Revised Common Lectionary (Semicontinuous)
15 ದೇವರಾದ ಯೆಹೋವನು ಆ ಮನುಷ್ಯನನ್ನು ಏದೆನ್ ತೋಟಕ್ಕೆ ಕರೆದೊಯ್ದು ವ್ಯವಸಾಯ ಮಾಡುವುದಕ್ಕಾಗಿಯೂ ಅದನ್ನು ನೋಡಿಕೊಳ್ಳುವುದಕ್ಕೂ ಅದರಲ್ಲಿರಿಸಿದನು. 16 ದೇವರಾದ ಯೆಹೋವನು ಆ ಮನುಷ್ಯನಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನು ಬೇಕಾದರೂ ನೀನು ತಿನ್ನಬಹುದು. 17 ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರದ ಹಣ್ಣನ್ನು ಮಾತ್ರ ನೀನು ತಿನ್ನಕೂಡದು. ಒಂದುವೇಳೆ ಆ ಮರದ ಹಣ್ಣನ್ನು ತಿಂದರೆ ನೀನು ಸಾಯುವೆ!” ಎಂದು ಆಜ್ಞಾಪಿಸಿದನು.
ಪಾಪದ ಪ್ರಾರಂಭ
3 ದೇವರಾದ ಯೆಹೋವನು ಸೃಷ್ಟಿಸಿದ ಎಲ್ಲ ಭೂಜಂತುಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯನ್ನು ಮೋಸಗೊಳಿಸಲು ಅವಳ ಬಳಿಗೆ ಬಂದು, “ಏನಮ್ಮಾ, ಈ ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಕೂಡದೆಂದು ದೇವರು ನಿಮಗೆ ಹೇಳಿರುವುದು ನಿಜವೇ?” ಎಂದು ಕೇಳಿತು.
2 ಸ್ತ್ರೀಯು ಸರ್ಪಕ್ಕೆ, “ಇಲ್ಲ! ದೇವರು ಹಾಗೆ ಹೇಳಲಿಲ್ಲ! ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು. 3 ಆದರೆ ಒಂದು ಮರದ ಹಣ್ಣನ್ನು ಮಾತ್ರ ನಾವು ತಿನ್ನಕೂಡದು. ದೇವರು ನಮಗೆ, ‘ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ನೀವು ತಿನ್ನಕೂಡದು; ಆ ಮರವನ್ನು ಮುಟ್ಟಕೂಡದು, ಇಲ್ಲವಾದರೆ ನೀವು ಸಾಯುವಿರಿ’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಕೊಟ್ಟಳು.
4 ಅದಕ್ಕೆ ಸರ್ಪವು ಸ್ತ್ರೀಗೆ, “ನೀವು ಸಾಯುವುದಿಲ್ಲ. 5 ನೀವು ಆ ಮರದ ಹಣ್ಣನ್ನು ತಿಂದರೆ ನಿಮಗೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಬರುತ್ತದೆಯೆಂದು ದೇವರಿಗೆ ಗೊತ್ತಿದೆ. ಅಲ್ಲದೆ ನೀವು ದೇವರಿಗೆ ಸರಿಸಮಾನರಾಗುವಿರಿ” ಎಂದು ಹೇಳಿತು.
6 ಸ್ತ್ರೀಗೆ ಆ ಮರ ಸುಂದರವಾಗಿ ಕಂಡಿತು. ಅದರ ಹಣ್ಣು ಆಕೆಗೆ ತಿನ್ನಲು ಯೋಗ್ಯವಾಗಿ ಕಂಡಿತು. ಆ ಮರ ತನ್ನನ್ನು ಜ್ಞಾನಿಯನ್ನಾಗಿ ಮಾಡುತ್ತದೆಯೆಂದು ಆಕೆ ಉತ್ಸಾಹಗೊಂಡಳು. ಆದ್ದರಿಂದ ಸ್ತ್ರೀಯು ಆ ಮರದ ಹಣ್ಣನ್ನು ಕಿತ್ತುಕೊಂಡು ತಿಂದಳು; ತನ್ನೊಂದಿಗಿದ್ದ ಗಂಡನಿಗೂ ಸ್ವಲ್ಪ ಹಣ್ಣನ್ನು ಕೊಟ್ಟಳು. ಅವನು ಸಹ ಅದನ್ನು ತಿಂದನು.
