Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:17-20

17 ಆದರೂ ಅವರು ಅರಣ್ಯದಲ್ಲಿ
    ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
    ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
    “ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
    ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.

ಕೀರ್ತನೆಗಳು 78:52-55

52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
    ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
    ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
    ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
    ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
    ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
    ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.

1 ರಾಜರುಗಳು 19:9-18

ಎಲೀಯನು ಅಲ್ಲಿನ ಒಂದು ಗುಹೆಗೆ ಹೋಗಿ ರಾತ್ರಿಯೆಲ್ಲಾ ಅಲ್ಲಿ ಕಳೆದನು.

ಆಗ ಯೆಹೋವನು ಎಲೀಯನೊಂದಿಗೆ ಮಾತನಾಡಿ, “ಎಲೀಯನೇ, ನೀನು ಇಲ್ಲಿರುವುದೇಕೆ?” ಎಂದು ಕೇಳಿದನು.

10 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.

11 ಆಗ ಯೆಹೋವನು ಎಲೀಯನಿಗೆ, “ಹೋಗು, ನನ್ನ ಎದುರಿಗೆ ಬೆಟ್ಟದ ಮೇಲೆ ನಿಲ್ಲು. ನಾನು ನಿನ್ನ ಬಳಿಯಲ್ಲಿ ಹಾದು ಹೋಗುತ್ತೇನೆ” ಎಂದು ಹೇಳಿದನು. ಆಗ ಬಿರುಗಾಳಿಯು ಬೀಸಿತು. ಆ ಬಿರುಗಾಳಿಯು ಬೆಟ್ಟಗಳನ್ನು ಸೀಳಿಹಾಕಿತು; ಅದು ದೊಡ್ಡ ಬಂಡೆಗಳನ್ನು ಯೆಹೋವನ ಎದುರಿನಲ್ಲಿ ಒಡೆದುಹಾಕಿತು. ಆದರೆ ಆ ಗಾಳಿಯೇ ಯೆಹೋವನಲ್ಲ! ಆ ಬಿರುಗಾಳಿಯ ನಂತರ ಅಲ್ಲಿ ಒಂದು ಭೂಕಂಪವುಂಟಾಯಿತು. ಆದರೆ ಆ ಭೂಕಂಪವು ಯೆಹೋವನಲ್ಲ. 12 ಭೂಕಂಪದ ನಂತರ ಅಲ್ಲಿ ಬೆಂಕಿ ಉಂಟಾಯಿತು. ಆದರೆ ಆ ಬೆಂಕಿಯೂ ಯೆಹೋವನಲ್ಲ. ಆ ಬೆಂಕಿಯ ನಂತರ ಸದ್ದಿಲ್ಲದ ಮೃದುವಾದ ಧ್ವನಿ ಉಂಟಾಯಿತು.

13 ಎಲೀಯನಿಗೆ ಆ ಧ್ವನಿಯು ಕೇಳಿಸಿದಾಗ, ಅವನು ತನ್ನ ಮೇಲಂಗಿಯಿಂದ ಮುಖವನ್ನು ಮುಚ್ಚಿಕೊಂಡನು. ನಂತರ ಅವನು ಗುಹೆಯ ಹತ್ತಿರಕ್ಕೆ ಹೋಗಿ, ಅದರ ದ್ವಾರದಲ್ಲಿ ನಿಂತುಕೊಂಡನು. ಆಗ ಆ ಧ್ವನಿಯು, “ಎಲೀಯನೇ, ನೀನು ಏಕೆ ಇಲ್ಲಿರುವೆ?” ಎಂದು ಅವನನ್ನು ಕೇಳಿತು.

14 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.

