Revised Common Lectionary (Semicontinuous)
105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.
ಜನರು ಧರ್ಮಶಾಸ್ತ್ರವನ್ನು ಕೇಳುವರು
23 ಯೆಹೂದದ ಮತ್ತು ಜೆರುಸಲೇಮಿನ ನಾಯಕರೆಲ್ಲರೂ ಬಂದು ತನ್ನನ್ನು ಭೇಟಿಯಾಗಬೇಕೆಂದು ರಾಜನಾದ ಯೋಷೀಯನು ಹೇಳಿದನು. 2 ನಂತರ ರಾಜನು ದೇವಾಲಯಕ್ಕೆ ಹೋದನು. ಯೆಹೂದದ ಜನರೆಲ್ಲರು ಮತ್ತು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರೆಲ್ಲರು ಅವನ ಜೊತೆಯಲ್ಲಿ ಹೋದರು. ಯಾಜಕರು, ಪ್ರವಾದಿಗಳು, ಚಿಕ್ಕವರು ಮತ್ತು ದೊಡ್ಡವರು ಅವನೊಡನೆ ಹೋದರು. ಆಗ ಅವನು ನಿಬಂಧನ ಗ್ರಂಥವನ್ನು ಓದಿದನು. ಇದು ದೇವಾಲಯದಲ್ಲಿ ಸಿಕ್ಕಿದ ಗ್ರಂಥವಾಗಿತ್ತು. ಜನರೆಲ್ಲರಿಗೂ ಕೇಳಿಸುವಂತೆ ಯೋಷೀಯನು ಗ್ರಂಥವನ್ನು ಓದಿದನು.
3 ರಾಜನು ಸ್ತಂಭದ ಬಳಿ ನಿಂತು ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞೆಗಳಿಗೆ, ಒಡಂಬಡಿಕೆಗೆ ಮತ್ತು ಆತನ ನಿಯಮಗಳಿಗೆ ಪೂರ್ಣಹೃದಯದಿಂದಲೂ ಪೂರ್ಣಆತ್ಮದಿಂದಲೂ ವಿಧೇಯನಾಗಿರುವುದಾಗಿಯೂ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು. ರಾಜನ ಪ್ರಮಾಣಕ್ಕೆ ಬೆಂಬಲ ನೀಡಲು ಜನರೆಲ್ಲರೂ ಎದ್ದುನಿಂತರು.
4 ನಂತರ ರಾಜನು ಪ್ರಧಾನಯಾಜಕನಾದ ಹಿಲ್ಕೀಯನಿಗೆ, ಇತರ ಯಾಜಕರಿಗೆ, ದ್ವಾರಪಾಲಕರಿಗೆ, ಬಾಳ್‌ದೇವರಿಗೂ ಅಶೇರ ದೇವತೆಗೂ ಮತ್ತು ಆಕಾಶದ ನಕ್ಷತ್ರಗಳಿಗೂ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನು ದೇವಾಲಯದಿಂದ ಹೊರತರುವಂತೆ ಆಜ್ಞಾಪಿಸಿದನು. ಯೋಷೀಯನು ಜೆರುಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಅವುಗಳನ್ನು ಸುಟ್ಟುಹಾಕಿದನು. ಅವರು ಬೂದಿಯನ್ನು ಬೇತೇಲಿಗೆ ತೆಗೆದುಕೊಂಡು ಹೋದರು.
5 ಯೆಹೂದದ ರಾಜರುಗಳು ಯಾಜಕರಾಗಿ ಸೇವೆಮಾಡಲು ಕೆಲವು ಸಾಮಾನ್ಯ ಜನರನ್ನು ಆರಿಸಿಕೊಂಡರು. ಈ ಜನರು ಆರೋನನ ಕುಲದಿಂದ ಬಂದವರಲ್ಲ! ಈ ಸುಳ್ಳುಯಾಜಕರು ಯೆಹೂದದ ನಗರಗಳಲ್ಲಿನ ಮತ್ತು ಜೆರುಸಲೇಮಿನ ಊರುಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು. ಅವರು ಬಾಳನನ್ನು, ಸೂರ್ಯನನ್ನು, ಚಂದ್ರನನ್ನು, ಆಕಾಶ ಸೈನ್ಯವಾದ ನಕ್ಷತ್ರಗಳನ್ನು ಗೌರವಿಸಲು ಧೂಪವನ್ನು ಸುಡುತ್ತಿದ್ದರು. ಆದರೆ ಯೋಷೀಯನು ಆ ಸುಳ್ಳು ಯಾಜಕರನ್ನು ನಿಲ್ಲಿಸಿದನು.
