Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 2

ಅನ್ಯಜನಾಂಗಗಳು ಕೋಪಗೊಂಡಿರುವುದೇಕೆ?
    ಅವರು ಮೂರ್ಖತನದ ಸಂಚುಗಳನ್ನು ಮಾಡುತ್ತಿರುವುದೇಕೆ?
ಅವುಗಳ ರಾಜರುಗಳೂ ನಾಯಕರುಗಳೂ
    ಯೆಹೋವನಿಗೂ ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರೋಧವಾಗಿ ಕೂಡಿಬಂದಿದ್ದಾರೆ.
“ದೇವರಿಗೂ ಆತನು ಅಭಿಷೇಕಿಸಿದ ರಾಜನಿಗೂ ವಿರೋಧವಾಗಿ ದಂಗೆ ಎದ್ದು
    ಸ್ವತಂತ್ರರಾಗೋಣ” ಎಂದು ಅವರು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಒಡೆಯನೂ ಪರಲೋಕದ ರಾಜನೂ ಅವರನ್ನು ನೋಡಿ ನಗುವನು;
    ಆತನು ಅವರನ್ನು ಪರಿಹಾಸ್ಯಮಾಡುವನು.
5-6 “ಇವನನ್ನು ರಾಜನನ್ನಾಗಿ ಅಭಿಷೇಕಿಸಿದವನು ನಾನೇ.
    ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ಆಳುವವನು ಇವನೇ”
ಎಂದು ಅವರಿಗೆ ಕೋಪದಿಂದ ಉತ್ತರಿಸುವನು.
    ಆಗ ಅವರೆಲ್ಲರೂ ಭಯಗೊಳ್ಳುವರು.

ಯೆಹೋವನ ಒಡಂಬಡಿಕೆಯ ಕುರಿತು ಹೇಳುತ್ತಿರುವೆ.
    ಆತನು ನನಗೆ, “ಈ ಹೊತ್ತು ನಾನು ನಿನಗೆ ತಂದೆಯಾದೆ! ನೀನೇ ನನ್ನ ಮಗನು.
ನೀನು ಕೇಳಿಕೊಂಡರೆ ಅನ್ಯಜನಾಂಗಗಳನ್ನು ನಿನಗೆ ಅಧೀನಪಡಿಸುವೆನು.
    ಭೂಮಿಯ ಮೇಲಿರುವ ಜನರೆಲ್ಲರೂ ನಿನ್ನವರಾಗುವರು!
ಕಬ್ಬಿಣದ ಗದೆಯು ಮಣ್ಣಿನ ಮಡಿಕೆಯನ್ನು ನುಚ್ಚುನೂರುಮಾಡುವಂತೆ
    ನೀನು ಅನ್ಯಜನಾಂಗಗಳನ್ನು ನಾಶಪಡಿಸುವೆ” ಎಂದು ಹೇಳಿದನು.

10 ಆದ್ದರಿಂದ ರಾಜರುಗಳೇ, ವಿವೇಕಿಗಳಾಗಿರಿ.
    ಅಧಿಪತಿಗಳೇ, ಬುದ್ದಿಮಾತುಗಳಿಗೆ ಕಿವಿಗೊಡಿರಿ.
11 ಯೆಹೋವನಿಗೆ ಭಯಭಕ್ತಿಯಿಂದ ವಿಧೇಯರಾಗಿರಿ,
    ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ನಂಬಿಗಸ್ತರಾಗಿರಿ,
    ಇಲ್ಲವಾದರೆ ಆತನ ಕೋಪವು ಬೇಗನೆ ತೋರಿಬಂದು
ನಿಮ್ಮನ್ನು ನಾಶಪಡಿಸುವುದು.
    ಯೆಹೋವನನ್ನು ಆಶ್ರಯಿಸಿಕೊಂಡಿರುವವರು ಭಾಗ್ಯವಂತರೇ ಸರಿ!

