Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:1-17

ರಚನೆಗಾರ: ದಾವೀದ

37 ದುಷ್ಟರನ್ನು ನೋಡಿ ಉರಿಗೊಳ್ಳಬೇಡ.
    ಕೆಡುಕರನ್ನು ಕಂಡು ಹೊಟ್ಟೆಕಿಚ್ಚುಪಡಬೇಡ.
ದುಷ್ಟರು ಹುಲ್ಲಿನಂತೆಯೂ
    ಸೊಪ್ಪಿನಂತೆಯೂ ಬೇಗನೆ ಒಣಗಿಹೋಗುವರು.
ನೀನು ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ದೀರ್ಘಕಾಲ ಬದುಕುವೆ;
    ಭೂಮಿಯ ಅನೇಕ ಫಲಗಳನ್ನು ಅನುಭವಿಸುವೆ.
ಯೆಹೋವನಿಗೆ ಸಂತೋಷದಿಂದ ಸೇವೆಮಾಡು.
    ನಿನಗೆ ಬೇಕಾದುದನ್ನು ಆತನೇ ಕೊಡುವನು.
ಯೆಹೋವನನ್ನು ಆಶ್ರಯಿಸಿಕೊ, ಆತನಲ್ಲಿ ಭರವಸವಿಡು.
    ನಿನಗೆ ಅಗತ್ಯವಾದದ್ದನ್ನು ಆತನೇ ಮಾಡುವನು.
ನಿನ್ನ ನೀತಿಯೂ ನ್ಯಾಯವೂ
    ಮಧಾಹ್ನದ ಸೂರ್ಯನಂತೆ ಪ್ರಕಾಶಿಸಲಿ.
ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು.
    ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ.
    ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.
ಕೋಪದಿಂದಿರಬೇಡ! ರೋಷದಿಂದಿರಬೇಡ! ಉರಿಗೊಳ್ಳಬೇಡ! ಅವು ನಿನ್ನನ್ನು ಕೆಡುಕಿಗೆ ನಡೆಸುತ್ತವೆ.
ದುಷ್ಟರಾದರೋ ನಾಶವಾಗುವರು.
    ಯೆಹೋವನಲ್ಲಿ ಮೊರೆಯಿಡುವವರಾದರೋ ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ಪಡೆದುಕೊಳ್ಳುವರು.
10 ಇನ್ನು ಸ್ವಲ್ಪ ಕಾಲದೊಳಗೆ ದುಷ್ಟರು ಇರುವುದೇ ಇಲ್ಲ.
    ನೀನು ಅವರಿಗಾಗಿ ಹುಡುಕಿದರೂ ಅವರು ಸಿಕ್ಕುವುದಿಲ್ಲ!
11 ವಾಗ್ದಾನ ಮಾಡಲ್ಪಟ್ಟ ಭೂಮಿಯನ್ನು ದೀನರು ಪಡೆದುಕೊಳ್ಳುವರು;
    ಸಮಾಧಾನವನ್ನು ಅನುಭವಿಸುವರು.

12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
    ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
    ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
    ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
    ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
    ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
    ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.

ರೂತಳು 2:1-16

ರೂತಳಿಗೆ ಬೋವಜನ ಭೇಟಿ

ಬೆತ್ಲೆಹೇಮಿನಲ್ಲಿ ಬೋವಜನೆಂಬ ಒಬ್ಬ ಐಶ್ವರ್ಯವಂತನಿದ್ದನು. ಬೋವಜನು ಎಲೀಮೆಲೆಕನ ಕುಟುಂಬದವನಾಗಿದ್ದು ನೊವೊಮಿಯ ಸಮೀಪದ ಸಂಬಂಧಿಯಾಗಿದ್ದನು.

ಒಂದು ದಿನ ಮೋವಾಬ್ಯಳಾದ ರೂತಳು ನೊವೊಮಿಗೆ, “ನಾನು ಹೊಲಗಳಿಗೆ ಹೋಗುತ್ತೇನೆ. ಯಾರಾದರೂ ದಯೆತೋರಿ ತಮ್ಮ ಹೊಲದಲ್ಲಿ ಹಕ್ಕಲನ್ನು ಆರಿಸಲು ಅನುಮತಿ ಕೊಡಬಹುದು” ಎಂದಳು.

ನೊವೊಮಿಯು, “ಆಗಲಿ ಮಗಳೇ, ಹಾಗೆಯೇ ಮಾಡು” ಅಂದಳು.

ರೂತಳು ಹೊಲಗಳಿಗೆ ಹೋದಳು. ಅವಳು ಅಲ್ಲಿ ಫಸಲು ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾಯುತ್ತಾ ಎಲೀಮೆಲೆಕನ ಗೋತ್ರದವನಾದ ಬೋವಜನ ಹೊಲಕ್ಕೆ ಬಂದಳು.

