Revised Common Lectionary (Semicontinuous)
ದೇವರು ತನ್ನ ವಿಶೇಷ ಸೇವಕನನ್ನು ಕರೆಯುತ್ತಾನೆ
49 ದೂರದೇಶದಲ್ಲಿರುವ ಜನರೇ, ನನ್ನ ಮಾತುಗಳಿಗೆ ಕಿವಿಗೊಡಿರಿ;
ಭೂಮಿಯ ಮೇಲೆ ವಾಸಿಸುವ ಜನರೇ, ನನ್ನ ಮಾತುಗಳನ್ನು ಕೇಳಿರಿ.
ನಾನು ಹುಟ್ಟುವ ಮೊದಲೇ ಯೆಹೋವನು ನನ್ನನ್ನು ತನ್ನ ಸೇವೆಗಾಗಿ ಕರೆದನು.
ನಾನು ತಾಯಿಯ ಗರ್ಭದಲ್ಲಿರುವಾಗಲೇ ಯೆಹೋವನು ನನ್ನ ಹೆಸರೆತ್ತಿ ಕರೆದನು.
2 ತನ್ನ ಪರವಾಗಿ ಮಾತನಾಡಲು ಯೆಹೋವನು ನನ್ನನ್ನು ಉಪಯೋಗಿಸುತ್ತಾನೆ.
ಹದವಾದ ಕತ್ತಿಯಂತೆ ನನ್ನನ್ನು ಉಪಯೋಗಿಸುತ್ತಾನೆ.
ಅದೇ ಸಮಯದಲ್ಲಿ ನನ್ನನ್ನು ತನ್ನ ಕೈಯೊಳಗೆ ಸುರಕ್ಷಿತವಾಗಿ ಇರಿಸುತ್ತಾನೆ.
ಯೆಹೋವನು ನನ್ನನ್ನು ಬಾಣದಂತೆ ಉಪಯೋಗಿಸುತ್ತಾನೆ,
ಅದೇ ಸಮಯದಲ್ಲಿ ಬತ್ತಳಿಕೆಯಲ್ಲಿ ನನ್ನನ್ನು ಅಡಗಿಸಿಡುತ್ತಾನೆ.
3 ಯೆಹೋವನು ಹೀಗೆಂದನು: “ಇಸ್ರೇಲೇ, ನೀನೇ ನನ್ನ ಸೇವಕನು.
ನಾನು ನಿನಗೆ ಆಶ್ಚರ್ಯವಾದ ಕಾರ್ಯಗಳನ್ನು ಮಾಡುವೆನು.”
4 ಆಗ ನಾನು “ನಾನು ಕಷ್ಟಪಟ್ಟು ಮಾಡಿದ ಕಾರ್ಯಗಳೆಲ್ಲವೂ ನಿಷ್ಪ್ರಯೋಜನವಾದವು.
ನಾನು ನನ್ನನ್ನೇ ಸವೆಯಿಸಿದೆನು.
ಆದರೆ ಪ್ರಯೋಜನವಾದದ್ದನ್ನು ನಾನು ಮಾಡಲಿಲ್ಲ.
ನಾನು ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಏನೂ ಮಾಡಲಾಗಲಿಲ್ಲ.
ಆದ್ದರಿಂದ ನನಗೆ ಮಾಡಬೇಕಾದುದನ್ನು ಯೆಹೋವನೇ ತೀರ್ಮಾನಿಸಲಿ.
ನನಗೆ ದೊರಕಬೇಕಾದ ಬಹುಮಾನವನ್ನು ದೇವರೇ ತೀರ್ಮಾನಿಸಲಿ” ಎಂದು ಹೇಳಿದೆನು.
5 ನಾನು ಯೆಹೋವನ ಸೇವಕನಾಗಿರಬೇಕೆಂದು
ಆತನು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿಯೇ ರೂಪಿಸಿದನು.
ಇಸ್ರೇಲರನ್ನೂ ಯಾಕೋಬನನ್ನೂ ಆತನ ಬಳಿಗೆ ಮತ್ತೆ ಕರೆದುಕೊಂಡು ಬರಲು
ಆತನು ನನ್ನನ್ನು ರೂಪಿಸಿದನು.
ಯೆಹೋವನು ನನ್ನನ್ನು ಸನ್ಮಾನಿಸುವನು.
ನಾನು ಆತನಿಂದ ಬಲವನ್ನು ಹೊಂದುವೆನು.
