Revised Common Lectionary (Semicontinuous)
112 ಯೆಹೋವನಿಗೆ ಸ್ತೋತ್ರವಾಗಲಿ!
ಯಾವನು ಆತನಲ್ಲಿ ಭಯಭಕ್ತಿಯುಳ್ಳವನಾಗಿ
ಆತನ ಆಜ್ಞೆಗಳನ್ನು ಪ್ರೀತಿಸುವನೋ ಅವನೇ ಧನ್ಯನು.
2 ಅವನ ಸಂತತಿಗಳವರು ಭೂಮಿಯ ಮೇಲೆ ಪ್ರಬಲರಾಗುವರು;
ನೀತಿವಂತನ ಸಂತತಿಗಳವರು ಆಶೀರ್ವಾದವನ್ನು ಹೊಂದಿಕೊಳ್ಳುವರು.
3 ಅವನ ಕುಟುಂಬದವರು ಐಶ್ವರ್ಯವಂತರಾಗುವರು.
ಅವನ ನೀತಿಯು ಶಾಶ್ವತವಾಗಿರುವುದು.
4 ಆತನು ನೀತಿವಂತರಿಗೆ ಕತ್ತಲೆಯಲ್ಲಿ ಪ್ರಕಾಶಿಸುವ ಬೆಳಕಿನಂತಿರುವನು.
ಆತನು ಒಳ್ಳೆಯವನೂ ದಯಾಮಯನೂ ಕೃಪಾಮಯನೂ ಆಗಿದ್ದಾನೆ.
5 ದಯಾವಂತನಿಗೂ ಉದಾರಿಗೂ ಒಳ್ಳೆಯದಾಗುವುದು.
ನ್ಯಾಯವಾದ ವ್ಯಾಪಾರಸ್ಥನಿಗೆ ಒಳ್ಳೆಯದಾಗುವುದು.
6 ಅವನೆಂದಿಗೂ ಬೀಳುವುದಿಲ್ಲ.
ನೀತಿವಂತನನ್ನು ಜನರು ಸದಾಕಾಲ ಜ್ಞಾಪಿಸಿಕೊಳ್ಳುವರು.
7 ಒಳ್ಳೆಯವನು ಕೆಟ್ಟಸುದ್ದಿಗೆ ಭಯಪಡಬೇಕಿಲ್ಲ.
ಅವನು ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ ಅವನ ಮನಸ್ಸು ಸ್ಥಿರವಾಗಿರುವುದು.
8 ಅವನ ಮನಸ್ಸು ದೃಢವಾಗಿರುವುದರಿಂದ
ಅವನು ಭಯಪಡದೆ, ತನ್ನ ಶತ್ರುಗಳನ್ನು ಸೋಲಿಸುವನು.
9 ಅವನು ಬಡವರಿಗೆ ಉದಾರವಾಗಿ ಕೊಡುವನು.
ಅವನ ಸತ್ಕಾರ್ಯಗಳು ಶಾಶ್ವತವಾಗಿವೆ.
ಅವನು ಗೌರವವನ್ನು ಪಡೆದುಕೊಳ್ಳುವನು.
10 ದುಷ್ಟರು ಇದನ್ನು ಕಂಡು ಕೋಪಗೊಳ್ಳುವರು;
ಕೋಪದಿಂದ ಹಲ್ಲು ಕಡಿಯುತ್ತಾ ಅಳಿದುಹೋಗುವರು.
ಅವರ ದುರಾಶೆಯು ಈಡೇರದು.
ದೇವರ ಕಟ್ಟಳೆಗಳಿಗೆ ವಿಧೇಯರಾಗಬೇಕೆಂದು ಮೋಶೆಯು ಹೇಳಿದ್ದು
4 “ಇಸ್ರೇಲರೇ, ಈಗ ನಾನು ಉಪದೇಶಿಸಲಿರುವ ಕಟ್ಟಳೆಗಳಿಗೂ ಆಜ್ಞೆಗಳಿಗೂ ಕಿವಿಗೊಡಿರಿ. ನೀವು ಅವುಗಳಿಗೆ ವಿಧೇಯರಾದರೆ ಜೀವಿಸುವಿರಿ. ಆಗ ನೀವು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿರಿ. 2 ನಾನು ಕೊಡುವ ಆಜ್ಞೆಗಳಿಗೆ ನೀವು ಏನನ್ನೂ ಸೇರಿಸಬಾರದು; ಏನನ್ನೂ ತೆಗೆಯಬಾರದು. ನಾನು ನಿಮಗೆ ತಿಳಿಸುವ ದೇವರ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು.
