Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 51

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
    ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
    ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15     ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
    ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
    ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.

18 ಚೀಯೋನಿಗೆ ಕರುಣೆತೋರಿ
    ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
    ನಿನಗೆ ಸಂತೋಷವನ್ನು ಉಂಟು ಮಾಡುವರು.
    ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.

ಯೋನ 4

ದೇವರ ಕರುಣೆಯು ಯೋನನನ್ನು ಕೋಪಗೊಳ್ಳುವಂತೆ ಮಾಡಿತು

ದೇವರು ಆ ನಗರವನ್ನು ಕಾಪಾಡಿದನೆಂದು ಯೋನನಿಗೆ ಸಂತೋಷವಾಗಲಿಲ್ಲ. ಯೋನನಿಗೆ ಸಿಟ್ಟು ಬಂದಿತು. ಯೋನನು ಯೆಹೋವನಿಗೆ ದೂರು ಹೇಳುತ್ತಾ, “ಇದು ಹೀಗಾಗುತ್ತದೆಯೆಂದು ನನಗೆ ಗೊತ್ತಿತ್ತು. ನಾನು ನನ್ನ ದೇಶದಲ್ಲಿದ್ದೆ. ಇಲ್ಲಿಗೆ ಬರಲು ನನಗೆ ಹೇಳಿದವನು ನೀನೇ. ಈ ದುಷ್ಟಪಟ್ಟಣದ ಜನರನ್ನು ನೀನು ಕ್ಷಮಿಸುತ್ತೀ ಎಂದು ನನಗೆ ಆಗಲೇ ಗೊತ್ತಿತ್ತು. ಆದ್ದರಿಂದ ನಾನು ತಾರ್ಷೀಷಿಗೆ ಓಡಿಹೋಗಲು ನಿರ್ಧರಿಸಿದೆನು. ನೀನು ದಯಾಪರನಾದ, ಕೃಪಾಪೂರ್ಣನಾದ, ಕೋಪಗೊಳ್ಳುವುದರಲ್ಲಿ ನಿಧಾನವಾದ ಮತ್ತು ಮಹಾಕನಿಕರವುಳ್ಳ ದೇವರೆಂದು ನನಗೆ ಗೊತ್ತಿತ್ತು. ಆ ಜನರು ಪಾಪ ಮಾಡುವದನ್ನು ನಿಲ್ಲಿಸಿದರೆ, ನೀನು ನಿನ್ನ ಯೋಜನೆಯಂತೆ ಅವರನ್ನು ನಾಶಮಾಡುವುದಿಲ್ಲ ಎಂದು ನನಗೆ ಗೊತ್ತಿತ್ತು. ಆದ್ದರಿಂದ ನಾನು ಹೇಳುವುದೇನೆಂದರೆ ನನ್ನ ದೇವರೇ ನೀನು ನನ್ನನ್ನು ಕೊಂದುಬಿಡು. ನಾನು ಬದುಕುವದಕ್ಕಿಂತ ಸಾಯುವುದೇ ಮೇಲು.”

ಆಗ ಯೆಹೋವನು ಅವನಿಗೆ, “ನಾನು ಆ ಜನರನ್ನು ನಾಶಮಾಡದೆ ಹೋದುದರಿಂದ ನೀನು ಸಿಟ್ಟುಗೊಳ್ಳುವದು ಸರಿಯೋ?” ಎಂದು ಕೇಳಿದನು.

ಇವೆಲ್ಲಾ ಯೋನನನ್ನು ಇನ್ನೂ ಸಿಟ್ಟುಗೊಳಿಸಿದ್ದವು. ಅವನು ನಗರದ ಹೊರಗೆ ಪೂರ್ವದ ಕಡೆಗೆ ಹೋಗಿ ತನಗೊಂದು ಮಂಟಪವನ್ನು ಕಟ್ಟಿ ಅದರ ನೆರಳಿನಲ್ಲಿ ಕುಳಿತುಕೊಂಡು ನಗರಕ್ಕೆ ಏನಾಗುವದು ಎಂಬದನ್ನು ಕಾಯುತ್ತಾ ಕುಳಿತನು.

