Revised Common Lectionary (Semicontinuous)
ದೇವರನ್ನು ಅನುಸರಿಸಲು ಜನರಿಗೆ ಉಪದೇಶ
58 ಎಷ್ಟು ಗಟ್ಟಿಯಾಗಿ ಆರ್ಭಟಿಸಬಹುದೋ ಅಷ್ಟು ಆರ್ಭಟಿಸಿರಿ, ನಿಲ್ಲಿಸಬೇಡಿರಿ.
ತುತ್ತೂರಿಯಂತೆ ಗಟ್ಟಿಯಾಗಿ ಕಿರುಚಿರಿ.
ಜನರು ಮಾಡಿದ ಪಾಪಗಳನ್ನು ಅವರಿಗೆ ತಿಳಿಸಿರಿ.
ಯಾಕೋಬನ ವಂಶದವರಿಗೆ ಅವರ ಪಾಪಗಳನ್ನು ತಿಳಿಸಿರಿ.
2 ಆಗ ಅವರು ದಿನನಿತ್ಯ ನನ್ನನ್ನು ಆರಾಧಿಸಲು ಬರುವರು.
ಜನರು ನನ್ನ ವಿಧಿಗಳನ್ನು ಕಲಿತುಕೊಳ್ಳಲು ಇಷ್ಟಪಡುವರು.
ಆಗ ಅವರು ಸರಿಯಾಗಿ ಜೀವಿಸುವ ಜನಾಂಗವಾಗುವರು.
ಅವರು ದೇವರ ಒಳ್ಳೆಯ ಆಜ್ಞೆಗಳನ್ನು ಬಿಡದೆ ಅನುಸರಿಸುವರು.
ಅವರು ಪಕ್ಷಪಾತವಿಲ್ಲದೆ ನ್ಯಾಯತೀರಿಸಲು ನನ್ನನ್ನು ಕೇಳುವರು.
ದೇವರ ನಿರ್ಧಾರವನ್ನು ಕೇಳಲು ಆತನ ಬಳಿಗೆ ಹೋಗಲು ಇಚ್ಛಿಸುವರು.
3 ಈಗ ಆ ಜನರು ಹೀಗೆ ಹೇಳುತ್ತಾರೆ, “ನಾವು ನಿನ್ನನ್ನು ಗೌರವಿಸಲು ಉಪವಾಸಮಾಡಿದೆವು. ನೀನು ನಮ್ಮನ್ನೇಕೆ ಗಮನಿಸುವದಿಲ್ಲ? ನಿನ್ನನ್ನು ಗೌರವಿಸುವದಕ್ಕಾಗಿ ನಾವು ನಮ್ಮ ದೇಹಗಳನ್ನು ದಂಡಿಸಿದೆವು. ನೀನೇಕೆ ನಮ್ಮನ್ನು ಗಮನಿಸುವದಿಲ್ಲ?”
ಆದರೆ ಯೆಹೋವನು ಹೇಳುವುದೇನೆಂದರೆ: “ವಿಶೇಷ ದಿವಸಗಳಲ್ಲಿ ನಿಮ್ಮ ಇಷ್ಟಾನುಸಾರ[a] ಉಪವಾಸ ಮಾಡುವಿರಿ. ನೀವು ನಿಮ್ಮ ಸ್ವಂತ ದೇಹಗಳನ್ನು ದಂಡಿಸದೆ ನಿಮ್ಮ ಸೇವಕರನ್ನು ದಂಡಿಸುತ್ತಿದ್ದೀರಿ. 4 ನೀವು ಆಹಾರಕ್ಕಾಗಿ ಹಸಿವೆಯಿಂದಿಲ್ಲ. ನೀವು ಜಗಳ, ವಾಗ್ವಾದಕ್ಕಾಗಿ ಹಸಿದಿದ್ದೀರಿ. ನಿಮ್ಮ ಕ್ರೂರ ಕೈಗಳಿಂದ ಜನರನ್ನು ಹೊಡೆಯಲು ಹಸಿವೆಯಿಂದಿದ್ದೀರಿ. ನೀವು ಉಪವಾಸ ಮಾಡುವಾಗ ನನಗಾಗಿ ಮಾಡುವದಿಲ್ಲ. ನನ್ನನ್ನು ಸ್ತುತಿಸಲು ನೀವು ನಿಮ್ಮ ಸ್ವರವನ್ನು ಉಪಯೋಗಿಸುವದಿಲ್ಲ. 5 ಉಪವಾಸದ ದಿವಸಗಳಲ್ಲಿ ಜನರು ತಮ್ಮ ದೇಹದಂಡನೆ ಮಾಡುವದನ್ನು ನೋಡಲು ಆಶಿಸುತ್ತೇನೆ ಎಂದು