Revised Common Lectionary (Semicontinuous)
7 ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
ನನ್ನನ್ನು ಕರುಣಿಸು.
8 ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
9 ಯೆಹೋವನೇ, ನನಗೆ ವಿಮುಖನಾಗಬೇಡ:
ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
ನಾನು ಸಾಯುವುದಕ್ಕಿಂತ ಮುಂಚೆ[a] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
ಬಲವಾಗಿಯೂ ಧೈರ್ಯವಾಗಿಯೂ ಇರಿ!
ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
12 ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಪೂರ್ವದೇಶದ ಉಳಿದೆಲ್ಲ ಜನರು ಆ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿದ್ದರು. ಅವರು ಅಸಂಖ್ಯಾತವಾಗಿದ್ದು ಮಿಡತೆಯ ಗುಂಪಿನಂತೆ ಕಂಡರು. ಅವರಲ್ಲಿದ್ದ ಒಂಟೆಗಳೋ ಲೆಕ್ಕವಿಲ್ಲದ ಸಮುದ್ರ ತೀರದ ಮರಳಿನಂತೆ ಎದ್ದುಕಾಣುತ್ತಿದ್ದವು.
13 ಗಿದ್ಯೋನನು ಶತ್ರುಗಳ ಪಾಳೆಯಕ್ಕೆ ಬಂದಾಗ ಒಬ್ಬನ ಮಾತನ್ನು ಕೇಳಿಸಿಕೊಂಡನು. ಆ ಮನುಷ್ಯನು ತಾನು ಕಂಡ ಒಂದು ಕನಸಿನ ಬಗ್ಗೆ ತನ್ನ ಮಿತ್ರನಿಗೆ ಹೇಳುತ್ತಿದ್ದನು. “ನಾನು ಕನಸಿನಲ್ಲಿ ಒಂದು ದುಂಡಾದ ರೊಟ್ಟಿಯು ಉರುಳಿಕೊಂಡು ಮಿದ್ಯಾನ್ಯರ ಪಾಳೆಯದಲ್ಲಿ ಬರುವುದನ್ನು ಕಂಡೆ. ಆ ರೊಟ್ಟಿಯು ರಭಸದಿಂದ ಬಂದು ಒಂದು ಗುಡಾರಕ್ಕೆ ಅಪ್ಪಳಿಸಲು ಆ ಗುಡಾರವು ಕುಸಿದುಬಿತ್ತು” ಎಂದನು.
14 ಆ ಮನುಷ್ಯನ ಸ್ನೇಹಿತನು ಕನಸಿನ ಅರ್ಥವನ್ನು ತಿಳಿದುಕೊಂಡು ಅವನಿಗೆ, “ನಿನ್ನ ಕನಸು ಇಸ್ರೇಲಿನ ಯೋವಾಷನ ಮಗನಾದ ಗಿದ್ಯೋನನ ಕುರಿತಾಗಿದೆ. ಗಿದ್ಯೋನನು ಮಿದ್ಯಾನ್ಯರ ಇಡೀ ಸೈನ್ಯವನ್ನು ಸೋಲಿಸುವಂತೆ ದೇವರು ಮಾಡುತ್ತಾನೆ” ಎಂದನು.
15 ಕನಸಿನ ಬಗ್ಗೆ ಮತ್ತು ಅದರ ಅರ್ಥದ ಬಗ್ಗೆ ಅವರು ಮಾತನಾಡುವುದನ್ನು ಕೇಳಿದ ಗಿದ್ಯೋನನು ಯೆಹೋವನಿಗೆ ತಲೆಬಾಗಿ ನಮಸ್ಕರಿಸಿದನು. ಆಮೇಲೆ ಗಿದ್ಯೋನನು ಇಸ್ರೇಲರ ಪಾಳೆಯಕ್ಕೆ ಹಿಂದಿರುಗಿದನು. ಗಿದ್ಯೋನನು ಜನರನ್ನು, “ಏಳಿರಿ! ಯೆಹೋವನು ಮಿದ್ಯಾನ್ಯರನ್ನು ಸೋಲಿಸಲು ನಮಗೆ ಸಹಾಯ ಮಾಡುತ್ತಾನೆ” ಎಂದು ಕೂಗಿಕರೆದನು. 16 ಆಮೇಲೆ ಗಿದ್ಯೋನನು ಆ ಮುನ್ನೂರು ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಗಿದ್ಯೋನನು ಪ್ರತಿಯೊಬ್ಬನಿಗೆ ಒಂದು ತುತ್ತೂರಿ ಮತ್ತು ಒಂದು ಬರಿದಾದ ಮಣ್ಣಿನ ಪಾತ್ರೆಯನ್ನು ಕೊಟ್ಟನು. ಪ್ರತಿಯೊಂದು ಪಾತ್ರೆಯ ಒಳಗಡೆ ಒಂದು ಉರಿಯುತ್ತಿರುವ ಪಂಜು ಇತ್ತು. 17 ಗಿದ್ಯೋನನು ಅವರಿಗೆ, “ನನ್ನನ್ನು ಗಮನಿಸುತ್ತಾ ನಾನು ಮಾಡಿದಂತೆ ಮಾಡಿರಿ. ಶತ್ರುಗಳ ಪಾಳೆಯದ ಸೀಮೆಯವರೆಗೆ ನನ್ನನ್ನು ಹಿಂಬಾಲಿಸಿ ಬನ್ನಿ. ನಾನು ಪಾಳೆಯದ ಗಡಿಯನ್ನು ಮುಟ್ಟಿದ ಮೇಲೆ ನಾನು ಮಾಡಿದಂತೆಯೇ ಮಾಡಿರಿ. 18 ನೀವು ಶತ್ರುಗಳ ಪಾಳೆಯಕ್ಕೆ ಮುತ್ತಿಗೆ ಹಾಕಿರಿ. ನನ್ನ ಸಂಗಡವಿರುವ ಜನರು ತುತ್ತೂರಿಯನ್ನು ಊದುವರು. ನಾವು ನಮ್ಮ ತುತ್ತೂರಿಗಳನ್ನು ಊದಿದಾಗ ನೀವು ಸಹ ನಿಮ್ಮ ತುತ್ತೂರಿಗಳನ್ನು ಊದಿರಿ. ‘ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ,’ ಎಂದು ಕೂಗಿರಿ” ಎಂದು ಹೇಳಿದನು.
