Revised Common Lectionary (Semicontinuous)
ರಚನೆಗಾರ: ದಾವೀದ.
29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
10 ಯೆಹೋವನು ಅಲ್ಲಿ ಪ್ರತ್ಯಕ್ಷನಾಗಿ ನಿಂತು ಮೊದಲು ಕರೆದಂತೆಯೇ “ಸಮುವೇಲನೇ, ಸಮುವೇಲನೇ” ಎಂದು ಕರೆದನು.
ಸಮುವೇಲನು, “ಅಪ್ಪಣೆಯಾಗಲಿ, ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ” ಎಂದನು.
11 ಯೆಹೋವನು ಸಮುವೇಲನಿಗೆ, “ನಾನು ಇಸ್ರೇಲಿನಲ್ಲಿ ಒಂದು ಕಾರ್ಯವನ್ನು ಶೀಘ್ರದಲ್ಲೇ ಮಾಡುವೆನು. ಈ ಕಾರ್ಯದ ಬಗ್ಗೆ ಕೇಳಿದ ಜನರು ಗಾಬರಿಗೊಳ್ಳುವರು. 12 ನಾನು ಇದನ್ನು ಏಲಿ ಮತ್ತು ಅವನ ಕುಟುಂಬದ ವಿರುದ್ಧ ಸಂಪೂರ್ಣವಾಗಿ ಮಾಡುತ್ತೇನೆ. 13 ಏಲಿಯ ಕುಟುಂಬವನ್ನು ನಿತ್ಯದಂಡನೆಗೆ ಗುರಿಪಡಿಸುತ್ತೇನೆಂದು ನಾನು ಏಲಿಗೆ ಹೇಳಿರುವೆನು. ಏಲಿಯ ಮಕ್ಕಳು ನನಗೆ ವಿರೋಧವಾಗಿ ಮಾತಾಡಿದ್ದರಿಂದ ಮತ್ತು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ನಾನು ಇದನ್ನು ಮಾಡುತ್ತೇನೆ. ಅಲ್ಲದೆ ಅವರನ್ನು ಹತೋಟಿಯಲ್ಲಿಡಲು ಏಲಿಗೆ ಸಾಧ್ಯವಾಗಲಿಲ್ಲ. 14 ಆದಕಾರಣವೇ, ಏಲಿಯ ಕುಟುಂಬವು ಅರ್ಪಿಸುವ ಯಜ್ಞವಾಗಲಿ ಧಾನ್ಯನೈವೇದ್ಯವಾಗಲಿ ಅವರ ಪಾಪಗಳಿಗೆ ಪ್ರಾಯಶ್ಚಿತ್ತವಾಗುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.
15 ಸಮುವೇಲನು ನಿದ್ರಿಸಿದನು. ಅವನು ಮುಂಜಾನೆ ಮೇಲೆದ್ದು ಯೆಹೋವನ ಆಲಯದ ಬಾಗಿಲುಗಳನ್ನು ತೆರೆದನು. ಸಮುವೇಲನು ತಾನು ಕಂಡ ದರ್ಶನದ ಬಗ್ಗೆ ಏಲಿಗೆ ತಿಳಿಸಲು ಭಯಪಟ್ಟನು.
16 ಆದರೆ ಏಲಿಯು, “ಸಮುವೇಲನೇ, ನನ್ನ ಮಗನೇ” ಎಂದು ಕರೆದನು.
ಸಮುವೇಲನು, “ಇಗೋ, ಇದ್ದೇನೆ” ಅಂದನು.
17 ಏಲಿಯು, “ಯೆಹೋವನು ನಿನಗೆ ಹೇಳಿದ್ದೇನು? ನನ್ನೊಂದಿಗೆ ಅದನ್ನು ಮುಚ್ಚಿಡಬೇಡ. ಆತನು ನಿನ್ನೊಂದಿಗೆ ಆಡಿದ ಮಾತುಗಳಲ್ಲಿ ಏನನ್ನಾದರೂ ಮುಚ್ಚಿಟ್ಟರೆ ಆತನು ನಿನ್ನನ್ನು ಶಿಕ್ಷಿಸುತ್ತಾನೆ” ಎಂದು ತಿಳಿಸಿದನು.
18 ಸಮುವೇಲನು ಏನನ್ನೂ ಮುಚ್ಚಿಡದೆ, ಎಲ್ಲವನ್ನೂ ಏಲಿಗೆ ತಿಳಿಸಿದನು.
ಏಲಿಯು, “ಆತನು ಯೆಹೋವ. ಆತನು ತನಗೆ ಸರಿಕಾಣುವದನ್ನೇ ಮಾಡಲಿ” ಎಂದು ಹೇಳಿದನು.