7 ಕೂಡಲೇ ಪುರುಷನಲ್ಲಿಯೂ ಸ್ತ್ರೀಯಲ್ಲಿಯೂ ಬದಲಾವಣೆಗಳಾದವು. ಅವರ ಕಣ್ಣುಗಳು ತೆರೆದವು. ಅವರಿಗೆ ಎಲ್ಲವೂ ವಿಚಿತ್ರವಾಗಿ ಕಂಡವು. ತಾವು ಬೆತ್ತಲೆಯಿಂದಿರುವುದನ್ನು ಕಂಡು ಅಂಜೂರದ ಎಲೆಗಳನ್ನು ಕಿತ್ತು ಒಂದಕ್ಕೊಂದು ಜೋಡಿಸಿ ಸುತ್ತಿಕೊಂಡರು.
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
ಆದಾಮ ಮತ್ತು ಕ್ರಿಸ್ತನು
12 ಒಬ್ಬ ಮನುಷ್ಯನು (ಆದಾಮ) ಮಾಡಿದ ಕೃತ್ಯದಿಂದ ಪಾಪವು ಲೋಕಕ್ಕೆ ಬಂದಿತು. ಆ ಪಾಪದೊಂದಿಗೆ ಮರಣವೂ ಬಂದಿತು. ಆದಕಾರಣವೇ ಎಲ್ಲಾ ಜನರು ಸಾಯಲೇಬೇಕು; ಏಕೆಂದರೆ ಎಲ್ಲಾ ಜನರು ಪಾಪ ಮಾಡಿದ್ದಾರೆ. 13 ಮೋಶೆಯ ಧರ್ಮಶಾಸ್ತ್ರಕ್ಕಿಂತ ಮೊದಲೇ ಪಾಪವು ಲೋಕದಲ್ಲಿತ್ತು. ಧರ್ಮಶಾಸ್ತ್ರವು ಇಲ್ಲದಿದ್ದರೆ, ದೇವರು ಜನರ ಪಾಪವನ್ನು ಪರಿಗಣಿಸುವುದಿಲ್ಲ. 14 ಆದರೆ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೆ ಎಲ್ಲಾ ಜನರು ಸಾಯಲೇಬೇಕಾಯಿತು. ಆದಾಮನು ಪಾಪ ಮಾಡಿದ್ದರಿಂದ ಸತ್ತನು. ದೇವರ ಆಜ್ಞೆಗೆ ಅವಿಧೇಯನಾದದ್ದೇ ಆ ಪಾಪ. ಆದರೆ ಆದಾಮನು ಮಾಡಿದ ಪಾಪಕ್ಕೆ ಸರಿಸಮಾನವಾದ ಪಾಪವನ್ನು ಮಾಡಿಲ್ಲದವರು ಸಹ ಸಾಯಬೇಕಾಯಿತು.
