾದರೂ ಪಾಪಮಾಡಲಿಲ್ಲ. 16 ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು.

ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.

ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:

“ನೀನು ನನ್ನ ಮಗನು.
    ಈ ದಿನ ನಾನು ನಿನ್ನ ತಂದೆಯಾದೆನು.”(A)

ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:

“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
    ಪ್ರಧಾನಯಾಜಕನಾಗಿರುವೆ.”(B)

ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು. ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು. ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ. 10 ದೇವರು ಆತನನ್ನು ಮೆಲ್ಕಿಜೆದೇಕನಂತೆ ಪ್ರಧಾನ ಯಾಜಕನನ್ನಾಗಿ ಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International