Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 29

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

1 ಸಮುವೇಲನು 7:3-17

ಸಮುವೇಲನು ಇಸ್ರೇಲರಿಗೆ, “ನೀವು ಯೆಹೋವನ ಬಳಿಗೆ ಪೂರ್ಣಮನಸ್ಸಿನಿಂದ ಮತ್ತೆ ಬರುವುದಾದರೆ ನಿಮ್ಮ ಬಳಿಯಿರುವ ಅನ್ಯದೇವರುಗಳನ್ನು ಎಸೆಯಬೇಕು. ನೀವು ಅಷ್ಟೋರೆತ್ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಆತನ ಸೇವೆಯನ್ನು ಮಾತ್ರ ಮಾಡಬೇಕು. ಆಗ ಆತನು ನಿಮ್ಮನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.

ಆದ್ದರಿಂದ ಇಸ್ರೇಲರು ಬಾಳ್‌ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ತ್ಯಜಿಸಿ ಯೆಹೋವನ ಸೇವೆಯನ್ನು ಮಾತ್ರ ಮಾಡಿದರು.

ಸಮುವೇಲನು ಅವರಿಗೆ, “ಇಸ್ರೇಲರೆಲ್ಲರೂ ಮಿಚ್ಪೆಯಲ್ಲಿ ಒಟ್ಟುಗೂಡಬೇಕು. ನಾನು ನಿಮಗಾಗಿ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.

ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.

ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿರುವುದು ಫಿಲಿಷ್ಟಿಯರಿಗೆ ಗೊತ್ತಾಯಿತು. ಫಿಲಿಷ್ಟಿಯ ಅಧಿಪತಿಗಳು ಇಸ್ರೇಲರ ವಿರುದ್ಧ ಹೋರಾಡಲು ಹೊರಟರು. ಫಿಲಿಷ್ಟಿಯರು ಬರುತ್ತಿರುವುದನ್ನು ಕೇಳಿ ಇಸ್ರೇಲರು ಭಯಗೊಂಡರು. ಇಸ್ರೇಲರು ಸಮುವೇಲನಿಗೆ, “ನಮ್ಮ ದೇವರಾದ ಯೆಹೋವನಲ್ಲಿ ನಮಗಾಗಿ ಪ್ರಾರ್ಥಿಸು! ನಿಲ್ಲಿಸಬೇಡ! ಫಿಲಿಷ್ಟಿಯರಿಂದ ನಮ್ಮನ್ನು ರಕ್ಷಿಸಲು ಯೆಹೋವನಲ್ಲಿ ಬೇಡಿಕೊ!” ಎಂದು ಹೇಳಿದರು.

ಸಮುವೇಲನು ಕುರಿಮರಿಯೊಂದನ್ನು ತಂದು ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಸಮುವೇಲನು ಇಸ್ರೇಲರಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಿಸಿದನು. 10 ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಬ್ದವು ಫಿಲಿಷ್ಟಿಯರಲ್ಲಿ ಕಳವಳವನ್ನೂ ಭಯವನ್ನೂ ಉಂಟುಮಾಡಿತು. ಅವರ ಸೇನಾಧಿಪತಿಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲಿಲ್ಲ. ಆದಕಾರಣ ಇಸ್ರೇಲರು ಫಿಲಿಷ್ಟಿಯರನ್ನು ಯುದ್ಧದಲ್ಲಿ ಸೋಲಿಸಿದರು. 11 ಇಸ್ರೇಲರು ಮಿಚ್ಪೆಯಿಂದ ಬಂದು ಫಿಲಿಷ್ಟಿಯರನ್ನು ದಾರಿಯುದ್ದಕ್ಕೂ ಸಂಹರಿಸುತ್ತಾ ಬೇತ್ಕರಿನವರೆಗೆ ಅಟ್ಟಿಸಿಕೊಂಡು ಹೋದರು.

