Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 15

ರಚನೆಗಾರ: ದಾವೀದ.

15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
    ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
    ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
    ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
ಅವನು ದೇವದೂಷಕರನ್ನು ತಿರಸ್ಕರಿಸುವವನೂ
    ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
    ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
    ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
    ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]

ಧರ್ಮೋಪದೇಶಕಾಂಡ 24:17-25:4

17 “ಪರದೇಶಸ್ಥರನ್ನು ಮತ್ತು ಅನಾಥರನ್ನು ಯೋಗ್ಯವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ವಿಧವೆಯರ ಬಟ್ಟೆಗಳನ್ನು ಒತ್ತೆಯಿಟ್ಟುಕೊಳ್ಳಕೂಡದು. 18 ನೀವು ಈಜಿಪ್ಟಿನಲ್ಲಿ ಬಡ ಗುಲಾಮರಾಗಿದ್ದುದನ್ನು ಸ್ಮರಿಸಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ನೀವು ಬಡವರಿಗೆ ದಯೆ ತೋರಿಸಬೇಕು.

19 “ನೀವು ಹೊಲದಲ್ಲಿ ಬೆಳೆದ ಬೆಳೆಯನ್ನು ಕೊಯ್ದು ಮನೆಗೆ ತರುವಾಗ ಕೆಲವು ಸಿವುಡುಗಳನ್ನು ನೀವು ಹೊಲದಲ್ಲಿಯೇ ಬಿಟ್ಟು ಬಂದಿದ್ದರೆ ಅದನ್ನು ತರಲು ಹಿಂದಕ್ಕೆ ಹೋಗಬೇಡಿ. ಅದನ್ನು ನಿಮ್ಮ ಊರಿನಲ್ಲಿರುವ ಅನಾಥರಿಗೂ ವಿಧವೆಯರಿಗೂ ಪರದೇಶಸ್ಥರಿಗೂ ಬಿಡಿರಿ. ನೀವು ಹಾಗೆ ಮಾಡಿದರೆ ದೇವರಾದ ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವನು. 20 ನೀವು ನಿಮ್ಮ ಎಣ್ಣೆಮರಗಳ ಕಾಯಿಗಳನ್ನು ಉದುರಿಸುವಾಗ ಮತ್ತೆ ಹೋಗಿ ಕೊಂಬೆಗಳಲ್ಲಿ ಕಾಯಿ ಹುಡುಕಬಾರದು. ಬಿಟ್ಟ ಕಾಯಿಗಳು ಪರದೇಶಸ್ಥರಿಗೂ ಊರಿನ ಅನಾಥ ಮತ್ತು ವಿಧವೆಯವರಿಗೂ ಆಗುವುದು. 21 ನಿಮ್ಮ ತೋಟದಿಂದ ಹಣ್ಣುಗಳನ್ನು ಕೂಡಿಸುವಾಗ ಉಳಿದ ಹಣ್ಣುಗಳನ್ನು ಶೇಖರಿಸಲು ಹಿಂತಿರುಗಬೇಡಿ; ಆ ಉಳಿದ ದ್ರಾಕ್ಷಿಹಣ್ಣುಗಳು ಊರಲ್ಲಿರುವ ಅನಾಥರಿಗೂ ವಿಧವೆಯರಿಗೂ ಮತ್ತು ಪರದೇಶಸ್ಥರಿಗೂ ಬಿಡಿರಿ. 22 ನೀವು ಈಜಿಪ್ಟ್ ದೇಶದಲ್ಲಿ ಬಡ ಗುಲಾಮರಾಗಿದ್ದುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಆದ್ದರಿಂದಲೇ ಬಡವರಿಗೆ ನೀವು ಹೀಗೆ ಮಾಡಬೇಕೆಂದು ನಿಮಗೆ ತಿಳಿಸುತ್ತಿದ್ದೇನೆ.

25 “ನಿಮ್ಮಲ್ಲಿ ಯಾರಿಗಾದರೂ ಇಬ್ಬರಿಗೆ ವಾಗ್ವಾದವಿದ್ದಲ್ಲಿ ಅವರು ಅದನ್ನು ನ್ಯಾಯಸ್ಥಾನಕ್ಕೆ ತೆಗೆದುಕೊಂಡು ಹೋಗಲಿ. ಅಲ್ಲಿ ನ್ಯಾಯಾಧೀಶರು ಯಾರು ಸರಿ ಯಾರು ತಪ್ಪು ಎಂದು ತೀರ್ಮಾನಿಸುವರು. ನ್ಯಾಯಾಧೀಶರು ಒಬ್ಬನಿಗೆ ಕೊರಡೆ ಏಟು ಕೊಡಬೇಕೆಂದು ತೀರ್ಮಾನಿಸಿದರೆ ಅವನು ಆ ಶಿಕ್ಷೆ ಹೊಂದುವವನನ್ನು ಬೋರಲು ಮಲಗಿಸಿ ನ್ಯಾಯಾಧೀಶನ ಕಣ್ಣು ಮುಂದೆ ಅವನಿಗೆ ಕೊರಡೆ ಏಟು ಹೊಡಿಸಬೇಕು. ಅವನ ಅಪರಾಧಕ್ಕನುಸಾರವಾಗಿ ಕೊರಡೆ ಏಟುಗಳ ಸಂಖ್ಯೆಯು ಏರುವದು. ಒಬ್ಬನಿಗೆ ನಲವತ್ತು ಕೊರಡೆ ಏಟುಗಳಿಗಿಂತ ಹೆಚ್ಚಾಗಿ ಹೊಡೆಯಬಾರದು. ಅದಕ್ಕಿಂತ ಹೆಚ್ಚು ಹೊಡೆದರೆ ಅವನ ಪ್ರಾಣವು ನಿಮ್ಮ ದೃಷ್ಟಿಗೆ ಅಮೂಲ್ಯವಾಗಿಲ್ಲವೆಂದು ತಿಳಿದುಬರುತ್ತದೆ.

