Revised Common Lectionary (Semicontinuous)
6 ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
7 ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
8 ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
9 ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.
12 ದುಷ್ಟರು ನನ್ನನ್ನು ಸುತ್ತುಗಟ್ಟಿದ್ದಾರೆ
ಅವರು ಅಸಂಖ್ಯಾತರಾಗಿದ್ದಾರೆ.
ನನ್ನ ಪಾಪಗಳು ನನ್ನನ್ನು ಹಿಡಿದಿರುವುದರಿಂದ
ಅವುಗಳಿಂದ ತಪ್ಪಿಸಿಕೊಳ್ಳಲಾರೆ.
ನನ್ನ ತಲೆಯ ಕೂದಲುಗಳಿಗಿಂತಲೂ ನನ್ನ ಪಾಪಗಳು ಹೆಚ್ಚಾಗಿವೆ.
ನಾನು ಧೈರ್ಯವನ್ನು ಕಳೆದುಕೊಂಡಿರುವೆ.
13 ಯೆಹೋವನೇ, ನನ್ನನ್ನೇ ರಕ್ಷಿಸು!
ಬೇಗನೆ ಬಂದು ನನ್ನನ್ನು ಕಾಪಾಡು!
14 ಆ ದುಷ್ಟರು ನನ್ನನ್ನು ಕೊಲ್ಲಬೇಕೆಂದಿದ್ದಾರೆ.
ಯೆಹೋವನೇ, ಅವರಿಗೆ ನಾಚಿಕೆಯನ್ನೂ ನಿರಾಶೆಯನ್ನೂ ಬರಮಾಡು.
ನನಗೆ ಕೇಡುಮಾಡಬೇಕೆಂದಿರುವ ಅವರು
ನಾಚಿಕೆಯಿಂದ ಓಡಿಹೋಗಲಿ!
15 ನನ್ನನ್ನು ಗೇಲಿಮಾಡುವ ಆ ದುಷ್ಟರು
ತಮಗಾಗುವ ಅವಮಾನದಿಂದ ಗಾಬರಿಗೊಳ್ಳಲಿ!
16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.
17 ಒಡೆಯನೇ, ನಾನು ಕೇವಲ ಬಡವನೂ ಅಸಹಾಯಕನೂ ಆಗಿರುವೆ.
ನನಗೆ ಸಹಾಯಮಾಡಿ ನನ್ನನ್ನು ರಕ್ಷಿಸು.
ನನ್ನ ದೇವರೇ, ತಡಮಾಡಬೇಡ.
ಪಸ್ಕ ಹಬ್ಬ
12 ಮೋಶೆ ಆರೋನರು ಇನ್ನೂ ಈಜಿಪ್ಟಿನಲ್ಲಿದ್ದಾಗ ಯೆಹೋವನು ಅವರೊಡನೆ ಮಾತಾಡಿ, 2 “ಈ ತಿಂಗಳು ನಿಮಗೆ ವರ್ಷದ ಮೊದಲನೆ ತಿಂಗಳಾಗಿರುವುದು. 3 ಈ ಆಜ್ಞೆಯು ಇಡೀ ಇಸ್ರೇಲರ ಸಮೂಹಕ್ಕೆ ಅನ್ವಯಿಸುತ್ತದೆ. ಈ ತಿಂಗಳ ಹತ್ತನೆಯ ದಿನದಲ್ಲಿ ಪ್ರತಿಯೊಬ್ಬನು ತನ್ನ ಮನೆಯಲ್ಲಿರುವ ಜನರಿಗಾಗಿ ಒಂದು ಕುರಿಮರಿಯನ್ನು ಅಥವಾ ಒಂದು ಆಡುಮರಿಯನ್ನು ಕೊಯ್ಯಬೇಕು. 4 ಅದನ್ನು ಸಂಪೂರ್ಣವಾಗಿ ತಿನ್ನಲು ಅವನ ಮನೆಯಲ್ಲಿ ಸಾಕಷ್ಟು ಜನರಿಲ್ಲದಿದ್ದರೆ ಅವನು ತನ್ನ ನೆರೆಯವರನ್ನು ಆಮಂತ್ರಿಸಿ ಅವರೊಂದಿಗೆ ಅದರ ಮಾಂಸವನ್ನು ಹಂಚಿಕೊಳ್ಳಬೇಕು. ಪ್ರತಿಯೊಬ್ಬನಿಗೂ ತಿನ್ನಲು ಸಾಕಷ್ಟು ಮಾಂಸವಿರಬೇಕು. 5 ಅದು ಒಂದು ವರ್ಷದ ಗಂಡು ಕುರಿಯಾಗಿರಬೇಕು ಅಥವಾ ಆಡಾಗಿರಬೇಕು. ಅಲ್ಲದೆ ಕಳಂಕ ರಹಿತವಾಗಿರಬೇಕು. 6 ಈ ತಿಂಗಳ ಹದಿನಾಲ್ಕನೆಯ ದಿನದವರೆಗೆ ನೀವು ಆ ಪಶುವನ್ನು ಸಾಕಬೇಕು. ಅಂದು ಸಂಜೆ ಇಸ್ರೇಲರೆಲ್ಲರೂ ಆ ಪಶುಗಳನ್ನು ಕೊಯ್ಯಬೇಕು. 7 ಈ ಪಶುಗಳ ರಕ್ತವನ್ನು ತೆಗೆದಿಟ್ಟು ಜನರು ಭೋಜನಮಾಡುವ ಮನೆಗಳ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗಳಿಗೂ ಆ ರಕ್ತವನ್ನು ಹಚ್ಚಬೇಕು.
