Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 51

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
    ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
    ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15     ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
    ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
    ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.

18 ಚೀಯೋನಿಗೆ ಕರುಣೆತೋರಿ
    ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
    ನಿನಗೆ ಸಂತೋಷವನ್ನು ಉಂಟು ಮಾಡುವರು.
    ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.

ಯೋನ 3

ದೇವರ ಕರೆಗೆ ಯೋನನ ವಿಧೇಯತೆ

ಯೆಹೋವನು ಯೋನನ ಸಂಗಡ ತಿರುಗಿ ಮಾತನಾಡಿದನು. ಆತನು ಹೇಳಿದ್ದೇನೆಂದರೆ, “ಮಹಾನಗರವಾದ ನಿನೆವೆಗೆ ನೀನು ಎದ್ದುಹೋಗಿ ಅಲ್ಲಿ ನಾನು ಹೇಳಿದ್ದನ್ನು ಅವರಿಗೆ ಸಾರು.”

ಯೋನನು ಯೆಹೋವನ ಆಜ್ಞೆಗೆ ವಿಧೇಯನಾಗಿ ನಿನೆವೆಗೆ ಬಂದನು. ನಿನೆವೆಯು ಬಹು ವಿಶಾಲವಾದ ಪಟ್ಟಣ. ಅದು ಮೂರು ದಿನಗಳ ಪ್ರಯಾಣದಷ್ಟು ದೊಡ್ಡದಿತ್ತು.

ಯೋನನು ನಗರದ ಮಧ್ಯಕ್ಕೆ ಹೋಗಿ ಜನರಿಗೆ ಸಾರಲಿಕ್ಕೆ ಪ್ರಾರಂಭಿಸಿದನು. “ನಲವತ್ತು ದಿನಗಳು ಕಳೆದ ಬಳಿಕ ನಿನೆವೆಯು ನಾಶವಾಗುವದು” ಎಂದು ಜನರಿಗೆ ಸಾರಿದನು.

ನಿನೆವೆಯ ಜನರು ದೇವರಿಂದ ಬಂದ ಸಂದೇಶವನ್ನು ನಂಬಿದರು. ಆ ಜನರು ತಮ್ಮ ಪಾಪಗಳ ಕುರಿತು ಯೋಚಿಸಲು ಉಪವಾಸ ಮಾಡಿದರು. ತಮ್ಮ ಪಶ್ಚಾತ್ತಾಪಕ್ಕೆ ಗುರುತಾಗಿ ಶೋಕವಸ್ತ್ರವನ್ನು ಧರಿಸಿದರು. ನಗರದ ಎಲ್ಲಾ ಜನರು ಹೀಗೆ ಮಾಡಿದರು. ಉನ್ನತ ಅಧಿಕಾರಿಗಳಿಂದ ಹಿಡಿದು ಕೀಳು ಜನರ ತನಕ ಹಾಗೆ ಮಾಡಿದರು.

ನಿನೆವೆಯ ಅರಸನು ಇದನ್ನು ಕೇಳಿ ತಾನು ಮಾಡಿದ ದುಷ್ಕೃತ್ಯಗಳಿಗಾಗಿ ಮನಮರುಗಿದನು. ತಾನು ಸಿಂಹಾಸನದಿಂದಿಳಿದು ರಾಜವಸ್ತ್ರವನ್ನು ತೆಗೆದಿಟ್ಟು ಶೋಕವಸ್ತ್ರವನ್ನು ಧರಿಸಿ ಬೂದಿಯ ಮೇಲೆ ಕುಳಿತುಕೊಂಡನು. ತನ್ನ ಪ್ರಜೆಗಳಿಗೆ ಒಂದು ವಿಶೇಷ ಸಂದೇಶವನ್ನು ಬರೆಯಿಸಿ ನಗರದಲ್ಲೆಲ್ಲಾ ಪ್ರಚುರಪಡಿಸಿದನು. ಅದರಲ್ಲಿ ಹೀಗೆ ಬರೆದಿತ್ತು.

ಇದು ಅರಸನ ಮತ್ತು ಆತನ ಆಡಳಿತಗಾರರ ಆಜ್ಞೆ:

ಸ್ವಲ್ಪ ಸಮಯದವರೆಗೆ ಯಾವ ವ್ಯಕ್ತಯಾಗಲಿ ಪ್ರಾಣಿಯಾಗಲಿ ಆಹಾರವನ್ನು ತೆಗೆದುಕೊಳ್ಳಬಾರದು. ಮಂದೆಯಾಗಲಿ, ಹಿಂಡಾಗಲಿ ಹುಲ್ಲುಗಾವಲಿಗೆ ಹೋಗಬಾರದು. ನಿನೆವೆಯಲ್ಲಿ ವಾಸಿಸುವ ಯಾರೂ ಊಟಮಾಡಬಾರದು, ನೀರು ಕುಡಿಯಬಾರದು. ಪ್ರತಿ ಮನುಷ್ಯನೂ ಪ್ರಾಣಿಯೂ ಶೋಕವಸ್ತ್ರವನ್ನು ಧರಿಸಬೇಕು. ಜನರು ದೇವರಿಗೆ ಗಟ್ಟಿಯಾಗಿ ಮೊರೆಯಿಡಬೇಕು. ಪ್ರತಿಯೊಬ್ಬನು ತನ್ನ ದುಷ್ಟಜೀವಿತವನ್ನು ಬದಲಾಯಿಸಿ ದುಷ್ಟತನ ಮಾಡುವದನ್ನು ನಿಲ್ಲಿಸಬೇಕು. ಒಂದುವೇಳೆ ದೇವರು ತನ್ನ ಮನಸ್ಸನ್ನು ಬದಲಾಯಿಸಾನು. ತಾನು ಯೋಚಿಸಿದ್ದನ್ನು ನೆರವೇರಿಸದೆ ಇರುವನೋ ಏನೋ? ಆತನು ತನ್ನ ಯೋಜನೆಯನ್ನು ಹಿಂದೆಗೆದು, ಕೋಪಿಸಿಕೊಳ್ಳದೆ, ನಮ್ಮನ್ನು ಶಿಕ್ಷಿಸದೆ ಇರುವನೋ ಏನೋ! ಆಗ ನಾವು ನಾಶವಾಗದಿರಬಹುದು!

