Revised Common Lectionary (Semicontinuous)
5 ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ.
ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
6 ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ.
ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
7 ದೇವರು ಪರಿಶುದ್ಧರ ಸಭೆ ಸೇರಿಸುವನು.
ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು.
ಅವರು ದೇವರಲ್ಲಿ ಭಯಭಕ್ತಿಯಿಂದಿರುವರು.
ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
8 ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
9 ಸಮುದ್ರವು ನಿನ್ನ ಅಧೀನದಲ್ಲಿದೆ.
ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ.
ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ.
ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ.
ನಿನ್ನ ಬಲವು ಮಹಾ ಬಲವೇ ಸರಿ!
ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ.
ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ:
“ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು
ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
27 ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು.
ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು.
28 ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು.
ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು.
29 ಅವನ ಕುಟುಂಬವು ಶಾಶ್ವತವಾಗಿರುವುದು.
ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು.
30 ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು
ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು.
31 ನಾನು ಆರಿಸಿಕೊಂಡ ರಾಜನ ಸಂತತಿಯವರು
ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,
32 ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು.
ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು.
33 ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ.
ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು.
34 ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು
ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ.
35 ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು.
ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
36 ದಾವೀದನ ಕುಟುಂಬವು ಶಾಶ್ವತವಾಗಿರುವುದು.
ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು.
37 ಅದು ಚಂದ್ರನಂತೆ ಶಾಶ್ವತವಾಗಿರುವುದು.
ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ.
ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.”
ಬೇತೇಲಿನಲ್ಲಿ ಯಾಕೋಬನು
35 ದೇವರು ಯಾಕೋಬನಿಗೆ, “ನೀನು ಬೇತೇಲ್ ಪಟ್ಟಣಕ್ಕೆ ಹೋಗಿ ಅಲ್ಲೇ ವಾಸಿಸು ಮತ್ತು ಆರಾಧನೆಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿಸು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿಹೋಗುತ್ತಿದ್ದಾಗ ದೇವರಾದ ‘ಏಲ್’ ನಿನಗೆ ಅಲ್ಲಿ ಕಾಣಿಸಿಕೊಳ್ಳಲಿಲ್ಲವೇ! ಆತನ ಆರಾಧನೆಗಾಗಿ ಅಲ್ಲಿ ಯಜ್ಞವೇದಿಕೆಯನ್ನು ಕಟ್ಟಿಸು” ಎಂದು ಹೇಳಿದನು.
2 ಆದ್ದರಿಂದ ಯಾಕೋಬನು ತನ್ನ ಕುಟುಂಬದವರಿಗೂ ತನ್ನ ಎಲ್ಲಾ ಸೇವಕರಿಗೂ, “ನಿಮ್ಮಲ್ಲಿರುವ ಮರದ ಮತ್ತು ಲೋಹದ ಎಲ್ಲಾ ಅನ್ಯದೇವರುಗಳನ್ನು ನಾಶಮಾಡಿರಿ. ನಿಮ್ಮನ್ನು ಶುದ್ಧಿ ಮಾಡಿಕೊಂಡು ಶುದ್ಧವಾದ ಬಟ್ಟೆಗಳನ್ನು ಧರಿಸಿಕೊಳ್ಳಿರಿ. 3 ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ; ನಾನು ಕಷ್ಟದಲ್ಲಿದ್ದಾಗ ಸಹಾಯಮಾಡಿದ ದೇವರಿಗಾಗಿ ಒಂದು ಯಜ್ಞವೇದಿಕೆಯನ್ನು ಅಲ್ಲಿ ಕಟ್ಟಿಸುತ್ತೇನೆ. ನಾನು ಹೋದಕಡೆಗಳಲ್ಲೆಲ್ಲಾ ಆ ದೇವರು ನನ್ನೊಂದಿಗೆ ಇದ್ದನು” ಎಂದು ಹೇಳಿದನು.