ವಿಮೋಚನಕಾಂಡ 6:2-9

ಬಳಿಕ ಯೆಹೋವನು ಮೋಶೆಗೆ, “ನಾನು ಯೆಹೋವನೇ. ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಎಲ್ ಶದ್ದಾಯ್’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಪಡಿಸಿಕೊಳ್ಳಲಿಲ್ಲ. ನಾನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ಕಾನಾನ್ ದೇಶವನ್ನು ಅವರಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಅವರು ಆ ದೇಶದಲ್ಲಿ ಜೀವಿಸಿದರೂ ಅದು ಅವರ ಸ್ವಂತ ದೇಶವಾಗಿರಲಿಲ್ಲ. ಈಗ ಇಸ್ರೇಲರ ಕಷ್ಟಗಳನ್ನೂ ಬಲ್ಲೆನು; ಅವರು ಈಜಿಪ್ಟಿನವರ ಗುಲಾಮರೆಂದೂ ಬಲ್ಲೆನು; ನಾನು ನನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊಂಡಿದ್ದೇನೆ. ಆದ್ದರಿಂದ ನನ್ನ ಈ ಮಾತುಗಳನ್ನು ಇಸ್ರೇಲರಿಗೆ ತಿಳಿಸು: ‘ನಾನೇ ಯೆಹೋವನು. ಈಜಿಪ್ಟಿನವರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸದಿಂದ ತಪ್ಪಿಸಿ ಈಜಿಪ್ಟಿನವರ ಗುಲಾಮಗಿರಿಯಿಂದ ಬಿಡಿಸುವೆನು. ನನ್ನ ಮಹಾಶಕ್ತಿಯಿಂದ ಈಜಿಪ್ಟಿನವರನ್ನು ಭಯಂಕರವಾಗಿ ದಂಡಿಸುವೆನು; ಬಳಿಕ ನಿಮ್ಮನ್ನು ರಕ್ಷಿಸುವೆನು. ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. ನಿಮ್ಮ ದೇವರಾಗಿರುವ ಯೆಹೋವನಾದ ನಾನೇ ನಿಮ್ಮನ್ನು ಈಜಿಪ್ಟಿನವರ ಬಿಟ್ಟೀಕೆಲಸದಿಂದ ಬಿಡುಗಡೆಗೊಳಿಸಿದೆನೆಂದು ಆಗ ನೀವು ತಿಳಿದುಕೊಳ್ಳುವಿರಿ. ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ನಾನು ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವೆನು. ನಾನು ಆ ದೇಶವನ್ನು ನಿಮಗೆ ಕೊಡುವೆನು. ಅದು ನಿಮ್ಮದಾಗಿರುವುದು. ನಾನೇ ಯೆಹೋವನು’” ಎಂದು ಹೇಳಿದನು.

ಅಂತೆಯೇ ಮೋಶೆಯು ಇಸ್ರೇಲರಿಗೆ ತಿಳಿಸಿದನು. ಆದರೆ ಜನರು ಬಹು ಪ್ರಯಾಸಪಟ್ಟು ದುಡಿಯುತ್ತಿದ್ದುದರಿಂದ ಮೋಶೆಯ ಮಾತಿಗೆ ಕಿವಿಗೊಡುವಷ್ಟು ತಾಳ್ಮೆ ಅವರಿಗಿರಲಿಲ್ಲ.

