Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೋವೇಲ 2:1-2

ಬರಲಿಕ್ಕಿರುವ ಯೆಹೋವನ ದಿನ

ಚೀಯೋನಿನಲ್ಲಿ ತುತ್ತೂರಿಯನ್ನೂದಿರಿ.
    ನನ್ನ ಪವಿತ್ರ ಪರ್ವತದಲ್ಲಿ ಧ್ವನಿಯೆತ್ತಿ ಎಚ್ಚರಿಕೆ ನೀಡಿರಿ.
ದೇಶದಲ್ಲಿ ವಾಸಿಸುವ ಎಲ್ಲಾ ಜನರು ಭಯದಿಂದ ನಡುಗಲಿ.
    ಯೆಹೋವನ ಮಹಾದಿನವು ಬರಲಿದೆ;
    ಯೆಹೋವನ ಮಹಾದಿನವು ಹತ್ತಿರವೇ ಇದೆ.
ಆ ದಿನವು ಕರಾಳ ದಿನ.
    ಮೋಡದಿಂದ ತುಂಬಿದ ದಿನವಾಗಿದೆ.
ಅಂದು ಸೂರ್ಯೋದಯದ ಸಮಯದಲ್ಲಿ ಪರ್ವತದಲ್ಲಿ ಹರಡಿದ ಸೈನ್ಯವನ್ನು ನೀವು ನೋಡುವಿರಿ.
    ಅದು ಬಲಿಷ್ಠವಾದ ಮಹಾಸೈನ್ಯ.
ಅಂಥ ಸೈನ್ಯವು ಹಿಂದೆಂದೂ ಇರಲಿಲ್ಲ.
    ಇನ್ನು ಮುಂದೆಯೂ ಇರುವುದಿಲ್ಲ.

ಯೋವೇಲ 2:12-17

ಜನರು ಬದಲಾಗಬೇಕೆಂದು ಯೆಹೋವನು ಹೇಳುತ್ತಾನೆ

12 ಇದು ಯೆಹೋವನ ಸಂದೇಶ:
    “ನಿಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಬನ್ನಿರಿ,
ನೀವು ದುಷ್ಟತ್ವವನ್ನು ನಡಿಸಿರುವದರಿಂದ ದುಃಖಿಸಿರಿ,
    ಅಳಿರಿ, ಉಪವಾಸ ಮಾಡಿರಿ.
13 ನಿಮ್ಮ ಬಟ್ಟೆಗಳನ್ನಲ್ಲ,
    ಹೃದಯವನ್ನು ಹರಿಯಿರಿ.”
ನಿಮ್ಮ ದೇವರಾದ ಯೆಹೋವನ ಬಳಿಗೆ ಬನ್ನಿರಿ.
    ಆತನು ದಯಾಪರನೂ ಕನಿಕರವುಳ್ಳವನೂ ಆಗಿದ್ದಾನೆ.
ಆತನು ಬೇಗನೆ ಕೋಪಿಸುವುದಿಲ್ಲ.
    ಆತನಲ್ಲಿ ಆಳವಾದ ಪ್ರೀತಿ ಇದೆ.
ಆತನು ಯೋಚಿಸಿದ ಶಿಕ್ಷೆಯನ್ನು ಒಂದುವೇಳೆ ನಿಮಗೆ ಕೊಡದೆ
    ತನ್ನ ಮನಸ್ಸನ್ನು ಬದಲಾಯಿಸಬಹುದು.
14 ಒಂದುವೇಳೆ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿದರೂ ಬದಲಾಯಿಸಬಹುದು.
    ಒಂದುವೇಳೆ ಆತನು ನಿಮಗಾಗಿ ಆಶೀರ್ವಾದವನ್ನು ಬಿಟ್ಟುಹೋಗಬಹುದು.
ಆಗ ನೀವು ದೇವರಾದ ಯೆಹೋವನಿಗೆ ಧಾನ್ಯ
    ಮತ್ತು ಪಾನಸಮರ್ಪಣೆ ಮಾಡುವಿರಿ.