4 ಆದ್ದರಿಂದ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ವಾಲೆಗಳನ್ನೂ ಯಾಕೋಬನಿಗೆ ಕೊಟ್ಟರು. ಯಾಕೋಬನು ಅವುಗಳನ್ನೆಲ್ಲಾ ಶೆಕೆಮ್ ಪಟ್ಟಣದ ಸಮೀಪದಲ್ಲಿರುವ ಏಲಾವೃಕ್ಷದ ಬುಡದಲ್ಲಿ ಹೂಳಿಟ್ಟನು.
5 ಯಾಕೋಬನು ಮತ್ತು ಅವನ ಗಂಡುಮಕ್ಕಳು ಆ ಸ್ಥಳದಿಂದ ಹೊರಟರು. ಆ ಪ್ರದೇಶದಲ್ಲಿದ್ದ ಜನರು ಅವರನ್ನು ಹಿಂಬಾಲಿಸಿ ಕೊಲ್ಲಬೇಕೆಂದಿದ್ದರು. ಆದರೆ ಅವರು ಭಯಪಟ್ಟು ಯಾಕೋಬನನ್ನು ಹಿಂಬಾಲಿಸಲಿಲ್ಲ. 6 ಯಾಕೋಬನು ಮತ್ತು ಅವರ ಜನರು ಲೂಜಿಗೆ ಹೋದರು. ಈಗ ಲೂಜನ್ನು “ಬೇತೇಲ್” ಎಂದು ಕರೆಯುತ್ತಾರೆ. ಅದು ಕಾನಾನ್ ದೇಶದಲ್ಲಿದೆ. 7 ಯಾಕೋಬನು ಅಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿದನು. ಯಾಕೋಬನು ತನ್ನ ಅಣ್ಣನ ಬಳಿಯಿಂದ ಓಡಿ ಹೋಗುತ್ತಿದ್ದಾಗ ದೇವರು ಅವನಿಗೆ ಮೊದಲು ಕಾಣಿಸಿಕೊಂಡದ್ದು ಆ ಸ್ಥಳದಲ್ಲೇ. ಆದ್ದರಿಂದ ಯಾಕೋಬನು ಆ ಸ್ಥಳಕ್ಕೆ “ಏಲ್ ಬೇತೇಲ್” ಎಂದು ಹೆಸರಿಟ್ಟನು.
8 ರೆಬೆಕ್ಕಳ ದಾಸಿಯಾದ ದೆಬೋರಳು ಅಲ್ಲಿ ಸತ್ತುಹೋದಳು. ಆದ್ದರಿಂದ ಅವರು ಆಕೆಯನ್ನು ಬೇತೇಲಿನ ಬಳಿಯಲ್ಲಿರುವ ಏಲಾವೃಕ್ಷದ ಬುಡದಲ್ಲಿ ಸಮಾಧಿ ಮಾಡಿದರು. ಆ ಸ್ಥಳಕ್ಕೆ “ಅಲ್ಲೋನ್ ಬಾಕೂತ್” ಎಂದು ಹೆಸರಿಟ್ಟರು.
ಯಾಕೋಬನ ಹೊಸ ಹೆಸರು
9 ಯಾಕೋಬನು ಪದ್ದನ್‌ಅರಾಮಿನಿಂದ ಹಿಂತಿರುಗಿ ಬಂದಾಗ, ದೇವರು ಅವನಿಗೆ ಮತ್ತೆ ಕಾಣಿಸಿಕೊಂಡು ಅವನನ್ನು ಆಶೀರ್ವದಿಸಿದನು. 10 ದೇವರು ಯಾಕೋಬನಿಗೆ, “ನಿನ್ನ ಹೆಸರು ಯಾಕೋಬ. ಆದರೆ ನಾನು ಆ ಹೆಸರನ್ನು ಬದಲಾಯಿಸುವೆನು. ಇನ್ನು ಮುಂದೆ ನೀನು ಯಾಕೋಬನೆಂದು ಕರೆಸಿಕೊಳ್ಳುವುದಿಲ್ಲ. ನಿನ್ನ ಹೊಸ ಹೆಸರು ‘ಇಸ್ರೇಲ್’” ಎಂದು ಹೇಳಿ ಅವನಿಗೆ “ಇಸ್ರೇಲ್” ಎಂದು ಹೆಸರಿಟ್ಟನು.
