Revised Common Lectionary (Semicontinuous)
ರಚನೆಗಾರ: ಸೊಲೊಮೋನ.
72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
2 ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
ತೀರ್ಪುಮಾಡಲು ಅವನಿಗೆ ಸಹಾಯಮಾಡು.
3 ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
4 ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
5 ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
6 ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
7 ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
8 ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
9 ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.
18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
ಆಮೆನ್, ಆಮೆನ್!
20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)
ಶೆಬದ ರಾಣಿಯು ಸೊಲೊಮೋನನನ್ನು ಸಂದರ್ಶಿಸಿದಳು
10 ಶೆಬದ ರಾಣಿ ಸೊಲೊಮೋನನ ಬಗ್ಗೆ ಕೇಳಿದಳು. ಅವಳು ಒಗಟುಗಳಿಂದ ಅವನನ್ನು ಪರೀಕ್ಷಿಸಲು 2 ತನ್ನ ಸೇವಕರ ದೊಡ್ಡ ಗುಂಪಿನೊಡನೆ ಜೆರುಸಲೇಮಿಗೆ ಬಂದಳು. ಅನೇಕ ಒಂಟೆಗಳ ಮೇಲೆ ಸಾಂಬಾರ ಪದಾರ್ಥಗಳನ್ನು, ಮುತ್ತುಗಳನ್ನು ಮತ್ತು ಬಹಳ ಬಂಗಾರವನ್ನು ಹೇರಿಸಿಕೊಂಡು ಬಂದಳು. ಅವಳು ಸೊಲೊಮೋನನನ್ನು ಸಂಧಿಸಿ, ತನ್ನ ಮನಸ್ಸಿನಲ್ಲಿದ್ದ ಎಲ್ಲ ಪ್ರಶ್ನೆಗಳನ್ನು ಅವನಿಗೆ ಕೇಳಿದಳು. 3 ಸೊಲೊಮೋನನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದನು. ಅವಳ ಯಾವ ಪ್ರಶ್ನೆಗಳೂ ಅವನಿಗೆ ಹೆಚ್ಚು ಕಠಿಣವೆನಿಸಲಿಲ್ಲ. 4 ಸೊಲೊಮೋನನು ಬಹು ಜ್ಞಾನಿಯೆಂಬುದು ಶೆಬದ ರಾಣಿಗೆ ತಿಳಿಯಿತು. ಅವನು ನಿರ್ಮಿಸಿದ್ದ ಸುಂದರವಾದ ಅರಮನೆಯನ್ನೂ 5 ರಾಜನ ಮೇಜಿನ ಮೇಲಿದ್ದ ಆಹಾರವನ್ನೂ ಒಟ್ಟಾಗಿ ಸೇರಿಬರುತ್ತಿದ್ದ ಅವನ ಅಧಿಕಾರಿಗಳನ್ನೂ ಅರಮನೆಯಲ್ಲಿದ್ದ ಸೇವಕರನ್ನೂ ಮತ್ತು ಅವರು ಧರಿಸಿದ್ದ ಉತ್ತಮ ಬಟ್ಟೆಗಳನ್ನೂ ಅವಳು ನೋಡಿದಳು. ಅವನ ಔತಣಕೂಟಗಳನ್ನೂ ಅವನು ಆಲಯದಲ್ಲಿ ಅರ್ಪಿಸುತ್ತಿದ್ದ ಯಜ್ಞಗಳನ್ನೂ ಅವಳು ನೋಡಿದಳು. ಇವುಗಳಿಂದ ಅವಳಿಗೆ ನಿಜವಾಗಿಯೂ “ಉಸಿರುಕಟ್ಟಿಸುವಂತಹ” ವಿಸ್ಮಯವಾಯಿತು.