19 ಗಿದ್ಯೋನನು ಮತ್ತು ಅವನ ಜೊತೆಯಲ್ಲಿದ್ದ ನೂರು ಜನರು ಶತ್ರುಗಳ ಪಾಳೆಯದ ಬಳಿಗೆ ಹೋದರು. ಶತ್ರುಗಳ ಪಾಳೆಯದ ಕಾವಲುಗಾರರು ಬದಲಾದ ಕೂಡಲೆ ಅವರು ಅಲ್ಲಿಗೆ ಹೋಗಿದ್ದರು. ಆಗ ಮಧ್ಯರಾತ್ರಿಯಾಗಿತ್ತು. ಗಿದ್ಯೋನ ಮತ್ತು ಅವನ ಜನರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ಮಡಕೆಗಳನ್ನು ಒಡೆದುಹಾಕಿದರು. 20 ಆಗ ಗಿದ್ಯೋನನ ಮೂರು ಗುಂಪಿನ ಜನರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ತಮ್ಮ ಮಡಕೆಗಳನ್ನು ಒಡೆದುಹಾಕಿದರು. ಅವರು ಪಂಜುಗಳನ್ನು ತಮ್ಮ ಎಡಗೈಗಳಲ್ಲಿಯೂ ತುತ್ತೂರಿಗಳನ್ನು ತಮ್ಮ ಬಲಗೈಗಳಲ್ಲಿಯೂ ಹಿಡಿದುಕೊಂಡರು. ಅವರು ತಮ್ಮ ತುತ್ತೂರಿಗಳನ್ನು ಊದುತ್ತಾ “ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ” ಎಂದು ಕೂಗಿಕೊಂಡರು.
21 ಗಿದ್ಯೋನನ ಜನರು ನಿಂತಲ್ಲಿಯೇ ನಿಂತುಕೊಂಡರು. ಮಿದ್ಯಾನ್ಯರು ಕೂಗಿಕೊಂಡು ಓಡಿಹೋಗಲು ಆರಂಭಿಸಿದರು. 22 ಗಿದ್ಯೋನನ ಮುನ್ನೂರು ಜನರು ತಮ್ಮ ತುತ್ತೂರಿಗಳನ್ನು ಊದಿದ ಕೂಡಲೆ ಮಿದ್ಯಾನ್ಯರು ತಮ್ಮತಮ್ಮಲ್ಲಿಯೇ ಒಬ್ಬರನ್ನೊಬ್ಬರು ಕತ್ತಿಯಿಂದ ಇರಿದು ಕೊಲ್ಲುವಂತೆ ಯೆಹೋವನು ಮಾಡಿದನು. ಶತ್ರುಗಳ ಸೈನ್ಯವು ಚೆರೇರದ ದಾರಿಯಲ್ಲಿರುವ ಬೇತ್‌ಷಿಟ್ಟಿನವರೆಗೂ ಓಡಿಹೋಯಿತು. ಅವರು ಟಬ್ಬಾತಿನ ಬಳಿಯಲ್ಲಿರುವ ಅಬೇಲ್ಮೆಹೋಲಾ ನಗರದವರೆಗೂ ಓಡಿಹೋದರು.
ದೇವರ ಇಷ್ಟಕ್ಕನುಸಾರವಾದ ಜನರಾಗಿರಿ
12 ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13 ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.
14 ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ. 15 ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ. 16 ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.
17 ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ. 18 ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.
Kannada Holy Bible: Easy-to-Read Version. All rights reserved. © 1997 Bible League International