19 ಯೆಹೋವನು ಸಮುವೇಲನ ಸಂಗಡವಿದ್ದನು; ಸಮುವೇಲನು ಬೆಳೆದು ದೊಡ್ಡವನಾದನು; ಸಮುವೇಲನ ಯಾವ ಸಂದೇಶವೂ ಸುಳ್ಳಾಗದಂತೆ ಯೆಹೋವನು ನೋಡಿಕೊಂಡನು. 20 ಸಮುವೇಲನು ಯೆಹೋವನ ನಿಜಪ್ರವಾದಿಯೆಂಬುದು ದಾನಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರೇಲರಿಗೂ ಆಗ ತಿಳಿದು ಬಂದಿತು. 21 ಯೆಹೋವನು ಶೀಲೋವಿನಲ್ಲಿ ಸಮುವೇಲನಿಗೆ ದರ್ಶನ ಕೊಡುವುದನ್ನು ಮುಂದುವರಿಸಿದನು. ಯೆಹೋವನು ಸಮುವೇಲನಿಗೆ ತನ್ನ ವಾಕ್ಯದ ಮೂಲಕ ತನ್ನನ್ನು ಪ್ರಕಟಿಸಿಕೊಂಡನು.
4 ಸಮುವೇಲನ ಸುದ್ದಿಯು ಇಸ್ರೇಲಿನಲ್ಲೆಲ್ಲಾ ಹರಡಿತು. ಏಲಿಯು ಬಹು ವೃದ್ಧನಾದನು. ಅವನ ಮಕ್ಕಳು ಯೆಹೋವನ ಸನ್ನಿಧಿಯಲ್ಲಿ ಕೆಟ್ಟಕಾರ್ಯಗಳನ್ನು ನಡೆಸುತ್ತಲೇ ಇದ್ದರು.
ಇಸ್ರೇಲರನ್ನು ಫಿಲಿಷ್ಟಿಯರು ಸೋಲಿಸುವರು
ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಲು ಒಟ್ಟುಗೂಡಿದರು. ಇಸ್ರೇಲರು ಫಿಲಿಷ್ಟಿಯರಿಗೆ ವಿರುದ್ಧವಾಗಿ ಹೊರಟು ಎಬೆನೆಜೆರಿನಲ್ಲಿ ಪಾಳೆಯ ಮಾಡಿಕೊಂಡರು; ಫಿಲಿಷ್ಟಿಯರು ಅಫೇಕಿನಲ್ಲಿ ಪಾಳೆಯ ಮಾಡಿಕೊಂಡರು.
10 ದಮಸ್ಕದಲ್ಲಿ ಯೇಸುವಿನ ಶಿಷ್ಯನೊಬ್ಬನಿದ್ದನು. ಅವನ ಹೆಸರು ಅನನೀಯ. ಪ್ರಭುವು ಅನನೀಯನನ್ನು ದರ್ಶನದಲ್ಲಿ “ಅನನೀಯನೇ” ಎಂದು ಕರೆದನು.
ಅನನೀಯನು, “ಪ್ರಭುವೇ, ಇಗೋ ಇದ್ದೇನೆ” ಎಂದು ಉತ್ತರಕೊಟ್ಟನು.
11 ಪ್ರಭುವು ಅನನೀಯನಿಗೆ, “ಎದ್ದು, ‘ನೇರಬೀದಿ’ ಎಂಬ ಬೀದಿಗೆ ಹೋಗು. ಅಲ್ಲಿರುವ ಯೂದನ[a] ಮನೆಯನ್ನು ಕಂಡುಕೊಂಡು ತಾರ್ಸಸ್ ಪಟ್ಟಣದ ಸೌಲನ ಬಗ್ಗೆ ವಿಚಾರಿಸು. ಈಗ ಅವನು ಅಲ್ಲಿ ಪ್ರಾರ್ಥಿಸುತ್ತಿದ್ದಾನೆ. 12 ಸೌಲನು ಒಂದು ದರ್ಶನವನ್ನು ಕಂಡಿದ್ದಾನೆ. ಅನನೀಯನೆಂಬ ಒಬ್ಬನು ಅವನ ಬಳಿಗೆ ಬಂದು ತನ್ನ ಕೈಗಳನ್ನು ಅವನ ಮೇಲಿಡುವನು. ಆಗ ಅವನಿಗೆ ಮತ್ತೆ ದೃಷ್ಟಿಬರುವುದು. ಇದೇ ಆ ದರ್ಶನ” ಎಂದು ಹೇಳಿದನು.
