Revised Common Lectionary (Semicontinuous)
ರಚನೆಗಾರ: ದಾವೀದ.
29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
ಸಮುವೇಲನಿಗೆ ದೇವರ ಕರೆ
3 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ಯೆಹೋವನು ಜನರೊಂದಿಗೆ ಪದೇಪದೇ ಮಾತಾಡುತ್ತಿರಲಿಲ್ಲ; ದರ್ಶನಗಳ ಸಂಖ್ಯೆಯೂ ಕಡಿಮೆಯಾಗಿತ್ತು.
2 ಏಲಿಯ ಕಣ್ಣುಗಳು ಮಂಜಾಗಿ ಕುರುಡನೆನ್ನುವಷ್ಟು ಕಾಣುತ್ತಿರಲಿಲ್ಲ. ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. 3 ಸಮುವೇಲನು ಯೆಹೋವನ ಪವಿತ್ರ ಆಲಯದಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ಯೆಹೋವನ ಪವಿತ್ರ ಪೆಟ್ಟಿಗೆಯು ಅಲ್ಲಿಯೇ ಇತ್ತು. ಯೆಹೋವನ ದೀಪವು ಇನ್ನೂ ಬೆಳಗುತ್ತಿತ್ತು. 4 ಯೆಹೋವನು ಸಮುವೇಲನನ್ನು ಕರೆದನು. ಸಮುವೇಲನು, “ಇಗೋ, ಇಲ್ಲಿದ್ದೇನೆ” ಎಂದನು. 5 ಏಲಿಯು ಕರೆದಿರಬಹುದೆಂದು ಸಮುವೇಲನು ನೆನೆಸಿದನು. ಆದ್ದರಿಂದ ಸಮುವೇಲನು ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಆದರೆ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ. ಹೋಗಿ ಮಲಗಿಕೋ” ಅಂದನು.
ಸಮುವೇಲನು ಹೋಗಿ ಮಲಗಿಕೊಂಡನು. 6 ನಂತರ ಯೆಹೋವನು, “ಸಮುವೇಲನೇ” ಎಂದು ಮತ್ತೆ ಕರೆದನು. ಸಮುವೇಲನು ಮತ್ತೆ ಏಲಿಯ ಬಳಿಗೆ ಓಡಿಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಎಂದು ಹೇಳಿದನು.
ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು.
7 ಆ ವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಯೆಹೋವನು ಅವನೊಂದಿಗೆ ನೇರವಾಗಿ ಮಾತಾಡಿರಲಿಲ್ಲ.[a]
8 ಯೆಹೋವನು ಸಮುವೇಲನನ್ನು ಮೂರನೆಯ ಸಲ ಕರೆದನು. ಸಮುವೇಲನು ಮತ್ತೆ ಮೇಲೆದ್ದು ಏಲಿಯನ ಬಳಿಗೆ ಹೋಗಿ, “ಇಗೋ, ಇಲ್ಲಿದ್ದೇನೆ. ನೀನು ನನ್ನನ್ನು ಕರೆದೆಯಲ್ಲಾ” ಅಂದನು.
ಬಾಲಕನನ್ನು ಕರೆಯುತ್ತಿರುವವನು ಯೆಹೋವನೆಂಬುದು ಏಲಿಗೆ ಆಗ ಅರ್ಥವಾಯಿತು. 9 ಏಲಿಯು ಸಮುವೇಲನಿಗೆ, “ಹೋಗಿ ಮಲಗಿಕೋ. ನಿನ್ನನ್ನು ಮತ್ತೆ ಕರೆದರೆ, ‘ಅಪ್ಪಣೆಯಾಗಲಿ, ಯೆಹೋವನೇ ನಾನು ನಿನ್ನ ಸೇವಕ, ಕೇಳಿಸಿಕೊಳ್ಳುತ್ತಿದ್ದೇನೆ’ ಎಂದು ಉತ್ತರಿಸು” ಎಂಬುದಾಗಿ ಹೇಳಿದನು.
ಸಮುವೇಲನು ತನ್ನ ಸ್ಥಳದಲ್ಲಿ ಮಲಗಲು ಹೋದನು.