ಇಸ್ರೇಲಿನಲ್ಲಿ ಶಾಂತಿ ಸ್ಥಾಪನೆ

12 ಅನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಜ್ಞಾಪಿಸಿಕೊಳ್ಳುತ್ತಿರಲಿ ಎಂಬುದಕ್ಕಾಗಿ ಅವನು ಈ ರೀತಿ ಮಾಡಿದನು. ಸಮುವೇಲನು ಮಿಚ್ಪೆ ಮತ್ತು ಶೇನಿಗಳ ಮಧ್ಯೆ ಕಲ್ಲನ್ನು ನೆಟ್ಟು, “ಯೆಹೋವನು ಇಲ್ಲಿಯವರೆಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಅದಕ್ಕೆ “ಸಹಾಯದ ಕಲ್ಲು”[a] ಎಂದು ಹೆಸರಿಟ್ಟನು.

13 ಫಿಲಿಷ್ಟಿಯರು ಸೋತುಹೋದರು. ಅವರು ಮತ್ತೆ ಇಸ್ರೇಲರ ಭೂಮಿಯಲ್ಲಿ ಹೆಜ್ಜೆ ಇಡಲಿಲ್ಲ. ಸಮುವೇಲನ ಜೀವಿತದ ಉಳಿದ ಭಾಗದಲ್ಲಿ ಯೆಹೋವನು ಫಿಲಿಷ್ಟಿಯರಿಗೆ ವಿರುದ್ಧವಾಗಿದ್ದನು. 14 ಫಿಲಿಷ್ಟಿಯರು ಎಕ್ರೋನ್‌ನಿಂದ ಗತ್‌ವರೆಗಿನ ಪ್ರದೇಶದ ಇಸ್ರೇಲ್ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಇಸ್ರೇಲರು ಆ ಪಟ್ಟಣಗಳನ್ನು ಮರಳಿ ಗೆದ್ದುಕೊಂಡರು ಮತ್ತು ಆ ಪಟ್ಟಣದ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡರು.

ಇಸ್ರೇಲರ ಮತ್ತು ಅಮೋರಿಯರ ಮಧ್ಯೆ ಶಾಂತಿ ನೆಲೆಸಿತ್ತು.

15 ಸಮುವೇಲನು ತನ್ನ ಜೀವಮಾನವೆಲ್ಲಾ ಇಸ್ರೇಲರನ್ನು ಮುನ್ನಡೆಸಿದನು; 16 ಇಸ್ರೇಲಿನಲ್ಲಿ ನ್ಯಾಯಪರಿಪಾಲನೆಗಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್ ಮತ್ತು ಮಿಚ್ಪೆ ಎಂಬ ಪಟ್ಟಣಗಳಿಗೆ ಹೋದನು. ಹೀಗೆ ಅವನು ಈ ಸ್ಥಳಗಳಲ್ಲೆಲ್ಲಾ ಇಸ್ರೇಲರಿಗೆ ನ್ಯಾಯತೀರಿಸುತ್ತಾ ಅವರನ್ನು ಆಳಿದನು. 17 ಆದರೆ ಸಮುವೇಲನ ಮನೆಯು ರಾಮದಲ್ಲಿತ್ತು. ಆದ್ದರಿಂದ ಸಮುವೇಲನು ಯಾವಾಗಲೂ ರಾಮಕ್ಕೆ ಹಿಂತಿರುಗುತ್ತಿದ್ದನು. ಸಮುವೇಲನು ರಾಮದಿಂದ ಇಸ್ರೇಲರಿಗೆ ನ್ಯಾಯತೀರ್ಪು ನೀಡುತ್ತಾ ಆಳಿದನು; ರಾಮದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯೊಂದನ್ನು ನಿರ್ಮಿಸಿದನು.

ಅಪೊಸ್ತಲರ ಕಾರ್ಯಗಳು 9:19-31

19 ಬಳಿಕ ಅವನು ಊಟಮಾಡಿ ಚೇತರಿಸಿಕೊಂಡನು.