8 “ಅಂದು ರಾತ್ರಿ ಆ ಪಶುವಿನ ಮಾಂಸವನ್ನು ಸುಟ್ಟು ಸಂಪೂರ್ಣವಾಗಿ ತಿನ್ನಬೇಕು. ಅದರೊಡನೆ ಕಹಿಯಾದ ಪಲ್ಯಗಳನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತಿನ್ನಬೇಕು. 9 ನೀವು ಆ ಪಶುವಿನ ಮಾಂಸವನ್ನು ಹಸಿಯಾಗಲಿ ನೀರಿನಲ್ಲಿ ಬೇಯಿಸಿಯಾಗಲಿ ತಿನ್ನಬಾರದು; ಅದರ ಮಾಂಸವನ್ನು ಬೆಂಕಿಯ ಮೇಲಿಟ್ಟು ಬೇಯಿಸಬೇಕು. ಅದರ ತಲೆ, ಕಾಲುಗಳನ್ನೂ ಒಳಗಿನ ಭಾಗಗಳನ್ನೂ ಬೆಂಕಿಯ ಮೇಲೆ ಬೇಯಿಸಬೇಕು. 10 ಅದರ ಮಾಂಸವನ್ನೆಲ್ಲಾ ಆ ರಾತ್ರಿಯಲ್ಲಿಯೇ ತಿನ್ನಬೇಕು. ಬೆಳಗಾಗುವವರೆಗೆ ಮಾಂಸವೇನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
11 “ನೀವು ಭೋಜನ ಮಾಡುವಾಗ ಪ್ರಯಾಣ ಮಾಡುತ್ತಿರುವಂತೆ ಬಟ್ಟೆ ಧರಿಸಿಕೊಂಡಿರಬೇಕು; ಕೆರಗಳನ್ನು ಹಾಕಿಕೊಂಡು ನಿಮ್ಮ ಊರುಗೋಲನ್ನು ಕೈಯಲ್ಲಿ ಹಿಡಿದಿರಬೇಕು. ನೀವು ಅವಸವಸರವಾಗಿ ತಿನ್ನಬೇಕು. ಯಾಕೆಂದರೆ ಇದು ಯೆಹೋವನ ಪಸ್ಕಹಬ್ಬ.
12 “ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು. 13 ಆದರೆ ನಿಮ್ಮ ಮನೆಗಳಿಗೆ ಹಚ್ಚಿರುವ ರಕ್ತವು ಒಂದು ವಿಶೇಷ ಸೂಚನೆಯಾಗಿದೆ. ನಾನು ಆ ರಕ್ತವನ್ನು ನೋಡಿದಾಗ ನಿಮ್ಮ ಮನೆಯನ್ನು ದಾಟಿಹೋಗುವೆನು.[a] ಈಜಿಪ್ಟಿನ ಜನರಿಗೆ ಕೇಡುಗಳಾಗುವಂತೆ ಮಾಡುವೆನು. ಆದರೆ ಆ ವ್ಯಾಧಿಗಳು ನಿಮಗೆ ಹಾನಿ ಮಾಡುವುದಿಲ್ಲ.
