Revised Common Lectionary (Semicontinuous)
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15 ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.
18 ಚೀಯೋನಿಗೆ ಕರುಣೆತೋರಿ
ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
ನಿನಗೆ ಸಂತೋಷವನ್ನು ಉಂಟು ಮಾಡುವರು.
ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.
ದೇವರನ್ನು ಅನುಸರಿಸಲು ಜನರಿಗೆ ಉಪದೇಶ
58 ಎಷ್ಟು ಗಟ್ಟಿಯಾಗಿ ಆರ್ಭಟಿಸಬಹುದೋ ಅಷ್ಟು ಆರ್ಭಟಿಸಿರಿ, ನಿಲ್ಲಿಸಬೇಡಿರಿ.
ತುತ್ತೂರಿಯಂತೆ ಗಟ್ಟಿಯಾಗಿ ಕಿರುಚಿರಿ.
ಜನರು ಮಾಡಿದ ಪಾಪಗಳನ್ನು ಅವರಿಗೆ ತಿಳಿಸಿರಿ.
ಯಾಕೋಬನ ವಂಶದವರಿಗೆ ಅವರ ಪಾಪಗಳನ್ನು ತಿಳಿಸಿರಿ.
2 ಆಗ ಅವರು ದಿನನಿತ್ಯ ನನ್ನನ್ನು ಆರಾಧಿಸಲು ಬರುವರು.
ಜನರು ನನ್ನ ವಿಧಿಗಳನ್ನು ಕಲಿತುಕೊಳ್ಳಲು ಇಷ್ಟಪಡುವರು.
ಆಗ ಅವರು ಸರಿಯಾಗಿ ಜೀವಿಸುವ ಜನಾಂಗವಾಗುವರು.
ಅವರು ದೇವರ ಒಳ್ಳೆಯ ಆಜ್ಞೆಗಳನ್ನು ಬಿಡದೆ ಅನುಸರಿಸುವರು.
ಅವರು ಪಕ್ಷಪಾತವಿಲ್ಲದೆ ನ್ಯಾಯತೀರಿಸಲು ನನ್ನನ್ನು ಕೇಳುವರು.
ದೇವರ ನಿರ್ಧಾರವನ್ನು ಕೇಳಲು ಆತನ ಬಳಿಗೆ ಹೋಗಲು ಇಚ್ಛಿಸುವರು.
3 ಈಗ ಆ ಜನರು ಹೀಗೆ ಹೇಳುತ್ತಾರೆ, “ನಾವು ನಿನ್ನನ್ನು ಗೌರವಿಸಲು ಉಪವಾಸಮಾಡಿದೆವು. ನೀನು ನಮ್ಮನ್ನೇಕೆ ಗಮನಿಸುವದಿಲ್ಲ? ನಿನ್ನನ್ನು ಗೌರವಿಸುವದಕ್ಕಾಗಿ ನಾವು ನಮ್ಮ ದೇಹಗಳನ್ನು ದಂಡಿಸಿದೆವು. ನೀನೇಕೆ ನಮ್ಮನ್ನು ಗಮನಿಸುವದಿಲ್ಲ?”
ಆದರೆ ಯೆಹೋವನು ಹೇಳುವುದೇನೆಂದರೆ: “ವಿಶೇಷ ದಿವಸಗಳಲ್ಲಿ ನಿಮ್ಮ ಇಷ್ಟಾನುಸಾರ[a] ಉಪವಾಸ ಮಾಡುವಿರಿ. ನೀವು ನಿಮ್ಮ ಸ್ವಂತ ದೇಹಗಳನ್ನು ದಂಡಿಸದೆ ನಿಮ್ಮ ಸೇವಕರನ್ನು ದಂಡಿಸುತ್ತಿದ್ದೀರಿ. 4 ನೀವು ಆಹಾರಕ್ಕಾಗಿ ಹಸಿವೆಯಿಂದಿಲ್ಲ. ನೀವು ಜಗಳ, ವಾಗ್ವಾದಕ್ಕಾಗಿ ಹಸಿದಿದ್ದೀರಿ. ನಿಮ್ಮ ಕ್ರೂರ ಕೈಗಳಿಂದ ಜನರನ್ನು ಹೊಡೆಯಲು ಹಸಿವೆಯಿಂದಿದ್ದೀರಿ. ನೀವು ಉಪವಾಸ ಮಾಡುವಾಗ ನನಗಾಗಿ ಮಾಡುವದಿಲ್ಲ. ನನ್ನನ್ನು ಸ್ತುತಿಸಲು ನೀವು ನಿಮ್ಮ ಸ್ವರವನ್ನು ಉಪಯೋಗಿಸುವದಿಲ್ಲ. 5 ಉಪವಾಸದ ದಿವಸಗಳಲ್ಲಿ ಜನರು ತಮ್ಮ ದೇಹದಂಡನೆ ಮಾಡುವದನ್ನು ನೋಡಲು ಆಶಿಸುತ್ತೇನೆ ಎಂದು ನೆನಸಿರುವಿರಾ? ಜನರು ತಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಕೆಂದು ನಾನು ಆಶಿಸುವುದಾಗಿ ನೀವು ತಿಳಿದುಕೊಂಡಿದ್ದೀರಾ? ಜನರು ಸತ್ತ ಸಸಿಗಳಂತೆ ನನಗೆ ಅಡ್ಡಬೀಳಬೇಕೆಂದೂ ಶೋಕವಸ್ತ್ರಗಳನ್ನು ಧರಿಸಬೇಕೆಂದೂ ನಾನು ಆಶಿಸುವುದಾಗಿ ತಿಳಿದುಕೊಂಡಿದ್ದೀರಾ? ಅವರು ಬೂದಿಯ ಮೇಲೆ ಕುಳಿತುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಬೇಕೆಂದು ನಾನು ಆಶಿಸುತ್ತೇನೋ? ನೀವು ಉಪವಾಸದ ದಿವಸಗಳಲ್ಲಿ ಅದನ್ನೇ ಮಾಡುವವರಾಗಿರುತ್ತೀರಿ. ಯೆಹೋವನು ಅದನ್ನೇ ಆಶಿಸುವನೆಂದು ನಂಬುತ್ತೀರೋ?
