Revised Common Lectionary (Semicontinuous)
2 ಅನ್ಯಜನಾಂಗಗಳು ಕೋಪಗೊಂಡಿರುವುದೇಕೆ?
ಅವರು ಮೂರ್ಖತನದ ಸಂಚುಗಳನ್ನು ಮಾಡುತ್ತಿರುವುದೇಕೆ?
2 ಅವುಗಳ ರಾಜರುಗಳೂ ನಾಯಕರುಗಳೂ
ಯೆಹೋವನಿಗೂ ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರೋಧವಾಗಿ ಕೂಡಿಬಂದಿದ್ದಾರೆ.
3 “ದೇವರಿಗೂ ಆತನು ಅಭಿಷೇಕಿಸಿದ ರಾಜನಿಗೂ ವಿರೋಧವಾಗಿ ದಂಗೆ ಎದ್ದು
ಸ್ವತಂತ್ರರಾಗೋಣ” ಎಂದು ಅವರು ಮಾತಾಡಿಕೊಳ್ಳುತ್ತಿದ್ದಾರೆ.
4 ಆದರೆ ಒಡೆಯನೂ ಪರಲೋಕದ ರಾಜನೂ ಅವರನ್ನು ನೋಡಿ ನಗುವನು;
ಆತನು ಅವರನ್ನು ಪರಿಹಾಸ್ಯಮಾಡುವನು.
5-6 “ಇವನನ್ನು ರಾಜನನ್ನಾಗಿ ಅಭಿಷೇಕಿಸಿದವನು ನಾನೇ.
ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ಆಳುವವನು ಇವನೇ”
ಎಂದು ಅವರಿಗೆ ಕೋಪದಿಂದ ಉತ್ತರಿಸುವನು.
ಆಗ ಅವರೆಲ್ಲರೂ ಭಯಗೊಳ್ಳುವರು.
7 ಯೆಹೋವನ ಒಡಂಬಡಿಕೆಯ ಕುರಿತು ಹೇಳುತ್ತಿರುವೆ.
ಆತನು ನನಗೆ, “ಈ ಹೊತ್ತು ನಾನು ನಿನಗೆ ತಂದೆಯಾದೆ! ನೀನೇ ನನ್ನ ಮಗನು.
8 ನೀನು ಕೇಳಿಕೊಂಡರೆ ಅನ್ಯಜನಾಂಗಗಳನ್ನು ನಿನಗೆ ಅಧೀನಪಡಿಸುವೆನು.
ಭೂಮಿಯ ಮೇಲಿರುವ ಜನರೆಲ್ಲರೂ ನಿನ್ನವರಾಗುವರು!
9 ಕಬ್ಬಿಣದ ಗದೆಯು ಮಣ್ಣಿನ ಮಡಿಕೆಯನ್ನು ನುಚ್ಚುನೂರುಮಾಡುವಂತೆ
ನೀನು ಅನ್ಯಜನಾಂಗಗಳನ್ನು ನಾಶಪಡಿಸುವೆ” ಎಂದು ಹೇಳಿದನು.
10 ಆದ್ದರಿಂದ ರಾಜರುಗಳೇ, ವಿವೇಕಿಗಳಾಗಿರಿ.
ಅಧಿಪತಿಗಳೇ, ಬುದ್ದಿಮಾತುಗಳಿಗೆ ಕಿವಿಗೊಡಿರಿ.
11 ಯೆಹೋವನಿಗೆ ಭಯಭಕ್ತಿಯಿಂದ ವಿಧೇಯರಾಗಿರಿ,
ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ನಂಬಿಗಸ್ತರಾಗಿರಿ,
ಇಲ್ಲವಾದರೆ ಆತನ ಕೋಪವು ಬೇಗನೆ ತೋರಿಬಂದು
ನಿಮ್ಮನ್ನು ನಾಶಪಡಿಸುವುದು.
ಯೆಹೋವನನ್ನು ಆಶ್ರಯಿಸಿಕೊಂಡಿರುವವರು ಭಾಗ್ಯವಂತರೇ ಸರಿ!
