Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:105-112

105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
    ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
    ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
    ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
    ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
    ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
    ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
    ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
    ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.

ಜ್ಞಾನೋಕ್ತಿಗಳು 6:6-23

ಸೋಮಾರಿತನದ ಅಪಾಯ

ಸೋಮಾರಿಯೇ, ನೀನು ಇರುವೆಯಂತೆ ಚುರುಕಾಗಿರಬೇಕು. ಇರುವೆಯನ್ನು ನೋಡಿ ಕಲಿತುಕೋ. ಇರುವೆಗೆ ರಾಜನಿಲ್ಲ, ಅಧಿಕಾರಿಯಿಲ್ಲ, ನಾಯಕನಿಲ್ಲ, ಆದರೆ ಸುಗ್ಗಿಕಾಲದಲ್ಲಿ ತನಗೆ ಬೇಕಾದ ಆಹಾರವನ್ನೆಲ್ಲ ಅದು ಕೂಡಿಸಿಟ್ಟುಕೊಳ್ಳುವುದು. ಆದ್ದರಿಂದ ಚಳಿಗಾಲದಲ್ಲಿ ಅದಕ್ಕೆ ಬೇಕಾದಷ್ಟು ಆಹಾರ ಇರುವುದು.

ಸೋಮಾರಿಯೇ, ಇನ್ನೆಷ್ಟುಕಾಲ ಮಲಗಿಕೊಂಡಿರುವೆ? ನಿನ್ನ ವಿಶ್ರಾಂತಿಯಿಂದ ಯಾವಾಗ ಎದ್ದೇಳುವೆ? 10 ಸೋಮಾರಿಯು, “ಸ್ವಲ್ಪ ನಿದ್ರೆ, ಸ್ವಲ್ಪ ವಿಶ್ರಾಂತಿ” ಅನ್ನುವನು. 11 ಆದರೆ ಅವನು ನಿದ್ರಿಸುತ್ತಲೇ ಇರುವನು; ಬಡವನಾಗುತ್ತಲೇ ಹೋಗುವನು. ಅವನ ಸ್ಥಿತಿಯು ದರೋಡೆಕೋರರು ಬಂದು ಇದ್ದದ್ದನ್ನೆಲ್ಲಾ ದೋಚಿಕೊಂಡು ಹೋದಂತಾಗಿರುವುದು.

ದುಷ್ಟನು

12 ಕೆಡುಕನೂ ನೀಚನೂ ಆಗಿರುವವನು ಸುಳ್ಳಾಡುತ್ತಾ ಅಡ್ಡಾಡುತ್ತಾನೆ. 13 ಅವನು ಜನರನ್ನು ಮೋಸಗೊಳಿಸಲು ತನ್ನ ಕಾಲುಗಳಿಂದಲೂ ಕೈಬೆರಳುಗಳಿಂದಲೂ ಸನ್ನೆಮಾಡುತ್ತಾನೆ. 14 ಅವನು ಕೆಡುಕ. ಎಲ್ಲಾ ಸಮಯಗಳಲ್ಲಿ ಅವನು ಕೆಡುಕನ್ನೇ ಆಲೋಚಿಸುತ್ತಾನೆ; ಎಲ್ಲೆಲ್ಲೂ ತೊಂದರೆ ಮಾಡುತ್ತಾನೆ. 15 ಆದರೆ ಅವನಿಗೆ ಆಪತ್ತು ಇದ್ದಕ್ಕಿದ್ದಂತೆ ಬರುವುದು. ಅವನು ನಾಶವಾಗುವನು! ಅವನಿಗೆ ಸಹಾಯಮಾಡಲು ಯಾರೂ ಇರುವುದಿಲ್ಲ!

ಯೆಹೋವನು ದ್ವೇಷಿಸುವ ಏಳು ವಸ್ತುಗಳು

16 ಯೆಹೋವನು ಈ ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ:
17     ಗರ್ವದ ಕಣ್ಣು, ಸುಳ್ಳಾಡುವ ನಾಲಿಗೆ,
    ನಿರಪರಾಧಿಗಳನ್ನು ಕೊಲ್ಲುವ ಕೈ.
18     ದುರಾಲೋಚನೆ ಮಾಡುವ ಹೃದಯ,
    ಕೇಡುಮಾಡಲು ಓಡುವ ಕಾಲು.
19     ಅಸತ್ಯವಾಡುವ ಸುಳ್ಳುಸಾಕ್ಷಿ
    ಮತ್ತು ಸಹೋದರರಲ್ಲಿ ಜಗಳ ಬಿತ್ತುವ ವ್ಯಕ್ತಿ.