ಸೋರೆ ಗಿಡ ಮತ್ತು ಹುಳ

ದೇವರಾದ ಯೆಹೋವನು ಒಂದು ಸೋರೆ ಗಿಡವನ್ನು ಯೋನನ ಬಳಿಯಲ್ಲಿಯೇ ಶೀಘ್ರದಲ್ಲಿ ಬೆಳೆಯ ಮಾಡಿದನು. ಆ ಸೋರೆ ಗಿಡವು ಆ ಜಾಗವನ್ನು ತಂಪು ಮಾಡಿದ್ದರಿಂದ ಯೋನನಿಗೆ ತುಂಬಾ ಹಿತವಾಯಿತು ಮತ್ತು ತುಂಬಾ ಸಂತೋಷವಾಯಿತು.

ಮರುದಿನ ಮುಂಜಾನೆ, ದೇವರು ಆ ಗಿಡವನ್ನು ತಿನ್ನಲು ಒಂದು ಹುಳವನ್ನು ಕಳುಹಿಸಿದನು. ಆ ಹುಳವು ಗಿಡವನ್ನು ತಿಂದ ನಿಮಿತ್ತ ಅದು ಬಾಡಿಹೋಗಿ ಸತ್ತಿತ್ತು.

ಸೂರ್ಯನು ಆಕಾಶದಲ್ಲಿ ಏರಿ ಬಂದಾಗ ದೇವರು ಪೂರ್ವದ ಬಿಸಿಗಾಳಿ ಬೀಸುವಂತೆ ಮಾಡಿದನು. ಬಿಸಿಲಿನ ತಾಪವು ಯೋನನ ತಲೆಯ ಮೇಲೆ ಹೆಚ್ಚಾಯಿತು. ಯೋನನಿಗೆ ಶಾಖ ತಡೆಯಲಾಗಲಿಲ್ಲ. ಬಹಳ ಬಲಹೀನನಾದನು. ನನ್ನನ್ನು ಸಾಯಿಸು ಎಂದು ಯೋನನು ದೇವರನ್ನು ಬೇಡುತ್ತಾ, “ದೇವರೇ, ನಾನು ಬದುಕುವದಕ್ಕಿಂತ ಸಾಯುವುದೇ ಲೇಸು” ಅಂದನು.

ಆದರೆ ದೇವರು ಯೋನನಿಗೆ ಹೇಳಿದ್ದೇನೆಂದರೆ, “ಆ ಸೋರೆ ಗಿಡವು ಸತ್ತುಹೋದುದಕ್ಕೆ ನೀನು ಕೋಪಗೊಳ್ಳುವುದು ಸರಿಯೋ?”

ಅದಕ್ಕುತ್ತರವಾಗಿ ಯೋನನು, “ಹೌದು! ನಾನು ಕೋಪಗೊಂಡದ್ದು ನಿಜ. ನಾನು ಸಾಯುವಷ್ಟು ಕೋಪಗೊಂಡಿದ್ದೇನೆ” ಅಂದನು.

10 ಆಗ ಯೆಹೋವನು, “ನೀನು ಆ ಸೋರೆ ಗಿಡಕ್ಕಾಗಿ ಏನೂ ಮಾಡಲಿಲ್ಲ. ಅದು ಬೆಳೆಯುವಂತೆ ನೀನು ಮಾಡಲಿಲ್ಲ. ಅದು ರಾತ್ರಿಯಲ್ಲಿ ಬೆಳೆಯಿತು. ಮರುದಿನ ಅದು ಸತ್ತಿತ್ತು. ಈಗ ನೀನು ಅದಕ್ಕಾಗಿ ದುಃಖಪಡುತ್ತಿರುವೆ. 11 ಒಂದು ಗಿಡಕ್ಕಾಗಿ ನೀನು ಇಷ್ಟೊಂದು ದುಃಖಗೊಂಡರೆ, ನಿನೆವೆಯಂತಹ ಇಷ್ಟು ದೊಡ್ಡ ನಗರಕ್ಕಾಗಿ ನನಗೂ ಖಂಡಿತವಾಗಿ ದುಃಖವಾಗುತ್ತದೆ. ಈ ನಗರದಲ್ಲಿ ಅನೇಕಾನೇಕ ಜನರಿದ್ದಾರೆ! ಅನೇಕ ಪ್ರಾಣಿಗಳಿವೆ. ಈ ನಗರದಲ್ಲಿರುವ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಜನರಿಗೆ ತಾವು ತಪ್ಪು ಮಾಡುತ್ತಿರುವುದಾಗಿ ತಿಳಿದಿರಲಿಲ್ಲ” ಅಂದನು.