10 ಜನರು ಮಾಡಿದವುಗಳನ್ನು ದೇವರು ನೋಡಿದನು; ಅವರು ದುಷ್ಟತನ ಮಾಡುವದನ್ನು ನಿಲ್ಲಿಸಿದ್ದನ್ನು ಗಮನಿಸಿದನು. ಆತನು ಅವರನ್ನು ದಂಡಿಸಲಿಲ್ಲ.

ರೋಮ್ನಗರದವರಿಗೆ 1:1-7

ಕ್ರಿಸ್ತ ಯೇಸುವಿನ ಸೇವಕನಾದ ಪೌಲನು ಬರೆಯುವ ಪತ್ರ.

ದೇವರು ನನ್ನನ್ನು ಅಪೊಸ್ತಲನಾಗುವುದಕ್ಕೆ[a] ಕರೆದನು. ದೇವರ ಸುವಾರ್ತೆಯನ್ನು ಎಲ್ಲಾ ಜನರಿಗೆ ತಿಳಿಸುವುದಕ್ಕಾಗಿ ನಾನು ಆರಿಸಲ್ಪಟ್ಟೆನು. ದೇವರು ತನ್ನ ಜನರಿಗೆ ಈ ಸುವಾರ್ತೆಯನ್ನು ಕೊಡುವುದಾಗಿ ಬಹುಕಾಲದ ಹಿಂದೆಯೇ ತನ್ನ ಪ್ರವಾದಿಗಳ ಮೂಲಕ ಪವಿತ್ರ ಗ್ರಂಥದಲ್ಲಿ ವಾಗ್ದಾನ ಮಾಡಿದ್ದನು. 3-4 ದೇವರ ಮಗನೂ ನಮ್ಮ ಪ್ರಭುವೂ ಆಗಿರುವ ಯೇಸು ಕ್ರಿಸ್ತನ ವಿಷಯವೇ ಆ ಸುವಾರ್ತೆ. ಮನುಷ್ಯತ್ವದ ಮಟ್ಟಿಗೆ ಆತನು ದಾವೀದನ[b] ಕುಟುಂಬದಲ್ಲಿ ಹುಟ್ಟಿದನು. ಆದರೆ ಯೇಸು ಪರಿಶುದ್ಧ ಆತ್ಮನ ಮೂಲಕ ಮಹಾಶಕ್ತಿಯೊಡನೆ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದು ತಾನೇ ದೇವರ ಮಗನೆಂಬುದನ್ನು ತೋರಿಸಿಕೊಟ್ಟನು.

ದೇವರು ಕ್ರಿಸ್ತನ ಮೂಲಕವಾಗಿ ನನಗೆ ಅಪೊಸ್ತಲನೆಂಬ ವಿಶೇಷ ಕೆಲಸವನ್ನು ಕೊಟ್ಟನು. ದೇವರಲ್ಲಿ ನಂಬಿಕೆಯಿಡುವಂತೆಯೂ ದೇವರಿಗೆ ವಿಧೇಯರಾಗುವಂತೆಯೂ ಎಲ್ಲಾ ಜನಾಂಗಗಳ ಜನರನ್ನು ನಡೆಸಬೇಕೆಂದು ದೇವರು ನನಗೆ ಈ ಕೆಲಸವನ್ನು ಕೊಟ್ಟನು. ನಾನು ಈ ಕೆಲಸವನ್ನು ಕ್ರಿಸ್ತನಿಗಾಗಿ ಮಾಡುತ್ತೇನೆ. ರೋಮಿನಲ್ಲಿರುವ ನೀವು ಸಹ ಯೇಸು ಕ್ರಿಸ್ತನವರಾಗುವುದಕ್ಕಾಗಿ ಕರೆಯಲ್ಪಟ್ಟಿದ್ದೀರಿ.

ರೋಮಿನಲ್ಲಿರುವವರೂ ದೇವರ ಪವಿತ್ರ ಜನರಾಗಿರುವುದಕ್ಕಾಗಿ ದೇವರಿಂದಲೇ ಕರೆಯಲ್ಪಟ್ಟವರೂ ಆಗಿರುವ ನಿಮ್ಮೆಲ್ಲರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರಿಗೆ ಪ್ರಿಯರಾದ ಜನರಾಗಿದ್ದೀರಿ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International