Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 40:6-17

ನಾನು ಗ್ರಹಿಸಿಕೊಂಡಿದ್ದೇನೆಂದರೆ,
    ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
    ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
    ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
    ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
    ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
    ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
    ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
    ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.

12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
    ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
    ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
    ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
    ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
    ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
    ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
    ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
    ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.

17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
    ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.

ಯೆಶಾಯ 48:12-21

12 “ಯಾಕೋಬೇ, ನನಗೆ ಕಿವಿಗೊಡು.
ಇಸ್ರೇಲೇ, ನೀವು ನನ್ನ ಜನರಾಗುವದಕ್ಕಾಗಿ ನಿಮ್ಮನ್ನು ನಾನು ಕರೆದೆನು.
    ಆದ್ದರಿಂದ ನನ್ನ ಮಾತುಗಳನ್ನು ಕೇಳಿರಿ.
ನಾನೇ ಆದಿಯೂ
    ಅಂತ್ಯವೂ ಆಗಿದ್ದೇನೆ.
13 ಭೂಮಿಯನ್ನು ನನ್ನ ಕೈಗಳಿಂದಲೇ ನಿರ್ಮಿಸಿದೆನು.
    ನನ್ನ ಬಲಗೈ ಆಕಾಶವನ್ನು ಉಂಟುಮಾಡಿತು.
ನಾನು ಅವುಗಳನ್ನು ಕರೆದಾಗ
    ಅವು ನನ್ನ ಬಳಿಗೆ ಬರುವವು.

14 “ನೀವೆಲ್ಲರೂ ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿರಿ.
    ಸುಳ್ಳುದೇವರುಗಳಲ್ಲಿ ಯಾರಾದರೂ ಈ ವಿಷಯಗಳು ಸಂಭವಿಸುತ್ತವೆಯೆಂದು ಹೇಳಿರುವರೇ? ಇಲ್ಲ!”
ಯೆಹೋವನು ಆರಿಸಿದ ಮನುಷ್ಯನು ಬಾಬಿಲೋನಿಗೂ
    ಕಸ್ದೀಯರಿಗೂ ತನ್ನ ಇಷ್ಟಬಂದ ಹಾಗೆ ಮಾಡುವನು.

15 “ನಾನು ಅವನನ್ನು ಕರೆಯುವುದಾಗಿ ಹೇಳಿದ್ದೇನೆ.
    ನಾನು ಅವನನ್ನು ಕರೆದುತರುವೆನು;
    ಅವನಿಗೆ ಜಯವನ್ನು ಅನುಗ್ರಹಿಸುವೆನು.
16 ನನ್ನ ಬಳಿಗೆ ಬಂದು ನನ್ನ ಮಾತು ಕೇಳಿರಿ!
ಬಾಬಿಲೋನ್ ಒಂದು ದೇಶವಾಗಿ ಪರಿಣಮಿಸುವಾಗ ನಾನು ಅಲ್ಲಿದ್ದೆನು.
ಆದಿಯಿಂದಲೇ ನಾನು ಸ್ವಷ್ಟವಾಗಿ ಹೇಳಿದ್ದೇನೆ.
    ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೇನೆ.”

ಯೆಶಾಯನು ಹೇಳಿದ್ದೇನೆಂದರೆ: “ಈಗ ನನ್ನ ಒಡೆಯನಾದ ಯೆಹೋವನೂ ಆತನ ಆತ್ಮನೂ ಈ ವಿಷಯಗಳನ್ನು ತಿಳಿಸಲು ನನ್ನನ್ನು ಕಳುಹಿಸಿದ್ದಾನೆ. 17 ರಕ್ಷಕನೂ ಇಸ್ರೇಲರ ಪರಿಶುದ್ಧನೂ ಆಗಿರುವ ಯೆಹೋವನು ಹೇಳುವುದೇನೆಂದರೆ,

“ನಾನೇ ನಿಮ್ಮ ದೇವರಾದ ಯೆಹೋವನು.
    ಯಾವದು ಒಳ್ಳೆಯದೋ, ಪ್ರಯೋಜನಕರವೋ ಅದನ್ನು ಮಾಡಲು ನಿಮಗೆ ಕಲಿಸುತ್ತೇನೆ.
    ನೀವು ಹೋಗಲೇಬೇಕಾದ ದಾರಿಯಲ್ಲಿ ನಿಮ್ಮನ್ನು ನಡಿಸುವೆನು.
18 ನೀವು ನನಗೆ ವಿಧೇಯರಾಗಿದ್ದರೆ,
    ತುಂಬಿಹರಿಯುವ ಹೊಳೆಯಂತೆ
    ಸಮಾಧಾನವು ನಿಮಗೆ ದೊರಕುತ್ತಿತ್ತು.
ಸಮುದ್ರದ ತೆರೆಯಂತೆ ಮೇಲಿಂದ ಮೇಲೆ
    ನಿಮಗೆ ಒಳ್ಳೆಯವುಗಳು ಬರುತ್ತಿದ್ದವು.
19 ನೀವು ನನಗೆ ವಿಧೇಯರಾಗಿದ್ದರೆ,
    ನಿಮ್ಮ ಸಂತಾನವು ಅಭಿವೃದ್ಧಿಯಾಗುತ್ತಿತ್ತು.
    ಅವರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿರುತ್ತಿದ್ದರು.
ನೀವು ನನಗೆ ವಿಧೇಯರಾಗಿದ್ದರೆ, ನೀವು ನಾಶವಾಗಿರುತ್ತಿರಲಿಲ್ಲ
    ಮತ್ತು ನನ್ನೆದುರಿನಿಂದ ನಿಮ್ಮ ಹೆಸರು ತೆಗೆದುಹಾಕಲ್ಪಡುತ್ತಿರಲಿಲ್ಲ.”