6 “ನನಗೆ ಬೇಕಾಗಿರುವ ವಿಶೇಷ ದಿವಸ ಯಾವುದೆಂದು ನಾನು ಹೇಳುತ್ತೇನೆ. ಅದು ಜನರನ್ನು ಸ್ವತಂತ್ರರನ್ನಾಗಿ ಮಾಡುವ ದಿವಸ, ಜನರಿಂದ ಅವರ ಭಾರವನ್ನು ತೆಗೆದುಹಾಕುವ ದಿವಸ; ತೊಂದರೆಗೀಡಾಗಿರುವ ಜನರನ್ನು ವಿಮುಕ್ತರನ್ನಾಗಿ ಮಾಡುವ ದಿವಸ; ಅವರ ಹೆಗಲಿನಿಂದ ಭಾರದ ಹೊರೆಯನ್ನು ಇಳಿಸುವ ದಿವಸ. 7 ನೀವು ನಿಮ್ಮ ಊಟವನ್ನು ಹಸಿದವರೊಂದಿಗೆ ಹಂಚಿಕೊಳ್ಳುವದನ್ನು ನಾನು ನೋಡಲು ಆಶಿಸುತ್ತೇನೆ. ಮನೆಗಳಿಲ್ಲದ ಬಡ ಜನರನ್ನು ಕಂಡುಹಿಡಿದು ಅವರನ್ನು ನಿಮ್ಮ ಮನೆಗಳಿಗೆ ಕರೆದುಕೊಂಡು ಬರುವದನ್ನು ನೋಡಲು ಆಶಿಸುತ್ತೇನೆ. ಬಟ್ಟೆ ಇಲ್ಲದ ಒಬ್ಬ ಮನುಷ್ಯನನ್ನು ನೋಡಿದರೆ ನೀವು ನಿಮ್ಮ ಬಟ್ಟೆಯನ್ನು ಅವನಿಗೆ ಕೊಡಿರಿ. ಅವರಿಗೆ ಸಹಾಯ ಮಾಡಲು ಹಿಂಜರಿಯಬೇಡಿರಿ. ಅವರು ನಿಮ್ಮಂತೆ ಮನುಷ್ಯರಲ್ಲವೋ?”
8 ನೀವು ಹೀಗೆ ಮಾಡಿದ್ದಲ್ಲಿ ನೀವು ಬೆಳಕಿನಂತೆ ಪ್ರಕಾಶಿಸುವಿರಿ. ಆಗ ನಿಮ್ಮ ಗಾಯಗಳು ಗುಣವಾಗುವವು. ನಿಮ್ಮ ಒಳ್ಳೆಯತನವು ನಿಮ್ಮ ಮುಂದೆ ನಡೆಯುವುದು. ಯೆಹೋವನ ಮಹಿಮೆಯು ನಿಮ್ಮ ಹಿಂದಿನಿಂದ ನಿಮ್ಮನ್ನು ಹಿಂಬಾಲಿಸುವದು. 9 ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು.
ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು. 10 ಹಸಿದ ಜನರಿಗಾಗಿ ವ್ಯಸನಪಟ್ಟು ಅವರಿಗೆ ಆಹಾರವನ್ನು ಕೊಡಬೇಕು. ಸಂಕಷ್ಟ ಅನುಭವಿಸುವ ಜನರಿಗೆ ಸಹಾಯಮಾಡಿ ಅವರ ಕೊರತೆಗಳನ್ನು ನೀಗಿಸಬೇಕು. ಆಗ ನಿಮ್ಮ ಬೆಳಕು ಕತ್ತಲಲ್ಲಿ ಪ್ರಕಾಶಿಸುವದು. ನಿಮಗೆ ಆಗ ದುಃಖವಿರದು. ಮಧಾಹ್ನದ ಸೂರ್ಯನಂತೆ ನೀವು ಹೊಳೆಯುವಿರಿ.