ಇಬ್ರಿಯರಿಗೆ 8:1-7

ಯೇಸುವೇ ನಮ್ಮ ಪ್ರಧಾನಯಾಜಕನು

ನಾವು ಹೇಳುವ ಸಂಗತಿಗಳಲ್ಲಿ ಮುಖ್ಯವಾದದ್ದೇನೆಂದರೆ, ನಿಮಗೆ ಹೇಳಿದಂತೆಯೇ ನಮಗೊಬ್ಬ ಪ್ರಧಾನ ಯಾಜಕನಿದ್ದಾನೆ. ಆತನು ಪರಲೋಕದಲ್ಲಿ ದೇವರ ಸಿಂಹಾಸನದ ಬಲಭಾಗದಲ್ಲಿ ಈಗ ಕುಳಿತುಕೊಂಡಿದ್ದಾನೆ. ಆತನು ಮಹಾ ಪವಿತ್ರಸ್ಥಳದಲ್ಲಿ ಅಂದರೆ ಜನರಿಂದ ನಿರ್ಮಿತವಾಗದೆ, ದೇವರಿಂದಲೇ ನಿರ್ಮಿಸಲ್ಪಟ್ಟಿರುವ ನಿಜವಾದ ದೇವದರ್ಶನ ಗುಡಾರದಲ್ಲಿ ಸೇವೆಮಾಡುತ್ತಿದ್ದಾನೆ.

ಪ್ರತಿಯೊಬ್ಬ ಪ್ರಧಾನಯಾಜಕನೂ ದೇವರಿಗೆ ಯಜ್ಞಗಳನ್ನೂ ಕಾಣಿಕೆಗಳನ್ನೂ ಅರ್ಪಿಸಬೇಕು. ಆದ್ದರಿಂದ ನಮ್ಮ ಪ್ರಧಾನ ಯಾಜಕನೂ ದೇವರಿಗೆ ಏನನ್ನಾದರೂ ಅರ್ಪಿಸಲೇಬೇಕು. ಆತನು ಇನ್ನೂ ಭೂಮಿಯ ಮೇಲೆ ವಾಸಮಾಡುತ್ತಿದ್ದರೆ ಯಾಜಕನಾಗಿರುತ್ತಿರಲಿಲ್ಲ. ಕಾರಣವೇನೆಂದರೆ, ಧರ್ಮಶಾಸ್ತ್ರದ ಪ್ರಕಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುವ ಯಾಜಕರು ಈಗಾಗಲೇ ಇಲ್ಲಿದ್ದಾರೆ. ಈ ಯಾಜಕರು ಮಾಡುವ ಕಾರ್ಯಗಳು ಪರಲೋಕದಲ್ಲಿನ ಕಾರ್ಯಗಳ ನಿಜವಾದ ಪ್ರತಿರೂಪಗಳೂ ಛಾಯೆಗಳೂ ಆಗಿವೆ. ಮೋಶೆಯು ದೇವದರ್ಶನ ಗುಡಾರವನ್ನು ನಿರ್ಮಿಸಲು ಸಿದ್ಧನಾದಾಗ ದೇವರು ಅವನಿಗೆ, “ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ಮಿಸಬೇಕು”(A) ಎಂದು ಹೇಳಿದ್ದು ಈ ಕಾರಣದಿಂದಲೇ. ಆದರೆ ಯೇಸುವಿಗೆ ಕೊಡಲ್ಪಟ್ಟ ಕಾರ್ಯವು ಆ ಯಾಜಕರಿಗೆ ಕೊಡಲ್ಪಟ್ಟ ಕಾರ್ಯಕ್ಕಿಂತ ಅತ್ಯಂತ ಮಹತ್ವದ್ದಾಗಿದೆ. ಇದೇ ರೀತಿಯಲ್ಲಿ ಯೇಸು ತನ್ನ ಜನರಿಗಾಗಿ ದೇವರಿಂದ ತಂದ ಹೊಸ ಒಡಂಬಡಿಕೆಯು ಹಳೆಯದಕ್ಕಿಂತ ಶ್ರೇಷ್ಠವಾಗಿದೆ. ಉತ್ತಮ ಸಂಗತಿಗಳ ವಾಗ್ದಾನದ ಆಧಾರದ ಮೇಲೆ ಹೊಸ ಒಡಂಬಡಿಕೆಯು ಸ್ಥಾಪಿತವಾಗಿದೆ.

ಮೊದಲನೆ ಒಡಂಬಡಿಕೆ ಏನೂ ದೋಷವಿಲ್ಲದ್ದಾಗಿದ್ದರೆ, ಎರಡನೆ ಒಡಂಬಡಿಕೆಯ ಅಗತ್ಯವೇ ಇರಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International