6 ಯೋಷೀಯನು ಅಶೇರಸ್ತಂಭವನ್ನು ದೇವಾಲಯದಿಂದ ತೆಗೆದುಹಾಕಿದನು. ಅವನು ಅಶೇರಸ್ತಂಭವನ್ನು ನಗರದ ಹೊರವಲಯದ ಕಿದ್ರೋನ್ ಕಣಿವೆಗೆ ತೆಗೆದುಕೊಂಡು ಹೋಗಿ ಅದನ್ನು ಅಲ್ಲಿ ಸುಟ್ಟುಹಾಕಿದನು. ನಂತರ ಅವನು ಅದನ್ನು ಪುಡಿಪುಡಿ ಮಾಡಿಸಿ ಧೂಳಿನಲ್ಲಿ ಬೆರಸಿ ಸಾಮಾನ್ಯ ಜನರ ಸ್ಮಶಾನದಲ್ಲಿ ಆ ಧೂಳನ್ನು ಚೆಲ್ಲಿದನು.
7 ನಂತರ ರಾಜನಾದ ಯೋಷೀಯನು ದೇವಾಲಯದಲ್ಲಿದ್ದ ದೇವದಾಸ ದೇವದಾಸಿಯರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸುಳ್ಳುದೇವತೆಯಾದ ಅಶೇರಳಿಗೋಸ್ಕರ ಚಿಕ್ಕ ಗುಡಾರಗಳನ್ನು ನೇಯುತ್ತಿದ್ದರು.
8-9 ಆ ಸಮಯದಲ್ಲಿ ಯಾಜಕರು ಯಜ್ಞಗಳನ್ನು ಜೆರುಸಲೇಮಿಗೆ ತರಲಿಲ್ಲ ಮತ್ತು ದೇವಾಲಯದಲ್ಲಿನ ಯಜ್ಞವೇದಿಕೆಯ ಮೇಲೆ ಅವುಗಳನ್ನು ಅರ್ಪಿಸಲಿಲ್ಲ. ಯಾಜಕರು ಯೆಹೂದದ ಎಲ್ಲಾ ನಗರಗಳಲ್ಲಿಯೂ ವಾಸಿಸುತ್ತಿದ್ದರು. ಅವರು ಆ ನಗರಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು ಮತ್ತು ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆ ಉನ್ನತಸ್ಥಳಗಳು ಗೆಬದಿಂದ ಬೇರ್ಷೆಬದವರೆಗೆ ಎಲ್ಲಾ ಕಡೆಗಳಲ್ಲಿದ್ದವು. ಯಾಜಕರು ತಮ್ಮ ಹುಳಿಯಿಲ್ಲದ ರೊಟ್ಟಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿ ಯಾಜಕರಾಗಿದ್ದ ವಿಶೇಷ ಸ್ಥಳಗಳಲ್ಲಿ ತಿನ್ನದೆ ಆ ಊರುಗಳಲ್ಲಿ ಸಾಮಾನ್ಯ ಜನರೊಂದಿಗೆ ತಿನ್ನುತ್ತಿದ್ದರು. ಆದರೆ ರಾಜನಾದ ಯೋಷೀಯನು ಆ ಉನ್ನತಸ್ಥಳಗಳನ್ನು ನಾಶಗೊಳಿಸಿ ಆ ಯಾಜಕರನ್ನು ಜೆರುಸಲೇಮಿಗೆ ಕರೆತಂದನು. ನಗರಾಧಿಕಾರಿಯಾದ ಯೆಹೋಶುವನ ದ್ವಾರದ ಎಡಗಡೆಯಲ್ಲಿದ್ದ ಉನ್ನತಸ್ಥಳಗಳನ್ನು ಯೋಷೀಯನು ನಾಶಗೊಳಿಸಿದನು.