ತರುವಾಯ ಬೋವಜನು ಬೆತ್ಲೆಹೇಮಿನಿಂದ ಹೊಲಕ್ಕೆ ಬಂದನು. ಅವನು ಕೆಲಸಗಾರರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಹರಸಿದನು.

ಆ ಕೆಲಸಗಾರರು, “ಯೆಹೋವನು ನಿನಗೆ ಕೃಪೆ ತೋರಲಿ” ಎಂದು ಉತ್ತರಿಸಿದರು.

ಆಗ ಬೋವಜನು ಕೊಯ್ಯುವವರ ಮೇಲ್ವಿಚಾರಕನಾಗಿದ್ದ ತನ್ನ ಸೇವಕನನ್ನು, “ಆ ಸ್ತ್ರೀ ಯಾರು?” ಎಂದು ಕೇಳಿದನು.

ಆ ಸೇವಕನು, “ಅವಳು ಮೋವಾಬ್ ಬೆಟ್ಟಪ್ರದೇಶದಿಂದ ನೊವೊಮಿಯ ಸಂಗಡ ಬಂದ ಮೋವಾಬ್ಯರ ಸ್ತ್ರೀ. ಅವಳು ಇಂದು ಬೆಳಗಿನ ಜಾವದಲ್ಲಿ ಬಂದು, ಕೊಯ್ಯುವವರ ಹಿಂದೆ ಹೋಗಿ ಹಕ್ಕಲಾರಿಸಿಕೊಳ್ಳಬಹುದೇ? ಎಂದು ನನ್ನನ್ನು ಕೇಳಿದಳು. ಆಗಿನಿಂದ ಅವಳು ಆ ಕೆಲಸವನ್ನು ಮಾಡುತ್ತಿದ್ದಾಳೆ. ಆಕೆ ಸ್ವಲ್ಪ ಹೊತ್ತು ಮಾತ್ರ ಆ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡಳು” ಎಂದು ಉತ್ತರಕೊಟ್ಟನು.

ಆಗ ಬೋವಜನು ರೂತಳಿಗೆ, “ಮಗಳೇ, ನೀನು ನನ್ನ ಹೊಲದಲ್ಲಿಯೇ ಧಾನ್ಯವನ್ನು ಶೇಖರಿಸು. ನೀನು ಬೇರೆಯವರ ಹೊಲಕ್ಕೆ ಹೋಗುವ ಅವಶ್ಯಕತೆಯಿಲ್ಲ. ನನ್ನ ಹೆಣ್ಣಾಳುಗಳ ಹಿಂದೆಯೇ ನೀನು ಹೋಗುತ್ತಿರು. ಅವರು ಯಾವ ಹೊಲಕ್ಕೆ ಹೋಗುತ್ತಾರೆಂಬುದನ್ನು ತಿಳಿದುಕೊಂಡು ಅವರನ್ನು ಹಿಂಬಾಲಿಸು; ನಿನಗೆ ತೊಂದರೆ ಕೊಡಕೂಡದೆಂದು ನನ್ನ ಸೇವಕರಿಗೆ ಆಜ್ಞಾಪಿಸಿದ್ದೇನೆ. ನಿನಗೆ ಬಾಯಾರಿಕೆಯಾದರೆ ನೀರಿನ ಕೊಡಗಳ ಬಳಿಗೆ ಹೋಗಿ ನನ್ನ ಆಳುಗಳು ಸೇದುವ ನೀರನ್ನೇ ಕುಡಿ” ಎಂದು ಹೇಳಿದನು.

10 ಆಗ ರೂತಳು ತಲೆಬಾಗಿ ವಂದಿಸಿದಳು. ಅವಳು ಬೋವಜನಿಗೆ, “ನನಗೆ ಆಶ್ಚರ್ಯವಾಗುತ್ತದೆ. ನಾನೊಬ್ಬ ಪರದೇಶಿಯಾಗಿದ್ದರೂ ನೀನು ನನ್ನನ್ನು ಗಮನಿಸಿ ಕೃಪೆ ತೋರಿದೆ” ಎಂದಳು.