ಯೆಹೋವನಿಗೆ ಪ್ರಾರ್ಥಿಸಿರಿ

15 ಚೀಯೋನಿನಲ್ಲಿ ತುತ್ತೂರಿ ಊದಿರಿ.
    ವಿಶೇಷ ಕೂಟಕ್ಕಾಗಿ ಜನರನ್ನು ಕೂಡಿಸಿರಿ.
    ಉಪವಾಸದ ದಿನ ಗೊತ್ತುಮಾಡಿರಿ.
16 ವಿಶೇಷ ಕೂಟಕ್ಕಾಗಿ
    ಜನರನ್ನು ಒಟ್ಟಾಗಿ ಕೂಡಿಸಿರಿ.
ಪ್ರಾಯಸ್ಥರನ್ನು ಕೂಡಿಸಿರಿ.
    ಮಕ್ಕಳನ್ನೂ ಕೂಡಿಸಿರಿ.
    ಮೊಲೆಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ.
ವಧುವರರು ತಮ್ಮ
    ಶೋಭನದ ಕೋಣೆಯಿಂದ ಹೊರಬರಲಿ.
17 ಯೆಹೋವನ ಸೇವಕರಾದ ಯಾಜಕರು
    ಮಂಟಪಕ್ಕೂ ವೇದಿಕೆಗೂ ಮಧ್ಯದಲ್ಲಿ ಗೋಳಾಡಲಿ.
ಆ ಜನರೆಲ್ಲಾ ಹೀಗೆ ಹೇಳಬೇಕು, “ಯೆಹೋವನೇ, ನಿನ್ನ ಜನರ ಮೇಲೆ ಕರುಣೆ ಇಡು,
    ನಿನ್ನ ಜನರನ್ನು ನಾಚಿಕೆಗೆ ತುತ್ತಾಗುವಂತೆ ಮಾಡಬೇಡ.
    ನಿನ್ನ ಜನರ ವಿಷಯವಾಗಿ ಅನ್ಯಜನರು ಗೇಲಿ ಮಾಡದಿರಲಿ.
ಇತರ ದೇಶದ ಜನರು ನಮಗೆ ಹಾಸ್ಯ ಮಾಡುತ್ತಾ,
    ‘ಅವರ ದೇವರು ಎಲ್ಲಿ?’ ಎಂದು ಹೇಳದ ಹಾಗೆ ಮಾಡು.”

ಯೆಶಾಯ 58:1-12

ದೇವರನ್ನು ಅನುಸರಿಸಲು ಜನರಿಗೆ ಉಪದೇಶ

58 ಎಷ್ಟು ಗಟ್ಟಿಯಾಗಿ ಆರ್ಭಟಿಸಬಹುದೋ ಅಷ್ಟು ಆರ್ಭಟಿಸಿರಿ, ನಿಲ್ಲಿಸಬೇಡಿರಿ.
    ತುತ್ತೂರಿಯಂತೆ ಗಟ್ಟಿಯಾಗಿ ಕಿರುಚಿರಿ.
ಜನರು ಮಾಡಿದ ಪಾಪಗಳನ್ನು ಅವರಿಗೆ ತಿಳಿಸಿರಿ.
    ಯಾಕೋಬನ ವಂಶದವರಿಗೆ ಅವರ ಪಾಪಗಳನ್ನು ತಿಳಿಸಿರಿ.
ಆಗ ಅವರು ದಿನನಿತ್ಯ ನನ್ನನ್ನು ಆರಾಧಿಸಲು ಬರುವರು.
    ಜನರು ನನ್ನ ವಿಧಿಗಳನ್ನು ಕಲಿತುಕೊಳ್ಳಲು ಇಷ್ಟಪಡುವರು.
ಆಗ ಅವರು ಸರಿಯಾಗಿ ಜೀವಿಸುವ ಜನಾಂಗವಾಗುವರು.
    ಅವರು ದೇವರ ಒಳ್ಳೆಯ ಆಜ್ಞೆಗಳನ್ನು ಬಿಡದೆ ಅನುಸರಿಸುವರು.
ಅವರು ಪಕ್ಷಪಾತವಿಲ್ಲದೆ ನ್ಯಾಯತೀರಿಸಲು ನನ್ನನ್ನು ಕೇಳುವರು.
    ದೇವರ ನಿರ್ಧಾರವನ್ನು ಕೇಳಲು ಆತನ ಬಳಿಗೆ ಹೋಗಲು ಇಚ್ಛಿಸುವರು.