ಯೆಹೂದದ ಜನರು ಪಸ್ಕಹಬ್ಬವನ್ನು ಆಚರಿಸಿದರು
21 ರಾಜನಾದ ಯೋಷೀಯನು ಜನರಿಗೆಲ್ಲ, “ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಿರಿ. ಈ ನಿಬಂಧನ ಗ್ರಂಥದಲ್ಲಿ ಬರೆದಿರುವಂತೆಯೇ ಅದನ್ನು ಮಾಡಿ” ಎಂದು ಆಜ್ಞಾಪಿಸಿದನು.
22 ನ್ಯಾಯಾಧೀಶರು ಇಸ್ರೇಲನ್ನು ಆಳಿದ ದಿನಗಳಿಂದ ಜನರು ಪಸ್ಕಹಬ್ಬವನ್ನು ಈ ರೀತಿಯಲ್ಲಿ ಆಚರಿಸಿರಲಿಲ್ಲ. ಇಸ್ರೇಲಿನ ರಾಜರುಗಳಾಗಲಿ ಇಲ್ಲವೆ ಯೆಹೂದದ ರಾಜರುಗಳಾಗಲಿ ಈ ರೀತಿ ಪಸ್ಕಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿರಲಿಲ್ಲ. 23 ಯೋಷೀಯನು ರಾಜನಾಗಿದ್ದ ಹದಿನೆಂಟನೆ ವರ್ಷದಲ್ಲಿ ಅವರು ಯೆಹೋವನಿಗಾಗಿ ಈ ಪಸ್ಕಹಬ್ಬವನ್ನು ಜೆರುಸಲೇಮಿನಲ್ಲಿ ಆಚರಿಸಿದರು.
24 ಯೋಷೀಯನು ಮಾಂತ್ರಿಕರನ್ನು, ತಾಂತ್ರಿಕರನ್ನು, ಮನೆಯ ದೇವರುಗಳನ್ನು, ವಿಗ್ರಹಗಳನ್ನು, ಯೆಹೂದದಲ್ಲಿ ಮತ್ತು ಜೆರುಸಲೇಮಿನಲ್ಲಿ ಜನರು ಪೂಜಿಸುತ್ತಿದ್ದ ತೆರಾಫೀಮ್ ಎಂಬ ಗೊಂಬೆಗಳನ್ನು ನಾಶಪಡಿಸಿದನು. ಯಾಜಕನಾದ ಹಿಲ್ಕೀಯನಿಗೆ ದೇವಾಲಯದಲ್ಲಿ ಸಿಕ್ಕಿದ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳಿಗೆ ವಿಧೇಯನಾಗಿರಲು ಯೋಷೀಯನು ಹೀಗೆ ಮಾಡಿದನು.
25 ಇದಕ್ಕೆ ಮೊದಲು ಯೋಷೀಯನಂತಹ ರಾಜನು ಇರಲೇ ಇಲ್ಲ. ಯೋಷೀಯನು ತನ್ನ ಪೂರ್ಣ ಹೃದಯದಿಂದಲೂ ತನ್ನ ಪೂರ್ಣ ಆತ್ಮದಿಂದಲೂ ತನ್ನ ಪೂರ್ಣ ಶಕ್ತಿಯಿಂದಲೂ ಯೆಹೋವನ ಕಡೆಗೆ ತಿರುಗಿದನು. ಮೋಶೆಯ ಧರ್ಮಶಾಸ್ತ್ರವನ್ನು ಯೋಷೀಯನಂತೆ ಬೇರೆ ಯಾವ ರಾಜನೂ ಅನುಸರಿಸಿರಲಿಲ್ಲ. ಆ ಕಾಲದವರೆಗೆ ಯೋಷೀಯನಂತಹ ಮತ್ತೊಬ್ಬ ರಾಜನು ಇರಲೇ ಇಲ್ಲ.
