Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 40:6-17

ನಾನು ಗ್ರಹಿಸಿಕೊಂಡಿದ್ದೇನೆಂದರೆ,
    ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
    ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
    ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
    ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
    ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
    ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
    ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
    ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.

12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
    ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
    ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
    ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
    ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
    ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
    ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
    ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
    ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.

17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
    ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.

ಯೆಶಾಯ 53

53 ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು? ಯೆಹೋವನ ದಂಡನೆಯನ್ನು ನಿಜವಾಗಿಯೂ ಸ್ವೀಕರಿಸಿಕೊಂಡವರು ಯಾರು?

ಒಂದು ಸಣ್ಣ ಸಸಿಯು ಬೆಳೆಯುವ ರೀತಿಯಲ್ಲಿ ಯೆಹೋವನ ಮುಂದೆ ಆತನು ಬೆಳೆದನು. ಆತನು ಒಣ ನೆಲದಿಂದ ಚಿಗುರುವ ಬೇರಿನಂತಿದ್ದನು. ಆತನು ಒಬ್ಬ ವಿಶೇಷ ಪುರುಷನಂತೆ ತೋರಲಿಲ್ಲ. ಅಂಥ ಲಕ್ಷಣಗಳೇನೂ ಆತನಲ್ಲಿರಲಿಲ್ಲ. ನಾವು ಆತನನ್ನು ನೋಡಿದಾಗ ಆತನಲ್ಲಿ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ. ಜನರು ಆತನನ್ನು ಪರಿಹಾಸ್ಯ ಮಾಡಿದರು. ಆತನ ಸ್ನೇಹಿತರು ಆತನನ್ನು ತೊರೆದರು. ಆತನು ನೋವಿನಿಂದ ಬಳಲಿದನು. ಆತನು ಕಾಯಿಲೆಯಿಂದ ಬಾಧಿತನಾಗಿದ್ದನು. ಜನರು ಆತನ ಕಡೆಗೆ ನೋಡಲೂ ಇಲ್ಲ. ನಾವು ಆತನನ್ನು ಗಮನಕ್ಕೆ ತರಲೇ ಇಲ್ಲ.

ಆದರೆ ಆತನು ನಮ್ಮ ಸಂಕಷ್ಟಗಳನ್ನು ತನ್ನ ಮೇಲೆ ಹೊತ್ತುಕೊಂಡನು. ನಮ್ಮ ಬೇನೆಯನ್ನು ಆತನು ಅನುಭವಿಸಿದನು. ದೇವರು ಆತನನ್ನು ಶಿಕ್ಷಿಸಿದ್ದಾನೆ ಎಂದು ನಾವು ನೆನಸಿದೆವು. ಆತನು ಏನೋ ಮಾಡಿದ್ದಕ್ಕಾಗಿ ದೇವರು ಆತನಿಗೆ ಹೊಡೆದನೆಂದು ಭಾವಿಸಿಕೊಂಡೆವು. ಆದರೆ ನಾವು ಮಾಡಿದ ದುಷ್ಟತನಕ್ಕಾಗಿಯೇ ಆತನು ಬಾಧಿತನಾದನು. ನಮ್ಮ ಅಪರಾಧಗಳ ನಿಮಿತ್ತ ಆತನು ಜಜ್ಜಲ್ಪಟ್ಟನು. ನಾವು ಹೊಂದಬೇಕಾಗಿದ್ದ ಶಿಕ್ಷೆಯನ್ನು ಆತನೇ ಅನುಭವಿಸಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲಾಡಿದೆವು. ನಮ್ಮ ಸ್ವಂತ ದಾರಿಯಲ್ಲಿ ನಾವು ಹೋದೆವು. ನಮ್ಮ ಅಪರಾಧಗಳಿಂದ ನಾವು ವಿಮುಕ್ತರಾಗುವಂತೆ ಯೆಹೋವನು ನಮ್ಮ ಅಪರಾಧಗಳನ್ನು ಆತನ ಮೇಲೆ ಹಾಕಿದನು.

ಆತನು ಬಾಧೆಯನ್ನೂ ಹಿಂಸೆಯನ್ನೂ ಅನುಭವಿಸಿದನು. ಆದರೂ ಆತನು ಪ್ರತಿಭಟಿಸಲಿಲ್ಲ. ಕೊಯ್ಯಲು ಕೊಂಡೊಯ್ಯುವ ಕುರಿಮರಿಯಂತೆಯೂ ಉಣ್ಣೆಯನ್ನು ಕತ್ತರಿಸುವಾಗ ಮೌನವಾಗಿರುವ ಕುರಿಮರಿಯಂತೆಯೂ ಆತನು ಮೌನವಾಗಿದ್ದನು. ಜನರು ಬಲವಂತದಿಂದ ಆತನನ್ನು ಕೊಂಡೊಯ್ದರು; ಆತನಿಗೆ ಅನ್ಯಾಯವಾದ ತೀರ್ಪನ್ನು ನೀಡಿದರು; ಆತನನ್ನು ಜೀವಲೋಕದಿಂದಲೇ ತೆಗೆದುಹಾಕಿ ಆತನಿಗೆ ಸಂತಾನವೇ ಇಲ್ಲದಂತೆ ಮಾಡಿದರು. ನನ್ನ ಜನರ ಪಾಪಗಳಿಗಾಗಿ ಆತನು ದಂಡಿಸಲ್ಪಟ್ಟನು. ಆತನು ಸತ್ತ ಬಳಿಕ ಧನಿಕರೊಂದಿಗೂ ದುಷ್ಟರೊಂದಿಗೂ ಹೂಳಲ್ಪಟ್ಟನು. ಆತನು ಯಾವ ಅಪರಾಧವನ್ನೂ ಮಾಡಲಿಲ್ಲ; ಸುಳ್ಳಾಡಲಿಲ್ಲ. ಆದರೂ ಇವೆಲ್ಲವೂ ಆತನಿಗೆ ಸಂಭವಿಸಿದವು.

