Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 89:5-37

ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ.
    ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ.
    ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
ದೇವರು ಪರಿಶುದ್ಧರ ಸಭೆ ಸೇರಿಸುವನು.
    ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು.
    ಅವರು ದೇವರಲ್ಲಿ ಭಯಭಕ್ತಿಯಿಂದಿರುವರು.
    ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
    ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
ಸಮುದ್ರವು ನಿನ್ನ ಅಧೀನದಲ್ಲಿದೆ.
    ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ.
    ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
    ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ.
    ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ.
    ನಿನ್ನ ಬಲವು ಮಹಾ ಬಲವೇ ಸರಿ!
    ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ.
    ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
    ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
    ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
    ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
    ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ:
    “ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು
    ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
    ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
    ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
    ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
    ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
    ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
    ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
    ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
27 ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು.
    ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು.
28 ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು.
    ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು.
29 ಅವನ ಕುಟುಂಬವು ಶಾಶ್ವತವಾಗಿರುವುದು.
    ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು.
30 ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು
    ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು.
31 ನಾನು ಆರಿಸಿಕೊಂಡ ರಾಜನ ಸಂತತಿಯವರು
    ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,
32 ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು.
    ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು.
33 ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ.
    ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು.
34 ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು
    ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ.
35 ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು.
    ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
36 ದಾವೀದನ ಕುಟುಂಬವು ಶಾಶ್ವತವಾಗಿರುವುದು.
    ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು.
37     ಅದು ಚಂದ್ರನಂತೆ ಶಾಶ್ವತವಾಗಿರುವುದು.
ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ.
    ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.”

ಯೆಶಾಯ 51:1-16

ಇಸ್ರೇಲ್ ಅಬ್ರಹಾಮನಂತೆ ಇರಬೇಕು

51 “ಒಳ್ಳೆಯವರಾಗಿ ಜೀವಿಸಲು ಬಹಳವಾಗಿ ಪ್ರಯತ್ನಿಸುತ್ತಿರುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೇ ದೃಷ್ಟಿಸಿ ನೋಡಿರಿ; ಆ ಬಂಡೆಯೊಳಗಿಂದಲೇ ನೀವು ತೆಗೆಯಲ್ಪಟ್ಟಿದ್ದೀರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮ ಮಾತೆಯಾದ ಸಾರಳನ್ನೂ ದೃಷ್ಟಿಸಿರಿ; ನಾನು ಕರೆದಾಗ ಅಬ್ರಹಾಮನು ಒಬ್ಬಂಟಿಗನಾಗಿದ್ದನು. ನಾನು ಅವನನ್ನು ಆಶೀರ್ವದಿಸಿ, ಅವನ ಸಂತಾನವನ್ನು ಅಭಿವೃದ್ಧಿಪಡಿಸಿ, ಅವನನ್ನು ಮಹಾಜನಾಂಗದ ಮೂಲಪುರುಷನನ್ನಾಗಿ ಮಾಡಿದೆನು.”

ಅದೇ ರೀತಿಯಲ್ಲಿ ಯೆಹೋವನು ಚೀಯೋನನ್ನು ಮತ್ತು ನಿರ್ಜನವಾದ ಅದರ ಸ್ಥಳಗಳನ್ನು ಆದರಿಸುವನು; ಅವರಿಗಾಗಿ ಮಹಾದೊಡ್ಡ ಕಾರ್ಯವನ್ನು ಮಾಡುವನು. ಯೆಹೋವನು ಮರುಭೂಮಿಯನ್ನು ಏದೆನ್ ಉದ್ಯಾನವನದಂತೆ ಮಾಡುವನು. ಆ ದೇಶವು ಬರಿದಾಗಿತ್ತು. ಆದರೆ ಅದು ಯೆಹೋವನ ಉದ್ಯಾನವನವಾಗುವದು. ಅದರೊಳಗಿರುವ ಜನರು ಸಂತೋಷಭರಿತರಾಗುವರು. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವರು. ಅವರು ಕೃತಜ್ಞತಾಸ್ತುತಿ ಮಾಡುವರು, ಜಯಗೀತೆಯನ್ನು ಹಾಡುವರು.