ಈಗ ಆ ಜನರು ಹೀಗೆ ಹೇಳುತ್ತಾರೆ, “ನಾವು ನಿನ್ನನ್ನು ಗೌರವಿಸಲು ಉಪವಾಸಮಾಡಿದೆವು. ನೀನು ನಮ್ಮನ್ನೇಕೆ ಗಮನಿಸುವದಿಲ್ಲ? ನಿನ್ನನ್ನು ಗೌರವಿಸುವದಕ್ಕಾಗಿ ನಾವು ನಮ್ಮ ದೇಹಗಳನ್ನು ದಂಡಿಸಿದೆವು. ನೀನೇಕೆ ನಮ್ಮನ್ನು ಗಮನಿಸುವದಿಲ್ಲ?”

ಆದರೆ ಯೆಹೋವನು ಹೇಳುವುದೇನೆಂದರೆ: “ವಿಶೇಷ ದಿವಸಗಳಲ್ಲಿ ನಿಮ್ಮ ಇಷ್ಟಾನುಸಾರ[a] ಉಪವಾಸ ಮಾಡುವಿರಿ. ನೀವು ನಿಮ್ಮ ಸ್ವಂತ ದೇಹಗಳನ್ನು ದಂಡಿಸದೆ ನಿಮ್ಮ ಸೇವಕರನ್ನು ದಂಡಿಸುತ್ತಿದ್ದೀರಿ. ನೀವು ಆಹಾರಕ್ಕಾಗಿ ಹಸಿವೆಯಿಂದಿಲ್ಲ. ನೀವು ಜಗಳ, ವಾಗ್ವಾದಕ್ಕಾಗಿ ಹಸಿದಿದ್ದೀರಿ. ನಿಮ್ಮ ಕ್ರೂರ ಕೈಗಳಿಂದ ಜನರನ್ನು ಹೊಡೆಯಲು ಹಸಿವೆಯಿಂದಿದ್ದೀರಿ. ನೀವು ಉಪವಾಸ ಮಾಡುವಾಗ ನನಗಾಗಿ ಮಾಡುವದಿಲ್ಲ. ನನ್ನನ್ನು ಸ್ತುತಿಸಲು ನೀವು ನಿಮ್ಮ ಸ್ವರವನ್ನು ಉಪಯೋಗಿಸುವದಿಲ್ಲ. ಉಪವಾಸದ ದಿವಸಗಳಲ್ಲಿ ಜನರು ತಮ್ಮ ದೇಹದಂಡನೆ ಮಾಡುವದನ್ನು ನೋಡಲು ಆಶಿಸುತ್ತೇನೆ ಎಂದು ನೆನಸಿರುವಿರಾ? ಜನರು ತಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಕೆಂದು ನಾನು ಆಶಿಸುವುದಾಗಿ ನೀವು ತಿಳಿದುಕೊಂಡಿದ್ದೀರಾ? ಜನರು ಸತ್ತ ಸಸಿಗಳಂತೆ ನನಗೆ ಅಡ್ಡಬೀಳಬೇಕೆಂದೂ ಶೋಕವಸ್ತ್ರಗಳನ್ನು ಧರಿಸಬೇಕೆಂದೂ ನಾನು ಆಶಿಸುವುದಾಗಿ ತಿಳಿದುಕೊಂಡಿದ್ದೀರಾ? ಅವರು ಬೂದಿಯ ಮೇಲೆ ಕುಳಿತುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಬೇಕೆಂದು ನಾನು ಆಶಿಸುತ್ತೇನೋ? ನೀವು ಉಪವಾಸದ ದಿವಸಗಳಲ್ಲಿ ಅದನ್ನೇ ಮಾಡುವವರಾಗಿರುತ್ತೀರಿ. ಯೆಹೋವನು ಅದನ್ನೇ ಆಶಿಸುವನೆಂದು ನಂಬುತ್ತೀರೋ?