ಸೌಲನು ದಮಸ್ಕದಲ್ಲಿ ಬೋಧಿಸುವನು

ಸೌಲನು ದಮಸ್ಕದಲ್ಲಿ ಯೇಸುವಿನ ಶಿಷ್ಯರೊಂದಿಗೆ ಕೆಲವು ದಿನಗಳವರೆಗೆ ಇದ್ದನು. 20 ಅವನು ತಡಮಾಡದೆ ಸಭಾಮಂದಿರಗಳಿಗೆ ಹೋಗಿ “ಯೇಸುವೇ ದೇವಕುಮಾರ”ನೆಂದು ಬೋಧಿಸತೊಡಗಿದನು.

21 ಸೌಲನ ಮಾತನ್ನು ಕೇಳಿದ ಜನರೆಲ್ಲರೂ ವಿಸ್ಮಯಗೊಂಡು, “ಜೆರುಸಲೇಮಿನಲ್ಲಿದ್ದವನು ಈ ಮನುಷ್ಯನೇ. ಈ ಹೆಸರಿನಲ್ಲಿ (ಯೇಸುವಿನ) ನಂಬಿಕೆ ಇಡುವ ಜನರನ್ನು ನಾಶಮಾಡಲು ಇವನು ಪ್ರಯತ್ನಿಸುತ್ತಿದ್ದನು! ಯೇಸುವಿನ ಶಿಷ್ಯರನ್ನು ಬಂಧಿಸಿ ಜೆರುಸಲೇಮಿನಲ್ಲಿರುವ ಮಹಾಯಾಜಕರ ಬಳಿಗೆ ಕೊಂಡೊಯ್ಯಲು ಇವನು ಇಲ್ಲಿಗೂ ಬಂದಿದ್ದಾನೆ” ಎಂದು ಹೇಳಿದರು.

22 ಆದರೆ ಸೌಲನು ಹೆಚ್ಚುಹೆಚ್ಚು ಪ್ರಬಲವಾಗಿ ಯೇಸುವೇ ಕ್ರಿಸ್ತನೆಂದು ನಿರೂಪಿಸಿದನು. ಅವನ ಆಧಾರಗಳು ಬಹು ಬಲವಾಗಿದ್ದ ಕಾರಣ ದಮಸ್ಕದ ಯೆಹೂದ್ಯರು ಅವನೊಂದಿಗೆ ವಾದ ಮಾಡಲಿಲ್ಲ.

ಸೌಲನು ಯೆಹೂದ್ಯರಿಂದ ತಪ್ಪಿಸಿಕೊಳ್ಳುವನು

23 ಅನೇಕ ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಸಂಚುಮಾಡಿದರು. 24 ಯೆಹೂದ್ಯರು ಸೌಲನಿಗಾಗಿ ಎದುರುನೋಡುತ್ತಾ ನಗರದ ದ್ವಾರಗಳನ್ನು ಹಗಲಿರುಳು ಕಾಯುತ್ತಿದ್ದರು. ಆದರೆ ಅವರ ಯೋಜನೆ ಸೌಲನಿಗೆ ತಿಳಿಯಿತು. 25 ಒಂದು ರಾತ್ರಿ, ಸೌಲನ ಕೆಲವು ಶಿಷ್ಯರು ಅವನನ್ನು ಪಟ್ಟಣದಿಂದ ಹೊರಗೆ ಕಳುಹಿಸುವುದಕ್ಕಾಗಿ ಅವನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ, ನಗರದ ಕೋಟೆಯ ಸಂದಿನ ಮೂಲಕ ಅವನನ್ನು ಕೆಳಗಿಳಿಸಿದರು.