“ನನ್ನ ಜನರೇ, ನನ್ನ ಮಾತನ್ನು ಕೇಳಿರಿ.
    ನನ್ನ ಕಟ್ಟಳೆ ಮತ್ತು ನ್ಯಾಯ ಬೆಳಕಿನಂತಿದ್ದು ಹೇಗೆ ಜೀವಿಸಬೇಕೆಂಬುದನ್ನು ಜನರಿಗೆ ತೋರಿಸುತ್ತವೆ.
ನಾನು ನ್ಯಾಯವಂತನೆಂದು ನಿಮಗೆ ಬೇಗನೆ ತೋರಿಸುವೆನು. ನಿಮ್ಮನ್ನು ಬೇಗನೆ ರಕ್ಷಿಸುವೆನು.
    ನಾನು ನನ್ನ ಸಾಮರ್ಥ್ಯದಿಂದ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವೆನು.
ದೂರದೇಶದವರು ನನಗೋಸ್ಕರ ಕಾಯುತ್ತಿದ್ದಾರೆ.
    ಅವರು ತಮ್ಮ ರಕ್ಷಣೆಗಾಗಿ ನನ್ನ ಶಕ್ತಿಯನ್ನು ಎದುರುನೋಡುತ್ತಿದ್ದಾರೆ.
ಪರಲೋಕದ ಕಡೆಗೆ ದೃಷ್ಟಿಸಿರಿ.
    ನಿಮ್ಮ ಸುತ್ತಲೂ ಇರುವ ಭೂಮಿಯನ್ನು ನೋಡಿರಿ.
ಹೊಗೆಯ ಮೋಡದಂತೆ ಆಕಾಶವು ಇಲ್ಲದೆಹೋಗುವದು.
    ಭೂಮಿಯು ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವುದು.
ಭೂಮಿಯ ಮೇಲಿರುವ ಜನರು ಸಾಯುವರು.
    ಆದರೆ ನನ್ನ ರಕ್ಷಣೆಯು ನಿರಂತರವಾಗಿರುವದು.
    ನನ್ನ ಕರುಣೆಯು ಅಂತ್ಯವಾಗದು.
ಒಳ್ಳೆಯತನವನ್ನು ಅರ್ಥಮಾಡಿಕೊಂಡ ನೀವು ನನ್ನ ಮಾತುಗಳನ್ನು ಕೇಳಿರಿ.
    ನನ್ನ ಬೋಧನೆಯನ್ನು ಅನುಸರಿಸುವ ನೀವು ನನ್ನ ಮಾತಿಗೆ ಕಿವಿಗೊಡಿರಿ.
ದುಷ್ಟಜನರಿಗೆ ಭಯಪಡಬೇಡಿರಿ.
    ಅವರು ನಿಮಗೆ ಹೇಳುವ ಕೆಟ್ಟಮಾತುಗಳಿಗೆ ಭಯಪಡಬೇಡಿ.
ಯಾಕೆಂದರೆ ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು. ಅವರು ಉಣ್ಣೆಯಂತಿರುವರು,
    ನುಸಿಯು ಅದನ್ನು ತಿಂದುಬಿಡುವುದು.
ಆದರೆ ನನ್ನ ಒಳ್ಳೆಯತನವು ಶಾಶ್ವತವಾದದ್ದು.
    ನನ್ನ ರಕ್ಷಣೆಯು ಸದಾಕಾಲವಿರುವುದು.”

