Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 9:1-4

ಒಂದು ಹೊಸ ದಿನ ಬರುವುದು

ಹಿಂದಿನ ಕಾಲದಲ್ಲಿ, ಜೆಬುಲೋನ್ ಮತ್ತು ನಫ್ತಾಲಿ ಪ್ರಾಂತ್ಯಗಳು ವಿಶೇಷವಾದವುಗಳಲ್ಲ ಎಂದು ಜನರು ತಿಳಿದುಕೊಂಡಿದ್ದರು. ಆದರೆ ಆಮೇಲೆ ಸಮುದ್ರಕ್ಕೆ ಸಮೀಪದಲ್ಲಿರುವ ಪ್ರಾಂತ್ಯ, ಜೋರ್ಡನಿನ ಆಚೆಗಿರುವ ಸ್ಥಳ ಮತ್ತು ಯೆಹೂದ್ಯರಲ್ಲದವರು ವಾಸಿಸುವ ಗಲಿಲಾಯ ಪ್ರಾಂತ್ಯ ಇವುಗಳನ್ನು ಮುಂದೆ ದೇವರು ಮಹಾದೇಶವನ್ನಾಗಿ ಮಾಡುವನು. ಈಗ ಅವರು ಕತ್ತಲಲ್ಲಿ ವಾಸಿಸುವರು. ಆದರೆ ಒಂದು ದೊಡ್ಡ ಬೆಳಕನ್ನು ಅವರು ನೋಡುವರು. ಅವರಿರುವ ಸ್ಥಳವು ಮರಣದ ಸ್ಥಳದಂತೆ ಅಂಧಕಾರದಿಂದ ತುಂಬಿದೆ. ಆದರೆ ದೊಡ್ಡ ಬೆಳಕು ಅವರ ಮೇಲೆ ಪ್ರಕಾಶಿಸುವದು.

ದೇವರೇ, ಆ ದೇಶವನ್ನು ನೀನು ಅಭಿವೃದ್ಧಿಪಡಿಸುವೆ. ನೀನು ಆ ಜನರನ್ನು ಸಂತೋಷಪಡಿಸುವೆ. ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುವರು. ಅದು ಸುಗ್ಗಿಕಾಲದಲ್ಲಿರುವ ಸಂತಸದಂತೆಯೂ ಯುದ್ಧದಲ್ಲಿ ಗಳಿಸಿದ ಕೊಳ್ಳೆಯ ಪಾಲು ದೊರೆತಾಗ ಉಂಟಾಗುವ ಸಂತಸದಂತೆಯೂ ಇರುವುದು. ಯಾಕೆಂದರೆ ಅವರ ಮೇಲಿದ್ದ ಭಾರವನ್ನು ನೀನು ತೆಗೆದುಬಿಡುವೆ. ಅವರ ಬೆನ್ನಿನ ಮೇಲಿದ್ದ ಭಾರವಾದ ನೊಗವನ್ನು ನೀನು ತೆಗೆದುಹಾಕುವೆ; ವೈರಿಗಳು ನಿನ್ನ ಜನರನ್ನು ಶಿಕ್ಷಿಸಲು ಉಪಯೋಗಿಸುವ ಬೆತ್ತವನ್ನು ತೆಗೆದುಬಿಡುವೆ. ಆ ಸಮಯವು ನೀನು ಮಿದ್ಯಾನರನ್ನು ಸೋಲಿಸಿದ ಸಮಯದಂತಿರುವದು.

ಕೀರ್ತನೆಗಳು 27:1

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!

ಕೀರ್ತನೆಗಳು 27:4-9

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

ಯೆಹೋವನೇ, ನನ್ನ ಸ್ವರವನ್ನು ಕೇಳಿ ನನಗೆ ಉತ್ತರಿಸು.
    ನನ್ನನ್ನು ಕರುಣಿಸು.
ಯೆಹೋವನೇ, ನಾನು ನಿನ್ನೊಂದಿಗೆ ಹೃದಯಪೂರ್ವಕವಾಗಿ ಮಾತನಾಡಬೇಕೆಂದಿದ್ದೇನೆ.
    ದೇವರೇ, ನಾನು ನಿನ್ನ ಸನ್ನಿಧಿಗೆ ಬರುತ್ತೇನೆ.
ಯೆಹೋವನೇ, ನನಗೆ ವಿಮುಖನಾಗಬೇಡ:
    ನಿನ್ನ ಸೇವಕನನ್ನು ಕೋಪದಿಂದ ತಳ್ಳಿಬಿಡಬೇಡ.
ನನ್ನ ದೇವರೇ, ನನ್ನ ರಕ್ಷಕನು ನೀನೇ.
    ನನ್ನನ್ನು ಕೈ ಬಿಡಬೇಡ! ತೊರೆದುಬಿಡಬೇಡ!

1 ಕೊರಿಂಥದವರಿಗೆ 1:10-18

ಕೊರಿಂಥ ಸಭೆಯಲ್ಲಿ ಸಮಸ್ಯೆಗಳು

10 ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.

11 ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು. 12 ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ. 13 ಕ್ರಿಸ್ತನು ವಿಭಾಗವಾಗಿದ್ದಾನೋ? ಪೌಲನು ನಿಮಗೋಸ್ಕರ ಶಿಲುಬೆಯ ಮೇಲೆ ಸತ್ತನೇ? ಇಲ್ಲ! ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೋ? ಇಲ್ಲ! 14 ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 15 ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದಾಗಿ ಹೇಳಲು ನಿಮ್ಮಲ್ಲಿ ಯಾರಿಗೂ ಈಗ ಸಾಧ್ಯವಿಲ್ಲವಾದ್ದರಿಂದ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 16 (ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.) 17 ಕ್ರಿಸ್ತನು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಸುವಾರ್ತೆಯನ್ನು ತಿಳಿಸುವುದಕ್ಕಾಗಿಯಷ್ಟೆ. ಆದರೆ ವಾಕ್ಚಾತುರ್ಯದಿಂದ ಸಾರುವುದಕ್ಕಾಗಿ ಕಳುಹಿಸಲಿಲ್ಲ. ನಾನೇನಾದರೂ ಲೋಕಜ್ಞಾನದಿಂದ ಸುವಾರ್ತೆ ಸಾರಿದ್ದೇಯಾದರೆ, ಕ್ರಿಸ್ತನ ಶಿಲುಬೆಯೇ ನಿರರ್ಥಕವಾಗುವುದು.

ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ

18 ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ.

ಮತ್ತಾಯ 4:12-23

ಗಲಿಲಾಯದಲ್ಲಿ ಯೇಸುವಿನ ಸುವಾರ್ತಾ ಸೇವೆಯ ಆರಂಭ

(ಮಾರ್ಕ 1:14-15; ಲೂಕ 4:14-15)

12 ಯೋಹಾನನನ್ನು ಸೆರೆಯಲ್ಲಿಟ್ಟಿದ್ದಾರೆಂಬುದು ಯೇಸುವಿಗೆ ತಿಳಿಯಿತು. ಆದ್ದರಿಂದ ಯೇಸು ಗಲಿಲಾಯಕ್ಕೆ ಹಿಂತಿರುಗಿ ಹೋದನು. 13 ಆತನು ನಜರೇತಿನಲ್ಲಿ ಇಳಿದುಕೊಳ್ಳದೆ ಹೊರಟುಹೋಗಿ ಗಲಿಲಾಯ ಸರೋವರಕ್ಕೆ ಹತ್ತಿರವಿದ್ದ ಕಪೆರ್ನೌಮ್ ಎಂಬ ಊರಲ್ಲಿ ವಾಸಿಸಿದನು. ಈ ಊರು ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ ಬಳಿಯಲ್ಲಿದೆ. 14 ಪ್ರವಾದಿಯಾದ ಯೆಶಾಯನು ನುಡಿದಿದ್ದ ಮಾತು ಹೀಗೆ ನೆರವೇರಿತು. ಅದೇನೆಂದರೆ:

15 “ಜೆಬುಲೋನ್ ಸೀಮೆಯ, ನಫ್ತಾಲಿ ಸೀಮೆಯ,
    ಜೋರ್ಡನ್ನಿನ ಆಚೆ ಸೀಮೆಯ, ಸಮುದ್ರದ ಕಡೆಗಿರುವ ಸೀಮೆಯ,
    ಯೆಹೂದ್ಯರಲ್ಲದ ಗಲಿಲಾಯ ಸೀಮೆಯ
16 ಜನರು ಕತ್ತಲಲ್ಲಿ ಜೀವಿಸುತ್ತಿದ್ದರು.
    ಆಗ ಅವರಿಗೆ ದೊಡ್ಡ ಬೆಳಕೊಂದು ಕಾಣಿಸಿತು.
ಸಮಾಧಿಯಂತಿರುವ ಕಾರ್ಗತ್ತಲೆಯ ದೇಶದಲ್ಲಿ ವಾಸಿಸುವ ಆ ಜನರಿಗೆ ಬೆಳಕು ದೊರೆಯಿತು.”(A)

17 ಅಂದಿನಿಂದ ಯೇಸು ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಬೇಗನೆ ಬರಲಿದೆ. ಆದ್ದರಿಂದ ನೀವು ನಿಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಮಾರ್ಪಡಿಸಿಕೊಳ್ಳಿರಿ” ಎಂದು ಯೇಸು ಬೋಧಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮಾರ್ಕ 1:16-20; ಲೂಕ 5:1-11)

18 ಗಲಿಲಾಯ ಸರೋವರದ ತೀರದಲ್ಲಿ ಯೇಸು ತಿರುಗಾಡುತ್ತಾ ಇದ್ದನು. ಆತನು ಸೀಮೋನ (ಈತನನ್ನೇ ಪೇತ್ರ ಎಂದು ಕರೆಯಲಾಯಿತು.) ಮತ್ತು ಸೀಮೋನನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರನ್ನು ಕಂಡನು. ಬೆಸ್ತರಾಗಿದ್ದ ಇವರಿಬ್ಬರು ಅಂದು ಸರೋವರದ ತೀರದಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು. 19 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ರೀತಿಯ ಬೆಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗೂಡಿಸುವುದು ಮೀನನ್ನಲ್ಲ, ಮನುಷ್ಯರನ್ನು” ಎಂದನು. 20 ಕೂಡಲೇ ಸೀಮೋನ ಮತ್ತು ಅಂದ್ರೆಯ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

21 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ನೋಡಿದನು. ಅವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿದ್ದರು. ಅವರು ಮೀನು ಹಿಡಿಯಲು ತಮ್ಮ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು. 22 ಆಗ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಯೇಸುವಿನ ಉಪದೇಶ ಮತ್ತು ರೋಗಿಗಳಿಗೆ ಸ್ವಸ್ಥತೆ

(ಲೂಕ 6:17-19)

23 ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಯೇಸು ಸಭಾಮಂದಿರಗಳಲ್ಲಿ ಬೋಧಿಸಿದನು ಮತ್ತು ಪರಲೋಕರಾಜ್ಯದ ವಿಷಯವಾದ ಶುಭವಾರ್ತೆಯನ್ನು ಉಪದೇಶಿಸಿದನು. ಯೇಸು ಎಲ್ಲಾ ಜನರ ಕಾಯಿಲೆಗಳನ್ನು ಮತ್ತು ರೋಗಗಳನ್ನು ವಾಸಿಮಾಡಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International