Revised Common Lectionary (Semicontinuous)
17 ಆದರೂ ಅವರು ಅರಣ್ಯದಲ್ಲಿ
ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
“ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
52 ಬಳಿಕ ಆತನು ಕುರುಬನಂತೆ ಇಸ್ರೇಲನ್ನು ನಡೆಸಿದನು.
ಆತನು ತನ್ನ ಜನರನ್ನು ಕುರಿಗಳಂತೆ ಅರಣ್ಯದಲ್ಲಿ ನಡೆಸಿದನು.
53 ಆತನು ಅವರಿಗೆ ಮಾರ್ಗದರ್ಶನ ಮಾಡುತ್ತಾ
ಸುರಕ್ಷಿತವಾಗಿ ಮುನ್ನಡೆಸಿದನು.
ಆತನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರಲಿಲ್ಲ.
ಅವರ ಶತ್ರುಗಳನ್ನು ಆತನು ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ
ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.
55 ಆ ನಾಡಿನ ಜನಾಂಗಗಳನ್ನು ಆತನು ಬಲವಂತವಾಗಿ ಹೊರಗಟ್ಟಿದನು.
ಆತನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಆ ನಾಡಿನಲ್ಲಿ ಪಾಲುಕೊಟ್ಟನು;
ಆ ನಾಡಿನ ಮನೆಗಳಲ್ಲಿ ಅವರನ್ನು ನೆಲೆಗೊಳಿಸಿದನು.
ತಾತ್ಕಾಲಿಕ ದೇವದರ್ಶನಗುಡಾರ
7 ಮೋಶೆಯು ಗುಡಾರವನ್ನು ಪಾಳೆಯದ ಹೊರಗೆ ಸ್ವಲ್ಪದೂರ ತೆಗೆದುಕೊಂಡು ಹೋಗುತ್ತಿದ್ದನು. ಮೋಶೆಯು ಅದನ್ನು, “ದೇವದರ್ಶನದ ಗುಡಾರ” ಎಂದು ಕರೆದನು. ಯೆಹೋವನಿಂದ ಉತ್ತರವನ್ನು ಕೇಳಬೇಕೆಂದು ಬಯಸುವ ವ್ಯಕ್ತಿಯು ಪಾಳೆಯದ ಹೊರಗಿದ್ದ ದೇವದರ್ಶನ ಗುಡಾರಕ್ಕೆ ಹೋಗುತ್ತಿದ್ದನು. 8 ಮೋಶೆಯು ಆ ಗುಡಾರದೊಳಗೆ ಹೋಗುವಾಗ ಜನರೆಲ್ಲರೂ ಅವನನ್ನು ಗಮನಿಸುತ್ತಿದ್ದರು. ಜನರು ತಮ್ಮ ಡೇರೆಗಳ ದ್ವಾರಗಳಲ್ಲಿ ನಿಂತುಕೊಂಡು ಮೋಶೆಯು ದೇವದರ್ಶನಗುಡಾರಕ್ಕೆ ಪ್ರವೇಶಿಸುವವರೆಗೆ ಅವನನ್ನು ಗಮನಿಸುತ್ತಿದ್ದರು. 9 ಮೋಶೆಯು ಗುಡಾರದೊಳಕ್ಕೆ ಹೋದಾಗ ಎತ್ತರವಾದ ಮೇಘಸ್ತಂಭವು ಯಾವಾಗಲೂ ಕೆಳಗಿಳಿಯುತ್ತಿತ್ತು. ಆ ಮೇಘಸ್ತಂಭವು ಗುಡಾರದ ದ್ವಾರದಲ್ಲಿ ನಿಲ್ಲುತ್ತಿತ್ತು. ಹೀಗೆ ಯೆಹೋವನು ಮೋಶೆಯೊಡನೆ ಮಾತಾಡುತ್ತಿದ್ದನು. 10 ಗುಡಾರದ ದ್ವಾರದಲ್ಲಿ ಮೇಘಸ್ತಂಭವಿರುವುದನ್ನು ಜನರು ನೋಡಿದಾಗ, ಅವರು ತಮ್ಮ ಸ್ವಂತ ಡೇರೆಗಳ ದ್ವಾರದಲ್ಲಿ ತಲೆಬಾಗಿ ಯೆಹೋವನನ್ನು ಆರಾಧಿಸುತ್ತಿದ್ದರು.