9 ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬಂದು ಜನರೆಲ್ಲರಿಗೂ ಕೇಳುವಂತೆ ನಿನ್ನೊಡನೆ ಮಾತಾಡುವೆನು. ನೀನು ಹೇಳುವುದನ್ನು ಜನರು ಯಾವಾಗಲೂ ನಂಬಲು ಇದು ಸಹಾಯಕವಾಗುವುದು” ಎಂದು ಹೇಳಿದನು.
ಆಗ ಮೋಶೆಯು ಜನರು ಹೇಳಿದ್ದನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.
10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಈ ದಿನ ಮತ್ತು ನಾಳೆ ನೀನು ಜನರನ್ನು ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧಪಡಿಸಬೇಕು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು 11 ಮೂರನೆಯ ದಿನದಲ್ಲಿ ನನಗಾಗಿ ಸಿದ್ಧರಾಗಬೇಕು. ಮೂರನೆಯ ದಿನದಲ್ಲಿ ನಾನು ಸೀನಾಯ್ ಬೆಟ್ಟದ ಮೇಲೆ ಇಳಿದುಬರುವೆನು; ಜನರೆಲ್ಲರೂ ನನ್ನನ್ನು ನೋಡುವರು. 12-13 ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.
14 ಮೋಶೆ ಬೆಟ್ಟದಿಂದಿಳಿದು ಹೋದನು. ಅವನು ಜನರ ಬಳಿಗೆ ಹೋಗಿ ವಿಶೇಷ ಸಂದರ್ಶನಕ್ಕಾಗಿ ಅವರನ್ನು ಸಿದ್ಧ ಮಾಡಿದನು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡರು.
15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಯೆಹೋವನೊಡನೆ ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧರಾಗಿರಿ. ಅಲ್ಲಿಯವರೆಗೆ, ಪುರುಷರು ಸ್ತ್ರೀಯರ ಸಂಗ ಮಾಡಬಾರದು” ಎಂದು ಹೇಳಿದನು.
16 ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು. 17 ಆಗ ಮೋಶೆ ದೇವರನ್ನು ಸಂಧಿಸುವುದಕ್ಕಾಗಿ ಜನರನ್ನು ಪಾಳೆಯದಿಂದ ಹೊರಗೆ ನಡಿಸಿ, ಬೆಟ್ಟದ ಬಳಿಗೆ ಕರೆದುಕೊಂಡು ಬಂದನು. 18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು. 19 ತುತ್ತೂರಿಯ ಧ್ವನಿ ಹೆಚ್ಚುಹೆಚ್ಚಾಯಿತು. ಮೋಶೆಯು ದೇವರೊಂದಿಗೆ ಮಾತಾಡಿದಾಗಲೆಲ್ಲಾ ದೇವರು ಗುಡುಗಿನಂತಿದ್ದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.
20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.
21 ಯೆಹೋವನು ಮೋಶೆಗೆ, “ಕೆಳಗಿಳಿದು ಹೋಗಿ, ಜನರು ನನ್ನನ್ನು ನೋಡಲು ನನ್ನ ಹತ್ತಿರ ಬರಬಾರದೆಂದು ಅವರನ್ನು ಎಚ್ಚರಿಸು. ಇಲ್ಲವಾದರೆ ಅವರಲ್ಲಿ ಅನೇಕರು ಸಾಯುವರು. 22 ಮಾತ್ರವಲ್ಲದೆ ನನ್ನ ಸಮೀಪಕ್ಕೆ ಬರುವ ಯಾಜಕರು ಈ ವಿಶೇಷ ಸಂದರ್ಶನಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳು. ಇಲ್ಲವಾದರೆ ನಾನು ಅವರನ್ನೂ ಶಿಕ್ಷಿಸುವೆನು” ಅಂದನು.
23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.
24 ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.
25 ಆದ್ದರಿಂದ ಮೋಶೆ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.
23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.
24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.
27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.
Kannada Holy Bible: Easy-to-Read Version. All rights reserved. © 1997 Bible League International