11 ಯೆಹೋವನು ಯಾವಾಗಲೂ ನಿಮ್ಮನ್ನು ನಡೆಸುವನು. ಒಣನೆಲದಲ್ಲಿ ನಿಮ್ಮ ಆತ್ಮಗಳನ್ನು ತೃಪ್ತಿಪಡಿಸುವನು. ನಿಮ್ಮ ಎಲುಬುಗಳಿಗೆ ಬಲವನ್ನು ಕೊಡುವನು. ನೀರಿನಿಂದ ತೇವವಾಗಿರುವ ತೋಟದಂತೆ ನೀವು ಇರುವಿರಿ. ನಿತ್ಯವೂ ನೀರಿರುವ ಬುಗ್ಗೆಯಂತೆ ನೀವಿರುವಿರಿ.
12 ಬಹಳ ವರ್ಷಗಳಿಂದ ನಿಮ್ಮ ಪಟ್ಟಣಗಳು ಹಾಳಾಗಿ ಬಿದ್ದಿವೆ. ಆದರೆ ಹೊಸ ಪಟ್ಟಣಗಳು ಏಳುವವು. ಅವುಗಳ ಅಸ್ತಿವಾರಗಳು ಬಹಳ ವರ್ಷ ಬಾಳುವವು. ನೀವು “ಬೇಲಿ ಸರಿಮಾಡುವವರು” ಎಂದು ಕರೆಯಲ್ಪಡುವಿರಿ; “ಮನೆಗಳನ್ನು, ರಸ್ತೆಗಳನ್ನು ನಿರ್ಮಿಸುವವರು” ಎಂದು ನೀವು ಕರೆಯಲ್ಪಡುವಿರಿ.
ಅತ್ಯುತ್ತಮ ಸ್ಥಾನ ಯಾರಿಗೆ?
(ಮಾರ್ಕ 9:33-37; ಲೂಕ 9:46-48)
18 ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕರಾಜ್ಯದಲ್ಲಿ ಯಾರಿಗೆ ಅತ್ಯುತ್ತಮ ಸ್ಥಾನ ದೊರೆಯುತ್ತದೆ” ಎಂದು ಕೇಳಿದರು.
2 ಯೇಸು ಚಿಕ್ಕ ಮಗುವನ್ನು ತನ್ನ ಹತ್ತಿರಕ್ಕೆ ಕರೆದು ತನ್ನ ಶಿಷ್ಯರ ಮುಂದೆ ಆ ಮಗುವನ್ನು ನಿಲ್ಲಿಸಿ ಹೀಗೆಂದನು: 3 “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಬದಲಾವಣೆ ಹೊಂದಿಕೊಂಡು ನಿಮ್ಮ ಹೃದಯದಲ್ಲಿ ಚಿಕ್ಕ ಮಕ್ಕಳಂತೆ ಆಗಬೇಕು. ಇಲ್ಲವಾದರೆ, ನೀವು ಪರಲೋಕರಾಜ್ಯಕ್ಕೆ ಸೇರುವುದೇ ಇಲ್ಲ. 4 ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನೇ ಪರಲೋಕರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾನೆ.
5 “ಯಾವನಾದರೂ ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು.
ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ
(ಮಾರ್ಕ 9:42-48; ಲೂಕ 17:1-2)
6 “ದೀನತೆಯಿಂದ ನನ್ನನ್ನು ಹಿಂಬಾಲಿಸುವವರಲ್ಲಿ ಯಾರನ್ನಾದರೂ ಪಾಪಕ್ಕೆ ನಡೆಸುವವನಿಗೆ ಬಹಳ ಕೇಡಾಗುವುದು. ಅವನು ತನ್ನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಆಳವಾದ ಸಮುದ್ರದಲ್ಲಿ ಮುಳುಗುವುದೇ ಉತ್ತಮ. 7 ಜನರನ್ನು ಪಾಪಕ್ಕೆ ನಡೆಸುವ ಸಂಗತಿಗಳ ನಿಮಿತ್ತ ನಾನು ಈ ಲೋಕದ ವಿಷಯದಲ್ಲಿ ದುಃಖಪಡುತ್ತೇನೆ. ಅವು ಯಾವಾಗಲೂ ಇರುತ್ತವೆ. ಆದರೆ ಅವುಗಳಿಗೆ ಕಾರಣವಾಗುವ ವ್ಯಕ್ತಿಗೆ ಬಹಳ ಕೇಡಾಗುವುದು.
Kannada Holy Bible: Easy-to-Read Version. All rights reserved. © 1997 Bible League International