ಆದಾಮನು ಮುಂದಿನ ಕಾಲದಲ್ಲಿ ಬರಲಿದ್ದ ಒಬ್ಬಾತನಿಗೆ (ಕ್ರಿಸ್ತನಿಗೆ) ಮುನ್ಸೂಚನೆಯಾಗಿದ್ದನು. 15 ಆದರೆ ದೇವರ ಉಚಿತ ಕೊಡುಗೆಯು ಆದಾಮನ ಪಾಪದಂತಿಲ್ಲ. ಆ ಒಬ್ಬನು ಮಾಡಿದ ಪಾಪದ ದೆಸೆಯಿಂದಾಗಿ ಅನೇಕ ಜನರು ಸತ್ತರು. ಆದರೆ ಜನರು ದೇವರಿಂದ ಪಡೆದುಕೊಂಡ ಕೃಪೆಯು ಅದಕ್ಕಿಂತ ಬಹು ದೊಡ್ಡದಾಗಿದೆ. ಯೇಸು ಕ್ರಿಸ್ತನೆಂಬ ಒಬ್ಬ ಪುರುಷನ ಕೃಪೆಯ ಮೂಲಕ ದೇವರು ಉಚಿತವಾಗಿ ಕೊಡುವ “ಜೀವ”ವನ್ನು ಅನೇಕ ಜನರು ಹೊಂದಿಕೊಂಡರು. 16 ಆದಾಮನು ಒಮ್ಮೆ ಪಾಪಮಾಡಿದ ಮೇಲೆ ಅವನಿಗೆ ಅಪರಾಧಿ ಎಂದು ತೀರ್ಪು ನೀಡಲಾಯಿತು. ಆದರೆ ದೇವರ ಉಚಿತವಾದ ಕೊಡುಗೆ ಅದಕ್ಕೆ ತದ್ವಿರುದ್ಧವಾಗಿದೆ. ಅನೇಕ ಪಾಪಗಳ ದೆಸೆಯಿಂದ ದೇವರ ಉಚಿತವಾದ ಕೊಡುಗೆ ಬಂದಿತು. ಆ ಉಚಿತ ಕೊಡುಗೆ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಒಬ್ಬನು ಪಾಪ ಮಾಡಿದನು, ಆ ಒಬ್ಬನ ದೆಸೆಯಿಂದ ಮರಣವು ಎಲ್ಲಾ ಜನರ ಮೇಲೆ ಆಳ್ವಿಕೆ ನಡೆಸಿತು. ಆದರೆ ಈಗ ಕೆಲವು ಜನರು ದೇವರ ಪೂರ್ಣ ಕೃಪೆಯನ್ನು ಮತ್ತು ನೀತಿವಂತರನ್ನಾಗಿ ಮಾಡುವ ಆತನ ಉಚಿತವಾದ ಮಹಾ ಕೊಡುಗೆಯನ್ನು ಸ್ವೀಕರಿಸಿಕೊಳ್ಳುವರು. ನಿಶ್ಚಯವಾಗಿಯು ಅವರು ಯೇಸು ಕ್ರಿಸ್ತನೆಂಬ ಆ ಒಬ್ಬ ಪುರುಷನ ಮೂಲಕ, ನಿಜವಾದ ಜೀವವನ್ನು ಹೊಂದಿಕೊಳ್ಳುವರು ಮತ್ತು ಆಳುವರು.
18 ಹೀಗಿರಲಾಗಿ, ಆದಾಮನ ಒಂದು ಪಾಪವು ಎಲ್ಲಾ ಜನರಿಗೆ ಮರಣದಂಡನೆಯನ್ನು ತಂದಿತು. ಆದರೆ ಅದೇ ರೀತಿಯಲ್ಲಿ, ಕ್ರಿಸ್ತನು ಮಾಡಿದ ಒಂದೇ ಒಳ್ಳೆಯ ಕಾರ್ಯವು, ಎಲ್ಲಾ ಜನರನ್ನು ನೀತಿವಂತರನ್ನಾಗಿ ಮಾಡುತ್ತದೆ. ಮತ್ತು ಆ ಜನರಿಗೆ ಅದು ನಿಜವಾದ ಜೀವವನ್ನು ತರುತ್ತದೆ. 19 ಒಬ್ಬನು ದೇವರಿಗೆ ಅವಿಧೇಯನಾದ್ದರಿಂದ ಎಲ್ಲಾ ಜನರು ಪಾಪಿಗಳಾದರು. ಆದರೆ ಅದೇ ರೀತಿಯಲ್ಲಿ, ಒಬ್ಬನು ದೇವರಿಗೆ ವಿಧೇಯನಾದ್ದರಿಂದ ಎಲ್ಲರೂ ನೀತಿವಂತರಾಗುವರು.