15 ಯೆಹೋವನು, “ನೀನು ಬಂದ ದಾರಿಯಿಂದ ಹಿಂತಿರುಗಿ ದಮಸ್ಕದ ಅರಣ್ಯಕ್ಕೆ ಹೋಗು. ಅಲ್ಲಿಂದ ದಮಸ್ಕಕ್ಕೆ ಹೋಗಿ, ಹಜಾಯೇಲನನ್ನು ಅರಾಮ್ಯರ ರಾಜನನ್ನಾಗಿ ಅಭಿಷೇಕಿಸು. 16 ನಂತರ ನಿಂಷಿಯ ಮಗನಾದ ಯೇಹುವನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸು. ಅಬೇಲ್ ಮೆಹೋಲದ ಶಾಫಾಟನ ಮಗನಾದ ಎಲೀಷನನ್ನು ನಿನ್ನ ಜಾಗದಲ್ಲಿ ಪ್ರವಾದಿಯನ್ನಾಗಿ ಅಭಿಷೇಕಿಸು. 17 ಹಜಾಯೇಲನು ಕೆಟ್ಟವರಾದ ಅನೇಕ ಜನರನ್ನು ಕೊಲ್ಲುತ್ತಾನೆ. ಹಜಾಯೇಲನ ಖಡ್ಗದಿಂದ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುತ್ತಾನೆ. ಯೇಹುವಿನಿಂದ ತಪ್ಪಿಸಿಕೊಂಡ ಆ ಕೆಟ್ಟ ಜನರನ್ನೆಲ್ಲ ಎಲೀಷನು ಕೊಲ್ಲುತ್ತಾನೆ. 18 ಎಲೀಯನೇ, ಇಸ್ರೇಲಿನಲ್ಲಿ ನಂಬಿಗಸ್ಥನಾದ ವ್ಯಕ್ತಿಯು ನೀನೊಬ್ಬನು ಮಾತ್ರ ಅಲ್ಲ. ಆ ದುಷ್ಟಜನರು ಅನೇಕ ಜನರನ್ನು ಕೊಲ್ಲುತ್ತಾರೆ. ಆದರೂ, ಅದಾದ ನಂತರ, ಬಾಳನಿಗೆ ಎಂದೆಂದೂ ಬಾಗಿ ನಮಸ್ಕರಿಸದಿರುವ ಏಳು ಸಾವಿರ ಜನರು ಇನ್ನೂ ಇಸ್ರೇಲಿನಲ್ಲಿ ವಾಸಮಾಡುತ್ತಿದ್ದಾರೆ! ಬಾಳನ ವಿಗ್ರಹಕ್ಕೆ ಎಂದೂ ಮುದ್ದಿಡದ ಆ ಏಳು ಸಾವಿರ ಜನರನ್ನು ನಾನು ಅಲ್ಲಿ ಉಳಿಸುವೆನು.”

ರೋಮ್ನಗರದವರಿಗೆ 11:1-6

ದೇವರು ತನ್ನ ಜನರನ್ನು ಮರೆತಿಲ್ಲ

11 ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ. ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ. ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ”(A) ಎಂದು ಪ್ರಾರ್ಥಿಸಿದನು. ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ”(B) ಎಂದು ಉತ್ತರಕೊಟ್ಟನು.

ಈಗಲೂ ಅದರಂತೆಯೇ ಆಗಿದೆ. ದೇವರು ತನ್ನ ಕೃಪೆಯ ಮೂಲಕ ಆರಿಸಿಕೊಂಡಿರುವ ಕೆಲವು ಜನರು ಇದ್ದಾರೆ. ದೇವರ ಕೃಪೆಯ ಮೂಲಕ ಆರಿಸಲ್ಪಟ್ಟಿರುವ ಅವರು ದೇವರ ಮಕ್ಕಳಾದದ್ದು ತಮ್ಮ ಕ್ರಿಯೆಗಳಿಂದಲ್ಲ. ಇಲ್ಲದಿದ್ದರೆ, ದೇವರ ಕೃಪಾವರವು ಕೃಪಾವರವೆನಿಸಿಕೊಳ್ಳುತ್ತಿರಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International