3 “ಬಾಳ್‌ಪೆಗೋರಿನಲ್ಲಿ ನಡೆದ ಸಂಗತಿಯನ್ನು ನೀವು ನೋಡಿದ್ದೀರಿ. ಅಲ್ಲಿ ಬಾಳನನ್ನು ಪೂಜಿಸಿದವರನ್ನೆಲ್ಲಾ ಯೆಹೋವನು ನಾಶಮಾಡಿದನು. 4 ಆದರೆ ಯಾರು ದೇವರಾದ ಯೆಹೋವನನ್ನು ಮಾತ್ರ ಸೇವಿಸಿದರೋ ಅವರು ಈಗಲೂ ಜೀವಂತರಾಗಿದ್ದಾರೆ.
5 “ಯೆಹೋವನು ನನಗೆ ಆಜ್ಞಾಪಿಸಿದ ವಿಧಿನಿಯಮಗಳನ್ನು ನಾನು ನಿಮಗೆ ಬೋಧಿಸಿದೆನು. ಈಗ ನೀವು ಸ್ವಾಧೀನಪಡಿಸಿಕೊಳ್ಳುವ ದೇಶದಲ್ಲಿ ನೀವು ನೆಲೆಸುವಾಗ ಆ ವಿಧಿನಿಯಮಗಳನ್ನು ಅನುಸರಿಸಬೇಕೆಂದು ನಾನು ನಿಮಗೆ ಬೋಧಿಸಿದೆನು. 6 ಆ ನಿಯಮಗಳನ್ನು ಪರಿಪೂರ್ಣವಾಗಿ ಅಭ್ಯಾಸಿಸಿರಿ, ‘ಆಗ ಅನ್ಯಜನರು ನಿಮ್ಮನ್ನು ನೋಡಿ ನೀವು ಜ್ಞಾನಿಗಳು’ ಎಂದು ತಿಳಿದುಕೊಳ್ಳುವರು. ಆ ದೇಶದ ಜನರು ನಿಮ್ಮ ವಿಧಿನಿಯಮಗಳನ್ನು ಕೇಳಿ, ‘ನಿಜವಾಗಿಯೂ ಈ ಮಹಾ ಜನಾಂಗದ ಜನರು ಬುದ್ಧಿಯುಳ್ಳವರು ಮತ್ತು ಜ್ಞಾನಿಗಳು’ ಎಂದು ಹೇಳುವರು
7 “ನಾವು ನಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸುವಾಗ ಆತನು ನಮ್ಮ ಹತ್ತಿರವೇ ಇದ್ದಾನೆ. ಯಾವ ದೇಶದವರಿಗೂ ಆತನಂಥ ದೇವರಿಲ್ಲ. 8 ನಾನು ನಿಮಗೆ ಈ ಹೊತ್ತು ಕೊಡುವ ಉಪದೇಶಗಳಿಗೆ ನ್ಯಾಯದಲ್ಲೂ ಒಳ್ಳೆಯದರಲ್ಲೂ ಸರಿಸಮಾನವಾದ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಬೇರೆ ಯಾವ ದೊಡ್ಡ ದೇಶವೂ ಹೊಂದಿಲ್ಲ! 9 ಆದರೆ ನೀವು ನೋಡಿದ್ದನ್ನು ನಿಮ್ಮ ಜೀವಮಾನವೆಲ್ಲಾ ಜಾಗ್ರತೆಯುಳ್ಳವರಾಗಿದ್ದು ಮರೆಯದೆ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸಬೇಕು. 10 ಸೀನಾಯಿ ಬೆಟ್ಟದ ಬಳಿಯಲ್ಲಿ ನೀನು ಯೆಹೋವನ ಸನ್ನಿಧಾನದಲ್ಲಿ ನಿಂತಿದ್ದನ್ನು ನೀವು ಜ್ಞಾಪಕ ಮಾಡಿಕೊಳ್ಳಿರಿ. ಆತನು ನನಗೆ ಹೇಳಿದ್ದೇನೆಂದರೆ: ‘ನಾನು ಹೇಳುವ ಮಾತುಗಳನ್ನು ಕೇಳುವಂತೆ ಜನರನ್ನೆಲ್ಲಾ ಒಟ್ಟುಗೂಡಿಸು. ನನ್ನ ಮಾತುಗಳನ್ನು ಕೇಳಿ ಅವರು ಜೀವಮಾನವೆಲ್ಲಾ ನನ್ನನ್ನು ಸನ್ಮಾನಿಸಲು ಮತ್ತು ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು ಮತ್ತು ಅವರ ಮಕ್ಕಳಿಗೂ ಕಲಿಸುವರು.’ 