Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 27:7-14

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[a] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

ಆದಿಕಾಂಡ 49:1-2

ಯಾಕೋಬನು ತನ್ನ ಗಂಡುಮಕ್ಕಳನ್ನು ಆಶೀರ್ವದಿಸಿದ್ದು

49 ಬಳಿಕ ಯಾಕೋಬನು ತನ್ನ ಗಂಡುಮಕ್ಕಳನ್ನು ತನ್ನ ಬಳಿಗೆ ಕರೆಯಿಸಿ, “ನನ್ನ ಎಲ್ಲಾ ಗಂಡುಮಕ್ಕಳೇ, ನನ್ನ ಬಳಿಗೆ ಬನ್ನಿರಿ. ನಿಮಗೆ ಮುಂದೆ ಏನು ಸಂಭವಿಸುವುದೆಂದು ತಿಳಿಸುತ್ತೇನೆ.

“ಯಾಕೋಬನ ಗಂಡುಮಕ್ಕಳೇ, ಒಟ್ಟಾಗಿ ಬಂದು ಕೇಳಿರಿ.
    ನಿಮ್ಮ ತಂದೆಯಾದ ಇಸ್ರೇಲನು ಹೇಳುವುದನ್ನು ಕೇಳಿರಿ” ಎಂದು ಹೇಳಿದನು.

ಆದಿಕಾಂಡ 49:8-13

ಯೆಹೂದ

“ಯೆಹೂದನೇ, ನಿನ್ನ ಸಹೋದರರು ನಿನ್ನನ್ನೇ ಹೊಗಳುವರು.
    ನೀನು ನಿನ್ನ ವೈರಿಗಳನ್ನು ಸೋಲಿಸುವೆ.
    ನಿನ್ನ ಸಹೋದರರು ನಿನಗೇ ಅಡ್ಡಬೀಳುವರು.
ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ.
    ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ.
ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು;
    ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.
10 ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ
    ಯೆಹೂದನು ರಾಜದಂಡವನ್ನು ಹಿಡಿದುಕೊಳ್ಳುವನು.
ಅವನ ಸಂತತಿಯವರು ಶಾಶ್ವತವಾಗಿ ಆಳುವರು;
    ಅನ್ಯಜನಾಂಗಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಅವನಿಗೆ ವಿಧೇಯರಾಗಿರುವರು.
11 ಅವನು ತನ್ನ ಕತ್ತೆಯನ್ನು ದ್ರಾಕ್ಷೆಬಳ್ಳಿಗೆ ಕಟ್ಟುವನು;
    ತನ್ನ ಪ್ರಾಯದ ಕತ್ತೆಯನ್ನು ಉತ್ತಮವಾದ ದ್ರಾಕ್ಷೆಬಳ್ಳಿಗೆ ಕಟ್ಟುವನು.
ಅವನು ಉತ್ತಮವಾದ ದ್ರಾಕ್ಷಾರಸದಿಂದ
    ತನ್ನ ಬಟ್ಟೆಗಳನ್ನು ತೊಳೆಯುವನು.
12 ಅವನು ದ್ರಾಕ್ಷಾರಸವನ್ನು ಕುಡಿಯುವುದರಿಂದ ಅವನ ಕಣ್ಣುಗಳು ಕೆಂಪಾಗಿರುತ್ತವೆ.
    ಅವನು ಹಾಲು ಕುಡಿಯುವುದರಿಂದ ಅವನ ಹಲ್ಲುಗಳು ಬಿಳುಪಾಗಿರುತ್ತವೆ.”

ಜೆಬುಲೂನ

13 “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು;
    ಸಮುದ್ರ ತೀರವು ಅವನ ಹಡಗುಗಳಿಗೆ ಸುರಕ್ಷಿತವಾದ ಸ್ಥಳವಾಗಿದೆ.
    ಅವನ ನಾಡು ಚೀದೋನ್ ಪಟ್ಟಣದವರೆಗೂ ವಿಸ್ತರಿಸುವುದು.”

ಆದಿಕಾಂಡ 49:21-26

ನಫ್ತಾಲಿ

21 “ನಫ್ತಾಲಿಯು ಸ್ವತಂತ್ರವಾಗಿ ಓಡುವ ಜಿಂಕೆಯಂತಿದ್ದಾನೆ.
    ಅವನ ಮಾತುಗಳು ಅದರ ಸುಂದರವಾದ ಮರಿಗಳಂತಿವೆ.”