“ನನಗೆ ಬೇಕಾಗಿರುವ ವಿಶೇಷ ದಿವಸ ಯಾವುದೆಂದು ನಾನು ಹೇಳುತ್ತೇನೆ. ಅದು ಜನರನ್ನು ಸ್ವತಂತ್ರರನ್ನಾಗಿ ಮಾಡುವ ದಿವಸ, ಜನರಿಂದ ಅವರ ಭಾರವನ್ನು ತೆಗೆದುಹಾಕುವ ದಿವಸ; ತೊಂದರೆಗೀಡಾಗಿರುವ ಜನರನ್ನು ವಿಮುಕ್ತರನ್ನಾಗಿ ಮಾಡುವ ದಿವಸ; ಅವರ ಹೆಗಲಿನಿಂದ ಭಾರದ ಹೊರೆಯನ್ನು ಇಳಿಸುವ ದಿವಸ. ನೀವು ನಿಮ್ಮ ಊಟವನ್ನು ಹಸಿದವರೊಂದಿಗೆ ಹಂಚಿಕೊಳ್ಳುವದನ್ನು ನಾನು ನೋಡಲು ಆಶಿಸುತ್ತೇನೆ. ಮನೆಗಳಿಲ್ಲದ ಬಡ ಜನರನ್ನು ಕಂಡುಹಿಡಿದು ಅವರನ್ನು ನಿಮ್ಮ ಮನೆಗಳಿಗೆ ಕರೆದುಕೊಂಡು ಬರುವದನ್ನು ನೋಡಲು ಆಶಿಸುತ್ತೇನೆ. ಬಟ್ಟೆ ಇಲ್ಲದ ಒಬ್ಬ ಮನುಷ್ಯನನ್ನು ನೋಡಿದರೆ ನೀವು ನಿಮ್ಮ ಬಟ್ಟೆಯನ್ನು ಅವನಿಗೆ ಕೊಡಿರಿ. ಅವರಿಗೆ ಸಹಾಯ ಮಾಡಲು ಹಿಂಜರಿಯಬೇಡಿರಿ. ಅವರು ನಿಮ್ಮಂತೆ ಮನುಷ್ಯರಲ್ಲವೋ?”

ನೀವು ಹೀಗೆ ಮಾಡಿದ್ದಲ್ಲಿ ನೀವು ಬೆಳಕಿನಂತೆ ಪ್ರಕಾಶಿಸುವಿರಿ. ಆಗ ನಿಮ್ಮ ಗಾಯಗಳು ಗುಣವಾಗುವವು. ನಿಮ್ಮ ಒಳ್ಳೆಯತನವು ನಿಮ್ಮ ಮುಂದೆ ನಡೆಯುವುದು. ಯೆಹೋವನ ಮಹಿಮೆಯು ನಿಮ್ಮ ಹಿಂದಿನಿಂದ ನಿಮ್ಮನ್ನು ಹಿಂಬಾಲಿಸುವದು. ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು.

ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು. 10 ಹಸಿದ ಜನರಿಗಾಗಿ ವ್ಯಸನಪಟ್ಟು ಅವರಿಗೆ ಆಹಾರವನ್ನು ಕೊಡಬೇಕು. ಸಂಕಷ್ಟ ಅನುಭವಿಸುವ ಜನರಿಗೆ ಸಹಾಯಮಾಡಿ ಅವರ ಕೊರತೆಗಳನ್ನು ನೀಗಿಸಬೇಕು. ಆಗ ನಿಮ್ಮ ಬೆಳಕು ಕತ್ತಲಲ್ಲಿ ಪ್ರಕಾಶಿಸುವದು. ನಿಮಗೆ ಆಗ ದುಃಖವಿರದು. ಮಧಾಹ್ನದ ಸೂರ್ಯನಂತೆ ನೀವು ಹೊಳೆಯುವಿರಿ.

11 ಯೆಹೋವನು ಯಾವಾಗಲೂ ನಿಮ್ಮನ್ನು ನಡೆಸುವನು. ಒಣನೆಲದಲ್ಲಿ ನಿಮ್ಮ ಆತ್ಮಗಳನ್ನು ತೃಪ್ತಿಪಡಿಸುವನು. ನಿಮ್ಮ ಎಲುಬುಗಳಿಗೆ ಬಲವನ್ನು ಕೊಡುವನು. ನೀರಿನಿಂದ ತೇವವಾಗಿರುವ ತೋಟದಂತೆ ನೀವು ಇರುವಿರಿ. ನಿತ್ಯವೂ ನೀರಿರುವ ಬುಗ್ಗೆಯಂತೆ ನೀವಿರುವಿರಿ.

12 ಬಹಳ ವರ್ಷಗಳಿಂದ ನಿಮ್ಮ ಪಟ್ಟಣಗಳು ಹಾಳಾಗಿ ಬಿದ್ದಿವೆ. ಆದರೆ ಹೊಸ ಪಟ್ಟಣಗಳು ಏಳುವವು. ಅವುಗಳ ಅಸ್ತಿವಾರಗಳು ಬಹಳ ವರ್ಷ ಬಾಳುವವು. ನೀವು “ಬೇಲಿ ಸರಿಮಾಡುವವರು” ಎಂದು ಕರೆಯಲ್ಪಡುವಿರಿ; “ಮನೆಗಳನ್ನು, ರಸ್ತೆಗಳನ್ನು ನಿರ್ಮಿಸುವವರು” ಎಂದು ನೀವು ಕರೆಯಲ್ಪಡುವಿರಿ.

ಕೀರ್ತನೆಗಳು 51:1-17

ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
    ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
ನನ್ನ ದೋಷವನ್ನು ತೊಳೆದುಬಿಡು.
    ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
    ಆ ಪಾಪಗಳು ನನ್ನ ಮುಂದೆಯೇ ಇವೆ.
ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
    ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
    ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
    ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
ಹುಟ್ಟಿದಂದಿನಿಂದ ನಾನು ಪಾಪಿಯೇ.
    ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
    ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
    ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
    ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
ನನ್ನ ಪಾಪಗಳನ್ನು ನೋಡಬೇಡ!
    ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
    ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
    ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
    ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
    ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
    ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15     ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
    ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
    ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.

2 ಕೊರಿಂಥದವರಿಗೆ 5:20-6:10

20 ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ. 21 ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.

ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. ದೇವರು ಹೀಗೆನ್ನುತ್ತಾನೆ:

“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
    ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)

ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”

ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.

ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.

ಮತ್ತಾಯ 6:1-6

ಕೊಡುವುದರ ಕುರಿತು ಯೇಸುವಿನ ಉಪದೇಶ

“ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.

“ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ. ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ. ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಲೂಕ 11:2-4)

“ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.

ಮತ್ತಾಯ 6:16-21

ಉಪವಾಸದ ಕುರಿತು ಯೇಸುವಿನ ಉಪದೇಶ

16 “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ. 18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.

ಹಣಕ್ಕಿಂತ ದೇವರೇ ಬಹು ಮುಖ್ಯ

(ಲೂಕ 12:33-34; 11:34-36; 16:13)

19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು. 20 ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ, ಕಳ್ಳರು ಕನ್ನಕೊರೆದು ಕದಿಯುವುದಿಲ್ಲ. 21 ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International