Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 40:1-11

ರಚನೆಗಾರ: ದಾವೀದ.

40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
    ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
    ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
    ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
    ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
    ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
    ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
    ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
    ಅವು ಅಸಂಖ್ಯಾತವಾಗಿವೆ.

ನಾನು ಗ್ರಹಿಸಿಕೊಂಡಿದ್ದೇನೆಂದರೆ,
    ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
    ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
    ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
    ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ವಿಜಯದ ಶುಭಾವಾರ್ತೆಯನ್ನು ನಾನು ಮಹಾಸಭೆಯಲ್ಲಿ ತಿಳಿಸಿದೆನು.
    ಯೆಹೋವನೇ, ನಾನು ಬಾಯಿ ಮುಚ್ಚಿಕೊಂಡಿರುವುದಿಲ್ಲ, ಅದು ನಿನಗೆ ತಿಳಿದೇ ಇದೆ.
10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು.
    ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ.
ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು.
    ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.
11 ಯೆಹೋವನೇ, ನಿನ್ನ ಕರುಣೆಯನ್ನು ನನ್ನಿಂದ ದೂರ ಮಾಡಬೇಡ.
    ನಿನ್ನ ದಯೆಯೂ ನಂಬಿಗಸ್ತಿಕೆಯೂ ನನ್ನನ್ನು ಸಂರಕ್ಷಿಸಲಿ.

1 ರಾಜರುಗಳು 19:19-21

ಎಲೀಷನು ಪ್ರವಾದಿಯಾದನು

19 ಎಲೀಯನು ಆ ಸ್ಥಳದಿಂದ ಹೊರಟು ಶಾಫಾಟನ ಮಗನಾದ ಎಲೀಷನನ್ನು ಕಂಡುಹಿಡಿಯಲು ಹೋದನು. ಎಲೀಷನು ಹನ್ನೆರಡು ಜೋಡಿ ಎತ್ತುಗಳನ್ನು ತಂದು ಭೂಮಿಯನ್ನು ಉಳುತ್ತಿದ್ದನು. ಎಲೀಯನು ಬಂದಾಗ ಎಲೀಷನು ಹನ್ನೆರಡನೆಯ ಜೋಡಿಯಿಂದ ತಾನಾಗಿ ಭೂಮಿಯನ್ನು ಉಳುತ್ತಿದ್ದನು. ಎಲೀಯನು ಎಲೀಷನ ಹತ್ತಿರಕ್ಕೆ ಹೋಗಿ ತನ್ನ ಮೇಲಂಗಿಯನ್ನು ಎಲೀಷನಿಗೆ ತೊಡಿಸಿದನು. 20 ಎಲೀಷನು ತಕ್ಷಣ ತನ್ನ ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಹೋದನು. ಎಲೀಷನು, “ನನ್ನ ತಾಯಿಗೆ ಮುದ್ದಿಟ್ಟು, ತಂದೆಗೆ ನಮಸ್ಕರಿಸಿ, ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.

ಎಲೀಯನು, “ಸರಿ, ನಾನು ನಿನ್ನನ್ನು ತಡೆಯುವುದಿಲ್ಲ” ಎಂದು ಉತ್ತರಿಸಿದನು.

21 ನಂತರ ಎಲೀಷನು ಹೋಗಿ ತಾನು ಉಳುತ್ತಿದ್ದ ಎತ್ತುಗಳನ್ನು ವಧಿಸಿ, ಮಾಂಸವನ್ನು ನೊಗದಿಂದಲೇ ಬೇಯಿಸಿ ಜನರೆಲ್ಲರಿಗೆ ಔತಣವನ್ನು ಏರ್ಪಡಿಸಿದನು. ನಂತರ ಅವನು ಎಲೀಯನನ್ನು ಹಿಂಬಾಲಿಸಿ ಅವನ ಸಹಾಯಕನಾದನು.