ವ್ಯಭಿಚಾರದ ಕುರಿತು ಎಚ್ಚರಿಕೆ

20 ನನ್ನ ಮಗನೇ, ನಿನ್ನ ತಂದೆಯ ಆಜ್ಞೆಗಳನ್ನು ಜ್ಞಾಪಕಮಾಡಿಕೋ. ನಿನ್ನ ತಾಯಿಯ ಉಪದೇಶಗಳನ್ನು ಮರೆಯಬೇಡ. 21 ಯಾವಾಗಲೂ ಅವರ ಮಾತುಗಳನ್ನು ಜ್ಞಾಪಕಮಾಡಿಕೊ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಇಟ್ಟುಕೋ. 22 ನೀನು ಹೋಗುವಲ್ಲೆಲ್ಲಾ ಅವರ ಉಪದೇಶಗಳು ನಿನ್ನನ್ನು ನಡೆಸುತ್ತವೆ. ನೀನು ಮಲಗಿರುವಾಗಲೂ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಡನೆ ಮಾತಾಡಿ ನಿನಗೆ ಮಾರ್ಗದರ್ಶನ ನೀಡುತ್ತವೆ.

23 ನಿನ್ನ ತಂದೆತಾಯಿಗಳ ಆಜ್ಞೆಗಳು ಮತ್ತು ಉಪದೇಶಗಳು ನಿನಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿವೆ. ಅವು ನಿನ್ನನ್ನು ಸರಿಪಡಿಸಿ ಜೀವಮಾರ್ಗದಲ್ಲಿ ನಡೆಯಲು ಸಹಾಯಮಾಡುತ್ತವೆ.

ಯೋಹಾನ 8:12-30

ಯೇಸುವೇ ಲೋಕಕ್ಕೆ ಬೆಳಕು

12 ಬಳಿಕ, ಯೇಸುವು ಜನರೊಂದಿಗೆ ಮತ್ತೆ ಮಾತಾಡುತ್ತಾ, “ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ಎಂದಿಗೂ ಜೀವಿಸುವುದಿಲ್ಲ. ಅವನು ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಹೇಳಿದನು.

13 ಫರಿಸಾಯರು ಯೇಸುವಿಗೆ, “ನೀನು ನಿನ್ನ ಬಗ್ಗೆ ಮಾತಾಡುವ ಈ ಸಂಗತಿಗಳು ಸತ್ಯವೆಂದು ಹೇಳುವವನು ನೀನೊಬ್ಬನು ಮಾತ್ರ. ಆದ್ದರಿಂದ, ನೀನು ಹೇಳುವ ಈ ಸಂಗತಿಗಳನ್ನು ನಾವು ಸ್ವೀಕರಿಸಿಕೊಳ್ಳಲಾರೆವು” ಎಂದು ಹೇಳಿದರು.

14 ಯೇಸು, “ಹೌದು, ನಾನೇ ನನ್ನ ಬಗ್ಗೆ ಈ ಸಂಗತಿಗಳನ್ನು ಹೇಳುತ್ತಿದ್ದರೂ ಈ ಸಂಗತಿಗಳು ಜನರ ನಂಬಿಕೆಗೆ ಯೋಗ್ಯವಾಗಿವೆ. ಏಕೆಂದರೆ, ನಾನು ಎಲ್ಲಿಂದ ಬಂದೆನೆಂಬುದೂ ನಾನು ಎಲ್ಲಿಗೆ ಹೋಗುತ್ತೇನೆಂಬುದೂ ನನಗೆ ತಿಳಿದಿದೆ. ನಾನು ನಿಮ್ಮಂಥ ವ್ಯಕ್ತಿಯಲ್ಲ. ನಾನು ಎಲ್ಲಿಂದ ಬಂದೆನೆಂಬುದು ಮತ್ತು ಎಲ್ಲಿಗೆ ಹೋಗುತ್ತೇನೆಂಬುದು ನಿಮಗೆ ಗೊತ್ತಿಲ್ಲ. 15 ನೀವು ಹೊರತೋರಿಕೆಯ ಪ್ರಕಾರ ತೀರ್ಪು ಮಾಡುತ್ತಿದ್ದೀರಿ. ಆದರೆ ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16 ನಾನು ಮಾಡುವ ತೀರ್ಪು ನ್ಯಾಯಬದ್ಧವಾಗಿರುತ್ತದೆ. ಏಕೆಂದರೆ ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವುದಿಲ್ಲ. ನನ್ನನ್ನು ಕಳುಹಿಸಿದ ತಂದೆಯೂ ನನ್ನೊಂದಿಗಿರುತ್ತಾನೆ. 17 ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ. 18 ನನ್ನ ಪರವಾದ ಸಾಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ, ನನ್ನನ್ನು ಕಳುಹಿಸಿದ ತಂದೆಯು ನನ್ನ ಮತ್ತೊಬ್ಬ ಸಾಕ್ಷಿಯಾಗಿದ್ದಾನೆ” ಎಂದು ಉತ್ತರಕೊಟ್ಟನು.

19 ಜನರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು.

ಯೇಸು, “ನಿಮಗೆ ನಾನಾಗಲಿ, ನನ್ನ ತಂದೆಯಾಗಲಿ ಗೊತ್ತಿಲ್ಲ. ನೀವು ನನ್ನನ್ನು ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದಿರುವಿರಿ” ಎಂದು ಹೇಳಿದನು. 20 ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಈ ಮಾತುಗಳನ್ನು ಹೇಳಿದನು. ಜನರು ಕೊಡುವ ಕಾಣಿಕೆಯನ್ನು ಇಟ್ಟಿದ್ದ ಸ್ಥಳದ ಸಮೀಪದಲ್ಲಿ ಆತನಿದ್ದನು. ಆದರೆ ಆತನನ್ನು ಯಾರೂ ಬಂಧಿಸಲಿಲ್ಲ. ಏಕೆಂದರೆ ಆತನನ್ನು ಬಂಧಿಸತಕ್ಕ ಸಮಯ ಇನ್ನೂ ಬಂದಿರಲಿಲ್ಲ.