11 ಬೋವಜನು ಅವಳಿಗೆ, “ನೀನು ನಿನ್ನ ಅತ್ತೆಯಾದ ನೊವೊಮಿಗೆ ಮಾಡಿದ ಎಲ್ಲ ಸಹಾಯದ ಬಗ್ಗೆ ನನಗೆ ಗೊತ್ತಿದೆ. ನಿನ್ನ ಗಂಡನು ಸತ್ತ ಮೇಲೆಯೂ ನೀನು ಅವಳಿಗೆ ಸಹಾಯ ಮಾಡಿದೆ ಎಂಬುದು ನನಗೆ ಗೊತ್ತಿದೆ. ನೀನು ನಿನ್ನ ತಂದೆತಾಯಿಗಳನ್ನೂ ನಿನ್ನ ದೇಶವನ್ನೂ ಬಿಟ್ಟು ಈ ದೇಶಕ್ಕೆ ಬಂದಿರುವಿ ಎಂಬುದು ನನಗೆ ಗೊತ್ತು. ನಿನಗೆ ಈ ದೇಶದಲ್ಲಿ ಯಾರ ಪರಿಚಯವೂ ಇರಲಿಲ್ಲ; ಆದರೂ ನೀನು ನೊವೊಮಿಯ ಜೊತೆ ಇಲ್ಲಿಗೆ ಬಂದಿರುವಿ. 12 ನೀನು ಮಾಡಿದ ಎಲ್ಲ ಸತ್ಕಾರ್ಯಕ್ಕೆ ಯೆಹೋವನು ನಿನಗೆ ಸಂಪೂರ್ಣ ಪ್ರತಿಫಲ ಕೊಡುವನು; ಯಾಕೆಂದರೆ ನೀನು ಯಾವಾತನ ಆಶ್ರಯವನ್ನು[a] ಕೋರಿ ಬಂದಿರುವಿಯೋ ಆತನು ನಿನ್ನನ್ನು ರಕ್ಷಿಸುತ್ತಾನೆ” ಎಂದು ಸಮಾಧಾನ ಪಡಿಸಿದನು.

13 ಆಗ ರೂತಳು, “ನನ್ನ ಸ್ವಾಮೀ, ನೀವು ನನಗೆ ತುಂಬ ದಯೆ ತೋರಿದಿರಿ. ನಾನು ಕೇವಲ ಒಬ್ಬ ದಾಸಿ. ನಾನು ನಿಮ್ಮ ಒಬ್ಬ ದಾಸಿಯ ಸಮಾನಳಲ್ಲದಿದ್ದರೂ ನೀವು ಒಳ್ಳೆಯ ಮಾತುಗಳಿಂದ ನನಗೆ ಕನಿಕರ ತೋರಿದಿರಿ” ಎಂದು ತನ್ನ ಕೃತಜ್ಞತೆಯನ್ನು ಸೂಚಿಸಿದಳು.

14 ಊಟದ ಸಮಯದಲ್ಲಿ ಬೋವಜನು ರೂತಳಿಗೆ, “ಇಲ್ಲಿ ಬಾ, ರೊಟ್ಟಿಯನ್ನು ತೆಗೆದುಕೊಂಡು ಹುಳಿರಸದಲ್ಲಿ ಅದ್ದಿಕೊಂಡು ತಿನ್ನು” ಎಂದು ಹೇಳಿದನು.

ರೂತಳು ಕೆಲಸಗಾರರ ಜೊತೆ ಕುಳಿತುಕೊಂಡಳು. ಬೋವಜನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ರೂತಳು ಹೊಟ್ಟೆತುಂಬ ಊಟ ಮಾಡಿದ ಮೇಲೂ ಸ್ವಲ್ಪ ಆಹಾರ ಉಳಿಯಿತು. 15 ಆಗ ರೂತಳು ಎದ್ದು ಪುನಃ ಕೆಲಸಕ್ಕೆ ಹೋದಳು.

ಆಗ ಬೋವಜನು ತನ್ನ ಸೇವಕರಿಗೆ, “ರೂತಳು ಕಣದಲ್ಲಿರುವ ಸಿವುಡುಗಳ ಸುತ್ತಲೂ ಹಕ್ಕಲು ಆರಿಸಿಕೊಳ್ಳಲಿ; ಅವಳನ್ನು ತಡೆಯಬೇಡಿ. 16 ಅವಳಿಗಾಗಿ ಕಟ್ಟುಗಳಿಂದ ಕೆಲವು ತುಂಬು ತೆನೆಗಳನ್ನೇ ಬಿಟ್ಟು ಅವಳ ಕೆಲಸ ಸುಲಭಗೊಳಿಸಿರಿ. ಆ ಧಾನ್ಯವನ್ನು ತೆಗೆದುಕೊಂಡರೆ ಅವಳನ್ನು ಗದರಿಸಬೇಡಿ” ಎಂದು ಆಜ್ಞಾಪಿಸಿದನು.

ಯಾಕೋಬನು 5:1-6

ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು

ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.

ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International