Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 27:7-14

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!
10 ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು;
    ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.
11 ಯೆಹೋವನೇ, ನನಗೆ ವೈರಿಗಳಿರುವುದರಿಂದ ನಿನ್ನ ಮಾರ್ಗವನ್ನು ನನಗೆ ಉಪದೇಶಿಸಿ
    ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
12 ವೈರಿಗಳು ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ.
    ನನಗೆ ಕೇಡಾಗಲೆಂದು ಸುಳ್ಳುಗಳನ್ನು ಹೇಳಿದ್ದಾರೆ.
    ಯೆಹೋವನೇ, ಇಂಥ ವೈರಿಗಳ ಕೈಗೆ ನನ್ನನ್ನು ಕೊಡಬೇಡ.
13 ಯೆಹೋವನ ಒಳ್ಳೆಯತನವನ್ನು
    ನಾನು ಸಾಯುವುದಕ್ಕಿಂತ ಮುಂಚೆ[a] ನೋಡುತ್ತೇನೆ ಎಂಬ ದೃಢನಂಬಿಕೆ ನನ್ನಲ್ಲಿದೆ.
14 ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!
    ಬಲವಾಗಿಯೂ ಧೈರ್ಯವಾಗಿಯೂ ಇರಿ!
    ಯೆಹೋವನ ಸಹಾಯಕ್ಕಾಗಿ ಕಾದುಕೊಂಡಿರಿ!

ನ್ಯಾಯಸ್ಥಾಪಕರು 6:11-24

ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾದನು

11 ಆ ಸಮಯದಲ್ಲಿ ಯೆಹೋವನ ದೂತನು ಗಿದ್ಯೋನ ಎಂಬ ವ್ಯಕ್ತಿಯ ಬಳಿಗೆ ಬಂದನು. ಯೆಹೋವನ ದೂತನು ಒಫ್ರ ಎಂಬ ಊರಲ್ಲಿ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಆ ಗಿಡವು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಯೋವಾಷನು ಗಿದ್ಯೋನನ ತಂದೆ. ಗಿದ್ಯೋನನು ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು. ಯೆಹೋವನ ದೂತನು ಗಿದ್ಯೋನನ ಹತ್ತಿರ ಕುಳಿತುಕೊಂಡನು. ಮಿದ್ಯಾನ್ಯರಿಗೆ ಗೋಧಿ ಕಾಣಬಾರದೆಂದು ಗಿದ್ಯೋನನು ಮರೆಯಾಗಿದ್ದನು. 12 ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನು.

13 ಆಗ ಗಿದ್ಯೋನನು, “ಸ್ವಾಮೀ, ಯೆಹೋವನು ನಮ್ಮ ಸಂಗಡವಿದ್ದರೆ ನಮಗೆ ಇಷ್ಟೊಂದು ಕಷ್ಟಗಳೇಕೆ ಬರುತ್ತವೆ? ನಮ್ಮ ಪೂರ್ವಿಕರಿಗಾಗಿ ಆತನು ಬಹಳಷ್ಟು ಅದ್ಭುತಕಾರ್ಯಗಳನ್ನು ಮಾಡಿದ್ದನೆಂದು ನಾವು ಕೇಳಿದ್ದೇವೆ. ಆತನು ಅವರನ್ನು ಈಜಿಪ್ಟಿನಿಂದ ಹೊರಗೆ ಕರೆತಂದನೆಂದು ನಮ್ಮ ಪೂರ್ವಿಕರು ನಮಗೆ ಹೇಳಿದರು. ಆದರೆ ಈಗ ಯೆಹೋವನು ನಮ್ಮನ್ನು ಕೈಬಿಟ್ಟಿದ್ದಾನೆ; ಮಿದ್ಯಾನ್ಯರು ನಮ್ಮನ್ನು ಸೋಲಿಸುವಂತೆ ಮಾಡಿದ್ದಾನೆ” ಎಂದು ಹೇಳಿದನು.

