Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 27:1-6

ರಚನೆಗಾರ: ದಾವೀದ.

27 ಯೆಹೋವನೇ, ನೀನೇ ನನಗೆ ಬೆಳಕೂ ರಕ್ಷಕನೂ ಆಗಿರುವೆ.
    ನಾನು ಯಾರಿಗೂ ಭಯಪಡಬೇಕಿಲ್ಲ!
ಯೆಹೋವನೇ, ನನ್ನ ಪ್ರಾಣಕ್ಕೆ ಆಶ್ರಯಸ್ಥಾನವೂ ನೀನೇ.
    ಆದ್ದರಿಂದ ನಾನು ಯಾರಿಗೂ ಹೆದರುವುದಿಲ್ಲ!
ದುಷ್ಟರು ನನ್ನನ್ನು ಕೊಲ್ಲಲು ಆಕ್ರಮಣಮಾಡುವಾಗ
    ತಾವೇ ಮುಗ್ಗರಿಸಿ ಬೀಳುವರು.
ಮಹಾಸೈನ್ಯವೇ ನನಗೆ ಮುತ್ತಿಗೆ ಹಾಕಿದರೂ ನಾನು ಭಯಪಡುವುದಿಲ್ಲ.
    ಸೈನಿಕರು ನನ್ನ ಮೇಲೆ ಆಕ್ರಮಣ ಮಾಡಿದರೂ ನಾನು ಹೆದರುವುದಿಲ್ಲ.
    ಯಾಕೆಂದರೆ ನಾನು ಯೆಹೋವನಲ್ಲಿ ಭರವಸವಿಟ್ಟಿದ್ದೇನೆ.

ನನ್ನ ಜೀವಮಾನವೆಲ್ಲಾ
    ಯೆಹೋವನ ಆಲಯದಲ್ಲಿ ವಾಸಿಸುತ್ತಾ
ಆತನ ಪ್ರಸನ್ನತೆಯನ್ನು ವೀಕ್ಷಿಸುತ್ತಾ
    ಆತನ ಮಾರ್ಗದರ್ಶನವನ್ನು ಎದುರುನೋಡುತ್ತಾ ಇರಬೇಕೆಂಬ
    ಒಂದೇ ಒಂದು ಕೋರಿಕೆಯನ್ನು ಯೆಹೋವನಲ್ಲಿ ಕೇಳಿಕೊಂಡು ಅದನ್ನೇ ಎದುರುನೋಡುತ್ತಿದ್ದೇನೆ.

ನಾನು ಅಪಾಯದಲ್ಲಿರುವಾಗ ಯೆಹೋವನು ನನ್ನನ್ನು ಸಂರಕ್ಷಿಸುತ್ತಾನೆ;
    ತನ್ನ ಗುಡಾರದಲ್ಲಿ ನನ್ನನ್ನು ಅಡಗಿಸುತ್ತಾನೆ.
    ಸುರಕ್ಷಿತವಾದ ಸ್ಥಳಕ್ಕೆ ನನ್ನನ್ನು ಕೊಂಡೊಯ್ಯುವನು.
ವೈರಿಗಳು ನನಗೆ ಮುತ್ತಿಗೆ ಹಾಕಿದ್ದರೂ ಅವರನ್ನು ಸೋಲಿಸಲು ಯೆಹೋವನು ನನಗೆ ಸಹಾಯಮಾಡುವನು!
    ಆಗ ನಾನು ಆತನ ಗುಡಾರದಲ್ಲಿ ಉತ್ಸಾಹ ಧ್ವನಿಯೊಡನೆ ಯಜ್ಞಗಳನ್ನು ಅರ್ಪಿಸುವೆನು.
    ವಾದ್ಯಗಳನ್ನು ನುಡಿಸುತ್ತಾ ಆತನನ್ನು ಕೊಂಡಾಡುವೆನು.