ಯೇಸುವಿಗಾದ ಶೋಧನೆ
(ಮಾರ್ಕ 1:12-13; ಲೂಕ 4:1-13)
4 ಆಗ ದೇವರಾತ್ಮನು ಸೈತಾನನಿಂದ ಶೋಧಿಸಲ್ಪಡಲು ಯೇಸುವನ್ನು ಅಡವಿಗೆ ನಡೆಸಿದನು. 2 ಯೇಸು ನಲವತ್ತು ದಿನ ಹಗಲಿರುಳು ಏನನ್ನೂ ತಿನ್ನಲಿಲ್ಲ. ಬಳಿಕ ಆತನಿಗೆ ಬಹಳ ಹಸಿವಾಯಿತು. 3 ಆಗ ಆತನನ್ನು ಶೋಧಿಸಲು ಸೈತಾನನು ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞಾಪಿಸು” ಅಂದನು.
4 ಯೇಸು ಅವನಿಗೆ,
“‘ಮನುಷ್ಯನು ಬದುಕುವುದು ಕೇವಲ ರೊಟ್ಟಿಯಿಂದಲ್ಲ,
ಮನುಷ್ಯನ ಜೀವಿತವು ದೇವರು ಹೇಳುವ ಪ್ರತಿಯೊಂದು ಮಾತನ್ನು ಅವಲಂಬಿಸಿಕೊಂಡಿದೆ’(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂಬುದಾಗಿ ಉತ್ತರಕೊಟ್ಟನು.
5 ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣವಾದ ಜೆರುಸಲೇಮಿಗೆ ಕರೆದುಕೊಂಡು ಹೋಗಿ, ದೇವಾಲಯದ ಅತಿ ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, 6 “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ದುಮುಕು.
‘ದೇವರು ನಿನಗೋಸ್ಕರ ತನ್ನ ದೂತರಿಗೆ ಆಜ್ಞಾಪಿಸುವನು.
ನಿನ್ನ ಪಾದಗಳು ಬಂಡೆಗೆ ಅಪ್ಪಳಿಸದಂತೆ
ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’(B)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆಯಲ್ಲ” ಎಂದನು.
7 ಅದಕ್ಕೆ ಯೇಸು,
“‘ನಿನ್ನ ದೇವರಾದ ಪ್ರಭುವನ್ನು ನೀನು ಪರೀಕ್ಷಿಸಕೂಡದು’(C)
ಎಂಬುದಾಗಿಯೂ ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
8 ಬಳಿಕ ಸೈತಾನನು ಯೇಸುವನ್ನು ಎತ್ತರವಾದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ವೈಭವವನ್ನು ತೋರಿಸಿ, 9 “ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ನಾನು ಅವೆಲ್ಲವನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
10 ಯೇಸು ಸೈತಾನನಿಗೆ, “ಇಲ್ಲಿಂದ ತೊಲಗು!
‘ನಿನ್ನ ದೇವರಾದ ಪ್ರಭುವನ್ನೇ ಆರಾಧಿಸಬೇಕು,
ಆತನೊಬ್ಬನನ್ನೇ ಸೇವಿಸಬೇಕು’(D)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದನು.
11 ಆದ್ದರಿಂದ ಸೈತಾನನು ಯೇಸುವನ್ನು ಬಿಟ್ಟುಹೋದನು. ಆಗ ಕೆಲವು ದೇವದೂತರು ಬಂದು ಆತನನ್ನು ಉಪಚರಿಸಿದರು.
Kannada Holy Bible: Easy-to-Read Version. All rights reserved. © 1997 Bible League International