14 ಯೆಹೋವನು ಗಿದ್ಯೋನನ ಕಡೆಗೆ ತಿರುಗಿ, “ನಿನ್ನ ಬಲವನ್ನು ಉಪಯೋಗಿಸು. ಹೋಗು, ಮಿದ್ಯಾನ್ಯರಿಂದ ಇಸ್ರೇಲರನ್ನು ರಕ್ಷಿಸು. ನಾನು ಅವರನ್ನು ರಕ್ಷಿಸುವುದಕ್ಕಾಗಿ ನಿನ್ನನ್ನು ಕಳುಹಿಸುತ್ತಿದ್ದೇನೆ” ಅಂದನು.

15 ಅದಕ್ಕೆ ಗಿದ್ಯೋನನು, “ಸ್ವಾಮೀ, ಮನಸ್ಸೆ ಕುಲದಲ್ಲಿ ನನ್ನ ಕುಟುಂಬವು ಕೇವಲ ಅಲ್ಪವಾದದ್ದು. ನನ್ನ ಕುಟುಂಬದಲ್ಲಿ ನಾನು ಎಲ್ಲರಿಗಿಂತ ಚಿಕ್ಕವನು. ನಾನು ಇಸ್ರೇಲರನ್ನು ರಕ್ಷಿಸಲು ಹೇಗೆ ಸಾಧ್ಯ?” ಎಂದು ಕೇಳಿದನು.

16 ಯೆಹೋವನು ಗಿದ್ಯೋನನಿಗೆ, “ನಾನು ನಿನ್ನ ಸಂಗಡವಿದ್ದೇನೆ! ಆದ್ದರಿಂದ ನೀನು ಮಿದ್ಯಾನ್ಯರನ್ನು ಸೋಲಿಸುವೆ. ಕೇವಲ ಒಬ್ಬನೊಂದಿಗೆ ಯುದ್ಧ ಮಾಡುತ್ತಿರುವಿಯೋ ಎಂಬಂತೆ ನಿನಗೆ ಅನಿಸುತ್ತದೆ” ಎಂದು ಹೇಳಿದನು.

17 ಆಗ ಗಿದ್ಯೋನನು ಯೆಹೋವನಿಗೆ, “ನೀನು ನನಗೆ ಕೃಪೆ ತೋರಿದರೆ, ನೀನು ನಿಜವಾಗಿಯೂ ಯೆಹೋವನು ಎಂಬುದಕ್ಕೆ ನನಗೆ ಒಂದು ಗುರುತನ್ನು ಕೊಡು. 18 ದಯವಿಟ್ಟು ಇಲ್ಲಿಯೇ ಇರು. ನಾನು ಬರುವವರೆಗೆ ಎಲ್ಲಿಗೂ ಹೋಗಬೇಡ. ನಾನು ನಿನಗೆ ಕಾಣಿಕೆಯನ್ನು ತಂದು ಅರ್ಪಿಸುವುದಕ್ಕೆ ಅವಕಾಶಕೊಡು” ಎಂದು ಪ್ರಾರ್ಥಿಸಿದನು.

ಅದಕ್ಕೆ, ಆತನು, “ನೀನು ಬರುವವರೆಗೂ ನಾನು ಇರುತ್ತೇನೆ” ಎಂದು ಹೇಳಿದನು.

19 ಗಿದ್ಯೋನನು ಒಳಗೆ ಹೋಗಿ ಒಂದು ಆಡಿನ ಮರಿಯನ್ನು ಬೇಯಿಸಿದನು. ಅವನು ಸುಮಾರು ಇಪ್ಪತ್ತು ಸೇರಿನಷ್ಟು ಹಿಟ್ಟನ್ನು ತೆಗೆದುಕೊಂಡು ಹುಳಿಯಿಲ್ಲದ ರೊಟ್ಟಿಯನ್ನು ಮಾಡಿದನು. ತರುವಾಯ ಗಿದ್ಯೋನನು ಆ ಮಾಂಸವನ್ನು ಒಂದು ಬುಟ್ಟಿಯಲ್ಲಿಟ್ಟನು, ಮಾಂಸ ಬೇಯಿಸಿದ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿದನು. ಗಿದ್ಯೋನನು ಆ ಮಾಂಸವನ್ನೂ ಮಾಂಸ ಬೇಯಿಸಿದ ನೀರನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತೆಗೆದುಕೊಂಡು ಬಂದನು. ಗಿದ್ಯೋನನು ಏಲಾ ಮರದ ಕೆಳಗೆ ಯೆಹೋವನಿಗೆ ಆಹಾರವನ್ನು ಕೊಟ್ಟನು.