11 ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು. ನೀನು ಅನೇಕ ಮಕ್ಕಳನ್ನು ಪಡೆದು ಮಹಾಜನಾಂಗವಾಗಿ ಬೆಳೆಯುವೆ. ಅನೇಕ ಜನಾಂಗಗಳೂ ರಾಜರುಗಳೂ ನಿನ್ನೊಳಗಿಂದ ಬರುವರು. 12 ನಾನು ಅಬ್ರಹಾಮನಿಗೂ ಇಸಾಕನಿಗೂ ವಿಶೇಷವಾದ ದೇಶವನ್ನು ಕೊಟ್ಟೆನು. ಈಗ ನಾನು ಆ ದೇಶವನ್ನು ನಿನಗೆ ಕೊಡುವೆನು. ನಾನು ಆ ದೇಶವನ್ನು ನಿನ್ನ ಮುಂದಿನ ಸಂತತಿಗಳವರಿಗೆ ಕೊಡುವೆನು” ಎಂದು ಹೇಳಿದನು. 13 ಆಮೇಲೆ ದೇವರು ಆ ಸ್ಥಳದಿಂದ ಹೊರಟುಹೋದನು. 14-15 ಯಾಕೋಬನು ಈ ಸ್ಥಳದಲ್ಲಿ ಜ್ಞಾಪಕಾರ್ಥವಾಗಿ ಒಂದು ಸ್ಮಾರಕಕಲ್ಲನ್ನು ನಿಲ್ಲಿಸಿ ಅದರ ಮೇಲೆ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಸುರಿದನು. ಇದು ಒಂದು ವಿಶೇಷವಾದ ಸ್ಥಳ. ಯಾಕೆಂದರೆ ಅಲ್ಲಿ ದೇವರು ಯಾಕೋಬನೊಂದಿಗೆ ಮಾತಾಡಿದನು. ಯಾಕೋಬನು ಆ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.
ಯೆಹೂದ್ಯರಲ್ಲದವರಿಗೆ ಪವಿತ್ರಾತ್ಮಧಾರೆ
44 ಪೇತ್ರನು ಇನ್ನೂ ಹೀಗೆ ಹೇಳುತ್ತಿರುವಾಗಲೇ, ಅವನ ಉಪದೇಶವನ್ನು ಕೇಳುತ್ತಿದ್ದವರ ಮೇಲೆ ಪವಿತ್ರಾತ್ಮನು ಇಳಿದು ಬಂದನು. 45 ಪೇತ್ರನೊಂದಿಗೆ ಬಂದಿದ್ದ ಯೆಹೂದ್ಯ ವಿಶ್ವಾಸಿಗಳು ವಿಸ್ಮಿತರಾದರು. ಯೆಹೂದ್ಯರಲ್ಲದ ಜನರಿಗೂ ಸಹ ಪವಿತ್ರಾತ್ಮಧಾರೆಯಾದದ್ದನ್ನು ಕಂಡು ಅವರು ಆಶ್ಚರ್ಯಪಟ್ಟರು. 46 ಅವರು ಬೇರಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರಿಗೆ ಸ್ತೋತ್ರ ಸಲ್ಲಿಸುತ್ತಿರುವುದನ್ನು ಆ ಯೆಹೂದ್ಯ ವಿಶ್ವಾಸಿಗಳು ಕೇಳಿದರು. ಬಳಿಕ ಪೇತ್ರನು, 47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ, 48 ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರಿಗೆ ಅಪ್ಪಣೆಕೊಟ್ಟನು. ಬಳಿಕ ಅವರು ತಮ್ಮೊಂದಿಗೆ ಕೆಲವು ದಿನಗಳವರೆಗೆ ಇರಬೇಕೆಂದು ಪೇತ್ರನನ್ನು ಕೇಳಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International