ದೇವರ ಶಕ್ತಿಯೇ ಜನರನ್ನು ರಕ್ಷಿಸುವದು

ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು,
    ಬಲವನ್ನು ಹೊಂದಿಕೊ!
ಪುರಾತನ ಕಾಲದಲ್ಲಿ ಮಾಡಿದಂತೆಯೇ
    ನಿನ್ನ ಶಕ್ತಿಯನ್ನು ತೋರು.
ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ.
    ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.
10 ನೀನು ಸಮುದ್ರವನ್ನು ಬತ್ತಿಸಿರುವೆ. ಮಹಾ ಆಳದ ಗುಂಡಿಗಳ ನೀರನ್ನು ನೀನು ಬತ್ತಿಸಿರುವೆ.
    ಅತ್ಯಂತ ಆಳವಾದ ಸಮುದ್ರದ ತಳವನ್ನು ನೀನು ರಸ್ತೆಯನ್ನಾಗಿ ಮಾಡಿರುವೆ.
    ನಿನ್ನ ಜನರು ಆ ರಸ್ತೆಯಲ್ಲಿ ಸಮುದ್ರವನ್ನು ದಾಟಿ ರಕ್ಷಿಸಲ್ಪಟ್ಟರು.
11 ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ.
    ಅವರು ಚೀಯೋನಿಗೆ ಸಂತೋಷದಿಂದ ಮರಳಿ ಬರುತ್ತಾರೆ.
ಅವರು ಬಹಳ ಸಂತೋಷಪಡುವರು.
    ಅವರ ಹರ್ಷವು ಅವರ ತಲೆಯ ಮೇಲೆ ಕಿರೀಟದಂತೆ ನಿತ್ಯಕಾಲಕ್ಕೂ ಇರುವುದು.
ಅವರು ಹರ್ಷದಿಂದ ಹಾಡುವರು.
    ಅವರ ದುಃಖವೆಲ್ಲಾ ಬಹುದೂರವಾಗುವುದು.

12 ಯೆಹೋವನು ಹೇಳುವುದೇನೆಂದರೆ, “ನಿನ್ನನ್ನು ಸಂತೈಸುವಾತನು ನಾನೇ.
    ಆದ್ದರಿಂದ ನೀನು ಜನರಿಗೆ ಯಾಕೆ ಹೆದರಬೇಕು.
    ಅವರು ಹುಟ್ಟಿ ಸಾಯುವ ನರರಾಗಿದ್ದಾರೆ.
    ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ.”

13 ಯೆಹೋವನು ನಿನ್ನನ್ನು ಸೃಷ್ಟಿಸಿದ್ದಾನೆ.
    ತನ್ನ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದವನು ಆತನೇ.
ಆತನು ತನ್ನ ಶಕ್ತಿಯಿಂದ
    ಭೂಮಿಯ ಮೇಲೆ ಆಕಾಶವನ್ನು ಹರಡಿದ್ದಾನೆ.
ಆದರೆ ನೀನು ಆತನನ್ನೂ ಆತನ ಶಕ್ತಿಯನ್ನೂ ಮರೆತುಬಿಟ್ಟೆ
    ಆದ್ದರಿಂದಲೇ ನಿನಗೆ ಕೇಡುಮಾಡುವ ದುಷ್ಟರಿಗೆ ನೀನು ಯಾವಾಗಲೂ ಹೆದರಿಕೊಂಡಿರುವೆ.
ಅವರು ನಿನ್ನನ್ನು ನಾಶಮಾಡಲು ಆಲೋಚಿಸಿದ್ದಾರೆ.
    ಈಗ ಅವರೆಲ್ಲಿದ್ದಾರೆ? ಅವರೆಲ್ಲಾ ಹೋಗಿಬಿಟ್ಟಿದ್ದಾರೆ.

14 ಸೆರೆಯಲ್ಲಿರುವವರು ಬೇಗನೆ ಬಿಡುಗಡೆ ಹೊಂದುವರು.
    ಅವರು ಸೆರೆಮನೆಯಲ್ಲಿ ಸತ್ತು ಕೊಳೆಯುವುದಿಲ್ಲ.
    ಅವರಿಗೆ ತಿನ್ನಲು ಬೇಕಾದಷ್ಟು ಊಟವಿರುವದು.

15 “ಯೆಹೋವನೆಂಬ ನಾನೇ ನಿಮ್ಮ ದೇವರು.
    ನಾನು ಸಾಗರವನ್ನು ಕದಡಿಸಿ ತೆರೆಗಳನ್ನು ಬರಮಾಡುತ್ತೇನೆ.”
(ಸರ್ವಶಕ್ತನು ಎಂಬುದೇ ನನ್ನ ಹೆಸರು.)