11 ಯೆಹೋವನು ಮೋಶೆಯೊಂದಿಗೆ ಮುಖಾಮುಖಿಯಾಗಿ ಮಾತಾಡುತ್ತಿದ್ದನು. ಒಬ್ಬನು ತನ್ನ ಸ್ನೇಹಿತನೊಂದಿಗೆ ಮಾತಾಡುವಂತೆ ಯೆಹೋವನು ಮೋಶೆಯೊಂದಿಗೆ ಮಾತಾಡುತ್ತಿದ್ದನು. ಯೆಹೋವನೊಂದಿಗೆ ಮಾತಾಡಿದ ನಂತರ ಮೋಶೆಯು ಪಾಳೆಯಕ್ಕೆ ಮರಳಿ ಹೋಗುತ್ತಿದ್ದನು. ನೂನನ ಮಗನೂ ಯೌವನಸ್ಥನೂ ಆಗಿದ್ದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯು ಗುಡಾರವನ್ನು ಬಿಟ್ಟುಹೋದಾಗ ಯೆಹೋಶುವನು ಗುಡಾರದಲ್ಲಿಯೇ ಇರುತ್ತಿದ್ದನು.
ಮೋಶೆಯು ಯೆಹೋವನ ಮಹಿಮೆಯನ್ನು ನೋಡುವನು
12 ಮೋಶೆಯು ಯೆಹೋವನಿಗೆ, “ಈ ಜನರನ್ನು ಮುನ್ನಡೆಸಬೇಕೆಂದು ನೀನು ನನಗೆ ಹೇಳಿರುವೆ. ಆದರೆ ನನ್ನೊಂದಿಗೆ ಯಾರನ್ನು ಕಳುಹಿಸುತ್ತೀಯೆಂದು ನೀನು ಹೇಳಲಿಲ್ಲ. ನೀನು ನನಗೆ, ‘ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಾನು ನಿನ್ನನ್ನು ಮೆಚ್ಚಿದ್ದೇನೆ’ ಎಂದು ಹೇಳಿದೆ. 13 ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸಿರುವುದಾದರೆ, ನಾನು ನಿನ್ನನ್ನು ತಿಳಿದುಕೊಳ್ಳುವಂತೆ ನಿನ್ನ ಮಾರ್ಗಗಳನ್ನು ಬೋಧಿಸು. ಆಗ ನಾನು ನಿನ್ನನ್ನು ಯಾವಾಗಲೂ ಮೆಚ್ಚಿಸಲು ಸಾಧ್ಯವಾಗುವುದು. ಇವರೆಲ್ಲರೂ ನಿನ್ನ ಜನರೆಂದು ಜ್ಞಾಪಕಮಾಡಿಕೊ” ಎಂದು ವಿಜ್ಞಾಪಿಸಿದನು.
14 ಯೆಹೋವನು “ನಾನೇ ನಿಮ್ಮೊಡನೆ ಬರುವೆನು. ನಾನೇ ನಿಮ್ಮನ್ನು ಮುನ್ನಡೆಸುವೆನು”[a] ಎಂದು ಉತ್ತರಿಸಿದನು.