ಯೆಹೂದ್ಯರ ಅಪನಂಬಿಕೆ

21 ಯೇಸು ಅವರಿಗೆ, “ನಾನು ನಿಮ್ಮನ್ನು ಬಿಟ್ಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ. ಆದರೆ ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.

22 ಆದ್ದರಿಂದ ಯೆಹೂದ್ಯರು, “ಯೇಸು ತನ್ನನ್ನು ತಾನೇ ಕೊಂದುಕೊಳ್ಳುವನೇ? ಅದಕ್ಕಾಗಿಯೇ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳಿದನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

23 ಅದಕ್ಕೆ ಯೇಸು, “ನೀವು ಕೆಳಗಿನವರಾಗಿದ್ದೀರಿ. ನಾನಾದರೋ ಮೇಲಿನವನು. ನೀವು ಈ ಲೋಕದವರಾಗಿದ್ದೀರಿ. ಆದರೆ ನಾನು ಈ ಲೋಕದವನಲ್ಲ. 24 ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆ. ಹೌದು, ನಾನೇ ಆತನೆಂಬುದನ್ನು ನೀವು ನಂಬದಿದ್ದರೆ ನಿಮ್ಮ ಪಾಪಗಳಲ್ಲಿಯೇ ನೀವು ಸಾಯುವಿರಿ” ಎಂದು ಹೇಳಿದನು.

25 ಯೆಹೂದ್ಯರು, “ಹಾಗಾದರೆ, ನೀನು ಯಾರು?” ಎಂದು ಕೇಳಿದರು.

ಯೇಸು, “ನಾನು ಯಾರೆಂದು ನಿಮಗೆ ಮೊದಲಿಂದ ತಿಳಿಸುತ್ತಾ ಬಂದೆನೋ, ಆತನೇ ನಾನು. 26 ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಅನೇಕ ಸಂಗತಿಗಳಿವೆ. ನಾನು ನಿಮಗೆ ತೀರ್ಪು ಮಾಡಬಲ್ಲೆನು. ಆದರೆ ನನ್ನನ್ನು ಕಳುಹಿಸಿದಾತನಿಂದ ನಾನು ಕೇಳಿದ ಸಂಗತಿಗಳನ್ನು ಮಾತ್ರ ಜನರಿಗೆ ಹೇಳುತ್ತೇನೆ. ಆತನು ಸತ್ಯವನ್ನೇ ತಿಳಿಸುತ್ತಾನೆ” ಎಂದು ಉತ್ತರಕೊಟ್ಟನು.

27 ಯೇಸು ಯಾರ ಬಗ್ಗೆ ಮಾತಾಡುತ್ತಿದ್ದಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲಿಲ್ಲ. ಯೇಸು ಅವರಿಗೆ ತಂದೆಯ (ದೇವರ) ಬಗ್ಗೆ ಹೇಳುತ್ತಿದ್ದನು. 28 ಆದ್ದರಿಂದ ಆತನು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೇರಿಸುವಿರಿ (ಕೊಲ್ಲುವಿರಿ). ನಾನೇ ಆತನೆಂಬುದು ಆಗ ನಿಮಗೆ ತಿಳಿಯುವುದು. ನಾನು ಈ ಕಾರ್ಯಗಳನ್ನು ನನ್ನ ಸ್ವಂತ ಅಧಿಕಾರದಿಂದ ಮಾಡುತ್ತಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ಅಲ್ಲದೆ, ತಂದೆಯು ನನಗೆ ಉಪದೇಶಿಸಿದ ಸಂಗತಿಗಳನ್ನು ಮಾತ್ರ ನಾನು ಹೇಳುತ್ತೇನೆಂಬುದೂ ನಿಮಗೆ ಅರಿವಾಗುವುದು. 29 ನನ್ನನ್ನು ಕಳುಹಿಸಿದಾತನು (ದೇವರು) ನನ್ನೊಂದಿಗೆ ಇದ್ದಾನೆ. ಆತನಿಗೆ ಮೆಚ್ಚಿಕೆಯಾದದ್ದನ್ನೇ ನಾನು ಯಾವಾಗಲೂ ಮಾಡುತ್ತೇನೆ. ಆದ್ದರಿಂದ ಆತನು ನನ್ನನ್ನು ಒಬ್ಬಂಟಿಗನಾಗಿ ಬಿಟ್ಟುಬಿಟ್ಟಿಲ್ಲ” ಎಂದು ಹೇಳಿದನು. 30 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಅನೇಕ ಜನರು ಆತನಲ್ಲಿ ನಂಬಿಕೆಯಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International