ಮಡಕೆಗಳಲ್ಲಿರುವ ಆತ್ಮಿಕ ಭಂಡಾರ
4 ದೇವರು ತನ್ನ ಕೃಪೆಯಿಂದ ಈ ಸೇವೆಯನ್ನು ನಮಗೆ ಒಪ್ಪಿಸಿದ್ದಾನೆ. ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. 2 ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು. 3 ನಾವು ಬೋಧಿಸುವ ಸುವಾರ್ತೆಯು ಮರೆಯಾಗಿರಬಹುದು. ಆದರೆ ನಾಶನದ ಮಾರ್ಗದಲ್ಲಿರುವವರಿಗೆ ಮಾತ್ರ ಅದು ಮರೆಯಾಗಿದೆ. 4 ಈ ಲೋಕದ ಅಧಿಪತಿಯು (ಸೈತಾನನು) ನಂಬದವರ ಮನಸ್ಸುಗಳನ್ನು ಕುರುಡುಗೊಳಿಸಿದ್ದಾನೆ. ಕ್ರಿಸ್ತನ ಮಹಿಮೆಯ ವಿಷಯವಾದ ಸುವಾರ್ತೆಯ ಬೆಳಕನ್ನು (ಸತ್ಯವನ್ನು) ಅವರು ಕಾಣಲಾರರು. ಕ್ರಿಸ್ತನೊಬ್ಬನೇ ದೇವರಿಗೆ ಪ್ರತಿರೂಪವಾಗಿದ್ದಾನೆ. 5 ನಾವು ನಮ್ಮ ಬಗ್ಗೆ ಬೋಧಿಸುವುದಿಲ್ಲ. ಆದರೆ ಯೇಸು ಕ್ರಿಸ್ತನೇ ಪ್ರಭುವೆಂದು ಮತ್ತು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ಬೋಧಿಸುತ್ತೇವೆ. 6 “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ.
7 ನಮಗೆ ಈ ನಿಕ್ಷೇಪವು ದೇವರಿಂದ ದೊರೆತಿದೆ. ನಾವಾದರೋ ನಿಕ್ಷೇಪವನ್ನು ತುಂಬಿ ಕೊಂಡಿರುವ ಕೇವಲ ಮಡಕೆಗಳಂತಿದ್ದೇವೆ. ಈ ಮಹಾಶಕ್ತಿಯು ಬಂದದ್ದು ದೇವರಿಂದಲೇ ಹೊರತು ನಮ್ಮಿಂದಲ್ಲವೆಂಬುದನ್ನು ಇದು ತೋರಿಸುತ್ತದೆ. 8 ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. 9 ನಾವು ಹಿಂಸೆಗೆ ಗುರಿಯಾದೆವು, ಆದರೆ ದೇವರು ನಮ್ಮನ್ನು ತೊರೆದುಬಿಡಲಿಲ್ಲ. ಕೆಲವು ಸಲ ನಮಗೆ ನೋವಾಯಿತು, ಆದರೂ ನಾಶವಾಗಲಿಲ್ಲ. 10 ನಮ್ಮ ದೇಹಗಳಲ್ಲಿ ಯೇಸುವಿನ ಜೀವವು ತೋರಿಬರಲೆಂದು ಆತನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದೇವೆ. 11 ನಾವು ಜೀವಂತವಾಗಿದ್ದರೂ ಯೇಸುವಿಗೋಸ್ಕರ ಯಾವಾಗಲೂ ಮರಣದ ಅಪಾಯದಲ್ಲಿದ್ದೇವೆ. ಸತ್ತುಹೋಗುವ ನಮ್ಮ ದೇಹಗಳಲ್ಲಿ ಆತನ ಜೀವವು ಕಾಣಬರಲೆಂದು ಇದು ನಮಗೆ ಸಂಭವಿಸುತ್ತದೆ. 12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.
Kannada Holy Bible: Easy-to-Read Version. All rights reserved. © 1997 Bible League International