15 ಆಗ ಮೋಶೆ ಯೆಹೋವನಿಗೆ, “ನೀನು ನಮ್ಮೊಂದಿಗೆ ಬರದಿದ್ದರೆ, ಈ ಸ್ಥಳದಿಂದ ನಮ್ಮನ್ನು ಕಳುಹಿಸಬೇಡ. 16 ಮಾತ್ರವಲ್ಲದೆ ನನಗೂ ಈ ಜನರಿಗೂ ನಿನ್ನ ದಯೆ ದೊರಕಿದೆಯೆಂದು ನಾವು ತಿಳಿದುಕೊಳ್ಳುವುದಾದರೂ ಹೇಗೆ? ನೀನು ನಮ್ಮೊಡನೆ ಬಂದರೆ, ಆಗ ನಾವು ಇದನ್ನು ಖಚಿತವಾಗಿ ತಿಳಿದುಕೊಳ್ಳುವೆವು. ನೀನು ನಮ್ಮೊಡನೆ ಬಾರದಿದ್ದರೆ, ಆಗ ನಮಗೂ ಭೂಮಿಯ ಮೇಲಿರುವ ಇತರ ಜನರಿಗೂ ಯಾವ ವ್ಯತ್ಯಾಸವಿರುವುದಿಲ್ಲ” ಎಂದು ಹೇಳಿದನು.
17 ಆಗ ಯೆಹೋವನು ಮೋಶೆಗೆ, “ನಿನ್ನ ಕೋರಿಕೆಯನ್ನು ಅನುಗ್ರಹಿಸುತ್ತೇನೆ. ನಾನು ನಿನ್ನನ್ನು ಮೆಚ್ಚಿಕೊಂಡದ್ದರಿಂದಲೇ ಇದನ್ನು ಮಾಡುತ್ತೇನೆ. ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು” ಅಂದನು.
18 ಬಳಿಕ ಮೋಶೆ, “ಈಗ ದಯವಿಟ್ಟು ನಿನ್ನ ಮಹಿಮೆಯನ್ನು ನನಗೆ ತೋರಿಸು” ಅಂದನು.
19 ಆಗ ಯೆಹೋವನು “ನನ್ನ ನಾಮದ ಮಹತ್ವವನ್ನು ನಿನ್ನ ಮುಂದೆ ದಾಟಿಹೋಗುವಂತೆ ಮಾಡುವೆನು. ನಾನೇ ಯೆಹೋವನು. ನಿನಗೆ ಕೇಳಿಸುವಂತೆ ನನ್ನ ಹೆಸರನ್ನು ಪ್ರಕಟಿಸುವೆನು. ನಾನು ಆರಿಸಿಕೊಂಡ ಜನರಿಗೆ ದಯೆಯನ್ನೂ ಪ್ರೀತಿಯನ್ನೂ ಅನುಗ್ರಹಿಸುವೆನು. 20 ನನ್ನನ್ನು ಯಾರೂ ಮುಖಾಮುಖಿಯಾಗಿ ಕಾಣಲು ಸಾಧ್ಯವಿಲ್ಲ. ನನ್ನನ್ನು ನೋಡಿದ ಯಾವನೂ ಬದುಕಲಾರನು.
21 “ಇಲ್ಲಿ ಒಂದು ಬಂಡೆ ಇದೆ. ನೀನು ಆ ಬಂಡೆಯ ಮೇಲೆ ನಿಂತುಕೊ. 22 ನನ್ನ ಮಹಿಮೆಯು ಆ ಸ್ಥಳದ ಮೂಲಕ ದಾಟಿಹೋಗುವುದು. ನಾನು ನಿನ್ನನ್ನು ಆ ಬಂಡೆಯ ದೊಡ್ಡದಾದ ಬಿರುಕಿನಲ್ಲಿ ಇರಿಸುವೆನು; ನಾನು ದಾಟಿ ಹೋಗುವಾಗ ನನ್ನ ಕೈಯಿಂದ ನಿನ್ನನ್ನು ಮುಚ್ಚುವೆನು. 23 ಬಳಿಕ ನನ್ನ ಕೈಯನ್ನು ತೆಗೆಯುವೆನು. ಆಗ ನೀನು ನನ್ನ ಹಿಂಭಾಗವನ್ನು ನೋಡುವೆ; ಆದರೆ ನನ್ನ ಮುಖವು ನಿನಗೆ ಕಾಣಿಸದು” ಎಂದು ಉತ್ತರಕೊಟ್ಟನು.
30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.
33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’(B) ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International