1 ಸಮುವೇಲನು 9:27-10:8

27 ಸೌಲನೂ ಅವನ ಸೇವಕನೂ ಸಮುವೇಲನೂ ಪಟ್ಟಣದ ಅಂಚಿನಲ್ಲಿ ಒಟ್ಟಾಗಿ ನಡೆಯುತ್ತಿದ್ದಾಗ, ಸಮುವೇಲನು ಸೌಲನಿಗೆ, “ನಿನ್ನ ಸೇವಕನಿಗೆ ನಮ್ಮಿಂದ ಮುಂದೆ ಹೋಗಲು ತಿಳಿಸು. ನಾನು ದೇವರ ಸಂದೇಶವನ್ನು ನಿನಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. ಆದಕಾರಣ ಸೇವಕನು ಅವರಿಂದ ಮುಂದೆ ನಡೆದನು.

ಸಮುವೇಲನಿಂದ ಸೌಲನಿಗೆ ಅಭಿಷೇಕ

10 ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ: ಈ ದಿನ ನನ್ನನ್ನು ಬಿಟ್ಟು ನೀನು ಮುಂದೆ ಸಾಗಿದಾಗ, ಬೆನ್ಯಾಮೀನನ ಮೇರೆಯಲ್ಲಿರುವ ಚೆಲ್ಚಹಿನಲ್ಲಿನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಗೆ, ‘ನೀನು ಹುಡುಕುತ್ತಿದ್ದ ಕತ್ತೆಗಳು ಒಬ್ಬನಿಗೆ ಸಿಕ್ಕಿವೆ. ನಿನ್ನ ತಂದೆಯು ಕತ್ತೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಬಲಿಸುತ್ತಿದ್ದಾನೆ’ ಎಂದು ಹೇಳುವರು” ಎಂದನು.

ಸಮುವೇಲನು, “ನೀನು ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಓಕ್ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಟಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಧನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿ ಹೋತಗಳನ್ನೂ ಎರಡನೆಯವನು ಮೂರು ರೊಟ್ಟಿಗಳನ್ನೂ ಮೂರನೆಯವನು ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ. ಈ ಮೂವರೂ ನಿನ್ನ ಕ್ಷೇಮವನ್ನು ವಿಚಾರಿಸುತ್ತಾರೆ. ಅವರು ನಿನಗೆ ಎರಡು ರೊಟ್ಟಿಗಳನ್ನು ಕೊಡುತ್ತಾರೆ. ನೀನು ಆ ಎರಡು ರೊಟ್ಟಿಗಳನ್ನು ಅವರಿಂದ ತೆಗೆದುಕೊಳ್ಳುವೆ. ನಂತರ ನೀನು ಗಿಬಿಯತ್ ಎಲೋಹಿಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಷ್ಟಿಯರ ಕೋಟೆಯಿದೆ. ನೀನು ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು ಆರಾಧನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಡಿಯನ್ನೂ ಕೊಳಲನ್ನೂ ಕಿನ್ನರಿಯನ್ನೂ ನುಡಿಸುತ್ತಿರುತ್ತಾರೆ. ಆಗ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ನಿನ್ನ ಮೈಮೇಲೆ ಬರುತ್ತದೆ. ನೀನು ಮಾರ್ಪಾಟಾಗಿ ಬೇರೊಬ್ಬ ಮನುಷ್ಯನಾಗುವೆ. ನೀನೂ ಆ ಪ್ರವಾದಿಗಳಂತೆ ಪ್ರವಾದಿಸಲು ಆರಂಭಿಸುವೆ. ಈ ಕಾರ್ಯಗಳು ಸಂಭವಿಸಿದ ಮೇಲೆ, ನೀನು ನಿನ್ನ ನಿರ್ಧಾರದಂತೆ ಮಾಡು. ಯಾಕೆಂದರೆ ದೇವರು ನಿನ್ನೊಂದಿಗಿರುತ್ತಾನೆ.