13 ಆದರೆ ಅನನೀಯನು, “ಪ್ರಭುವೇ, ಜೆರುಸಲೇಮಿನಲ್ಲಿರುವ ನಿನ್ನ ಪವಿತ್ರ ಜನರಿಗೆ ಈ ಮನುಷ್ಯನು ಮಾಡಿದ ಅನೇಕ ಕೆಟ್ಟಕೃತ್ಯಗಳ ಬಗ್ಗೆ ಜನರು ನನಗೆ ಹೇಳಿದ್ದಾರೆ. 14 ಈಗ ಅವನು ದಮಸ್ಕಕ್ಕೂ ಬಂದಿದ್ದಾನೆ. ನಿನ್ನಲ್ಲಿ ನಂಬಿಕೆ ಇಡುವ[b] ಜನರೆಲ್ಲರನ್ನು ಬಂಧಿಸುವ ಅಧಿಕಾರವನ್ನು ಮಹಾಯಾಜಕರು ಅವನಿಗೆ ಕೊಟ್ಟಿದ್ದಾರೆ” ಎಂದು ಹೇಳಿದನು.
15 ಆದರೆ ಪ್ರಭುವು ಅನನೀಯನಿಗೆ, “ಹೋಗು! ಮುಖ್ಯವಾದ ಕೆಲಸಕ್ಕಾಗಿ ನಾನು ಸೌಲನನ್ನು ಆರಿಸಿಕೊಂಡಿದ್ದೇನೆ. ಅವನು ನನ್ನ ಬಗ್ಗೆ ರಾಜರುಗಳಿಗೂ ಯೆಹೂದ್ಯರಿಗೂ ಮತ್ತು ಇತರ ಜನಾಂಗಗಳಿಗೂ ತಿಳಿಸಬೇಕಾಗಿದೆ. 16 ಅವನು ನನ್ನ ಹೆಸರಿನ ನಿಮಿತ್ತ ಅನುಭವಿಸಬೇಕಾಗಿರುವ ಹಿಂಸೆಯನ್ನು ನಾನೇ ಅವನಿಗೆ ತೋರಿಸಿಕೊಡುವೆನು” ಎಂದು ಹೇಳಿದನು.
17 ಆದ್ದರಿಂದ ಅನನೀಯನು ಅಲ್ಲಿಂದ ಹೊರಟು ಯೂದನ ಮನೆಗೆ ಹೋದನು. ಅವನು ಸೌಲನ ಮೇಲೆ ತನ್ನ ಕೈಗಳನ್ನಿಟ್ಟು, “ಸೌಲನೇ, ನನ್ನ ಸಹೋದರನೇ, ಪ್ರಭುವಾದ ಯೇಸು ನನ್ನನ್ನು ಕಳುಹಿಸಿದ್ದಾನೆ. ನೀನು ಇಲ್ಲಿಗೆ ಬರುವಾಗ ದಾರಿಯಲ್ಲಿ ಕಂಡದ್ದು ಆತನನ್ನೇ. ನೀನು ಮತ್ತೆ ದೃಷ್ಟಿಪಡೆಯಬೇಕೆಂತಲೂ ಪವಿತ್ರಾತ್ಮಭರಿತನಾಗಬೇಕೆಂತಲೂ ಯೇಸು ನನ್ನನ್ನು ಕಳುಹಿಸಿದನು” ಎಂದು ಹೇಳಿದನು. 18 ಇದ್ದಕ್ಕಿದ್ದಂತೆ, ಮೀನಿನ ಪರೆಯಂತಿದ್ದ ಏನೋ ಒಂದು ಸೌಲನ ಕಣ್ಣುಗಳಿಂದ ಕಳಚಿಬಿದ್ದಿತು. ಸೌಲನಿಗೆ ಮತ್ತೆ ಕಣ್ಣುಕಾಣತೊಡಗಿತು! ಸೌಲನು ಮೇಲೆದ್ದು, ದೀಕ್ಷಾಸ್ನಾನ ಮಾಡಿಸಿಕೊಂಡನು. 19 ಬಳಿಕ ಅವನು ಊಟಮಾಡಿ ಚೇತರಿಸಿಕೊಂಡನು.
ಸೌಲನು ದಮಸ್ಕದಲ್ಲಿ ಬೋಧಿಸುವನು
ಸೌಲನು ದಮಸ್ಕದಲ್ಲಿ ಯೇಸುವಿನ ಶಿಷ್ಯರೊಂದಿಗೆ ಕೆಲವು ದಿನಗಳವರೆಗೆ ಇದ್ದನು.
Kannada Holy Bible: Easy-to-Read Version. All rights reserved. © 1997 Bible League International