ಯೋಸೇಫ

22 “ಯೋಸೇಫನು ಬಹು ಯಶಸ್ವಿಯಾಗಿದ್ದಾನೆ.
    ಯೋಸೇಫನು ಹಣ್ಣನ್ನು ಅಧಿಕವಾಗಿ ಫಲಿಸುವ ದ್ರಾಕ್ಷೆ ಬಳ್ಳಿಯಂತಿರುವನು.
ಅವನು ವಸಂತಕಾಲದಲ್ಲಿ ಬೆಳೆಯುವ ದ್ರಾಕ್ಷೆಬಳ್ಳಿಯಂತಿರುವನು.
    ಅವನು ಗೋಡೆಯ ಆಚೆಗೆ ಚಾಚಿಕೊಂಡಿರುವ ದ್ರಾಕ್ಷೆಬಳ್ಳಿಯಂತಿರುವನು.
23 ಅನೇಕ ಜನರು ಅವನ ವಿರುದ್ಧವಾಗಿ ಹೋರಾಡಿದರು.
    ಬಿಲ್ಲುಗಳನ್ನು ಹೊಂದಿದ್ದ ಜನರು ಅವನನ್ನು ಇಷ್ಟಪಡಲಿಲ್ಲ.
24 ಆದರೆ ಅವನು ತನ್ನ ಹೋರಾಟದಲ್ಲಿ ಬಲಿಷ್ಠವಾದ ಬಿಲ್ಲಿನಿಂದಲೂ
    ತನ್ನ ನಿಪುಣವಾದ ತೋಳುಗಳಿಂದಲೂ ಗೆದ್ದನು.
ಅವನು ಶಕ್ತಿಯನ್ನು ಯಾಕೋಬನ ಪರಾಕ್ರಮಿಯಿಂದಲೂ
    ಇಸ್ರೇಲನ ಬಂಡೆಯಾದಾತನಿಂದಲೂ ಕುರುಬನಿಂದಲೂ
25 ನಿಮ್ಮ ತಂದೆಯ ದೇವರಿಂದಲೂ ಪಡೆದುಕೊಳ್ಳುವನು.
    ದೇವರು ನಿನ್ನನ್ನು ಆಶೀರ್ವದಿಸುವನು.
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
    ಆತನು ಮೇಲಿರುವ ಆಕಾಶದಿಂದ ನಿನಗೆ ಆಶೀರ್ವಾದಗಳನ್ನು ಕೊಡಲಿ.
ಆತನು ಕೆಳಗಿನ ಆಳವಾದ ಸಾಗರದ ಸೆಲೆಗಳಿಂದಲೂ ನಿನಗೆ ಆಶೀರ್ವಾದಗಳನ್ನು ಕೊಡಲಿ.
    ಆತನು ನಿನಗೆ ಸ್ತನ್ಯಗಳಿಂದಲೂ ಗರ್ಭದಿಂದಲೂ ಆಶೀರ್ವಾದಗಳನ್ನು ಕೊಡಲಿ.
26 ನನ್ನ ತಂದೆತಾಯಿಗಳಿಗೆ ಅನೇಕಾನೇಕ ಒಳ್ಳೆಯ ಸಂಗತಿಗಳು ಸಂಭವಿಸಿದವು.
    ನಿನ್ನ ತಂದೆಯಾದ ನಾನು ಅದಕ್ಕಿಂತಲೂ ಹೆಚ್ಚು ಆಶೀರ್ವಾದ ಹೊಂದಿಕೊಂಡೆನು.
ನಿನ್ನ ಸಹೋದರರು ನಿನ್ನನ್ನು ದೂರಮಾಡಲು ಪ್ರಯತ್ನಿಸಿದರು.
    ಆದರೆ ಈಗ ನನ್ನ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ
    ಎತ್ತರವಾದ ಬೆಟ್ಟದೋಪಾದಿಯಲ್ಲಿ ರಾಶಿಯಂತಿವೆ.”

ಲೂಕ 1:67-79

ಜಕರೀಯನ ಪ್ರವಾದನೆ

67 ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:

68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
    ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
    ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
    ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
    ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
    ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
    ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.

76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
    ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.

78 “ನಮ್ಮ ದೇವರ ಮಹಾಕರುಣೆಯಿಂದ
    ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International