ರೋಮ್ನಗರದವರಿಗೆ 1:8-17

ಕೃತಜ್ಞತಾ ಪ್ರಾರ್ಥನೆ

ಮೊದಲನೆಯದಾಗಿ, ನಾನು ನಿಮ್ಮೆಲ್ಲರ ವಿಷಯದಲ್ಲಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ಏಕೆಂದರೆ ನಿಮ್ಮ ನಂಬಿಕೆಯು ಲೋಕದಲೆಲ್ಲಾ ಪ್ರಖ್ಯಾತವಾಗಿದೆ. 9-10 ನಾನು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಖಂಡಿತವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಇದು ಸತ್ಯವೆಂದು ದೇವರಿಗೆ ಗೊತ್ತಿದೆ. ದೇವರ ಮಗನ ವಿಷಯವಾದ ಸುವಾರ್ತೆಯನ್ನು ಜನರಿಗೆ ಸಾರುವುದರ ಮೂಲಕ ನಾನು ದೇವರನ್ನು ನನ್ನ ಆತ್ಮದಲ್ಲಿ ಆರಾಧಿಸುವವನಾಗಿದ್ದೇನೆ. ದೇವರ ಚಿತ್ತದಿಂದ, ನಿಮ್ಮ ಬಳಿಗೆ ಬರಲು ಅವಕಾಶವಾಗಬೇಕೆಂದು ಪ್ರಾರ್ಥಿಸುತ್ತೇನೆ. 11 ನಾನು ನಿಮ್ಮನ್ನು ನೋಡಲು, ನಿಮ್ಮನ್ನು ಬಲಗೊಳಿಸಲು, ನಿಮಗೆ ಆತ್ಮಿಕ ಉಡುಗೊರೆಯನ್ನು ಕೊಡಲು ಅತ್ಯಾಸಕ್ತಿ ಉಳ್ಳವನಾಗಿದ್ದೇನೆ. 12 ಅಂದರೆ ನಾವು ಹೊಂದಿರುವ ನಂಬಿಕೆಯಿಂದ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮ ನಂಬಿಕೆ ನನಗೆ ಸಹಾಯ ಮಾಡುತ್ತದೆ ಮತ್ತು ನನ್ನ ನಂಬಿಕೆ ನಿಮಗೆ ಸಹಾಯ ಮಾಡುತ್ತದೆ.

13 ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬರಲು ಅನೇಕ ಸಲ ಯೋಜನೆ ಮಾಡಿದೆನೆಂಬುದು ನಿಮಗೆ ತಿಳಿದಿರಲಿ. ಆದರೆ ನಿಮ್ಮ ಬಳಿಗೆ ಬರಲು ನನಗೆ ಸಾಧ್ಯವಾಗಲಿಲ್ಲ. ನಾನು ನಿಮ್ಮ ಬಳಿಗೆ ಬಂದು ನೀವು ಆತ್ಮಿಕವಾಗಿ ಬೆಳೆಯಲು ನಿಮಗೆ ಸಹಾಯ ಮಾಡಬೇಕೆಂದಿದ್ದೆನು. ನಾನು ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡಿದಂತೆಯೇ ನಿಮಗೂ ಸಹಾಯ ಮಾಡಬೇಕೆಂದಿರುವೆ.

14 ನಾನು ಎಲ್ಲಾ ಜನರ ಅಂದರೆ ಗ್ರೀಕರ ಮತ್ತು ಗ್ರೀಕರಲ್ಲದವರ, ಹಾಗೂ ಜ್ಞಾನಿಗಳ ಮತ್ತು ಮೂಢರ ಸೇವೆ ಮಾಡಲೇಬೇಕು. 15 ಆದಕಾರಣ ರೋಮಿನಲ್ಲಿರುವ ನಿಮಗೆ ಸುವಾರ್ತೆಯನ್ನು ತಿಳಿಸಲು ಬಹಳವಾಗಿ ಆಶಿಸುತ್ತೇನೆ.

16 ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ. 17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International