Revised Common Lectionary (Semicontinuous)
ಯೆಹೋವನ ದೂರು
6 ಯೆಹೋವನು ಹೇಳುವುದನ್ನು ಕೇಳಿರಿ:
“ನಿನ್ನ ವ್ಯಾಜ್ಯವನ್ನು ಬೆಟ್ಟಗಳಿಗೆ ತಿಳಿಸು.
ಗುಡ್ಡಗಳು ನಿನ್ನ ಕಥೆಯನ್ನು ಕೇಳಲಿ.
2 ಯೆಹೋವನಿಗೆ ತನ್ನ ಜನರ ವಿರುದ್ಧವಾಗಿ ವ್ಯಾಜ್ಯವಿದೆ.
ಪರ್ವತಗಳೇ, ಭೂಮಿಯ ಅಸ್ತಿವಾರಗಳೇ
ಯೆಹೋವನ ದೂರುಗಳನ್ನು ಕೇಳಿರಿ.
ಇಸ್ರೇಲ್ ತಪ್ಪಿತಸ್ಥನೆಂದು ಆತನು ಧೃಡಪಡಿಸುವನು.”
3 ಯೆಹೋವನು ಹೇಳುವುದೇನೆಂದರೆ, “ನನ್ನ ಜನರೇ, ನಾನು ಮಾಡಿದ್ದೇನು ತಿಳಿಸಿರಿ.
ನಿಮಗೆ ವಿರೋಧವಾಗಿ ನಾನು ಏನಾದರೂ ಮಾಡಿದ್ದೇನೋ?
ನಿಮಗೆ ಜೀವಿಸಲು ಕಷ್ಟವಾಗುವಂತೆ ಮಾಡಿದ್ದೇನೋ?
4 ನಾನು ಮಾಡಿದ್ದನ್ನು ನಿಮಗೆ ಹೇಳುತ್ತೇನೆ,
ನಾನು ನಿಮ್ಮ ಬಳಿಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ಕಳುಹಿಸಿದೆನು.
ನಾನು ಈಜಿಪ್ಟ್ ದೇಶದಿಂದ ನಿಮ್ಮನ್ನು ಕರೆತಂದೆನು.
ಗುಲಾಮತನದಿಂದ ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದೆನು.
5 ನನ್ನ ಜನರೇ, ಮೋವಾಬ್ಯರ ಅರಸನಾದ ಬಾಲಾಕನ ದುಷ್ಟ ಯೋಜನೆಯನ್ನು ನೆನಪುಮಾಡಿರಿ.
ಬೆಯೋರನ ಮಗನಾದ ಬಿಳಾಮನು ಬಾಲಾಕನಿಗೆ ಏನು ಹೇಳಿದನೆಂದು ಜ್ಞಾಪಕಮಾಡಿರಿ.
ಶಿಟ್ಟೀಮಿನಿಂದ ಗಿಲ್ಗಾಲಿನ ತನಕ ನಡೆದ ಘಟನೆಗಳನ್ನು ನಿಮ್ಮ ನೆನಪಿಗೆ ತಂದುಕೊಳ್ಳಿರಿ.
ಅವೆಲ್ಲವನ್ನು ನೀವು ನೆನಪುಮಾಡಿದರೆ ಯೆಹೋವನು ನೀತಿವಂತನು ಎಂದು ನಿಮಗೆ ಗೊತ್ತಾಗುವದು.”
ನಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ?
6 ನಾನು ದೇವರಾದ ಯೆಹೋವನನ್ನು ಸಂಧಿಸಲು ಬರುವಾಗ ಏನನ್ನು ತೆಗೆದುಕೊಂಡು ಬರಲಿ?
ಪರಲೋಕದ ದೇವರಿಗೆ ನಾನು ಅಡ್ಡಬಿದ್ದು ಆರಾಧಿಸುವಾಗ ಏನು ಮಾಡಲಿ?
ನಾನು ಕರ್ತನ ಬಳಿಗೆ ಬರುವಾಗ ಸರ್ವಾಂಗಹೋಮದೊಡನೆ
ಒಂದು ವರ್ಷದ ಕರುವನ್ನು ತೆಗೆದುಕೊಂಡು ಬರಲೋ?
7 ದೇವರಾದ ಯೆಹೋವನು ಒಂದು ಸಾವಿರ ಟಗರು,
ಹತ್ತುಸಾವಿರ ಎಣ್ಣೆಯ ಹೊಳೆಗಳಲ್ಲಿ ಸಂತೋಷಿಸುವನೋ?
ನಾನು ಮಾಡಿದ ತಪ್ಪಿನ ಪರಿಹಾರಕ್ಕಾಗಿ ನನ್ನ ಚೊಚ್ಚಲ ಮಗನನ್ನು ಸಮರ್ಪಿಸಲೋ?