11 ಆಗ ನೀವು ಬೆಟ್ಟದ ಸಮೀಪಕ್ಕೆ ಬಂದು ನಿಂತುಕೊಂಡಿರಿ. ಆ ಪರ್ವತವು ಬೆಂಕಿಯಿಂದ ಪ್ರಜ್ವಲಿಸಿ ಆಕಾಶದ ತನಕ ಮುಟ್ಟಿತ್ತು. ಆಗ ಕಾರ್ಮೋಡವೂ ಕತ್ತಲೆಯೂ ಆವರಿಸಿತು. 12 ಆ ಬೆಂಕಿಯೊಳಗಿಂದ ಯೆಹೋವನು ಮಾತನಾಡಿದನು. ಅದು ಯಾರೋ ಮಾತಾಡಿದಂತಿತ್ತು, ಆದರೆ ನೀವು ಯಾರನ್ನೂ ಕಾಣಲಿಲ್ಲ. ನೀವು ಸ್ವರವನ್ನು ಮಾತ್ರ ಕೇಳಿದಿರಿ. 13 ಅಲ್ಲಿ ಆತನು ನಿಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಆತನು ಹತ್ತು ಆಜ್ಞೆಗಳನ್ನು ನಿಮಗೆ ಕೊಟ್ಟು ಅವುಗಳನ್ನು ಅನುಸರಿಸಲು ಆಜ್ಞಾಪಿಸಿದನು. ಆ ಹತ್ತು ಆಜ್ಞೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದನು. 14 ಅದೇ ಸಮಯದಲ್ಲಿ ದೇವರಾದ ಯೆಹೋವನು ನನಗೆ ಇತರ ವಿಧಿನಿಯಮಗಳನ್ನು ತಿಳಿಸಿ ನೀವು ವಾಗ್ದಾನ ಮಾಡಿದ ದೇಶದೊಳಗೆ ನೆಲೆಸಿದಾಗ ಆ ವಿಧಿನಿಯಮಗಳನ್ನು ಅನುಸರಿಸಲು ನಿಮಗೆ ತಿಳಿಸಲು ಹೇಳಿದನು.
ದೇವರ ಮಕ್ಕಳು ಲೋಕದ ವಿರುದ್ಧ ಜಯಗಳಿಸುವರು
5 ಯೇಸುವೇ ಕ್ರಿಸ್ತನೆಂದು ನಂಬುವವರು ದೇವರ ಮಕ್ಕಳಾಗಿದ್ದಾರೆ. ತಂದೆಯನ್ನು (ದೇವರನ್ನು) ಪ್ರೀತಿಸುವವನು ತಂದೆಯ ಮಕ್ಕಳನ್ನೂ ಪ್ರೀತಿಸುತ್ತಾನೆ. 2 ನಾವು ದೇವರ ಮಕ್ಕಳನ್ನು ಪ್ರೀತಿಸುತ್ತಿದ್ದೇವೆಂಬುದು ನಮಗೆ ಹೇಗೆ ತಿಳಿದಿದೆ? ನಾವು ದೇವರನ್ನು ಪ್ರೀತಿಸುತ್ತಿರುವುದರಿಂದ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಿರುವುದರಿಂದ ದೇವರ ಆಜ್ಞೆಗಳು ನಮಗೆ ತಿಳಿದಿವೆ. 3 ದೇವರನ್ನು ಪ್ರೀತಿಸುವುದು ಎಂದರೆ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಆಜ್ಞೆಗಳು ನಮಗೆ ಕಠಿಣವಾದವುಗಳಲ್ಲ. 4 ಏಕೆಂದರೆ ದೇವರಿಂದ ಹೊಸದಾಗಿ ಹುಟ್ಟಿರುವ ಪ್ರತಿಯೊಬ್ಬನೂ ಲೋಕದ ವಿರುದ್ಧ ಗೆಲ್ಲುವ ಶಕ್ತಿಯನ್ನು ಹೊಂದಿದ್ದಾನೆ. 5 ಲೋಕದ ವಿರುದ್ಧ ಜಯಗಳಿಸಿದ್ದು ನಮ್ಮ ನಂಬಿಕೆಯೇ. ಆದ್ದರಿಂದ ಲೋಕದ ವಿರುದ್ಧ ಜಯಗಳಿಸುವವನು ಯಾರು? ಯೇಸುವನ್ನು ದೇವರ ಮಗನೆಂದು ನಂಬುವ ವ್ಯಕ್ತಿಯು ಮಾತ್ರ ಜಯಗಳಿಸುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International