“ಕಣವನ್ನು ತುಳಿಯಲು ಎತ್ತುಗಳನ್ನು ಉಪಯೋಗಿಸುವಾಗ ಅವುಗಳು ಧಾನ್ಯ ತಿನ್ನುತ್ತವೆ ಎಂದು ಅವುಗಳ ಬಾಯಿಗಳನ್ನು ಕಟ್ಟಬಾರದು.

1 ತಿಮೊಥೆಯನಿಗೆ 5:17-24

ಹಿರಿಯರ ಮತ್ತು ಇನ್ನಿತರ ವಿಷಯಗಳ ಕುರಿತು ಹೆಚ್ಚಿನ ಬೋಧನೆ

17 ಸಭೆಯನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಹಿರಿಯರು ಗೌರವಕ್ಕೂ ಸಂಬಳಕ್ಕೂ ಯೋಗ್ಯರಾಗಿದ್ದಾರೆ. ಪ್ರಸಂಗ ಮಾಡುವುದರಲ್ಲಿಯೂ ಉಪದೇಶಮಾಡುವುದರಲ್ಲಿಯೂ ನಿರತರಾಗಿರುವ ಹಿರಿಯರು ಉನ್ನತವಾದ ಗೌರವವನ್ನು ಪಡೆಯುತ್ತಾರೆ. 18 ಏಕೆಂದರೆ “ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು”(A) ಎಂಬುದಾಗಿಯೂ “ದುಡಿಯುವ ಆಳಿಗೆ ತಕ್ಕ ಕೂಲಿ ದೊರೆಯಬೇಕು”(B) ಎಂಬುದಾಗಿಯೂ ಪವಿತ್ರ ಗ್ರಂಥವು ಹೇಳುತ್ತದೆ.

19 ಸಭೆಯ ಹಿರಿಯರನ್ನು ಕುರಿತು ಯಾವನಾದರೂ ದೂರು ಹೇಳಿದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳಿಲ್ಲದ ಹೊರತು ಅವನ ಮಾತುಗಳಿಗೆ ಕಿವಿಗೊಡಬೇಡ. 20 ಪಾಪ ಮಾಡುವ ಜನರನ್ನು ಸಭೆಯಲ್ಲಿ ಎಲ್ಲರ ಎದುರಿನಲ್ಲಿಯೇ ಗದರಿಸು. ಆಗ ಇತರರಿಗೂ ಎಚ್ಚರಿಕೆ ನೀಡಿದಂತಾಗುವುದು.

21 ನೀನು ಈ ಕಾರ್ಯಗಳನ್ನು ಮಾಡಬೇಕೆಂದು ದೇವರ, ಯೇಸು ಕ್ರಿಸ್ತನ ಮತ್ತು ಆರಿಸಲ್ಪಟ್ಟ ದೇವದೂತರ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುತ್ತೇನೆ. ಆದರೆ ಸತ್ಯವನ್ನು ತಿಳಿಯುವುದಕ್ಕಿಂತ ಮೊದಲೇ ಜನರಿಗೆ ತೀರ್ಪು ನೀಡಬೇಡ. ಯಾರಿಗೂ ಪಕ್ಷಪಾತ ತೋರಬೇಡ.

22 ನೀನು ನಿನ್ನ ಹಸ್ತಗಳನ್ನು ಯಾರ ಮೇಲಾದರೂ ಇಟ್ಟು ಅವನನ್ನು ಸಭಾಹಿರಿಯನನ್ನಾಗಿ ನೇಮಿಸುವುದಕ್ಕಿಂತ ಮೊದಲೇ ಗಮನವಿಟ್ಟು ಆಲೋಚನೆಮಾಡು. ಇತರ ಜನರ ಪಾಪಗಳಲ್ಲಿ ಪಾಲುಗಾರನಾಗದೆ ಶುದ್ಧನಾಗಿರು.

23 ತಿಮೊಥೆಯನೇ, ನೀನು ನೀರನ್ನು ಮಾತ್ರ ಕುಡಿಯದೆ ಸ್ವಲ್ಪ ದ್ರಾಕ್ಷಾರಸವನ್ನು ಸಹ ಕುಡಿಯಬೇಕು. ಇದರಿಂದ ನಿನ್ನ ಜೀರ್ಣಶಕ್ತಿಯು ಹೆಚ್ಚುವುದರಿಂದ ಪದೇಪದೇ ಅಸ್ವಸ್ಥನಾಗುವುದಿಲ್ಲ.

24 ಕೆಲವು ಜನರ ಪಾಪಗಳು ಎದ್ದುಕಾಣುತ್ತವೆ. ಅವರಿಗೆ ನ್ಯಾಯತೀರ್ಪಾಗುವುದೆಂಬುದನ್ನು ಅವರ ಪಾಪಗಳೇ ತೋರ್ಪಡಿಸುತ್ತವೆ. ಆದರೆ ಇತರ ಕೆಲವು ಜನರ ಪಾಪಗಳು ಸ್ವಲ್ಪಕಾಲದ ನಂತರ ತಿಳಿದುಬರುತ್ತವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International