ಲೂಕ 5:1-11

ಯೇಸುವನ್ನು ಹಿಂಬಾಲಿಸಿದ ಪೇತ್ರ, ಯಾಕೋಬ, ಯೋಹಾನ

(ಮತ್ತಾಯ 4:18-22; ಮಾರ್ಕ 1:16-20)

ಯೇಸು ಗೆನೆಸರೇತ್ (ಗಲಿಲಾಯ) ಸರೋವರದ ಬಳಿ ನಿಂತುಕೊಂಡಿದ್ದಾಗ, ದೇವರ ವಾಕ್ಯವನ್ನು ಕೇಳಲು ಅನೇಕ ಜನರು ನೂಕಾಡುತ್ತಾ ಆತನ ಸುತ್ತಲೂ ಸೇರಿಬಂದರು. ಸರೋವರದ ದಡದಲ್ಲಿ ನಿಂತಿದ್ದ ಎರಡು ದೋಣಿಗಳನ್ನು ಯೇಸು ನೋಡಿದನು. ಬೆಸ್ತರು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಯೇಸು ಸೀಮೋನನ ದೋಣಿಯಲ್ಲಿ ಹತ್ತಿ ಕುಳಿತುಕೊಂಡು ದೋಣಿಯನ್ನು ದಡದಿಂದ ಸ್ವಲ್ಪದೂರಕ್ಕೆ ನೂಕಬೇಕೆಂದು ಸೀಮೋನನಿಗೆ ಹೇಳಿದನು.

ಉಪದೇಶ ಮಾಡಿದಮೇಲೆ ಯೇಸು ಸೀಮೋನನಿಗೆ, “ದೋಣಿಯನ್ನು ಆಳವಾದ ನೀರಿನ ಸ್ಥಳಕ್ಕೆ ನಡೆಸಿ, ಮೀನುಹಿಡಿಯಲು ನಿಮ್ಮ ಬಲೆಗಳನ್ನು ನೀರಿನಲ್ಲಿ ಹಾಕಿರಿ” ಎಂದು ಹೇಳಿದನು.

ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಒಂದು ಮೀನೂ ಸಿಕ್ಕಲಿಲ್ಲ. ಆದರೆ, ನೀನು ಹೇಳಿದ್ದರಿಂದ ಬೀಸುತ್ತೇವೆ” ಎಂದನು. ಬೆಸ್ತರು ತಮ್ಮ ಬಲೆಗಳನ್ನು ನೀರಿನೊಳಗೆ ಬೀಸಿದಾಗ, ಅವರ ಬಲೆಗಳು ಹರಿದುಹೋಗುವಷ್ಟು ಮೀನುಗಳು ರಾಶಿರಾಶಿಯಾಗಿ ಬಲೆಗಳಲ್ಲಿ ತುಂಬಿಕೊಂಡವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸ್ನೇಹಿತರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಮೀನುಗಳನ್ನು ತುಂಬಿಸಲು ದೋಣಿಗಳೆರಡೂ ಮುಳುಗುವಂತಾದವು.

8-9 ಇದನ್ನು ಕಂಡ ಬೆಸ್ತರಿಗೆಲ್ಲಾ ವಿಸ್ಮಯವಾಯಿತು. ಸೀಮೋನ್ ಪೇತ್ರನಂತೂ ಯೇಸುವಿನ ಮುಂದೆ ಮೊಣಕಾಲೂರಿ “ಪ್ರಭುವೇ ನನ್ನನ್ನು ಬಿಟ್ಟುಹೋಗು, ನಾನು ಪಾಪಿಯಾಗಿದ್ದೇನೆ!” ಎಂದನು. 10 ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಆಶ್ಚರ್ಯಪಟ್ಟರು. (ಇವರಿಬ್ಬರೂ ಸೀಮೋನನ ಪಾಲುಗಾರರಾಗಿದ್ದರು.)

ಯೇಸು ಸೀಮೋನನಿಗೆ, “ಭಯಪಡಬೇಡ. ಇಂದಿನಿಂದ ನೀನು ಮೀನನ್ನು ಹಿಡಿಯದೆ, ಮನುಷ್ಯರನ್ನು ಒಟ್ಟುಗೂಡಿಸಲು ದುಡಿಯುವೆ!” ಎಂದು ಹೇಳಿದನು.

11 ಅವರು ತಮ್ಮ ದೋಣಿಗಳನ್ನು ದಡಕ್ಕೆ ಸಾಗಿಸಿದ ಮೇಲೆ ಎಲ್ಲವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International