“ನನಗಿಂತ ಮೊದಲು ನೀನು ಗಿಲ್ಗಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ. ನಾನು ಅಲ್ಲಿ ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಪಿಸುತ್ತೇನೆ. ಆದರೆ ನೀನು ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನೀನು ಮಾಡಬೇಕಾದದ್ದನ್ನು ತಿಳಿಸುತ್ತೇನೆ” ಎಂದು ಹೇಳಿದನು.

ಗಲಾತ್ಯದವರಿಗೆ 2:1-10

ಇತರ ಅಪೊಸ್ತಲರು ಪೌಲನನ್ನು ಸ್ವೀಕರಿಸಿಕೊಂಡರು

ಹದಿನಾಲ್ಕು ವರ್ಷಗಳ ನಂತರ ಬಾರ್ನಬನ ಜೊತೆಯಲ್ಲಿ ತೀತನನ್ನು ಕರೆದುಕೊಂಡು ಮತ್ತೆ ಜೆರುಸಲೇಮಿಗೆ ಹೋದೆನು. ನಾನು ಹೋಗಲೇಬೇಕೆಂದು ದೇವರು ನನಗೆ ತಿಳಿಸಿದ್ದರಿಂದ ವಿಶ್ವಾಸಿಗಳ ನಾಯಕರಾದ ಈ ಜನರ ಬಳಿಗೆ ಹೋದೆನು. ನಾವಷ್ಟೇ ಇದ್ದಾಗ, ಯೆಹೂದ್ಯರಲ್ಲದವರಿಗೆ ಸಾರುವ ಸುವಾರ್ತೆಯನ್ನು ಇವರಿಗೆ ತಿಳಿಸಿದೆನು. ನಾನು ಮೊದಲು ಮಾಡಿದ ಸೇವೆ ಮತ್ತು ಈಗ ಮಾಡುತ್ತಿರುವ ಸೇವೆ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಇವರಿಗೆ ಅರ್ಥವಾಗುವಂತೆ ನನ್ನ ಸೇವೆಯ ಬಗ್ಗೆ ತಿಳಿಸಿದೆನು.

3-4 ತೀತನು ನನ್ನೊಂದಿಗಿದ್ದನು. ಅವನು ಗ್ರೀಕನಾಗಿದ್ದನು. ಆದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಯಾರೂ ಬಲವಂತ ಮಾಡಲಿಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಮಾತಾಡಲೇಬೇಕಿತ್ತು. ಏಕೆಂದರೆ ಕೆಲವು ಸುಳ್ಳು ಸಹೋದರರು ಬಂದು ನಮ್ಮ ಸಭೆಯೊಳಗೆ ಸೇರಿಕೊಂಡಿದ್ದರು. ಯೇಸು ಕ್ರಿಸ್ತನಲ್ಲಿ ನಮಗಿರುವ ಸ್ವಾತಂತ್ರ್ಯದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು ಅವರು ಬಂದಿದ್ದರು. ಆದರೆ ಆ ಸುಳ್ಳುಸಹೋದರರು ಬಯಸಿದ ಯಾವುದಕ್ಕೂ ನಾವು ಒಂದು ಕ್ಷಣವಾದರೂ ಒಪ್ಪಿಗೆ ಕೊಡಲಿಲ್ಲ. ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂಬುದೇ ನಮ್ಮ ಅಪೇಕ್ಷೆಯಾಗಿತ್ತು.

ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) ಆದರೆ ಪೇತ್ರನಂತೆ ನನಗೂ ದೇವರು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆಂಬುದನ್ನು ಈ ನಾಯಕರು ತಿಳಿದುಕೊಂಡರು. ಯೆಹೂದ್ಯರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ಪೇತ್ರನಿಗೆ ಕೊಟ್ಟನು. ಆದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಯೆಹೂದ್ಯರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ದೇವರು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ನನಗೂ ವಹಿಸಿ ಕೊಟ್ಟನು. ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು. 10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International