10 ಆತನನ್ನು ಬಾಧೆಯಿಂದ ಜಜ್ಜಬೇಕೆಂಬುದು ಯೆಹೋವನ ನಿರ್ಧಾರವಾಗಿತ್ತು. ಆದ್ದರಿಂದ ಈ ಸೇವಕನು ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ಆದರೆ ಆತನು ತನ್ನ ಹೊಸ ಜೀವಿತದಲ್ಲಿ ಚಿರಂಜೀವಿಯಾಗುವನು. ಆತನು ತನ್ನ ಜನರನ್ನು ದೃಷ್ಟಿಸಿ ನೋಡುವನು. ಯೆಹೋವನ ಸಂಕಲ್ಪದ ಮೇರೆಗೆ ಎಲ್ಲವನ್ನೂ ಆತನು ಮಾಡುವನು. 11 ಆತನು ತನ್ನ ಆತ್ಮದಲ್ಲಿ ಬಹಳವಾಗಿ ಸಂಕಟಪಡುವನು. ಆದರೆ ಒಳ್ಳೆಯ ಕಾರ್ಯಗಳಾಗುವುದನ್ನು ಆತನು ನೋಡುವನು. ತಾನು ಕಲಿತ ವಿಷಯಗಳಲ್ಲಿ ಸಂತುಷ್ಟನಾಗುವನು.

ಅನೇಕರು ತಮ್ಮ ಪಾಪಗಳಿಂದ ಬಿಡುಗಡೆ ಹೊಂದುವಂತೆ ನನ್ನ ಒಳ್ಳೇ ಸೇವಕನು ಮಾಡುವನು. ಅವರ ಪಾಪಗಳನ್ನು ಹೊತ್ತುಕೊಂಡು ಹೋಗುವನು. 12 ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.

ಇಬ್ರಿಯರಿಗೆ 10:1-4

ಕ್ರಿಸ್ತನ ಯಜ್ಞವು ನಮ್ಮನ್ನು ನಿಷ್ಕಳಂಕರನ್ನಾಗಿ ಮಾಡುವುದು

10 ಧರ್ಮಶಾಸ್ತ್ರವು ಮುಂದೆ ಬರುವ ಉತ್ತಮ ಸಂಗತಿಗಳ ಅಸ್ಪಷ್ಟ ಚಿತ್ರಣವಾಗಿದೆ. ಅದು ನಿಜವಾದ ಸಂಗತಿಗಳ ಸ್ಪಷ್ಟ ಚಿತ್ರಣವಲ್ಲ. ಪ್ರತಿ ವರ್ಷವೂ ಒಂದೇ ರೀತಿಯ ಯಜ್ಞಗಳನ್ನು ಅರ್ಪಿಸಬೇಕೆಂದು ಅದು ಜನರಿಗೆ ತಿಳಿಸಿತು. ದೇವರನ್ನು ಆರಾಧಿಸಲು ಬರುವ ಜನರು ಅದೇ ರೀತಿಯ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಆ ಜನರನ್ನು ಧರ್ಮಶಾಸ್ತ್ರವು ಎಂದಿಗೂ ನಿಷ್ಕಳಂಕರನ್ನಾಗಿ ಮಾಡಲಿಲ್ಲ. ಅದು ಜನರನ್ನು ನಿಷ್ಕಳಂಕರನ್ನಾಗಿ ಮಾಡಿದ್ದರೆ, ಆ ಯಜ್ಞಗಳು ಈಗಾಗಲೇ ನಿಂತುಹೋಗುತ್ತಿದ್ದವು. ಆ ಜನರು ಆಗಲೇ ತಮ್ಮ ಪಾಪಗಳಿಂದ ಬಿಡುಗಡೆ ಹೊಂದಿ ಪರಿಶುದ್ಧರಾಗುತ್ತಿದ್ದರು. ತಾವು ಪಾಪಿಗಳೆಂಬ ಅರಿವು ಅವರಿಗಿರುತ್ತಿರಲಿಲ್ಲ. ಆ ಜನರು ಪ್ರತಿವರ್ಷ ಅರ್ಪಿಸುತ್ತಿದ್ದ ಯಜ್ಞಗಳು ಅವರ ಪಾಪಗಳನ್ನು ನೆನಪಿಗೆ ತರುತ್ತಿದ್ದವು. ಏಕೆಂದರೆ ಅವರ ಪಾಪಗಳನ್ನು ತೆಗೆದುಹಾಕಲು ಹೋರಿಗಳ ಮತ್ತು ಹೋತಗಳ ರಕ್ತಕ್ಕೆ ಸಾಧ್ಯವಿರಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International