20 ನನ್ನ ಜನರೇ, ಬಾಬಿಲೋನನ್ನು ತೊರೆಯಿರಿ.
    ನನ್ನ ಜನರೇ, ಕಸ್ದೀಯರಿಂದ ಓಡಿಹೋಗಿರಿ.
ಈ ವರ್ತಮಾನವನ್ನು ಜನರಿಗೆ ಹರ್ಷಿಸುತ್ತಾ ತಿಳಿಸಿರಿ.
    ಲೋಕದ ಕಟ್ಟಕಡೆಯ ಸ್ಥಳದಲ್ಲೂ ಈ ವರ್ತಮಾನವನ್ನು ಪ್ರಕಟಿಸಿರಿ.
“ಯಾಕೋಬನನ್ನು ಯೆಹೋವನು ರಕ್ಷಿಸಿದನೆಂದು” ಜನರಿಗೆಲ್ಲಾ ತಿಳಿಸಿರಿ.
21 ಯೆಹೋವನು ತನ್ನ ಜನರನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದನು.
    ಜನರು ಬಾಯಾರಲಿಲ್ಲ;
ಯಾಕೆಂದರೆ ಆತನು ಬಂಡೆಯಿಂದ ನೀರು ಹರಿಯುಂತೆ ಮಾಡಿದನು.
    ಆತನು ಬಂಡೆಯನ್ನು ಇಬ್ಭಾಗ ಮಾಡಿದಾಗ ನೀರು ಅದರೊಳಗಿಂದ ಹರಿಯಿತು.

ಮತ್ತಾಯ 9:14-17

ಯೇಸು ಇತರ ಧಾರ್ಮಿಕ ಯೆಹೂದ್ಯರಂತಲ್ಲ

(ಮಾರ್ಕ 2:18-22; ಲೂಕ 5:33-39)

14 ನಂತರ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನಾವು ಮತ್ತು ಫರಿಸಾಯರು ಆಗಾಗ್ಗೆ ಉಪವಾಸ ಮಾಡುತ್ತೇವೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.

15 ಯೇಸು, “ಮದುವೆ ಸಮಯದಲ್ಲಿ ಮದುಮಗನ ಸಂಗಡವಿರುವ ಅವನ ಸ್ನೇಹಿತರು ದುಃಖಪಡುವುದಿಲ್ಲ. ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಸಮಯ ಬರುತ್ತದೆ. ಆಗ ಅವರು ದುಃಖಪಡುತ್ತಾರೆ ಮತ್ತು ಉಪವಾಸ ಮಾಡುತ್ತಾರೆ.

16 “ಒಬ್ಬನು ಹರಿದುಹೋದ ಹಳೆ ಮೇಲಂಗಿಗೆ ಹೊಸ ಬಟ್ಟೆಯ ತುಂಡನ್ನು ತೇಪೆಹಾಕಿ ಹೊಲಿಯುವುದಿಲ್ಲ. ಒಂದುವೇಳೆ ಹೊಲಿದರೆ, ಆ ತೇಪೆಯು ಹಿಂಜಿಕೊಂಡು ಮೇಲಂಗಿಯಿಂದ ಕಿತ್ತುಬರುವುದು. ಆಗ ಆ ಮೇಲಂಗಿಯು ಮತ್ತಷ್ಟು ಹರಿದುಹೋಗುವುದು. 17 ಇದಲ್ಲದೆ ಜನರು ಹೊಸ ದ್ರಾಕ್ಷಾರಸವನ್ನು ಹಳೆ ದ್ರಾಕ್ಷಾರಸದ ಬುದ್ದಲಿಗಳಲ್ಲಿ ಹಾಕುವುದಿಲ್ಲ; ಏಕೆಂದರೆ ಹಳೆ ಬುದ್ದಲಿಗಳು ಒಡೆದುಹೋಗುತ್ತವೆ; ಮತ್ತು ದ್ರಾಕ್ಷಾರಸವು ಚೆಲ್ಲಿಹೋಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುವರು. ಆಗ ಎರಡೂ ಉಳಿಯುತ್ತವೆ” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International