ಜೆರುಸಲೇಮಿನಲ್ಲಿ ಸೌಲನು

26 ಬಳಿಕ ಸೌಲನು ಜೆರುಸಲೇಮಿಗೆ ಹೋದನು. ಅವನು ವಿಶ್ವಾಸಿಗಳ ಸಮುದಾಯವನ್ನು ಸೇರಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವರೆಲ್ಲರೂ ಅವನಿಗೆ ಭಯಪಟ್ಟರು. ಸೌಲನು ನಿಜವಾಗಿ ಯೇಸುವಿನ ಶಿಷ್ಯನೆಂದು ಅವರು ನಂಬಲಿಲ್ಲ. 27 ಆದರೆ ಬಾರ್ನಬನು ಸೌಲನನ್ನು ಸ್ವೀಕರಿಸಿಕೊಂಡು ಅಪೊಸ್ತಲರ ಬಳಿಗೆ ಕರೆದುಕೊಂಡು ಬಂದನು. ಸೌಲನು ದಮಸ್ಕದ ದಾರಿಯಲ್ಲಿ ಪ್ರಭುವನ್ನು ನೋಡಿರುವುದನ್ನೂ ಪ್ರಭುವು ಸೌಲನೊಂದಿಗೆ ಮಾತಾಡಿದ್ದನ್ನೂ ಬಾರ್ನಬನು ಅವರಿಗೆ ವಿವರಿಸಿದನು. ಅಲ್ಲದೆ ಸೌಲನು ದಮಸ್ಕದಲ್ಲಿ ಜನರಿಗೆ ಪ್ರಭುವಿನ ವಿಷಯದಲ್ಲಿ ನಿರ್ಭಯವಾಗಿ ಬೋಧಿಸಿದ್ದನ್ನೂ ಅವರಿಗೆ ತಿಳಿಸಿದನು.

28 ಅಂದಿನಿಂದ ಸೌಲನು ವಿಶ್ವಾಸಿಗಳೊಂದಿಗೆ ಇದ್ದನು. ಅವನು ಪ್ರಭುವಿನ ವಿಷಯವನ್ನು ಜೆರುಸಲೇಮಿನಲ್ಲಿ ನಿರ್ಭಯವಾಗಿ ಬೋಧಿಸಿದನು. 29 ಗ್ರೀಕ್ ಮಾತಾಡುತ್ತಿದ್ದ ಯೆಹೂದ್ಯರೊಂದಿಗೆ ಸೌಲನು ಪದೇಪದೇ ವಾದಮಾಡಿದನು. ಆದರೆ ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. 30 ಇದರ ಬಗ್ಗೆ ಸಹೋದರರಿಗೆ ತಿಳಿದಾಗ ಅವರು ಸೌಲನನ್ನು ಸೆಜರೇಯ ಪಟ್ಟಣಕ್ಕೆ ಕೊಂಡೊಯ್ದು ಅಲ್ಲಿಂದ ತಾರ್ಸಸ್ ಪಟ್ಟಣಕ್ಕೆ ಕಳುಹಿಸಿದರು.

31 ಇಂತಿರಲು, ಜುದೇಯ, ಗಲಿಲಾಯ ಮತ್ತು ಸಮಾರ್ಯ ಪ್ರದೇಶಗಳಲ್ಲಿ ಇದ್ದ ಸಭೆಗಳಲ್ಲಿ ಶಾಂತಿ ನೆಲೆಸಿತು. ಪವಿತ್ರಾತ್ಮನ ಸಹಾಯದಿಂದ ಸಭೆಗಳು ಬಲವಾಗತೊಡಗಿದವು. ವಿಶ್ವಾಸಿಗಳು ತಾವು ಪ್ರಭುವನ್ನು ಗೌರವಿಸುವುದಾಗಿ ತಮ್ಮ ಜೀವಿತಗಳ ಮೂಲಕ ತೋರಿಸಿಕೊಟ್ಟರು. ಇದರಿಂದ ವಿಶ್ವಾಸಿಗಳ ಸಭೆಯು ಹೆಚ್ಚುಹೆಚ್ಚು ಬೆಳೆಯತೊಡಗಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International