ನೆನಸಿರುವಿರಾ? ಜನರು ತಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಕೆಂದು ನಾನು ಆಶಿಸುವುದಾಗಿ ನೀವು ತಿಳಿದುಕೊಂಡಿದ್ದೀರಾ? ಜನರು ಸತ್ತ ಸಸಿಗಳಂತೆ ನನಗೆ ಅಡ್ಡಬೀಳಬೇಕೆಂದೂ ಶೋಕವಸ್ತ್ರಗಳನ್ನು ಧರಿಸಬೇಕೆಂದೂ ನಾನು ಆಶಿಸುವುದಾಗಿ ತಿಳಿದುಕೊಂಡಿದ್ದೀರಾ? ಅವರು ಬೂದಿಯ ಮೇಲೆ ಕುಳಿತುಕೊಂಡು ತಮ್ಮ ದುಃಖವನ್ನು ವ್ಯಕ್ತಪಡಿಸಬೇಕೆಂದು ನಾನು ಆಶಿಸುತ್ತೇನೋ? ನೀವು ಉಪವಾಸದ ದಿವಸಗಳಲ್ಲಿ ಅದನ್ನೇ ಮಾಡುವವರಾಗಿರುತ್ತೀರಿ. ಯೆಹೋವನು ಅದನ್ನೇ ಆಶಿಸುವನೆಂದು ನಂಬುತ್ತೀರೋ?
6 “ನನಗೆ ಬೇಕಾಗಿರುವ ವಿಶೇಷ ದಿವಸ ಯಾವುದೆಂದು ನಾನು ಹೇಳುತ್ತೇನೆ. ಅದು ಜನರನ್ನು ಸ್ವತಂತ್ರರನ್ನಾಗಿ ಮಾಡುವ ದಿವಸ, ಜನರಿಂದ ಅವರ ಭಾರವನ್ನು ತೆಗೆದುಹಾಕುವ ದಿವಸ; ತೊಂದರೆಗೀಡಾಗಿರುವ ಜನರನ್ನು ವಿಮುಕ್ತರನ್ನಾಗಿ ಮಾಡುವ ದಿವಸ; ಅವರ ಹೆಗಲಿನಿಂದ ಭಾರದ ಹೊರೆಯನ್ನು ಇಳಿಸುವ ದಿವಸ. 7 ನೀವು ನಿಮ್ಮ ಊಟವನ್ನು ಹಸಿದವರೊಂದಿಗೆ ಹಂಚಿಕೊಳ್ಳುವದನ್ನು ನಾನು ನೋಡಲು ಆಶಿಸುತ್ತೇನೆ. ಮನೆಗಳಿಲ್ಲದ ಬಡ ಜನರನ್ನು ಕಂಡುಹಿಡಿದು ಅವರನ್ನು ನಿಮ್ಮ ಮನೆಗಳಿಗೆ ಕರೆದುಕೊಂಡು ಬರುವದನ್ನು ನೋಡಲು ಆಶಿಸುತ್ತೇನೆ. ಬಟ್ಟೆ ಇಲ್ಲದ ಒಬ್ಬ ಮನುಷ್ಯನನ್ನು ನೋಡಿದರೆ ನೀವು ನಿಮ್ಮ ಬಟ್ಟೆಯನ್ನು ಅವನಿಗೆ ಕೊಡಿರಿ. ಅವರಿಗೆ ಸಹಾಯ ಮಾಡಲು ಹಿಂಜರಿಯಬೇಡಿರಿ. ಅವರು ನಿಮ್ಮಂತೆ ಮನುಷ್ಯರಲ್ಲವೋ?”
8 ನೀವು ಹೀಗೆ ಮಾಡಿದ್ದಲ್ಲಿ ನೀವು ಬೆಳಕಿನಂತೆ ಪ್ರಕಾಶಿಸುವಿರಿ. ಆಗ ನಿಮ್ಮ ಗಾಯಗಳು ಗುಣವಾಗುವವು. ನಿಮ್ಮ ಒಳ್ಳೆಯತನವು ನಿಮ್ಮ ಮುಂದೆ ನಡೆಯುವುದು. ಯೆಹೋವನ ಮಹಿಮೆಯು ನಿಮ್ಮ ಹಿಂದಿನಿಂದ ನಿಮ್ಮನ್ನು ಹಿಂಬಾಲಿಸುವದು. 9 ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು.
ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು.
9 ಆಗ ನೀವು ಯೆಹೋವನನ್ನು ಕರೆದಾಗ ಆತನು ನಿಮಗೆ ಉತ್ತರಿಸುವನು. ನೀವು ಆತನನ್ನು ಕೂಗಿದಾಗ, “ಇಗೋ, ನಾನಿದ್ದೇನೆ” ಎಂದು ಅನ್ನುವನು.
ನೀವು ಜನರಿಗೆ ಕಷ್ಟಕೊಡುವದನ್ನೂ ಅವರಿಗೆ ಭಾರ ಹೊರಿಸುವದನ್ನೂ ನಿಲ್ಲಿಸಬೇಕು. ಜನರಿಗೆ ಕಟುವಾಗಿ ಮಾತನಾಡಿ ಅವರನ್ನು ಬಯ್ಯುವದನ್ನು ನಿಲ್ಲಿಸಬೇಕು. 10 ಹಸಿದ ಜನರಿಗಾಗಿ ವ್ಯಸನಪಟ್ಟು ಅವರಿಗೆ ಆಹಾರವನ್ನು ಕೊಡಬೇಕು. ಸಂಕಷ್ಟ ಅನುಭವಿಸುವ ಜನರಿಗೆ ಸಹಾಯಮಾಡಿ ಅವರ ಕೊರತೆಗಳನ್ನು ನೀಗಿಸಬೇಕು. ಆಗ ನಿಮ್ಮ ಬೆಳಕು ಕತ್ತಲಲ್ಲಿ ಪ್ರಕಾಶಿಸುವದು. ನಿಮಗೆ ಆಗ ದುಃಖವಿರದು. ಮಧಾಹ್ನದ ಸೂರ್ಯನಂತೆ ನೀವು ಹೊಳೆಯುವಿರಿ.
11 ಯೆಹೋವನು ಯಾವಾಗಲೂ ನಿಮ್ಮನ್ನು ನಡೆಸುವನು. ಒಣನೆಲದಲ್ಲಿ ನಿಮ್ಮ ಆತ್ಮಗಳನ್ನು ತೃಪ್ತಿಪಡಿಸುವನು. ನಿಮ್ಮ ಎಲುಬುಗಳಿಗೆ ಬಲವನ್ನು ಕೊಡುವನು. ನೀರಿನಿಂದ ತೇವವಾಗಿರುವ ತೋಟದಂತೆ ನೀವು ಇರುವಿರಿ. ನಿತ್ಯವೂ ನೀರಿರುವ ಬುಗ್ಗೆಯಂತೆ ನೀವಿರುವಿರಿ.
12 ಬಹಳ ವರ್ಷಗಳಿಂದ ನಿಮ್ಮ ಪಟ್ಟಣಗಳು ಹಾಳಾಗಿ ಬಿದ್ದಿವೆ. ಆದರೆ ಹೊಸ ಪಟ್ಟಣಗಳು ಏಳುವವು. ಅವುಗಳ ಅಸ್ತಿವಾರಗಳು ಬಹಳ ವರ್ಷ ಬಾಳುವವು. ನೀವು “ಬೇಲಿ ಸರಿಮಾಡುವವರು” ಎಂದು ಕರೆಯಲ್ಪಡುವಿರಿ; “ಮನೆಗಳನ್ನು, ರಸ್ತೆಗಳನ್ನು ನಿರ್ಮಿಸುವವರು” ಎಂದು ನೀವು ಕರೆಯಲ್ಪಡುವಿರಿ.
112 ಯೆಹೋವನಿಗೆ ಸ್ತೋತ್ರವಾಗಲಿ!
ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
2 ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
3 ಅವನ ಕುಟುಂಬದವರು ಐಶ್ವರ್ಯವಂತರಾಗುವರು.
ಅವನ ನೀತಿಯು ಶಾಶ್ವತವಾಗಿರುವುದು.
4 ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
5 ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
6 ಅವನೆಂದಿಗೂ ಬೀಳುವುದಿಲ್ಲ.
ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
7 ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
8 ಅವನ ಮನಸ್ಸು ದೃಢವಾಗಿರುವುದರಿಂದ
ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
9 ಅವನು ಬಡವರಿಗೆ ಉದಾರವಾಗಿ ಕೊಡುವನು.
ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
ಅವರ ದುರಾಶೆಯು ಈಡೇರದು.
ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ
2 ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. 2 ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. 3 ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. 4 ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. 5 ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.
ದೇವರ ಜ್ಞಾನ
6 ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ. 7 ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು. 8 ಈ ಲೋಕದ ಯಾವ ಅಧಿಪತಿಗಳೂ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಅರ್ಥಮಾಡಿಕೊಂಡಿದ್ದರೆ, ಮಹಿಮೆಯುಳ್ಳ ಪ್ರಭುವನ್ನು ಶಿಲುಬೆಗೇರಿಸುತ್ತಿರಲಿಲ್ಲ. 9 ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
“ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು
ಯಾವ ಕಣ್ಣೂ ಕಾಣಲಿಲ್ಲ.
ಯಾವ ಕಿವಿಯೂ ಕೇಳಲಿಲ್ಲ.
ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”(A)
10 ಆದರೆ ದೇವರು ತನ್ನ ಪವಿತ್ರಾತ್ಮನ ಮೂಲಕ ನಮಗೆ ಈ ಸಂಗತಿಗಳನ್ನು ಪ್ರಕಟಿಸಿದನು.
ಪವಿತ್ರಾತ್ಮನು ಸಕಲವನ್ನೂ ದೇವರ ಅಗಾಧವಾದ ರಹಸ್ಯಗಳನ್ನೂ ತಿಳಿದಿದ್ದಾನೆ. 11 ಇದು ಹೇಗೆಂದರೆ: ಒಬ್ಬನ ಆಲೋಚನೆಗಳು ಅವನ ಆಂತರ್ಯದಲ್ಲಿರುವ ಜೀವಾತ್ಮವೊಂದಕ್ಕೆ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಅಂತೆಯೇ, ದೇವರ ಆಲೋಚನೆಗಳು ದೇವರಾತ್ಮನ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. 12 ನಾವು ಹೊಂದಿಕೊಂಡದ್ದು ದೇವರಿಂದ ಬಂದ ಪವಿತ್ರಾತ್ಮನನ್ನೇ ಹೊರತು ಪ್ರಾಪಂಚಿಕವಾದ ಆತ್ಮವನ್ನಲ್ಲ. ದೇವರು ನಮಗೆ ಉಚಿತವಾಗಿ ಕೊಟ್ಟಿರುವಂಥವುಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಾವು ಆತನನ್ನು ಹೊಂದಿಕೊಂಡೆವು.
13 ನಾವು ಈಸಂಗತಿಗಳನ್ನು ಹೇಳುವಾಗ ಮನುಷ್ಯರ ಜ್ಞಾನದಿಂದ ಕಲಿತುಕೊಂಡಿರುವ ವಾಕ್ಯಗಳನ್ನು ಉಪಯೋಗಿಸದೆ ಆತ್ಮನಿಂದ ಕಲಿತುಕೊಂಡ ವಾಕ್ಯಗಳನ್ನೇ ಉಪಯೋಗಿಸುತ್ತೇವೆ. ಆತ್ಮಿಕ ಸಂಗತಿಗಳನ್ನು ವಿವರಿಸಲು ಆತ್ಮಿಕ ಪದಗಳನ್ನೇ ಬಳಸುತ್ತೇವೆ. 14 ಆತ್ಮಿಕನಲ್ಲದ ವ್ಯಕ್ತಿಯು ದೇವಾರಾತ್ಮನ ವಿಷಯಗಳನ್ನು ಸ್ವೀಕರಿಸಿಕೊಳ್ಳವುದಿಲ್ಲ. ಅವನು ಆ ವಿಷಯಗಳನ್ನು ಮೂರ್ಖತನವೆಂದು ಯೋಚಿಸುತ್ತಾನೆ. ಅವನು ಪವಿತ್ರಾತ್ಮನ ವಿಷಯಗಳನ್ನು ಅರ್ಥಮಾಡಿಕೊಳ್ಳಲಾರನು; ಏಕೆಂದರೆ ಆ ವಿಷಯಗಳನ್ನು ಆತ್ಮಿಕವಾಗಿ ವಿಚಾರಣೆ ಮಾಡಲು ಮಾತ್ರ ಸಾಧ್ಯ. 15 ಆದರೆ ಆತ್ಮಿಕ ಮನುಷ್ಯನು ಎಲ್ಲಾ ವಿಷಯಗಳ ಬಗ್ಗೆ ತೀರ್ಪು ಮಾಡಬಲ್ಲನು. ಅವನಿಗೆ ಬೇರೆ ಯಾರೂ ತೀರ್ಪು ನೀಡಲಾಗುವುದಿಲ್ಲ. 16 ಪವಿತ್ರ ಗ್ರಂಥವು ಹೇಳುವಂತೆ:
“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
ಪ್ರಭುವಿಗೆ ಯಾರು ಉಪದೇಶ ಮಾಡಬಲ್ಲರು?”(A)
ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.