20 ದೇವದೂತನು ಗಿದ್ಯೋನನಿಗೆ, “ಆ ಮಾಂಸವನ್ನೂ ಹುಳಿಯಿಲ್ಲದ ಆ ರೊಟ್ಟಿಯನ್ನೂ ಆ ಕಲ್ಲಿನ ಮೇಲೆ ಇಡು. ಆಮೇಲೆ ಆ ನೀರನ್ನು ಅದರ ಮೇಲೆ ಸುರಿ” ಎಂದನು. ದೇವದೂತನು ಹೇಳಿದಂತೆಯೇ ಗಿದ್ಯೋನನು ಮಾಡಿದನು.

21 ಯೆಹೋವನ ದೂತನ ಕೈಯಲ್ಲಿ ಒಂದು ಕೋಲಿತ್ತು. ಯೆಹೋವನ ದೂತನು ತನ್ನ ಕೋಲಿನ ತುದಿಯಿಂದ ಮಾಂಸವನ್ನು ಮತ್ತು ರೊಟ್ಟಿಯನ್ನು ಮುಟ್ಟಿದನು. ಆಗ ಆ ಕಲ್ಲಿನಿಂದ ಬೆಂಕಿಯ ಜ್ವಾಲೆಯು ಎದ್ದಿತು! ಮಾಂಸ ಮತ್ತು ರೊಟ್ಟಿ ಸಂಪೂರ್ಣವಾಗಿ ಸುಟ್ಟುಹೋದವು! ಆಮೇಲೆ ಯೆಹೋವನ ದೂತನು ಅದೃಶ್ಯನಾದನು.

22 ತಾನು ಈವರೆಗೆ ಮಾತಾಡುತ್ತಿದ್ದದ್ದು ಯೆಹೋವನ ದೂತನೊಡನೆ ಎಂಬುದು ಗಿದ್ಯೋನನಿಗೆ ಆಗ ಅರಿವಾಯಿತು.

ಗಿದ್ಯೋನನು, “ಸರ್ವಶಕ್ತನಾದ ಯೆಹೋವನೇ, ನಿನ್ನ ದೂತನನ್ನು ಮುಖಾಮುಖಿಯಾಗಿ ಕಂಡೆನು” ಎಂದು ಕೂಗಿಕೊಂಡನು.

23 “ಶಾಂತನಾಗು, ಭಯಪಡಬೇಡ, ನೀನು ಸಾಯುವುದಿಲ್ಲ” ಎಂದು ಗಿದ್ಯೋನನಿಗೆ ಯೆಹೋವನು ಹೇಳಿದನು.

24 ಗಿದ್ಯೋನನು ಯೆಹೋವನ್ನು ಆರಾಧಿಸಲು ಆ ಸ್ಥಳದಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಗಿದ್ಯೋನನು ಅದಕ್ಕೆ “ಯೆಹೋವನು ಶಾಂತಿಸ್ವರೂಪನು” ಎಂದು ಹೆಸರಿಟ್ಟನು. ಆ ಯಜ್ಞವೇದಿಕೆಯು ಇಂದಿಗೂ ಅಬೀಯೆಜೆರ್ ಗೋತ್ರದವರು ವಾಸಿಸುವ ಒಫ್ರದಲ್ಲಿದೆ.

ಎಫೆಸದವರಿಗೆ 5:6-14

ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:

“ನಿದ್ರೆಮಾಡುವವನೇ, ಎಚ್ಚರವಾಗು!
    ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International