6 ಆದ್ದರಿಂದ ರಾಣಿಯು ರಾಜನಿಗೆ, “ನಿನ್ನ ಜ್ಞಾನದ ಬಗ್ಗೆ ಮತ್ತು ನೀನು ಮಾಡುವ ಕಾರ್ಯಗಳ ಬಗ್ಗೆ ಅನೇಕ ಸಂಗತಿಗಳನ್ನು ನಾನು ನನ್ನ ದೇಶದಲ್ಲಿ ಕೇಳಿದ್ದೇನೆ. ಆ ಸಂಗತಿಗಳೆಲ್ಲ ನಿಜ! 7 ನಾನೇ ಬಂದು, ನನ್ನ ಸ್ವಂತ ಕಣ್ಣುಗಳಿಂದ ಆ ಸಂಗತಿಗಳನ್ನು ನೋಡುವವರೆಗೆ ನಾನು ನಂಬಲೇ ಇಲ್ಲ. ಆದರೆ ನಾನು ಕೇಳಿದುದಕ್ಕಿಂತಲೂ ಮಹತ್ವವಾದ ಸಂಗತಿಗಳನ್ನು ಈಗ ನೋಡುತ್ತಿದ್ದೇನೆ. ಜನರು ಹೇಳಿದುದಕ್ಕಿಂತ ಅತ್ಯಂತ ಹೆಚ್ಚಿನ ಜ್ಞಾನವೂ ಐಶ್ವರ್ಯವೂ ನಿನ್ನಲ್ಲಿದೆ. 8 ನಿನ್ನ ಪತ್ನಿಯರೂ[a] ಅಧಿಕಾರಿಗಳೂ ಧನ್ಯರೇ ಸರಿ! ಯಾಕೆಂದರೆ ಅವರು ನಿನ್ನ ಸೇವೆ ಮಾಡುತ್ತಾ ನಿನ್ನ ಜ್ಞಾನವಾಕ್ಯಗಳನ್ನು ಕೇಳಬಹುದು! 9 ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ನಿನ್ನನ್ನು ಇಸ್ರೇಲಿನ ರಾಜನಾಗಿ ಮಾಡಲು ಆತನು ಸಂತೋಷಪಟ್ಟಿರಬೇಕು. ದೇವರಾದ ಯೆಹೋವನು ಇಸ್ರೇಲನ್ನು ಸದಾ ಪ್ರೀತಿಸುತ್ತಾನೆ. ಆದ್ದರಿಂದಲೇ ಆತನು ನಿನ್ನನ್ನು ರಾಜನನ್ನಾಗಿ ನೇಮಿಸಿದನು. ನೀನು ಕಟ್ಟಳೆಗಳನ್ನು ಅನುಸರಿಸುತ್ತಿರುವೆ ಮತ್ತು ಜನರಿಗೆ ನ್ಯಾಯ ದೊರಕಿಸುತ್ತಿರುವೆ” ಎಂದು ಹೇಳಿದಳು.
10 ನಂತರ ಶೆಬದ ರಾಣಿಯು ರಾಜನಿಗೆ ನಾಲ್ಕು ಸಾವಿರದ ಎಂಭತ್ತು ಕಿಲೋಗ್ರಾಂ ಬಂಗಾರವನ್ನು ಕೊಟ್ಟಳು. ಅವಳು ಅವನಿಗೆ ಅನೇಕ ಸಾಂಬಾರ ಪದಾರ್ಥಗಳನ್ನು ಮತ್ತು ರತ್ನಗಳನ್ನು ಕೊಟ್ಟಳು. ಹಿಂದೆಂದೂ ಯಾರೂ ಇಸ್ರೇಲಿಗೆ ತೆಗೆದುಕೊಂಡು ಬಂದಿಲ್ಲದಷ್ಟು ಸಾಂಬಾರ ಪದಾರ್ಥಗಳನ್ನು ಶೆಬದ ರಾಣಿಯು ಸೊಲೊಮೋನನಿಗೆ ಕೊಟ್ಟಳು.
11 ಹೀರಾಮನ ಹಡಗುಗಳು ಓಫೀರಿನಿಂದ ಬಂಗಾರವನ್ನು ತೆಗೆದುಕೊಂಡು ಬಂದವು. ಆ ಹಡಗುಗಳು ಮರಗಳನ್ನು ಮತ್ತು ರತ್ನಗಳನ್ನು ರಾಶಿರಾಶಿಯಾಗಿ ತಂದವು. 12 ಸೊಲೊಮೋನನು ಮರವನ್ನು ಆಲಯದ ಮತ್ತು ಅರಮನೆಯ ಆಧಾರಕಂಬಗಳಿಗಾಗಿ ಬಳಸಿದನು. ಅವನು ಹಾಡುಗಾರರಿಗೆ ಬೇಕಾದ ಹಾರ್ಪ್ ವಾದ್ಯಗಳನ್ನು ಮತ್ತು ಲೈರ್ ವಾದ್ಯಗಳನ್ನು ತಯಾರಿಸಲು ಆ ಮರವನ್ನು ಉಪಯೋಗಿಸಿದನು. ಹಿಂದೆಂದೂ ಯಾವ ವ್ಯಕ್ತಿಯೂ ಅಂತಹ ಮರವನ್ನು ಇಸ್ರೇಲಿಗೆ ತಂದಿರಲಿಲ್ಲ ಮತ್ತು ಅಲ್ಲಿಯವರೆಗೆ ಇಸ್ರೇಲಿನ ಯಾವ ವ್ಯಕ್ತಿಯೂ ಅಂತಹ ಮರವನ್ನು ನೋಡಿರಲಿಲ್ಲ.
13 ಆಗ ರಾಜನಾದ ಸೊಲೊಮೋನನು ಇತರ ದೇಶದ ರಾಜರಿಗೆ ಮರ್ಯಾದೆಗಾಗಿ ನೀಡುವ ಕಾಣಿಕೆಗಳನ್ನು ಶೆಬದ ರಾಣಿಗೂ ಕೊಟ್ಟನು. ಆಕೆಯು ಕೇಳಿದ್ದೆಲ್ಲವನ್ನೂ ಅವನು ನೀಡಿದನು. ಅನಂತರ ರಾಣಿಯು ಸೇವಕರೊಡನೆ ತನ್ನ ದೇಶಕ್ಕೆ ಹಿಂದಿರುಗಿದಳು.
ಕ್ರಿಸ್ತನ ಪ್ರೀತಿ
14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ. 15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ. 16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ. 17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ. 18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. 19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು. 21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International