21 ಆದ್ದರಿಂದ ಮೋಶೆಯು ಹಿರಿಯರ ಸಭೆ ಸೇರಿಸಿ, “ನಿಮ್ಮ ಕುಟುಂಬಗಳಿಗೆ ಬೇಕಾದ ಪಶುಗಳನ್ನು ತೆಗೆದುಕೊಂಡು ಪಸ್ಕಕ್ಕಾಗಿ ಅವುಗಳನ್ನು ಕೊಯ್ಯಿರಿ. 22 ಹಿಸ್ಸೋಪ್ ಗಿಡದ ಬರಲನ್ನು ತೆಗೆದುಕೊಂಡು ರಕ್ತ ತುಂಬಿರುವ ಪಾತ್ರೆಯಲ್ಲಿ ಅದ್ದಿರಿ. ರಕ್ತವನ್ನು ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿರಿ. ಮುಂಜಾನೆಯಾಗುವವರೆಗೆ ಯಾರೂ ತಮ್ಮ ಮನೆಯನ್ನು ಬಿಟ್ಟು ಹೊರಗೆ ಹೋಗಬಾರದು. 23 ಆ ಸಮಯದಲ್ಲಿ ಚೊಚ್ಚಲಾದವುಗಳನ್ನು ಸಂಹರಿಸಲು ಯೆಹೋವನು ಈಜಿಪ್ಟಿನ ಮೂಲಕ ಹಾದುಹೋಗುವನು. ಬಾಗಿಲಿನ ನಿಲುವು ಕಂಬಗಳಿಗೆ ಮತ್ತು ಮೇಲಿನ ಪಟ್ಟಿಗಳಿಗೆ ಹಚ್ಚಿದ ರಕ್ತವನ್ನು ಯೆಹೋವನು ನೋಡಿ ಆ ಮನೆಯನ್ನು ಸಂರಕ್ಷಿಸುವನು.[a] ಸಂಹಾರಕನು ನಿಮ್ಮ ಮನೆಯೊಳಗೆ ಬಂದು ಸಂಹರಿಸಲು ಯೆಹೋವನು ಬಿಡುವುದಿಲ್ಲ. 24 ನೀವು ಈ ಆಜ್ಞೆಯನ್ನು ಜ್ಞಾಪಕದಲ್ಲಿಡಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ. 25 ಯೆಹೋವನು ನಿಮಗೆ ಕೊಡಲಿರುವ ದೇಶಕ್ಕೆ ನೀವು ಹೋದಾಗಲೂ ಈ ಹಬ್ಬವನ್ನು ಆಚರಿಸಬೇಕು. 26 ‘ಈ ಹಬ್ಬವನ್ನು ಮಾಡುವುದೇಕೆ?’ ಎಂದು ನಿಮ್ಮ ಮಕ್ಕಳು ನಿಮ್ಮನ್ನು ಕೇಳುವಾಗ, 27 ‘ಇದು ಯೆಹೋವನನ್ನು ಸನ್ಮಾನಿಸಲು ಮಾಡುವ ಪಸ್ಕಹಬ್ಬವಾಗಿದೆ. ಯಾಕೆಂದರೆ ನಾವು ಈಜಿಪ್ಟಿನಲ್ಲಿದ್ದಾಗ ಯೆಹೋವನು ಇಸ್ರೇಲರ ಮನೆಗಳನ್ನು ಬಿಟ್ಟು ದಾಟಿಹೋದನು; ಈಜಿಪ್ಟಿನವರನ್ನು ಸಂಹರಿಸಿದನು; ಆದರೆ ಆತನು ನಮ್ಮ ಮನೆಗಳಲ್ಲಿದ್ದವರನ್ನು ರಕ್ಷಿಸಿದನು’ ಎಂದು ಹೇಳಬೇಕು.
“ಆಗ ಮೋಶೆಯ ಮಾತನ್ನು ಕೇಳುತ್ತಿದ್ದ ಇಸ್ರೇಲರು ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದರು.” 28 ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ್ದಂತೆಯೇ ಇಸ್ರೇಲರು ಮಾಡಿದರು.
ಫಿಲಿಪ್ಪನು ಇಥಿಯೋಪಿಯದವನಿಗೆ ನೀಡಿದ ಉಪದೇಶ
26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.
27 ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು. 28 ಈಗ ಅವನು ತನ್ನ ಮನೆಗೆ ಮರಳಿ ಹೋಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 ಪವಿತ್ರಾತ್ಮನು ಫಿಲಿಪ್ಪನಿಗೆ, “ರಥದ ಬಳಿಗೆ ಹೋಗಿ ಅದರ ಸಮೀಪದಲ್ಲಿ ನಿಂತುಕೊ” ಎಂದು ಹೇಳಿದನು. 30 ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು. 32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ:
“ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು.
ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು.
ಆತನು ಬಾಯಿ ತೆರೆಯಲಿಲ್ಲ.
33 ಆತನಿಗೆ ಅವಮಾನ ಮಾಡಿದರು. ಆತನಿಗೆ ನ್ಯಾಯವು ದೊರೆಯಲಿಲ್ಲ.
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ!
ಆತನ ಸಂತತಿಯವರ ಬಗ್ಗೆ ಯಾರು ಮಾತಾಡಬಲ್ಲರು?”(A)
34 ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು. 35 ಫಿಲಿಪ್ಪನು ಪವಿತ್ರ ಗ್ರಂಥದ ಈ ಭಾಗದಿಂದಲೇ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ತಿಳಿಸಿದನು.
36 ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು. 37 [a] 38 ಬಳಿಕ ಅವನು ರಥವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅವರಿಬ್ಬರೂ ನೀರಿನೊಳಗೆ ಇಳಿದುಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 ಆದರೆ ಫಿಲಿಪ್ಪನು ಅಜೋತ್ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡು ಸೆಜರೇಯ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಎಲ್ಲಾ ಊರುಗಳಲ್ಲಿಯೂ ಸುವಾರ್ತೆಯನ್ನು ಸಾರಿದನು.
Kannada Holy Bible: Easy-to-Read Version. All rights reserved. © 1997 Bible League International