6 ಯೆಹೋವನು ನನಗೆ ಹೇಳಿದ್ದೇನೆಂದರೆ:
“ನನ್ನ ಸೇವಕನಾದ ಯಾಕೋಬನ ಕುಲಗಳನ್ನು ಮೇಲೆತ್ತಿ
ಇಸ್ರೇಲಿನ ಅಳಿದುಳಿದವರನ್ನು ಪುನಃಸ್ಥಾಪಿಸುವೆ.
ಆದರೆ ನಿನಗೆ ಇನ್ನೊಂದು ಕೆಲಸವಿದೆ. ಅದು ಇದಕ್ಕಿಂತಲೂ ಮಹತ್ತಾದದ್ದು.
ನಾನು ನಿನ್ನನ್ನು ಎಲ್ಲಾ ಜನಾಂಗಗಳಿಗೆ ಬೆಳಕನ್ನಾಗಿ ಮಾಡುವೆನು.
ಲೋಕದ ಎಲ್ಲಾ ಜನರನ್ನು ರಕ್ಷಿಸಲು ನೀನು ನನ್ನ ಮಾರ್ಗವಾಗುವೆ.”
7 ಇಸ್ರೇಲಿನ ಪರಿಶುದ್ಧನೂ ವಿಮೋಚಕನೂ ಆದ ಯೆಹೋವನು ಇಸ್ರೇಲನ್ನು ಬಿಡಿಸುವನು.
ಆತನು ಹೇಳುವುದೇನೆಂದರೆ, “ನನ್ನ ಸೇವಕನು ದೀನನಾಗಿದ್ದಾನೆ. ಆತನು ಅರಸರನ್ನು ಸೇವಿಸುವನು.
ಆದರೆ ಜನರು ಆತನನ್ನು ದ್ವೇಷಿಸುವರು.
ಆದರೆ ರಾಜರುಗಳು ಅವನನ್ನು ನೋಡಿ ಎದ್ದುನಿಂತು ಗೌರವಿಸುವರು.
ಶ್ರೇಷ್ಠ ನಾಯಕರು ಆತನ ಮುಂದೆ ಅಡ್ಡಬೀಳುವರು.”
ಇದು ಇಸ್ರೇಲರ ಪರಿಶುದ್ಧನಾದ ಯೆಹೋವನ ಚಿತ್ತಕ್ಕನುಸಾರವಾಗಿದೆ. ಆತನು ಭರವಸೆಗೆ ಯೋಗ್ಯನಾಗಿದ್ದಾನೆ. ಆತನೇ ನಿನ್ನನ್ನು ಆರಿಸಿಕೊಂಡನು.
ರಚನೆಗಾರ: ದಾವೀದ.
40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
2 ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3 ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
4 ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
5 ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
ಅವು ಅಸಂಖ್ಯಾತವಾಗಿವೆ.
6 ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
7 ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
8 ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
9 ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.
1 ಪೌಲನು ಬರೆಯುತ್ತಿರುವ ಪತ್ರ. ಕ್ರಿಸ್ತ ಯೇಸುವಿನ ಅಪೊಸ್ತಲನಾಗುವುದಕ್ಕೆ ನಾನು ದೇವರ ಚಿತ್ತಾನುಸಾರವಾಗಿ ಕರೆಯುಲ್ಪಟ್ಟೆನು. ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಸೊಸ್ಥೆನನೊಂದಿಗೆ ಬರೆಯುತ್ತಿದ್ದೇನೆ.
2 ಕ್ರಿಸ್ತ ಯೇಸುವಿನಲ್ಲಿ ಪವಿತ್ರರಾಗಿ ಮಾಡಲ್ಪಟ್ಟಿರುವ ಕೊರಿಂಥದ ದೇವರ ಸಭೆಯವರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟಿದ್ದೀರಿ. ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಡುವ ಎಲ್ಲಾ ಜನರೊಂದಿಗೆ ನೀವು ಕರೆಯಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನು ಅವರಿಗೂ ನಮಗೂ ಪ್ರಭುವಾಗಿದ್ದಾನೆ.
3 ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ.
ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ
4 ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 5 ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ. 6 ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ. 7 ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ. 8 ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ. 9 ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ.
ಯೇಸು—ದೇವರ ಕುರಿಮರಿ
29 ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. 30 ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ. 31 ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.
32-33 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು. 34 ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.
ಯೇಸುವಿನ ಪ್ರಥಮ ಶಿಷ್ಯರು
35 ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ, 36 ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.
37 ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38 ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು.
ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)
39 ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.
40 ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು. 41 ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)
42 ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).
Kannada Holy Bible: Easy-to-Read Version. All rights reserved. © 1997 Bible League International