16 “ನನ್ನ ಸೇವಕನೇ, ನೀನು ಹೇಳತಕ್ಕ ಇಷ್ಟವಾದ ಮಾತುಗಳನ್ನು ನಿನ್ನ ಬಾಯಲ್ಲಿಡುತ್ತೇನೆ. ನಾನು ನನ್ನ ಕೈಗಳಿಂದ ನಿನ್ನನ್ನು ಮುಚ್ಚಿ ಕಾಪಾಡುವೆನು. ಹೊಸ ಭೂಮ್ಯಾಕಾಶಗಳನ್ನು ನಿರ್ಮಿಸಲು ನಾನು ನಿನ್ನನ್ನು ಉಪಯೋಗಿಸುತ್ತೇನೆ. ಚೀಯೋನಿಗೆ, ‘ನೀವು ನನ್ನ ಜನರು’ ಎಂದು ಹೇಳುವದಕ್ಕೆ ನಿನ್ನನ್ನು ಉಪಯೋಗಿಸುತ್ತೇನೆ.”

ಮತ್ತಾಯ 12:15-21

ಯೇಸು ದೇವರಿಂದ ಆರಿಸಲ್ಪಟ್ಟ ಸೇವಕ

15 ಫರಿಸಾಯರು ಏನು ಮಾಡುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಆ ಸ್ಥಳವನ್ನು ಬಿಟ್ಟುಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿದರು. ಆತನು ಎಲ್ಲಾ ರೋಗಿಗಳನ್ನು ಗುಣಪಡಿಸಿದನು. 16 ಆದರೆ ತಾನು ಯಾರೆಂಬುದನ್ನು ಬೇರೆ ಜನರಿಗೆ ಹೇಳಬಾರದೆಂದು ಆತನು ಜನರನ್ನು ಎಚ್ಚರಿಸಿದನು. 17 ಪ್ರವಾದಿಯಾದ ಯೆಶಾಯನು ಹೇಳಿದ್ದನ್ನು ನೆರವೇರಿಸುವುದಕ್ಕಾಗಿ ಯೇಸು ಇವುಗಳನ್ನು ಮಾಡಿದನು. ಯೆಶಾಯನು ಹೇಳಿದ್ದೇನೆಂದರೆ:

18 “ಇಗೋ, ನನ್ನ ಸೇವಕನು.
    ನಾನು ಆತನನ್ನು ಆರಿಸಿಕೊಂಡಿದ್ದೇನೆ.
ಆತನನ್ನು ಪ್ರೀತಿಸುತ್ತೇನೆ,
    ಆತನನ್ನು ಮೆಚ್ಚಿದ್ದೇನೆ.
ಆತನ ಮೇಲೆ ನನ್ನ ಆತ್ಮವನ್ನು ಇರಿಸುವೆನು.
    ಆತನು ಜನಾಂಗಗಳಿಗೆ ನ್ಯಾಯವಾದ ತೀರ್ಪು ಮಾಡುವನು.
19 ಆತನು ಜಗಳವಾಡುವುದಿಲ್ಲ, ಕೂಗಾಡುವುದಿಲ್ಲ.
    ಬೀದಿಗಳಲ್ಲಿ ಆತನ ಶಬ್ದ ಕೇಳಿಸುವುದಿಲ್ಲ.
20 ಬಾಗಿಹೋದ ದಂಟನ್ನು ಆತನು ಮುರಿಯುವುದಿಲ್ಲ;
    ಆರಿಹೋಗುತ್ತಿರುವ ದೀಪವನ್ನು ಆತನು ನಂದಿಸುವುದಿಲ್ಲ.
    ನ್ಯಾಯವಾದ ತೀರ್ಪು ಜಯಗಳಿಸುವಂತೆ ಆತನು ಮಾಡುವನು.
21 ಎಲ್ಲಾ ಜನರು ಆತನಲ್ಲಿ ಭರವಸೆ ಇಡುವರು.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International