ಸೌಲನು ಮಾರ್ಪಾಟಾದನು
9 ಪ್ರಭುವಿನ ಶಿಷ್ಯರನ್ನು ಹೆದರಿಸಲು ಮತ್ತು ಕೊಲ್ಲಲು ಸೌಲನು ಜೆರುಸಲೇಮಿನಲ್ಲಿ ಇನ್ನೂ ಪ್ರಯತ್ನಿಸುತ್ತಿದ್ದನು. ಆದ್ದರಿಂದ ಅವನು ಪ್ರಧಾನಯಾಜಕನ ಬಳಿಗೆ ಹೋಗಿ, 2 ದಮಸ್ಕದಲ್ಲಿ ಕ್ರಿಸ್ತನ ಮಾರ್ಗವನ್ನು ಅನುಸರಿಸುವವರನ್ನು ಕಂಡುಹಿಡಿದು, ಸ್ತ್ರೀಯರು, ಪುರುಷರು ಎನ್ನದೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದುಕೊಂಡು ಬರಲು ತನಗೆ ಅಧಿಕಾರ ಕೊಟ್ಟಿರುವುದಾಗಿ ದಮಸ್ಕ ಪಟ್ಟಣದ ಸಭಾಮಂದಿರಗಳಿಗೆ ಪತ್ರಬರೆಯಬೇಕೆಂದು ಕೇಳಿಕೊಂಡನು.
3 ಅಂತೆಯೇ ಸೌಲನು ದಮಸ್ಕಕ್ಕೆ ಹೊರಟನು. ಅವನು ಪಟ್ಟಣದ ಸಮೀಪಕ್ಕೆ ಬಂದಾಗ, ಬಹು ಪ್ರಕಾಶಮಾನವಾದ ಬೆಳಕೊಂದು ಆಕಾಶದಿಂದ ಇದ್ದಕ್ಕಿದ್ದಂತೆ ಅವನ ಸುತ್ತಲೂ ಹೊಳೆಯಿತು. 4 ಸೌಲನು ನೆಲಕ್ಕೆ ಬಿದ್ದನು. “ಸೌಲನೇ, ಸೌಲನೇ, ನೀನು ನನ್ನನ್ನೇಕೆ ಹಿಂಸಿಸುತ್ತಿರುವೆ?” ಎಂಬ ವಾಣಿಯೊಂದು ಅವನಿಗೆ ಕೇಳಿಸಿತು.
5 ಸೌಲನು, “ಪ್ರಭುವೇ, ನೀನು ಯಾರು?” ಎಂದನು.
ಆ ವಾಣಿಯು, “ನೀನು ಹಿಂಸಿಸುತ್ತಿರುವ ಯೇಸುವೇ ನಾನು! 6 ಈಗ ಎದ್ದು ಪಟ್ಟಣದೊಳಗೆ ಹೋಗು. ನೀನು ಏನು ಮಾಡಬೇಕೆಂಬುದನ್ನು ಅಲ್ಲಿಯ ಒಬ್ಬನು ನಿನಗೆ ತಿಳಿಸುವನು” ಎಂದಿತು.
7 ಸೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು ಅಲ್ಲೇ ನಿಂತಿದ್ದರು. ಅವರು ಏನೂ ಮಾತಾಡಲಿಲ್ಲ. ಆ ಜನರು ವಾಣಿಯನ್ನು ಕೇಳಿದರು. ಆದರೆ ಅವರು ಯಾರನ್ನೂ ನೋಡಲಿಲ್ಲ. 8 ಸೌಲನು ನೆಲದ ಮೇಲಿಂದ ಎದ್ದು ಕಣ್ಣುಗಳನ್ನು ತೆರೆದನು. ಆದರೆ ಅವನಿಗೆ ಏನೂ ಕಾಣಲಿಲ್ಲ. ಆದ್ದರಿಂದ ಸೌಲನೊಂದಿಗಿದ್ದ ಜನರು ಅವನನ್ನು ಕೈಹಿಡಿದು ದಮಸ್ಕಕ್ಕೆ ಕರೆದೊಯ್ದರು. 9 ಮೂರು ದಿನಗಳವರೆಗೆ ಸೌಲನಿಗೆ ಏನೂ ಕಾಣಲಿಲ್ಲ. ಅವನು ಊಟವನ್ನೂ ಮಾಡಲಿಲ್ಲ ನೀರನ್ನೂ ಕುಡಿಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International