ನೀವು ಉಪ್ಪಿನಂತಿದ್ದೀರಿ, ಬೆಳಕಿನಂತಿದ್ದೀರಿ
(ಮಾರ್ಕ 9:50; ಲೂಕ 14:34-35)
13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಉಪ್ಪನ್ನಾಗಿ ಮಾಡಲು ಸಾಧ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೊರಗೆ ಬಿಸಾಡಿ ಅದರ ಮೇಲೆ ನಡೆದಾಡುವರು.
14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮರೆಯಾಗಿರಲಾರದು. 15 ಜನರು ದೀಪವನ್ನು ಪಾತ್ರೆಯ ಕೆಳಗೆ ಮುಚ್ಚಿಡುವುದಿಲ್ಲ. ಜನರು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಮನೆಯಲ್ಲಿರುವವರಿಗೆಲ್ಲಾ ಬೆಳಕು ಪ್ರಕಾಶಿಸುವುದು. 16 ಅದೇ ರೀತಿಯಲ್ಲಿ ನೀವು ಜನರಿಗೆ ಬೆಳಕಾಗಿರಬೇಕು. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.
ಪವಿತ್ರ ಗ್ರಂಥಕ್ಕೆ ಅಂತ್ಯವೇ ಇಲ್ಲ
17 “ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು. 18 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಆಕಾಶ ಮತ್ತು ಭೂಮಿ ಅಳಿದುಹೋಗುವವರೆಗೂ ಧರ್ಮಶಾಸ್ತ್ರದಿಂದ ಏನೂ ಅಳಿದುಹೋಗುವುದಿಲ್ಲ. ಎಲ್ಲಾ ನೆರವೇರುವ ತನಕ ಧರ್ಮಶಾಸ್ತ್ರದ ಒಂದು ಅಕ್ಷರವಾಗಲಿ ಅಥವಾ ಅದರ ಒಂದು ಚುಕ್ಕೆಯಾಗಲಿ ಅಳಿದುಹೋಗುವುದಿಲ್ಲ.
19 “ಮನುಷ್ಯನು ಪ್ರತಿ ಆಜ್ಞೆಗೂ, ಅಂದರೆ ಸಣ್ಣಸಣ್ಣ ಆಜ್ಞೆಗೂ ವಿಧೇಯನಾಗಿರಬೇಕು. ಒಬ್ಬನು ಯಾವ ಆಜ್ಞೆಗಾದರೂ ಅವಿಧೇಯನಾಗಿ ಜೀವಿಸುತ್ತಾ ಆ ಆಜ್ಞೆಗೆ ಬೇರೆಯವರೂ ಅವಿಧೇಯರಾಗಿರಬೇಕೆಂದು ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅತ್ಯಲ್ಪನಾಗಿರುವನು. ಆದರೆ ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ಜೀವಿಸುತ್ತಾ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ಬೇರೆಯವರಿಗೂ ಬೋಧಿಸುವವನು ಪರಲೋಕರಾಜ್ಯದಲ್ಲಿ ಪ್ರಮುಖನಾಗಿರುವನು. 20 ಧರ್ಮೋಪದೇಶಕರಿಗಿಂತಲೂ ಫರಿಸಾಯರಿಗಿಂತಲೂ ನೀವು ಉತ್ತಮವಾದದ್ದನ್ನು ಮಾಡಬೇಕು. ಇಲ್ಲವಾದರೆ ನೀವು ಪರಲೋಕರಾಜ್ಯವನ್ನು ಪ್ರವೇಶಿಸಲಾರಿರಿ.
Kannada Holy Bible: Easy-to-Read Version. All rights reserved. © 1997 Bible League International