ನನ್ನ ಶರೀರದಿಂದ ಬಂದ ಮಗನನ್ನು ನನ್ನ ಪಾಪಗಳಿಗಾಗಿ ಸಮರ್ಪಿಸಲೋ?
8 ಮನುಷ್ಯನೇ, ಒಳ್ಳೆಯದು ಏನೆಂದು ಯೆಹೋವನು ನಿನಗೆ ತಿಳಿಸಿದ್ದಾನೆ.
ಯೆಹೋವನು ನಿನ್ನಿಂದ ಅಪೇಕ್ಷಿಸುವದೇನೆಂದರೆ,
ಇತರರಿಗೆ ನೀನು ಅನ್ಯಾಯ ಮಾಡದಿರು.
ದಯೆ ಮತ್ತು ನಂಬಿಗಸ್ತಿಕೆಗಳನ್ನು ಪ್ರೀತಿಸು.
ದೀನತೆಯಿಂದ ನಿನ್ನ ದೇವರಿಗೆ ವಿಧೇಯನಾಗಿರು.
ರಚನೆಗಾರ: ದಾವೀದ.
15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
2 ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
3 ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
4 ಅವನು ದೇವದೂಷಕರನ್ನು ತಿರಸ್ಕರಿಸುವವನೂ
ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
5 ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]
ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ
18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ. 19 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು.
ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.”(A)
20 ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ. 21 ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು.
22 ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ. 23 ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ. 24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ. 25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.
26 ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ. 27 ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ. 28 ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು. 29 ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ. 30 ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ. 31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”
ಪರ್ವತ ಪ್ರಸಂಗ
(ಲೂಕ 6:20-23)
5 ಯೇಸು ಈ ಜನಸಮೂಹವನ್ನು ನೋಡಿ, ಬೆಟ್ಟದ ಮೇಲೆ ಹೋಗಿ ಕುಳಿತುಕೊಂಡನು. ಆತನ ಶಿಷ್ಯರು ಸಹ ಆತನ ಬಳಿಗೆ ಬಂದರು. 2 ಆಗ ಯೇಸು ಜನರಿಗೆ ಈ ಉಪದೇಶ ಮಾಡಿದನು:
3 “ಆತ್ಮಿಕತೆಯಲ್ಲಿ ಬಡವರಾಗಿರುವವರು ಧನ್ಯರು.
ಪರಲೋಕರಾಜ್ಯ ಅವರದು.
4 ಈಗ ದು:ಖದಿಂದಿರುವವರು ಧನ್ಯರು.
ದೇವರು ಅವರನ್ನು ಸಂತೈಸುವನು.
5 ದೀನರು ಧನ್ಯರು.
ದೇವರು ವಾಗ್ದಾನ ಮಾಡಿದ ಭೂಮಿಯನ್ನು ಅವರು ಹೊಂದಿಕೊಳ್ಳುವರು.
6 ನೀತಿಗಾಗಿ ತವಕಪಡುವವರು ಧನ್ಯರು.
ದೇವರು ಅವರನ್ನು ಸಂತೃಪ್ತಿಪಡಿಸುವನು.
7 ಕರುಣೆ ತೋರುವವರು ಧನ್ಯರು.
ಅವರು ಕರುಣೆ ಹೊಂದುವರು.
8 ಪರಿಶುದ್ಧ ಹೃದಯವುಳ್ಳವರು ಧನ್ಯರು.
ಅವರು ದೇವರನ್ನು ನೋಡುವರು.
9 ಸಮಾಧಾನಪಡಿಸುವವರು ಧನ್ಯರು.
ಅವರು ‘ದೇವರ ಮಕ್ಕಳು’ ಎನಿಸಿಕೊಳ್ಳುವರು.
10 ನೀತಿಯ ನಿಮಿತ್ತ ಹಿಂಸೆಪಡುವವರು ಧನ್ಯರು.
ಪರಲೋಕರಾಜ್ಯ ಅವರದು.
11 “ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಅಪಹಾಸ್ಯ ಮಾಡಿದರೆ, ಹಿಂಸೆಪಡಿಸಿದರೆ ಮತ್ತು ನಿಮ್ಮ ಮೇಲೆ ಕೆಟ್ಟಕೆಟ್ಟ ವಿಷಯಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರಾಗಿದ್ದೀರಿ. 12 ಸಂತೋಷಪಡಿರಿ, ಆನಂದಿಸಿರಿ. ಪರಲೋಕದಲ್ಲಿ ನಿಮಗಾಗಿ ಕಾದಿರುವ ಹೆಚ್ಚಿನ ಪ್ರತಿಫಲವನ್ನು ನೀವು ಹೊಂದುವಿರಿ. ನಿಮಗಿಂತ ಮುಂಚೆ ಜೀವಿಸಿದ್ದ ಪ್ರವಾದಿಗಳಿಗೂ ಜನರು ಹೀಗೆಯೇ ಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International